ಹೈದರಾಬಾದ್: ಸೌಜನ್ಯ ಕೇಸ್ ಕುರಿತು ಮತ್ತೆ ಮಹತ್ತರ ತೀರ್ಪು ಕೊಟ್ಟ ಕೋರ್ಟ್..! ಎಲ್ಲರೂ ಶಾಕ್..! ಹೀಗೊಂದು ಹೆಡ್ಡಿಂಗ್ ನೀಡಿ, ಪ್ರಕಟ ಆಗಿರುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ಪ್ರಕಾರ ಇದು ಓದುಗರನ್ನು ದಿಕ್ಕು ತಪ್ಪಿಸುವಂಥ, ತಪ್ಪು ಮಾಹಿತಿ ಆಗಿದೆ. ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ತೀರ್ಪನ್ನು ಸಿಬಿಐ ವಿಶೇಷ ನ್ಯಾಯಾಲಯದಿಂದ ಜೂನ್ 16ರಂದು ನೀಡಲಾಗಿದ್ದು, ಆರೋಪಿ ಸುನೀಲ್ ರಾವ್ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿಂದ ಆತನನ್ನು ಖುಲಾಸೆ ಮಾಡಲಾಗಿದೆ.
ವೈರಲ್ ಆಗಿರುವ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Factcheck
ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ಬಂದ ನಂತರ ಸೌಜನ್ಯಾ ಕೊಲೆ ಪ್ರಕರಣದ ಬಗ್ಗೆ ಚರ್ಚೆ ಹೆಚ್ಚಾಗಿದ್ದು, ಇದರಲ್ಲಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬದವರ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ, ವಿವಿಧ ಮಾಧ್ಯಮಗಳಲ್ಲಿ ಕೇಳಿಬರಲು ಆರಂಭಿಸಿತು. ಆಗ ವೀರೇಂದ್ರ ಹೆಗ್ಗಡೆ ಅವರ ಪರವಾಗಿ ದಾವೆದಾರರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು, ಸೌಜನ್ಯಾ ಅತ್ಯಾಚಾರ- ಹತ್ಯೆ ಪ್ರಕರಣದಲ್ಲಿ ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬದವರ ವಿರುದ್ಧ ಯಾವುದೇ ಸುದ್ದಿ ಪ್ರಕಟಿಸದಂತೆ ಹಾಗೂ ಈಗಾಗಲೇ ಪ್ರಕಟವಾದ ವಿವಿಧ ಮಾಧ್ಯಮಗಳಲ್ಲಿನ ಲೇಖನಗಳನ್ನು ತೆಗೆಯುವಂತೆ ನ್ಯಾಯಾಲಯದಿಂದ ಪ್ರತಿಬಂಧಕ ಆದೇಶವನ್ನು ತರಲಾಗಿದ್ದು, ಈ ವಿಚಾರ ಸುದ್ದಿಯಾಗಿ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.
ಈ ಬಗ್ಗೆ ಎಚ್ ಟಿ ಕನ್ನಡ ವೆಬ್ ಸೈಟ್ ನಲ್ಲಿ ವರದಿ ಆಗಿರುವುದರ ವಿವರ ಹೀಗಿದೆ: ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಯಾವುದೇ ಮಾಧ್ಯಮಗಳ ಮೂಲಕ ಅವಹೇಳನಕಾರಿ ವರದಿ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದೆ. ಇದರೊಂದಿಗೆ ಈಗಾಗಲೇ ಸಾಮಾಜಿಕ ಮಾಧ್ಯಮಗಳೂ ಸೇರಿದಂತೆ ಇನ್ನಿತರೆ ಮಾಧ್ಯಮಗಳು ಮಾಡಿರುವ ಅವಹೇಳನಕಾರಿ ವರದಿಗಳನ್ನು ಅಳಿಸಿ ಹಾಕುವಂತೆ ನ್ಯಾಯಾಲಯ ಆದೇಶ ನೀಡಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನಡೆಸುತ್ತಿರುವಂತಹ ಸಂಸ್ಥೆಗಳು ಹಾಗೂ ಅವರ ಕುಟುಂಬಸ್ಥರ ವಿರುದ್ಧ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಸೇರಿದಂತೆ ಟಿವಿ ಚಾನೆಲ್ ಹಾಗೂ ಇತರೆ ಯಾವುದೇ ರೀತಿಯ ಮಾಧ್ಯಮಗಳಲ್ಲಿ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಹೇಳನಕಾರಿ ವರದಿ ಮಾಡಬಾರದು ಅಥವಾ ಮಾತನಾಡಬಾರದು ಎಂದು ನಿರ್ಬಂಧಿಸಿ ಆದೇಶ ನೀಡಲಾಗಿದೆ.
ಅಲ್ಲದೆ ಈಗಾಗಲೇ ವೀರೇಂದ್ರ ಹೆಗ್ಗಡೆ ಹಾಗೂ ಧರ್ಮಸ್ಥಳದ ಹೆಸರನ್ನು ಉಲ್ಲೇಖಿಸಿ ಪ್ರಕಟಿಸಲಾಗಿರುವ ವರದಿಗಳು ಹಾಗೂ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳನ್ನು ಡಿಲೀಟ್ ಮಾಡಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ. ಇದೇ ವೇಳೆ 61 ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು ವಿಚಾರಣೆ ಮುಂದೂಡಲಾಗಿದೆ.
ಈ ಸಂಬಂಧ ನ್ಯಾಯಾಲಯಕ್ಕೆ ವಾದಿಗಳಾದ ಶೀನಪ್ಪ ಹಾಗೂ ಮತ್ತಿತರರು ಸಲ್ಲಿಸಿರುವ ದಾವೆಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಈ ಕುರಿತಂತೆ ಆದೇಶಿಸಿದೆ.
Conclusion
ಅಲ್ಲಿಗೆ ಸೌಜನ್ಯಾ ಹತ್ಯೆ ಅತ್ಯಾಚಾರ ಪ್ರಕರಣದಲ್ಲಿ ಕೋರ್ಟ್ ನಿಂದ ಮತ್ತೆ ಯಾವುದೇ ಮಹತ್ತರ ತೀರ್ಪು ಬಂದಿಲ್ಲ. ಆದರೆ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಾಕಾರಣ ತಮ್ಮ ಹಾಗೂ ತಮ್ಮ ಕುಟುಂಬದ ಹೆಸರನ್ನು ಪ್ರಸ್ತಾವ ಮಾಡಲಾಗುತ್ತಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಪರವಾಗಿ ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆಯನ್ನು ತಂದು, ಯಾವುದೇ ಮಾಧ್ಯಮದಲ್ಲಿ ವೀರೇಂದ್ರ ಹೆಗ್ಗಡೆ ಹಾಗೂ ಕುಟುಂಬದವರ ಬಗ್ಗೆ ಈ ಪ್ರಕರಣದ ವಿಚಾರದಲ್ಲಿ ಪ್ರಸ್ತಾವ ಮಾಡಬಾರದು ಎಂದು ತಿಳಿಸಲಾಗಿದೆ.