ಹೈದರಾಬಾದ್: ದಕ್ಷಿಣ ಕನ್ನಡಕ್ಕೆ ಹಾಗೂ ಕರುನಾಡಿಗೆ ಸಿಹಿಸುದ್ದಿ ಕೊಟ್ಟ ಬಿಜೆಪಿ ಹೈಕಮಾಂಡ್, ರಾಜ್ಯಾದ್ಯಕ್ಷ ಬದಲಾವಣೆ -ಹೀಗೊಂದು ಶೀರ್ಷಿಕೆ ನೀಡಿದ್ದು, ಯೂಟ್ಯೂಬ್ ವಿಡಿಯೋ ಮಾಡಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆದರೆ ಕರ್ನಾಟಕ ಬಿಜೆಪಿ ರಾಜ್ಯ ಘಟಕಕ್ಕೆ ಅಧ್ಯಕ್ಷ ಸ್ಥಾನಕ್ಕೇ ಆಗಲಿ, ವಿಧಾನಸಭೆ ವಿಪಕ್ಷ ಸ್ಥಾನದ ಅಧ್ಯಕ್ಷ ಸ‌್ಥಾನಕ್ಕೆ ಆಗಲೀ ಜುಲೈ 30, 2023ರ ಭಾನುವಾರದಂದು ಕೂಡ ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿಲ್ಲ. ಆದ್ದರಿಂದ ಈ ಸುದ್ದಿ ಸುಳ್ಳು ಎಂಬುದು ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಲ್ಲಿ ಕಂಡುಬಂದಿದೆ.
ಈ ಬಗ್ಗೆ ಪ್ರಕಟ ಆಗಿರುವ ಸುದ್ದಿ ಓದಲು, ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Factcheck
ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದ ಸಿ.ಟಿ. ರವಿ ಅವರನ್ನು ಆ ಸ್ಥಾನದಿಂದ ಕೈ ಬಿಡಲಾಗಿದೆ. ಆ ಹುದ್ದೆಯಿಂದ ತೆಗೆದಿರುವ ಕಾರಣಕ್ಕೆ ರವಿ ಅವರನ್ನು ರಾಜ್ಯ ಬಿಜೆಪಿ ಘಟಕಕ್ಕೆ ಅಧ್ಯಕ್ಷರನ್ನಾಗಿ ಮಾಡಬಹುದು ಎಂದು ‘ದ ಹಿಂದೂ’ ವೆಬ್ ಸೈಟ್ ನಲ್ಲಿ ವರದಿ ಆಗಿದೆ. ಅದೇ ರೀತಿ ಈ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ಸಹ ವರದಿ ಮಾಡಲಾಗಿದೆ. ಏಷ್ಯಾನೆಟ್ ಸುವರ್ಣ ಚಾನೆಲ್ ನಲ್ಲಿ ರವಿ ಅವರು ಅಧ್ಯಕ್ಷರಾಗುವ ಸಾಧ್ಯತೆಗಳಿವೆ ಎಂಬುದನ್ನು ಬಿತ್ತರಿಸಲಾಗಿದೆಯೇ ವಿನಾ ಆಯ್ಕೆ ಮಾಡಲಾಗಿದೆ ಎಂದು ಹೇಳಿಲ್ಲ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಪೋಸ್ಟ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಹಾಗೂ ಕರುನಾಡಿಗೆ ಸಿಹಿ ಸುದ್ದಿ ಕೊಟ್ಟ ಬಿಜೆಪಿ ಅಂತಲೂ ಹೇಳಲಾಗಿದೆ.
ವಾಸ್ತವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೂ ಸುದ್ದಿಯಲ್ಲಿ ಎಂಬೆಡ್ ಮಾಡಿರುವಂಥ ಯೂಟ್ಯೂಬ್ ನಲ್ಲಿ ಪ್ರಸ್ತಾವ ಆಗಿರುವ ಸಿ.ಟಿ. ರವಿ ಆಯ್ಕೆ ಸಾಧ್ಯತೆಗೂ ಏನು ಸಂಬಂಧ ತಿಳಿಯುವುದಿಲ್ಲ. ಏಕೆಂದರೆ ರವಿ ಅವರು ಚಿಕ್ಕಮಗಳೂರು ಜಿಲ್ಲೆಯವರು. ಜತೆಗೆ ಅವರ ಆಯ್ಕೆಯನ್ನೂ ಹೈಕಮಾಂಡ್ ಆಖೈರು ಕೂಡ ಮಾಡಿಲ್ಲ. ಕರ್ನಾಟಕ ಬಿಜೆಪಿ ಅಧಿಕೃತ ವೆಬ್ ಸೈಟ್ ನಲ್ಲಿರುವ ಪದಾಧಿಕಾರಿಗಳ ಪಟ್ಟಿಯಲ್ಲಿ ಈಗಲೂ (ಜುಲೈ 30, 2023ರ ಭಾನುವಾರ) ಕೂಡ ನಳಿನ್ ಕುಮಾರ್ ಕಟೀಲ್ ಅವರ ಹೆಸರೇ ಇದೆ. ಇನ್ನೂ ಒಂದು ಸಂಗತಿ ಏನೆಂದರೆ, ಬಿಜೆಪಿ ತೊರೆದು, ಕಾಂಗ್ರೆಸ್ ಸೇರ್ಪಡೆ ಆಗಿ, ಸದ್ಯಕ್ಕೆ ಕೈ ಶಾಸಕರೇ ಆಗಿರುವ ಲಕ್ಷ್ಮಣ ಸವದಿ ಹೆಸರು ರಾಜ್ಯ ಉಪಾಧ್ಯಕ್ಷರ ಪಟ್ಟಿಯಲ್ಲಿ ಹಾಗೇ ಉಳಿದಿದೆ.
Conclusion
ಬಿಜೆಪಿ ಹೈಕಮಾಂಡ್ ನಿಂದ ಕರ್ನಾಟಕ ರಾಜ್ಯ ಘಟಕಕ್ಕೆ ಅಧ್ಯಕ್ಷರನ್ನು ಬದಲಾವಣೆ ಮಾಡಿರುವ ಬಗ್ಗೆ ಯಾವುದೇ ಘೋಷಣೆ ಹೊರಬಿದ್ದಿಲ್ಲ. ಆದ್ದರಿಂದ ಸಿ.ಟಿ. ರವಿ ಆಯ್ಕೆ ಆಗಬಹುದು ಎಂಬುದು ಮಾಧ್ಯಮಗಳ ಊಹೆಯೇ ವಿನಾ ಅಧಿಕೃತ ಅಲ್ಲ. ಆದ್ದರಿಂದ ಈ ಸಮಯಕ್ಕೆ ಸುದ್ದಿ ಸುಳ್ಳು.