ಹೈದರಾಬಾದ್: ಮಹಾಶಿವನ ಮೇಲೆ ಉಗುಳಿದ ಕಿರಾತಕನಿಗೆ ಸಿಎಂ ಯೋಗಿ ಮಾಡಿದ್ದೇನು ಗೊತ್ತಾ, ಸ್ವತಃ ಪ್ರಧಾನಿಯೇ ಶಾಕ್- ಹೀಗೊಂದು ಶೀರ್ಷಿಕೆ ನೀಡಿದ ವಿಡಿಯೋ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆದರೆ ನ್ಯೂಸ್ ಮೀಟರ್ ಫ್ಯಾಕ್ಟ್ ಚೆಕ್ ನಲ್ಲಿ ಕಂಡುಬರುವಂತೆ ಇದರಲ್ಲಿರುವ ಮಾಹಿತಿಗೂ ಹಾಗೂ ಶೀರ್ಷಿಕೆಗೂ ಯಾವುದೇ ಸಂಬಂಧ ಇಲ್ಲ. ಘಟನೆ ನಡೆದಿರುವುದು ಮಧ್ಯಪ್ರದೇಶದಲ್ಲಿ ಹಾಗೂ ಶೀರ್ಷಿಕೆಯಲ್ಲಿ ಇರುವುದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರದು.
ವೈರಲ್ ಆಗಿರುವ ಸುದ್ದಿಯ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Factcheck
ಮಧ್ಯಪ್ರದೇಶದಲ್ಲಿ ನಡೆದಿರುವ ಈ ಘಟನೆ ಬಗ್ಗೆ ‘ದಿ ಪ್ರಿಂಟ್’ ವೆಬ್ ಸೈಟ್ ನಲ್ಲಿ ವರದಿ ಆಗಿದೆ. ಅದರ ಮೊದಲ ಪ್ಯಾರಾ ಹೀಗಿದೆ: ಹಿಂದೂ ಧಾರ್ಮಿಕ ಮೆರವಣಿಗೆಯ ಮೇಲೆ ಕೆಲವು ಅಪರಿಚಿತ ವ್ಯಕ್ತಿಗಳು 'ಉಗುಳಿರುವುದು' ಎಂಬ ವೀಡಿಯೊ ಕಾಣಿಸಿಕೊಂಡ ನಂತರ, ಡ್ರಮ್ ಬೀಟ್ ಮತ್ತು ಅಬ್ಬರದ ಸಂಗೀತದ ನಡುವೆ ಮುಸ್ಲಿಂ ಕುಟುಂಬದ ಮೂರು ಅಂತಸ್ತಿನ 'ಅಕ್ರಮ' ಕಟ್ಟಡವನ್ನು ಉಜ್ಜಯಿನಿ ಜಿಲ್ಲಾಡಳಿತ ಬುಧವಾರ ನೆಲಸಮಗೊಳಿಸಿದೆ.
ಅದರ ಮುಂದುವರಿದ ಭಾಗ ಹೀಗಿದೆ: ಈ ಸಂಬಂಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಕುಟುಂಬದ ಇಬ್ಬರು ಬಾಲಕರು ಸೇರಿದಂತೆ ಮೂವರನ್ನು ಈ ಹಿಂದೆ ಬಂಧಿಸಲಾಗಿತ್ತು.
ಜುಲೈ 17 ರಂದು ದಾಖಲಾದ ಎಫ್‌ಐಆರ್‌ನಲ್ಲಿ, ಸಾವನ್ ಲೋಟ್ ಎಂದು ಗುರುತಿಸಲಾದ ದೂರುದಾರರು ಸೋಮವಾರ ಸಂಜೆ ತನ್ನ ಇಬ್ಬರು ಸ್ನೇಹಿತರೊಂದಿಗೆ ಮಹಾಕಾಲ್ ಬಾಬಾನ ಮೆರವಣಿಗೆಯನ್ನು ನೋಡಲು ಬಂದಾಗ 'ಉಗುಳುವ' ಘಟನೆ ಸಂಭವಿಸಿದೆ ಎಂದು ಆರೋಪಿಸಿದ್ದಾರೆ.
