ಹೈದರಾಬಾದ್: ಮಾಫಿಯಾ ರಾಜಕಾರಣಿ ದಿವಂಗತ ಮುಖ್ತಾರ್ ಅನ್ಸಾರಿ ಅವರ ಪುತ್ರ ಅಬ್ಬಾಸ್ ಅನ್ಸಾರಿ ಅವರು ಸಾರ್ವಜನಿಕ ಸಭೆಯಲ್ಲಿ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 2024 ರ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಬೆದರಿಕೆ ಹಾಕಲಾಗಿದೆ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.
ಮುಂದಿನ ಆರು ತಿಂಗಳ ಕಾಲ ಎಲ್ಲ ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್‌ಗಳನ್ನು ಸ್ಥಗಿತಗೊಳಿಸುವಂತೆ ಸಮಾಜವಾದಿ ಪಕ್ಷದ (ಎಸ್‌ಪಿ) ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್‌ಗೆ ಮನವಿ ಮಾಡಿರುವುದಾಗಿ ಅವರು ವೀಡಿಯೊದಲ್ಲಿ ಹೇಳುತ್ತಿದ್ದಾರೆ. ‘ಯಾವುದೇ ವರ್ಗಾವಣೆಗೆ ಅವಕಾಶ ಕೊಡುವ ಮುನ್ನ ಅಧಿಕಾರಿಗಳ ಲೆಕ್ಕ ಚುಕ್ತಾ ಮಾಡಿಕೊಳ್ಳುತ್ತೇವೆ’ ಎಂದು ಬೆದರಿಕೆಯ ದನಿಯಲ್ಲಿ ಹೇಳಿರುವುದು ಕೇಳಿಬರುತ್ತಿದೆ.
X ಬಳಕೆದಾರರೊಬ್ಬರು ವೀಡಿಯೊವನ್ನು "ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಗೂಂಡಾಗಿರಿಯ ಪ್ರದರ್ಶನ! ಮಾಫಿಯಾ ಮುಖ್ತಾರ್ ಅನ್ಸಾರಿ ಪುತ್ರ, ಅಖಿಲೇಶ್ ಯಾದವ್ ಅವರ ನಿಕಟವರ್ತಿಯಿಂದ ಅಧಿಕಾರಿಗಳಿಗೆ ನೇರ ಬೆದರಿಕೆ!" ಎಂದು ಬರೆದು ಹಂಚಿಕೊಂಡಿದ್ದಾರೆ. ಅಬ್ಬಾಸ್ ಅನ್ಸಾರಿಯನ್ನು ಉಲ್ಲೇಖಿಸಿ ಪೋಸ್ಟ್‌ನಲ್ಲಿ, "ನಾನು ಅಖಿಲೇಶ್ ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಯಾವುದೇ ಅಧಿಕಾರಿಯನ್ನು ವರ್ಗಾವಣೆ ಮಾಡದಂತೆ ನೋಡಿಕೊಂಡಿದ್ದೇನೆ. ಅವರು ಇಲ್ಲೇ ಇರುತ್ತಾರೆ ಮತ್ತು ಎಲ್ಲಿಗೂ ಹೋಗುವುದಿಲ್ಲ. ಮೊದಲು ನಾವು ಅವರ ಲೆಕ್ಕ ಚುಕ್ತಾ ಮಾಡುತ್ತೇವೆ" ಎಂದು ಬರೆದಿದ್ದಾರೆ. (
Archive)
ಫ್ಯಾಕ್ಟ್‌ಚೆಕ್:
ವೀಡಿಯೋ 2022 ರದ್ದಾಗಿರುವುದರಿಂದ ಪೋಸ್ಟ್ ತಪ್ಪುದಾರಿಗೆಳೆಯುತ್ತಿದೆ ಎಂದು ನಾವು ಕಂಡುಹಿಡಿದಿದ್ದೇವೆ.
ನಾವು ಕೀವರ್ಡ್ ಹುಡುಕಾಟವನ್ನು ನಡೆಸಿದಾಗ ಮಾರ್ಚ್ 4, 2022 ರಂದು ಬಿಜೆಪಿ ನಾಯಕ ಮತ್ತು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಪೋಸ್ಟ್ ಮಾಡಿದ ವೀಡಿಯೊ ನಮಗೆ ಲಭಿಸಿದೆ. (
Archive)
"ಬಾಂದಾ ಜೈಲಿನಲ್ಲಿರುವ ಮಾಫಿಯಾ ನಾಯಕ ಮತ್ತು ಎಸ್‌ಪಿ ಅಭ್ಯರ್ಥಿ ಮುಖ್ತಾರ್ ಅನ್ಸಾರಿ ಅವರ ಪುತ್ರ ಅಬ್ಬಾಸ್ ಅನ್ಸಾರಿ ಅವರು ಆಡಳಿತ ಯಂತ್ರ ಮತ್ತು ಪೊಲೀಸ್ ಅಧಿಕಾರಿಗಳಿಗೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಶೀರ್ಷಿಕೆಯಲ್ಲಿ ಮೌರ್ಯ ಹೇಳಿದ್ದಾರೆ. ಅವರು ಮೌ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ವಾರಣಾಸಿಯಲ್ಲಿ ಎಸ್‌ಪಿ ಕಾರ್ಯಕರ್ತರು ಪೊಲೀಸರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ " ಎಂದು ಅವರು ವೀಡಿಯೋ ಹಂಚಿಕೊಂಡಿದ್ದರು.
ಮಾರ್ಚ್ 4, 2022 ರ
Navbharat Times ವರದಿಯ ಪ್ರಕಾರ, ಅಬ್ಬಾಸ್ ಅನ್ಸಾರಿ ಅವರು 2022 ರಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಕೊನೆಯ ಹಂತದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಎಸ್‌ಪಿಯ ಮಿತ್ರ ಪಕ್ಷವಾದ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷವನ್ನು ಪ್ರತಿನಿಧಿಸುವ ಮೌ ಅಭ್ಯರ್ಥಿ ಅಬ್ಬಾಸ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಗರದ ಪಹರಪುರ ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ಸರ್ಕಾರ ರಚನೆಯಾದ ನಂತರ ಜನರ ಮೇಲೆ ದೌರ್ಜನ್ಯ ಎಸಗುವ ಅಧಿಕಾರಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲಾಗುವುದು ಎಂದು ಅವರು ಹೇಳಿಕೆ ನೀಡಿದ್ದರು.
2022 ರ ಮಾರ್ಚ್ ನಲ್ಲಿ
Janasatta ಮತ್ತು
Jagaran ಅದೇ ವಿವರಗಳೊಂದಿಗೆ ಅಬ್ಬಾಸ್ ಅವರ ವಿವಾದಾತ್ಮಕ ಹೇಳಿಕೆಗಳನ್ನು ವರದಿ ಮಾಡಿರುವುದನ್ನು ನಾವು ಕಂಡುಹಿಡಿದಿದ್ದೇವೆ.
ಆದ್ದರಿಂದ, ಪ್ರಸ್ತುತ ವೀಡಿಯೋ 2022 ರದ್ದು ಎಂದು ನಾವು ತೀರ್ಮಾನಿಸುತ್ತೇವೆ. 2024 ರ ಲೋಕಸಭಾ ಚುನಾವಣೆಯ ನಂತರ ಅಬ್ಬಾಸ್ ಅನ್ಸಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂಬ ಹೇಳಿಕೆಯು ತಪ್ಪುದಾರಿಗೆಳೆಯುವಂತಿದೆ.