ಚಂದ್ರನ ಮೇಲೆ ಅನ್ಯಗ್ರಹ ಜೀವಿಗಳ ಕುರುಹು ಕಂಡುಬಂದಿದೆ ಎಂಬುದು ಸುಳ್ಳು ಸುದ್ದಿ

ಚಂದ್ರನ ಮೇಲೆ ಅನ್ಯಗ್ರಹ ಜೀವಿಗಳು ಇರುವ ರಚನೆಗಳು ನಾಸಾದ ಫೋಟೋದಲ್ಲಿ ಸೆರೆಯಾಗಿವೆ. ಆದರೆ ಅದನ್ನು ಅಮೆರಿಕ ಮುಚ್ಚಿಟ್ಟಿದೆ ಎಂಬ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಸುದ್ದಿ ಸುಳ್ಳು.

By Srinivasa Mata  Published on  30 Aug 2023 1:22 PM GMT
ಚಂದ್ರನ ಮೇಲೆ ಅನ್ಯಗ್ರಹ ಜೀವಿಗಳ ಕುರುಹು ಕಂಡುಬಂದಿದೆ ಎಂಬುದು ಸುಳ್ಳು ಸುದ್ದಿ

ಹೈದರಾಬಾದ್: ಚಂದ್ರನ ಮೇಲೆ ಜೀವಿಗಳು ಇವೆಯಾ ನಾಸಾ ಪೋಟೊಗಳಲ್ಲಿ ಭಯಾನಕ ರಹಸ್ಯ ಸತ್ಯ ಮುಚ್ಚಿಟ್ಟಿದ್ದಾ ಅಮೇರಿಕಾ..- ಹೀಗೊಂದು ಶೀರ್ಷಿಕೆ ನೀಡಿ, ಸುದ್ದಿಯೊಂದನ್ನು ಮಾಡಲಾಗಿದೆ. ಅದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ನ್ಯೂಸ್ ಮೀಟರ್ ನಿಂದ ಫ್ಯಾಕ್ಟ್ ಚೆಕ್ ಮಾಡಲಾಗಿದೆ. ಅದರ ಪ್ರಕಾರವಾಗಿ ಈ ಬಗ್ಗೆ ಇರುವ ಮಾಹಿತಿ ಸತ್ಯಕ್ಕೆ ದೂರವಾದದ್ದು ಎಂಬುದು ಕಂಡುಬಂದಿದೆ.

