ಪಶ್ಚಿಮ ಬಂಗಾಲದ ವಿಡಿಯೋ ಎಂದು ಬಾಂಗ್ಲಾದೇಶ್ ಮುಸ್ಲಿಮರ ಪ್ರತಿಭಟನೆ ವಿಡಿಯೋ ವೈರಲ್

ಬಾಂಗ್ಲಾದೇಶ್ ನಲ್ಲಿ ಎರಡು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದ ವೇಳೆ ನಡೆದ ಪ್ರತಿಭಟನೆಯ ವಿಡಿಯೋವನ್ನು ಭಾರತದ ಪಶ್ಚಿಮ ಬಂಗಾಲದಲ್ಲಿ ಭಾರತೀಯ ಸೇನೆ ವಿರುದ್ಧ ಮುಸ್ಲಿಮರ ಧೋರಣೆ ಎಂಬ ರೀತಿಯಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಡಲಾಗಿದೆ.

By Srinivasa Mata  Published on  11 July 2023 6:35 AM GMT
ಪಶ್ಚಿಮ ಬಂಗಾಲದ ವಿಡಿಯೋ ಎಂದು ಬಾಂಗ್ಲಾದೇಶ್ ಮುಸ್ಲಿಮರ ಪ್ರತಿಭಟನೆ ವಿಡಿಯೋ ವೈರಲ್

ಹೈದರಾಬಾದ್: ಪಶ್ಚಿಮ ಬಂಗಾಲದಲ್ಲಿ ಮುಸ್ಲಿಮರು ಭಾರತೀಯ ಸೇನೆ ವಿರುದ್ಧ ದಾಳಿಗೆ ಮುಂದಾದರು ಎಂಬ ಅರ್ಥ ಬರುವಂತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೊಂದು ಹರಿದಾಡುತ್ತಿದೆ. “ಇಲ್ಲಿ ಯಾರನ್ನು ನೋವಿಸೋದಕ್ಕೆ ಹೊರಟಿಲ್ಲ ಇರೋ ಸತ್ಯ ಹಂಚಿಕೊಳ್ಳುತ್ತಿದ್ದೇನೆ. ಬಂಗಾಳದಲ್ಲಿ ಗಾಯಗೊಂಡ ಸೇನಾ ಯೋಧನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ವಾಹನ ತಡೆದು ನಿಲ್ಲಿಸಿದ ಸ್ಥಿತಿ ಇದು. ನಿಮ್ಮ ಮಕ್ಕಳ ಭವಿಷ್ಯ ನೋಡಿ, ಅವರನ್ನು ಬೆಂಬಲಿಸುವ ಸೆಕ್ಯುಲರ್ ಸರ್ಕಾರವಿದೆ ಮತ್ತು ಹಿಂದೂಗಳ ಶತ್ರು ಹಿಂದೂಗಳು ಮಾತ್ರ, ಪರಿಸ್ಥಿತಿ ಹದಗೆಟ್ಟಾಗ, ಸೆಕ್ಯುಲರ್ ಆಗುವವರೆಗೆ ಹಿಂದೂಗಳ ಕಣ್ಣು ಮುಚ್ಚಿರುತ್ತದೆ ಹಿಂದೂಗಳ ಜೊತೆ ಇರುವುದಿಲ್ಲ ಅಲ್ಲಿಯವರೆಗೂ ಯೋಗಿಗಳು ಮೋದಿಯವರನ್ನು ಶಪಿಸುತ್ತಲೇ ಇರುತ್ತಾರೆ ಎದ್ದೇಳಿ ಇನ್ನೂ ಸಮಯವಿದೆ ಇವರನ್ನು ವಿರೋಧಿಸುವುದೋ ಶರಣಾಗುವುದೋ ನಿಮಗೆ ಬಿಟ್ಟಿದ್ದು ಅವರ ಧೈರ್ಯ ನೋಡಿ ಅವರು ಸೇನೆಯೊಂದಿಗೆ ಹೋರಾಡುತ್ತಿದ್ದಾರೆ ಅಲ್ವಾ.??” - ಹೀಗೊಂದು ಪೋಸ್ಟ್ ಮಾಡಲಾಗಿದೆ. ಆದರೆ ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ಪ್ರಕಾರ ಸುಳ್ಳು ಸುದ್ದಿ ಎಂಬುದು ತಿಳಿದುಬಂದಿದೆ.

