ಹೈದರಾಬಾದ್: ಒಡಿಶಾದ ಬಾಲಾಸೋರ್ ನಲ್ಲಿ ನಡೆದ ರೈಲು ದುರಂತದಲ್ಲಿ ನೂರಾರು ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ “ಇದೊಂದು ಭಯೋತ್ಪಾದನಾ ಕೃತ್ಯ ಆಗಿರುವ ಸಾಧ‌್ಯತೆ ಇದೆ” ಎಂದು ಹಲವು ಮಾಧ್ಯಮಗಳಲ್ಲಿ ವರದಿ ಆಗಿದ್ದು, “ಈ ರೈಲು ದುರಂತದ ನಂತರ ಸಿಗ್ನಲ್ಲಿಂಗ್ ಜೂನಿಯರ್ ಇಂಜಿನಿಯರ್ ಅಮೀರ್ ಖಾನ್ ಎಂಬಾತನನ್ನು ಸಿಬಿಐ ವಿಚಾರಣೆ ಮಾಡಿದ ಮೇಲೆ ಆತ ಕುಟುಂಬ ಸಮೇತ ನಾಪತ್ತೆ ಆಗಿದ್ದಾನೆ” ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆದರೆ ಈ ಸುದ್ದಿ ಸುಳ್ಳು ಎಂಬುದು ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಲ್ಲಿ ಕಂಡುಬಂದಿದೆ.
Factcheck
ಒಡಿಶಾ ರೈಲು ದುರಂತದ ಬಗ್ಗೆ @SpokespersonIR ಎಂಬ ಟ್ವಿಟ್ಟರ್ ಹ್ಯಾಂಡಲ್ ನಿಂದ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಆ ಪೋಸ್ಟ್ ನಲ್ಲಿ ಒಕ್ಕಣೆಯೊಂದು ಸಹ ಇದೆ. ಈಗ ನಡೆಯುತ್ತಿರುವ ವಿಚಾರಣೆಗೆ ಸಂಬಂಧಿಸಿದಂತೆ ನಮ್ಮ ಯಾವ ಸಿಬ್ಬಂದಿಯೂ ತಪ್ಪಿಸಿಕೊಂಡಿಲ್ಲ ಅಥವಾ ನಾಪತ್ತೆ ಆಗಿಲ್ಲ ಎಂಬುದನ್ನು ಸಹ ಹೇಳಿದ್ದಾರೆ. ಮಾಧ್ಯಮಗಳಲ್ಲಿ ಬರುತ್ತಿರುವಂತೆ ಯಾವುದೇ ಸಿಬ್ಬಂದಿ ನಾಪತ್ತೆಯೋ ಅಥವಾ ಕಾಣೆಯೋ ಆಗಿಲ್ಲ. ವಾಸ್ತವವಾಗಿ ಅಂಥ ಯಾವ ವರದಿಯೂ ಸರಿ ಅಲ್ಲ. ಎಲ್ಲ ಸಿಬ್ಬಂದಿಯೂ ಹಾಜರಿದ್ದಾರೆ. ತನಿಖೆಗೆ ಸಹಕರಿಸುತ್ತಿದ್ದಾರೆ. ಎಲ್ಲೆಲ್ಲಿ ಸಿಆರ್ಎಸ್ ಹಾಗೂ ಸಿಬಿಐ ತಂಡಗಳು ತನಿಖೆಗೆ ಕರೆಯುತ್ತಿವೆಯೋ ಅಲ್ಲಿಗೆ ಹೋಗಿ ಭೇಟಿ ಆಗುತ್ತಿದ್ದಾರೆ ಎಂದು ಹೇಳಲಾಗಿದೆ.
Conclusion
ಒಡಿಶಾದ ರೈಲು ದುರಂತದ ನಂತರ ಯಾವುದೇ ಸಿಬ್ಬಂದಿ ನಾಪತ್ತೆಯೋ ಕಾಣೆಯೋ ಆಗಿಲ್ಲ ಎಂದು ಸ್ವತಃ ಭಾರತೀಯ ರೈಲ್ವೆ ವಕ್ತಾರರು ಖಾತ್ರಿ ಪಡಿಸಿದ್ದಾರೆ. ಆದ್ದರಿಂದ ಸಿಬಿಐ ತನಿಖೆಗೆ ತೆರಳಿದಾಗ ಅಮೀರ್ ಖಾನ್ ಎಂಬ ಸಿಗ್ನಲ್ಲಿಂಗ್ ಜೂನಿಯರ್ ಎಂಜಿನಿಯರ್ ಮನೆಗೆ ಬೀಗ ಹಾಕಿಕೊಂಡು ಎಲ್ಲಿಯೋ ಹೋಗಿದ್ದಾರೆ ಎಂಬುದು ಸುಳ್ಳು.