ಈ ಬಗ್ಗೆ ಇರುವ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

Fact Check

ಚೀನಾ ದೇಶವು ಚಂದ್ರನ ಮೇಲೆ ಏಲಿಯನ್ ಗಳು ಅಥವಾ ಅನ್ಯಗ್ರಹ ಜೀವಿಗಳ ಮಲವನ್ನು ಪತ್ತೆ ಹಚ್ಚಿತಾ ಎಂಬ ವಾಕ್ಯದೊಂದಿಗೆ ಸುದ್ದಿಯು ಆರಂಭವಾಗುತ್ತದೆ. ಏಪ್ರಿಲ್ 9, 2019ರಲ್ಲಿ ಟೈಮ್ಸ್ ಆಫ್ ಇಂಡಿಯಾವು ಸುದ್ದಿಯೊಂದನ್ನು ಪ್ರಕಟಿಸಿದೆ. ಅದರ ಶೀರ್ಷಿಕೆ: “ನಾಸಾ ಏತಕ್ಕಾಗಿ ಚಂದ್ರನಿಂದ 96 ಬ್ಯಾಗ್ ಮಲವನ್ನು ತರುವುದಕ್ಕೆ ಬಯಸುತ್ತದೆ” ಎಂಬುದಾಗಿತ್ತು. ನಾಸಾ ಅಂದರೆ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಕೇಂದ್ರವಾಗಿದೆ. ನಾಲ್ಕು ವರ್ಷದ ಹಿಂದೆ ಪ್ರಕಟವಾದ ಆ ಸುದ್ದಿಯಲ್ಲಿನ ಮೊದಲ ಪ್ಯಾರಾ ಈ ಕೆಳಕಂಡಂತಿದೆ.
ಚಂದ್ರನ ಮೇಲೆ ಐವತ್ತು ವರ್ಷಗಳ ಹಿಂದೆ ಮೊದಲ ಬಾರಿಗೆ ಮನುಷ್ಯರು ಇಳಿದಾಗ ಬಹಳ ಮೌಲ್ಯಯುತವಾದ ವೈಜ್ಞಾನಿಕ ಡೇಟಾ ತಂದರು. ಅದರ ಜತೆಗೆ ಚಂದ್ರನ ಮೇಲಿನ ಕಲ್ಲು, ಮಣ್ಣನ್ನು ತಂದರು. ಆದರೆ ಕೆಲವನ್ನು ಅಲ್ಲಿಯೇ ಬಿಟ್ಟು ಬಂದರು. ನೀಲ್ ಆರ್ಮ್ ಸ್ಟ್ರಾಂಗ್ ಅವರ ಹೆಜ್ಜೆ ಗುರುತು, ಅಮೆರಿಕ ಬಾವುಟ, ತೊಂಬತ್ತಾರು ಬ್ಯಾಗ್ ನಷ್ಟು ಮಾನವ ವಿಸರ್ಜನೆ ಅಲ್ಲಿಯೇ ಬಿಟ್ಟು ಬಂದರು. ಇದೀಗ ವಿಜ್ಞಾನಿಗಳು ಅವುಗಳನ್ನು ಚಂದ್ರನಿಂದ ವಾಪಸ್ ತಂದು, ಅಲ್ಲಿ ಜೀವಿಗಳು ಬದುಕುವುದಕ್ಕೆ ಇರುವ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸುವುದಕ್ಕೆ ಬಯಸಿದ್ದಾರೆ.

ಒಟ್ಟು ಹನ್ನೆರಡು ಮಂದಿ ಗಗನಯಾತ್ರಿಗಳು ಚಂದ್ರನ ಮೇಲ್ಮೈನಲ್ಲಿ ಇಳಿದರು. ಒಟ್ಟು ತೊಂಬತ್ತಾರು ಬ್ಯಾಗ್ ಗಳಷ್ಟು ಮೂತ್ರ, ಮಲ, ವಾಂತಿ ಮತ್ತು ಇತರ ತ್ಯಾಜ್ಯಗಳನ್ನು ಅಲ್ಲಿಯೇ ಬಿಟ್ಟು ಬಂದಿದ್ದರು. ಇನ್ನು ಗಗನಯಾತ್ರಿಗಳಿಗೆ ಮಲ- ಮೂತ್ರ ವಿಸರ್ಜನೆಯನ್ನು ವಾಪಸ್ ತರುವುದಕ್ಕೆ ಬಾಹ್ಯಾಕಾಶ ನೌಕೆಯಲ್ಲಿ ಅವಕಾಶ ಇರಲಿಲ್ಲ. ಏಕೆಂದರೆ ನಿರ್ದಿಷ್ಟ ತೂಕವನ್ನು ಮಾತ್ರ ಹೊತ್ತು ತರುವುದಕ್ಕೆ ಅವಕಾಶ ಇತ್ತು. ಆದ್ದರಿಂದ ಚಂದ್ರನ ಮೇಲೆ ಕಂಡುಬಂದಿರುವ ಮಲ ಅದು ಈ ಹಿಂದೆ ಅಲ್ಲಿಗೆ ತೆರಳಿದ್ದ ಗಗನಯಾತ್ರಿಗಳದು.
ಇನ್ನು ಚಂದ್ರನ ಮೇಲೆ ಗುಡಿಸಲು ಆಕಾರದಲ್ಲಿ ಕಂಡುಬಂದಿದೆ. ಅದು ಇತರ ಗ್ರಹಗಳ ಜೀವಿಗಳ ಕುರುಹು ಇರಬಹುದು ಎಂಬುದಕ್ಕೆ ಜನವರಿ 7, 2022ರಲ್ಲಿ ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ ವರದಿ ಉತ್ತರವಾಗಿ ದೊರೆಯುತ್ತದೆ. ಅದರಲ್ಲಿ ಹೀಗೆ ವರದಿ ಮಾಡಲಾಗಿದೆ:

ಚೀನಾದ ಬಾಹ್ಯಾಕಾಶ ಅಧಿಕಾರಿಗಳು ಇದನ್ನು “ರಹಸ್ಯ ಗುಡಿಸಲು" ಎಂದು ಕರೆದರು. ಇತರರು ಇದನ್ನು "ಮೂನ್ ಕ್ಯೂಬ್" ಎಂದು ಕರೆದರು. ಯುಟು -2 ಅನ್ನು ಹತ್ತಿರದ ನೋಟಕ್ಕಾಗಿ ಕಳುಹಿಸಲಾಗಿದೆ, ಮತ್ತು ನಿಧಾನಗತಿಯ ವೇಗದಲ್ಲಿ ರೋವರ್ ಪ್ರಯಾಣಿಸಲು ಸಮರ್ಥವಾಗಿದೆ, ಹತ್ತಿರ ಬರಲು ವಾರಗಳನ್ನು ತೆಗೆದುಕೊಂಡಿದೆ.
ಶುಕ್ರವಾರದಂದು ಅವರ್ ಸ್ಪೇಸ್ ಎಂಬ ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತದೊಂದಿಗೆ ಸಂಯೋಜಿತವಾಗಿರುವ ಚೈನೀಸ್ ಭಾಷಾ ವಿಜ್ಞಾನ ಚಾನೆಲ್, ಈ ಬಗ್ಗೆ ಅಪ್ ಡೇಟ್ ಪೋಸ್ಟ್ ಮಾಡಿದೆ. ಚಂದ್ರನ ಕುಳಿಯ ಅಂಚಿನಲ್ಲಿ ಯಾವುದೇ ಏಕಶಿಲೆ ಇಲ್ಲ, ಯಾವುದೇ ರಹಸ್ಯ ಆಧಾರವಿಲ್ಲ. ಹತ್ತಿರದಲ್ಲಿ ಅದು ಕೇವಲ ಬಂಡೆಯಾಗಿ ಕಾಣುತ್ತದೆ. ಮೇಲುನೋಟಕ್ಕೆ ವಿವಿಧ ಕೋನ ಹಾಗೂ ಆಕಾರದಿಂದ ಅದು ನೆರಳು ಹಾಗೂ ಬೆಳಕಿನ ಸಂಯೋಜನೆಯೊಂದಿಗೆ ಹಾಗೆ ಕಾಣುತ್ತಿದೆ ಅಷ್ಟೇ.

Conclusion

ಚಂದ್ರನ ಮೇಲೆ ಜೀವಿಗಳ ಕುರುಹು ಇದ್ದಲ್ಲಿ ಅದನ್ನು ಮುಚ್ಚಿಡಬೇಕಾದ ಅಗತ್ಯವಾದರೂ ಏನು? ಇನ್ನು ಯಾವುದೇ ವೈಜ್ಞಾನಿಕ ತಳಹದಿ ಇಲ್ಲ, ಈಗಾಗಲೇ ಅಂಥ ಯಾವುದೂ ಕಂಡುಬಂದಿಲ್ಲ ಎಂದು ತಳ್ಳಿಹಾಕಿದ ವಿಚಾರವೊಂದನ್ನು ಮುಂದು ಮಾಡಿ ವರದಿ ಮಾಡಿರುವ ಈ ಸುದ್ದಿಯು ಸುಳ್ಳು.

Claim Review:Aliens on Moon photo found but America suppress the truth false claim by social media user
Claimed By:Social Media User
Claim Reviewed By:NewsMeter
Claim Source:Facebook
Claim Fact Check:False
Next Story