Fact Check: ನರೇಂದ್ರ ಮೋದಿ ಪುನಃ ಪ್ರಧಾನಿಯಾಗುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದರೇ?
ವೀಡಿಯೋವನ್ನು ತಿರುಚಲಾಗಿದ್ದು, ಮೋದಿ ಜೂನ್ 4ರಂದು ಪ್ರಧಾನಿಯಾಗಿರುವುದಿಲ್ಲ ಎಂದು ರಾಹುಲ್ ಹೇಳಿದ್ದಾರೆ.
By Newsmeter Network Published on 16 May 2024 8:50 PM ISTClaim: ನರೇಂದ್ರ ಮೋದಿ ಪ್ರಧಾನಿಯಾಗಿ ಪುನರಾಯ್ಕೆಯಾಗುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
Fact: ವೀಡಿಯೋವನ್ನು ತಿರುಚಲಾಗಿದ್ದು, ಮೋದಿ ಜೂನ್ 4ರಂದು ಪ್ರಧಾನಿಯಾಗಿರುವುದಿಲ್ಲ ಎಂದು ರಾಹುಲ್ ಹೇಳಿದ್ದಾರೆ.
2024 ರ ಲೋಕಸಭಾ ಚುನಾವಣೆಯ ನಂತರ ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ಮರಳುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿರುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿದೆ.
“ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗುತ್ತಾರೆ. ನಾನು ಮುಂಚಿತವಾಗಿ ಸತ್ಯವನ್ನು ಹೇಳುತ್ತಿದ್ದೇನೆ, ಜೂನ್ 4, 2024 ರಂದು ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ಮುಂದುವರಿಯುತ್ತಾರೆ. ನರೇಂದ್ರ ಮೋದಿ ಪ್ರಧಾನಿಯಾಗುತ್ತಾರೆ, ಬೇಕಾದರೆ ನೀವು ಬರೆದಿಟ್ಟುಕೊಳ್ಳಿ, ನಾವು ಅಗತ್ಯವಿರುವ ಎಲ್ಲಾ ಶ್ರಮವನ್ನು ಹಾಕಿದ್ದೇವೆ. ಈಗ, ಉತ್ತರ ಪ್ರದೇಶದಲ್ಲಿ ನಮ್ಮ ಮೈತ್ರಿಕೂಟವು ಒಂದೇ ಒಂದು ಸ್ಥಾನವನ್ನು ಗೆಲ್ಲುವುದಿಲ್ಲ ಎಂದು ನೀವು ನೋಡುತ್ತೀರಿ. ರಾಹುಲ್ ಗಾಂಧಿ ಸತ್ಯವನ್ನೇ ಮಾತನಾಡುತ್ತಿದ್ದಾರೆ ಮತ್ತು ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ ಎಂಬುದು ನಗುತ್ತಿರುವವರಿಗೆ ಗೊತ್ತು. ಖತಂ, ಗುಡ್ ಬೈ, ಥ್ಯಾಂಕ್ಯೂ" ಎಂದು ಆ ವೀಡಿಯೋದಲ್ಲಿ ರಾಹುಲ್ ಗಾಂಧಿ ಹೇಳುವುದನ್ನು ಕೇಳಬಹುದು.
ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿಯವರು ಜೂನ್ 4ರಂದು ಬರಲಿರುವ ಫಲಿತಾಂಶದ ಬಗ್ಗೆ ಭವಿಷ್ಯ ನುಡಿದಿದ್ದಾರೆ, ಕೇಳಿರಿ ಎಂದು ಎಕ್ಸ್ (archive)ಬಳಕೆದಾರರು ಪೋಸ್ಟ್ ಹಾಕಿದ್ದಾರೆ.
Fact Check
ನ್ಯೂಸ್ ಮೀಟರ್ ಈ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೋಧಿಸಿದಾಗ , ವೀಡಿಯೋ ತಿರುಚಲಾಗಿದೆ ಎಂದು ತಿಳಿದು ಬಂದಿದೆ.
ನಾವು ಕಾಂಗ್ರೆಸ್ ಪಕ್ಷದ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊವನ್ನು ಹುಡುಕಿದೆವು. ಮತ್ತು ಮೇ 10, 2024 ರಂದು ಉತ್ತರ ಪ್ರದೇಶದ ಕಾನ್ಪುರದಿಂದ ಲೈವ್-ಸ್ಟ್ರೀಮ್ ಮಾಡಿದ ಇಂಡಿಯಾ ಒಕ್ಕೂಟದ ಸಾರ್ವಜನಿಕ ಸಭೆಯ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ.
ಸಾರ್ವಜನಿಕ ಸಭೆಯಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಹಲವಾರು ನಾಯಕರು ರಾಹುಲ್ ಗಾಂಧಿಯವರಿಗಿಂತ ಮೊದಲು ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಸುಮಾರು 43:55 ನಿಮಿಷಗಳ ಟೈಮ್‌ಸ್ಟ್ಯಾಂಪ್‌ನಲ್ಲಿ, ರಾಹುಲ್ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲು ಪ್ರಾರಂಭಿಸುತ್ತಾರೆ. ವೈರಲ್ ಆದ ವೀಡಿಯೋ ಕ್ಲಿಪ್ ಮೂಲ ಆವೃತ್ತಿಯ ಸುಮಾರು 46:00 ನಿಮಿಷಗಳ ಟೈಮ್‌ಸ್ಟ್ಯಾಂಪ್‌ನಲ್ಲಿ ಕಾಣಿಸಿಕೊಳ್ಳುತ್ತದೆ.