Factcheck

ಈಗ ಹರಿದಾಡುತ್ತಿರುವ ಸುದ್ದಿ ಎರಡು ವರ್ಷಕ್ಕೂ ಹಿಂದಿನದು. ಈಗಾಗಲೇ ಇದರ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿ, ಸುದ್ದಿಯನ್ನು ಸಹ ಪ್ರಕಟಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶಕ್ಕೆ ಭೇಟಿ ನೀಡುತ್ತಿದ್ದ ಹಿನ್ನೆಲೆಯಲ್ಲಿ ಅಲ್ಲಿನ ಮುಸ್ಲಿಮರು ನಡೆಸಿದ ಪ್ರತಿಭಟನೆಯ ವಿಡಿಯೋವನ್ನು ಪಶ್ಚಿಮ ಬಂಗಾಲದಲ್ಲಿ ನಡೆದ ಘಟನೆ ಇದು ಎಂಬಂತೆ ಬಿಂಬಿಸಲಾಗಿದೆ. ಬಾಂಗ್ಲಾದೇಶದ ಹಥಝರಿ ಎಂಬ ಗ್ರಾಮೀಣ ಭಾಗದಲ್ಲಿ ಸೇನೆಯ ಬೆಂಗಾವಲು ವಾಹನದ ಜತೆಗೆ ಆಂಬ್ಯುಲೆನ್ಸ್ ನಲ್ಲಿ ಯೋಧರೊಬ್ಬರನ್ನು ಕರೆದೊಯ್ಯುವಾಗ ದೊಣ್ಣೆ ಮೊದಲಾದ ಆಯುಧಗಳ ಜತೆಗೆ ಇರುವ ಮುಸ್ಲಿಮರ ಗುಂಪೊಂದು ತಡೆದಿದೆ. ಬೆಂಗಾವಲು ಪಡೆಯ ವಾಹನದಲ್ಲಿ ಇರುವ ಸೇನಾ ಅಧಿಕಾರಿಯು ಪ್ರತಿಭಟನಾ ನಿರತರ ಜತೆ ಮಾತನಾಡಿದ್ದಾರೆ.

2021ನೇ ಇಸವಿಯ ಮಾರ್ಚ್ 28ನೇ ತಾರೀಕಿನಂದು ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ನಡೆದಂಥ ಪ್ರತಿಭಟನೆಯ ವಿಡಿಯೋ ಅದು. ಸೇನೆಯ ಬೆಂಗಾವಲು ಪಡೆಯ ವಾಹನದ ಮೇಲೆ ಬಾಂಗ್ಲಾದಲ್ಲಿ ಬರೆಯಲಾಗಿದೆ. ಇನ್ನು ಸೇನೆಯ ಅಧಿಕಾರಿ ಧರಿಸಿರುವ ಸಮವಸ್ತ್ರದ ಮೇಲಿರುವ ಎರಡು ಕತ್ತಿ ಹಾಗೂ ಅದರ ಮೇಲಿನ ಚಿಹ್ನೆಯು ಬಾಂಗ್ಲಾದೇಶದ ಸೇನೆಯ ಲಾಂಛನವಾಗಿದೆ.
ಇನ್ನು ಆ ದಿನ ನಡೆದ ಘಟನೆಯ ಬಗ್ಗೆ ವಿವಿಧ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಅದರ ಪ್ರಕಾರ, ಹಥಝರಿಯಲ್ಲಿ ಸಾಗುವಂಥ ಚಿತ್ತಗಾಂಗ್- ಖಗ್ರಾಛರಿ ಹೆದ್ದಾರಿಯನ್ನು ಮದರಸಾದ ವಿದ್ಯಾರ್ಥಿಗಳು ತಡೆದು, ಪ್ರತಿಭಟನೆ ನಡೆಸಿದ್ದರು. ಮೂರು ದಿನಗಳ ಕಾಲ ಅಲ್ಲಿ ಭಾರೀ ವಾಹನ ದಟ್ಟಣೆ ಆಗಿ, ಸಮಸ್ಯೆ ಏರ್ಪಟ್ಟಿತ್ತು. ಇನ್ನು ಪೊಲೀಸರ ಜತೆಗಿನ ಕಾದಾಟದಲ್ಲಿ ಕನಿಷ್ಠ ನಾಲ್ಕು ಮಂದಿ ಮೃತಪಟ್ಟಿದ್ದರು ಎಂದು ಸಹ ವರದಿ ಆಗಿತ್ತು.
ಈ ಬಗ್ಗೆ ‘ದ ಕ್ವಿಂಟ್’ ಆಗಲೇ ಫ್ಯಾಕ್ಟ್ ಚೆಕ್ ವರದಿಯನ್ನು ಸಹ ಪ್ರಕಟಿಸಿದೆ.

ಅದರಲ್ಲಿ ಪ್ರತಿಭಟನೆಯ ಪೂರ್ಣ ವಿಡಿಯೋ ಪರೀಕ್ಷಿಸಿ, ಆ ಘಟನೆಯು ಎಲ್ಲಿ ನಡೆದಿತ್ತು ಎಂಬುದನ್ನು ಸಹ ತಂತ್ರಜ್ಞಾನ ಹಾಗೂ ವಿವಿಧ ಟೂಲ್ ಗಳ ಸಹಾಯದಿಂದ ಇದು ಬಾಂಗ್ಲಾದೇಶ್ ನಲ್ಲಿ ನಡೆದ ಘಟನೆ ಎಂಬುದನ್ನು ಖಾತ್ರಿ ಪಡಿಸಲಾಗಿದೆ.

Conclusion

ಬಾಂಗ್ಲಾದೇಶ್ ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿ ನಡೆದ ಪ್ರತಿಭಟನೆಗಳ ವಿಡಿಯೋವನ್ನು ಪಶ್ಚಿಮ ಬಂಗಾಲದಲ್ಲಿ ನಡೆದ ಘಟನೆ ಎಂದು ಸುದ್ದಿ ಹರಿಬಿಡಲಾಗುತ್ತದೆ. ಇದು ಸುಳ್ಳು ಸುದ್ದಿ.

(ಚಿತ್ರ ಕೃಪೆ: ದ ಕ್ವಿಂಟ್)


Claim Review:Bangladesh Muslims protest against India PM Narendra Modi visit as protest against Indian Army by Muslims
Claimed By:Social Media User
Claim Reviewed By:NewsMeter
Claim Source:Facebook
Claim Fact Check:False
Next Story