ಹೈದರಾಬಾದ್: 5 ಲಕ್ಷಕ್ಕಿಂತ ಹೆಚ್ಚು ಹಣವನ್ನು ಬ್ಯಾಂಕ್ ನಲ್ಲಿ ಇಟ್ಟಿರುವವರು ತಪ್ಪದೇ ಈ ಮಾಹಿತಿ ನೋಡಿ, ರಿಸರ್ವ್ ಬ್ಯಾಂಕ್ ನ ಹೊಸ ನಿಯಮ - ಹೀಗೊಂದು ಶೀರ್ಷಿಕೆಯ ಅಡಿಯಲ್ಲಿ ಸುದ್ದಿಯೊಂದು ವೈರಲ್ ಆಗಿದೆ. ಇದರಲ್ಲಿರುವ ಮಾಹಿತಿ ಅಪೂರ್ಣವಾಗಿದ್ದು, ಸಮರ್ಪಕವಾದ ಅಂಶಗಳನ್ನು ಒಳಗೊಂಡಿಲ್ಲ ಎಂಬುದು ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಲ್ಲಿ ಕಂಡುಬಂದಿದೆ. ವೈರಲ್ ಆಗಿರುವ ಸುದ್ದಿಯಲ್ಲಿ ಪ್ರಕಟವಾಗಿರುವ ತಪ್ಪು ಮಾಹಿತಿಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಸುದ್ದಿ ಓದುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ
Factcheck
ಒಂದು ವೇಳೆ ಬ್ಯಾಂಕ್ ನಷ್ಟವಾಗಿ ಮುಳುಗಡೆಯಾದರೆ ಆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನಿಮ್ಮ ಸಹಾಯಕ್ಕೆ ಬರುತ್ತದೆ ಎಂಬುದಾಗಿ ತಿಳಿದು ಬಂದಿದೆ. ಹೀಗೆ ಸುದ್ದಿಯನ್ನು ಮಾಡಲಾಗಿದೆ. ಬ್ಯಾಂಕ್ ನಷ್ಟವಾಗಿ ಮುಳುಗಡೆ ಆದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನದೇ ಅಂಗಸಂಸ್ಥೆಯಾದ ಡೆಪಾಸಿಟ್ ಇನ್ಷೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್ (ಡಿಐಸಿಜಿಸಿ) ವಿಮೆ ಸೌಲಭ್ಯ ಇದೆ. ಎಲ್ಲ ಬ್ಯಾಂಕ್ ಗಳಲ್ಲಿನ ಠೇವಣಿ ಮೇಲೆ ನೀಡುವಂಥ ವಿಮೆ ಯೋಜನೆ ಇದು. ಭಾರತೀಯ ರಿಸರ್ವ್ ಬ್ಯಾಂಕ್ ಸ್ವಾಯತ್ತ ಸಂಸ್ಥೆ, ಅದರದೇ ಅಂಗ ಸಂಸ್ಥೆ ಡಿಐಸಿಜಿಸಿ. ಒಂದು ಬ್ಯಾಂಕ್ ನಲ್ಲಿ ಇಟ್ಟಿರುವಂಥ ಅಸಲು ಮತ್ತು ಬಡ್ಡಿ ಸೇರಿ ಒಬ್ಬ ವ್ಯಕ್ತಿಗೆ ಸೇರಿದ ಐದು ಲಕ್ಷ ರೂಪಾಯಿಗೆ ವಿಮೆ ದೊರೆಯುತ್ತದೆ. ಅಂದರೆ ಅಷ್ಟು ಮೊತ್ತವನ್ನು ಲಿಕ್ವಿಡೇಟರ್ ನಷ್ಟವಾದ ಠೇವಣಿದಾರರ ಪಟ್ಟಿ ಮಾಡಿ, ಸಲ್ಲಿಸಿದ ತೊಂಬತ್ತು ದಿನದೊಳಗಾಗಿ ಪಾವತಿಸಲಾಗುತ್ತದೆ.
ಬೆಂಗಳೂರು ಮೂಲದ ಗುರು ರಾಘವೇಂದ್ರ ಬ್ಯಾಂಕ್ ಪ್ರಕರಣದಲ್ಲಿ ಠೇವಣಿದಾರರಿಗೆ ಐದು ಲಕ್ಷ ರೂಪಾಯಿ ವಿಮೆ ಸಿಕ್ಕಿದೆ. ಅಂದರೆ ಇದು ಒಂದು ವರ್ಷಕ್ಕೂ ಹಿಂದೆಯೇ ಕೇಂದ್ರ ಸರ್ಕಾರದಿಂದ ಘೋಷಣೆ ಮಾಡಿದ ಮೊತ್ತವಾಗಿದೆ. ಇದಕ್ಕೂ ಮುನ್ನ ವಿಮೆ ಮೊತ್ತ ಒಂದು ಲಕ್ಷ ರೂಪಾಯಿ ಇತ್ತು. ಅದನ್ನು ಹೆಚ್ಚು ಮಾಡಲಾಗಿದೆ.