ಈ ವಿಡಿಯೋದಲ್ಲಿ ರಾಹುಲ್ ಗಾಂಧಿ, "ನಾನು ನಿಮಗೆ ಮೊದಲೇ ಹೇಳುತ್ತಿದ್ದೇನೆ, ಜೂನ್ 4, 2024 ರಂದು ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿ ಉಳಿಯುವುದಿಲ್ಲ, ನರೇಂದ್ರ ಮೋದಿ ಪ್ರಧಾನಿಯಾಗಲು ಸಾಧ್ಯವಿಲ್ಲ, ಬರೆದಿಟ್ಟುಕೊಳ್ಳಿ, ನಮ್ಮ ಮೈತ್ರಿಗೆ ಉತ್ತರ ಪ್ರದೇಶದಲ್ಲಿ 50 ಸೀಟುಗಳಿಗಿಂತ ಕಡಿಮೆ ಬರುವುದಿಲ್ಲ ಎಂಬುದನ್ನು ನೀವು ಆಗ ನೋಡುತ್ತೀರಿ" ಎನ್ನುತ್ತಿರುವುದು ಕಾಣಬಹುದು.
ಮಾಧ್ಯಮದವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ನಾವು ಈಗಾಗಲೇ ಪ್ರತಿ ರಾಜ್ಯದಲ್ಲೂ ಬಿಜೆಪಿಯನ್ನು ತಡೆದಿದ್ದೇವೆ. ಅದಾನಿ ಮಾಧ್ಯಮಗಳು ಸತ್ಯವನ್ನು ಮಾತನಾಡುವುದಿಲ್ಲ, ಅವರು ನಮ್ಮ ಸಹೋದರರು ಮತ್ತು ನಾವು ಅವರನ್ನು ಪ್ರೀತಿಸುತ್ತೇವೆ. ಆದರೆ ಅವರು ಸತ್ಯವನ್ನು ಹೇಳುವುದಿಲ್ಲ, ಏಕೆಂದರೆ ಅವರ ಪೋಷಣೆಗೆ ಸಂಬಳ ಬೇಕು. ಆದರೆ ಈಗ ನೀವು ಅವರ ಮುಖವನ್ನು ನೋಡಿದರೆ, ಅವರು ನಗುತ್ತಿರುವುದನ್ನು ಕಾಣಬಹುದು, ಏಕೆಂದರೆ ಅವರಿಗೆ ರಾಹುಲ್ ಗಾಂಧಿ ಸತ್ಯ ಹೇಳುತ್ತಿದ್ದಾರೆ ಮತ್ತು ನರೇಂದ್ರ ಮೋದಿ ಇನ್ನೊಮ್ಮೆ ಪ್ರಧಾನಿಯಾಗುವುದಿಲ್ಲ ಎಂದು ತಿಳಿದಿದೆ" ಎಂದಿದ್ದಾರೆ.
ಕಾಂಗ್ರೆಸ್ ಪಕ್ಷವು ಅಧಿಕೃತ ಎಕ್ಸ್ ಖಾತೆಯಲ್ಲಿ ಮೂಲ ಮತ್ತು ಎಡಿಟ್ ಮಾಡಿದ ಎರಡೂ ವೀಡಿಯೊಗಳನ್ನು ಒಳಗೊಂಡ ತುಲನಾತ್ಮಕ ಕೊಲಾಜ್ ಅನ್ನು ಹಂಚಿಕೊಂಡಿದೆ, ಬಿಜೆಪಿಯು ವೀಡಿಯೋವನ್ನು ತಿರುಚಿದೆ ಎಂದು ಆರೋಪಿಸಿದೆ.
डूबती हुई BJP और नरेंद्र मोदी की फेक न्यूज फैक्ट्री को अब फेक वीडियो का ही सहारा है।
— Congress (@INCIndia) May 15, 2024
आदतन राहुल गांधी जी के भाषण को कांट-छांटकर झूठा वीडियो बनाया और फिर रंगे हाथों पकड़े गए।
आप खुद देख लें 👇 pic.twitter.com/ktnZKqJl5h
ಇದನ್ನು ರಾಹುಲ್ ಗಾಂಧಿ ರೀಪೋಸ್ಟ್ ಮಾಡಿ, ಜೂನ್ 4 ರ ನಂತರ ನರೇಂದ್ರ ಮೋದಿ ಅವರು ಪ್ರಧಾನಿಯಾಗುವುದಿಲ್ಲ ಎಂಬ ತಮ್ಮ ನಿಲುವನ್ನು ಪುನರುಚ್ಚರಿಸಿದ್ದಾರೆ.
‘झूठ की फैक्ट्री’ भाजपा खुद को कितना भी दिलासा दे ले, कोई फर्क नहीं पड़ने वाला।
— Rahul Gandhi (@RahulGandhi) May 15, 2024
एक बार फिर कह रहा हूं - 4 जून के बाद नरेंद्र मोदी प्रधानमंत्री नहीं रहेंगे।
देश के हर कोने में INDIA की आंधी चल रही है। https://t.co/TcwWBUvdPo
ಹಾಗಾಗಿ, ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿರುವ ವೈರಲ್ ಕ್ಲಿಪ್ ಅನ್ನು ತಿರುಚಲಾಗಿದೆ ಎಂದು ತಿಳಿದು ಬಂದಿದೆ. ವೈರಲ್ ಕ್ಲಿಪ್ ದಾರಿತಪ್ಪಿಸುವಂತಿದೆ.