ಮೆರವಣಿಗೆ ಸೂಪರ್ ಗೋಲ್ಡ್ ಬೇಕರಿ ಬಳಿ ಬರುತ್ತಿದ್ದಂತೆ ಪಕ್ಕದ ಕಟ್ಟಡದ ತಾರಸಿ ಮೇಲೆ ನಿಂತಿದ್ದ ಮೂವರು ಅಪರಿಚಿತ ವ್ಯಕ್ತಿಗಳು ಮೆರವಣಿಗೆಯ ಮೇಲೆ ಉಗುಳಿದ್ದಾರೆ ಎಂದು ಲಾಟ್ ಹೇಳಿಕೊಂಡಿದ್ದಾರೆ.
ದೂರುದಾರರು ತಮ್ಮ ಸ್ನೇಹಿತರಿಗೆ ಅದನ್ನು ತೋರಿಸಿದ್ದು, ನಂತರ ವಿಡಿಯೋ ರೆಕಾರ್ಡ್ ಮಾಡಲಾಗಿದೆ ಎಂದು ಹೇಳಿದ್ದಾರೆ. "ಈ ಘಟನೆಯು ನನ್ನ ಧಾರ್ಮಿಕ ಭಾವನೆಗಳಿಗೆ ಮತ್ತು ಇಡೀ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ" ಎಂದು ಅವರು ಹೇಳಿದ್ದಾರೆ.
“ಮೂರು ಅಂತಸ್ತಿನ ಮನೆ ಅಕ್ರಮವೆಂದು ಕಂಡುಬಂದ ನಂತರ ಅದನ್ನು ಕೆಡವಲಾಯಿತು. ಬಾಲಕರನ್ನು ಬಾಲಾಪರಾಧಿಗಳ ನ್ಯಾಯ ಮಂಡಳಿಗೆ ಹಾಜರುಪಡಿಸಲಾಗಿದ್ದು, 18 ವರ್ಷದ ಯುವಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ,” ಎಂದು ಖಾರ ಕುವಾ ಪೊಲೀಸ್ ಠಾಣೆಯ ಟೌನ್ ಇನ್ಸ್‌ಪೆಕ್ಟರ್ ರಾಜವೀರ್ ಸಿಂಗ್ ಗುರ್ಜರ್ ದಿ ಪ್ರಿಂಟ್‌ಗೆ ತಿಳಿಸಿದ್ದಾರೆ. - ಹೀಗೆ ವರದಿ ಆಗಿದೆ.
ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ. ಧಾರ್ಮಿಕ ಮೆರವಣಿಗೆ ಸಾಗಿ ಬರುತ್ತಿದ್ದಾಗ ಅದರ ಮೇಲೆ ಉಗುಳಿದ ಆರೋಪ ಎದುರಿಸುತ್ತಿರುವವರ ಪೈಕಿ ಒಬ್ಬನ ಮನೆಯು ಅಕ್ರಮ ಕಟ್ಟಡ ಎಂದು ಹೇಳಿ, ಸ್ಥಳೀಯ ಆಡಳಿತದಿಂದ ಕೆಡವಲಾಗಿದೆ. ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಆಗಿರುವವರು ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಅವರು ಪ್ರತಿನಿಧಿಸುವ ಪಕ್ಷ ಬಿಜೆಪಿ.
Conclusion
ಮಹಾಶಿವನ ಮೇಲೆ ಉಗುಳಿದ ಕಿರಾತಕನಿಗೆ ಸಿಎಂ ಯೋಗಿ ಮಾಡಿದ್ದೇನು ಗೊತ್ತಾ, ಸ್ವತಃ ಪ್ರಧಾನಿಯೇ ಶಾಕ್- ಹೀಗೆ ಶೀರ್ಷಿಕೆ ನೀಡುವ ಮೂಲಕ ಓದುಗರನ್ನು ದಾರಿ ತಪ್ಪಿಸಲಾಗಿದೆ. ವೈರಲ್ ವಿಡಿಯೋದಲ್ಲಿ ಮಾತ್ರ ಮಧ್ಯಪ್ರದೇಶದಲ್ಲಿ ನಡೆದ ಘಟನೆ ಹಾಗೂ ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿ ಎಂಬುದನ್ನು ಹೇಳಲಾಗಿದ್ದರೂ, ಶೀರ್ಷಿಕೆ ಹಾಗೂ ವಿಡಿಯೋದ ಥಂಬ್ ನೇಲ್ ನಲ್ಲಿ ಓದುಗರನ್ನು ದಾರಿ ತಪ್ಪಿಸುವಂತೆ ಮಾಡಲಾಗಿದೆ.