ವಾಣಿಜ್ಯ ಬ್ಯಾಂಕ್ ಗಳು, ವಿದೇಶಿ ಬ್ಯಾಂಕ್ ಗಳ ಶಾಖೆ ಭಾರತದಲ್ಲಿ ಇರುವಂಥದ್ದು, ಸ್ಥಳೀಯ ಪ್ರಾದೇಶಿಕ ಬ್ಯಾಂಕ್ ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು, ರಾಜ್ಯ, ಕೇಂದ್ರ ಅಥವಾ ಪಟ್ಟಣ ಸಹಕಾರಿ ಬ್ಯಾಂಕ್ ಗಳು, ಯಾವುದರ ಕೋ ಆಪರೇಟಿವ್ ಸೊಸೈಟಿಗಳ ಕಾಯ್ದೆ ತಿದ್ದುಪಡಿ ಆಗಿವೆಯೋ ಅಂಥ ಕಡೆಗಳಲ್ಲಿ ಠೇವಣಿ ಮಾಡಿದ ಗ್ರಾಹಕರಿಗೆ ವಿಮೆ ಸೌಲಭ್ಯ ದೊರೆಯುತ್ತದೆ. ಡಿಐಸಿಜಿಸಿ ಅಡಿಯಲ್ಲಿ ಕೋ ಆಪರೇಟಿವ್ ಸೊಸೈಟಿಗಳು ಬರುವುದಿಲ್ಲ. ಅಂದ ಹಾಗೆ ಡಿಐಸಿಜಿಸಿ ಭಾರತದ ಹೊರಗೆ ಸ್ವೀಕರಿಸಿದ ಮೊತ್ತಕ್ಕೂ ಅನ್ವಯಿಸುತ್ತದೆ.
ಈ ಮೇಲ್ಕಂಡ ಮಾಹಿತಿ ಬಗ್ಗೆ ಔಟ್ ಲುಕ್ ಮನಿ ವರದಿಯನ್ನು ಪ್ರಕಟಿಸಿದೆ.
ಠೇವಣಿ ಮೇಲೆ ವಿಮೆಯನ್ನು ತೊಂಬತ್ತು ದಿನದೊಳಗೆ ಪಾವತಿಸಬೇಕು ಎಂದು ಎರಡು ವರ್ಷದ ಹಿಂದೆಯೇ ಸಂಪುಟ ಸಮಿತಿಯಿಂದ ಅನುಮತಿ ನೀಡಲಾಗಿದೆ. ಆ ಬಗ್ಗೆ ಪ್ರಕಟವಾಗಿರುವ ಸುದ್ದಿಯ ಲಿಂಕ್ ಇಲ್ಲಿದೆ.
ಬ್ಯಾಂಕ್ ಗಳು ನಷ್ಟಕ್ಕೆ ಗುರಿಯಾಗಿ, ಠೇವಣಿದಾರರಿಗೆ ಹಣ ಹಿಂತಿರುಗಿಸಲು ವಿಫಲವಾದಲ್ಲಿ ಮುಂಚೆ ಇದ್ದ ಒಂದು ಲಕ್ಷ ರೂಪಾಯಿ ಠೇವಣಿ ವಿಮೆ ಮೊತ್ತವನ್ನು ಐದು ಲಕ್ಷ ರೂಪಾಯಿಗೆ ಹೆಚ್ಚಿಸಿ ಮೂರು ವರ್ಷಗಳೇ ಕಳೆದಿವೆ. ಈ ಬಗ್ಗೆ ಪ್ರಕಟವಾಗಿರುವ ವರದಿಯ ಲಿಂಕ್ ಇಲ್ಲಿದೆ.
Conclusion
ಬ್ಯಾಂಕ್ ಗಳಲ್ಲಿ ಠೇವಣಿದಾರರು ಇಡುವಂಥ ಮೊತ್ತಕ್ಕೆ ಇರುವಂಥ ವಿಮೆ ಮೊತ್ತ ಐದು ಲಕ್ಷ ಎಂದಿರುವುದು ಹಳೇ ನಿಯಮಾವಳಿ ಆಗಿದೆ. ಈ ಸಂಬಂಧವಾಗಿ ಸರ್ಕಾರ ನಿಯಮಾವಳಿಗೆ ಅನುಮೋದನೆ ನೀಡಿದೆಯೇ ವಿನಾ ಇದನ್ನು ಕೊಡುವುದು ಸ್ವಾಯತ್ತ ಸಂಸ್ಥೆಯಾದ ಭಾರತೀಯ ರಿಸರ್ವ್ ಬ್ಯಾಂಕ್ ನ ಅಂಗಸಂಸ್ಥೆ ಡೆಪಾಸಿಟ್ ಇನ್ಷೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್ (ಡಿಐಸಿಜಿಸಿ). ಆದ್ದರಿಂದ ವೈರಲ್ ಆಗಿರುವ ಸುದ್ದಿಯಲ್ಲಿ ಹಲವು ತಪ್ಪು ಮಾಹಿತಿಗಳು ಇವೆ.