ಹೈದರಾಬಾದ್: ಕರ್ನಾಟಕದ ಕೊಪ್ಪಳ ಜಿಲ್ಲೆ ಕೂಕನಪಳ್ಳಿ ಗ್ರಾಮದಲ್ಲಿ ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಬಿಲ್ ನೀಡಲು ಹೋಗಿದ್ದಾಗ, ಕಾಂಗ್ರೆಸ್ ನಿಂದ ಇನ್ನೂರು ಯೂನಿಟ್ ವಿದ್ಯುತ್ ಉಚಿತ ಎಂದು ಘೋಷಣೆ ಮಾಡಲಾಗಿದೆ. ಆದ್ದರಿಂದ ಬಿಲ್ ಪಾವತಿಸಿಲ್ಲ ಎಂದು ಇಲಾಖೆ ಸಿಬ್ಬಂದಿ ಮೇಲೆ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ರಿಶಿ ಬಗ್ರಿ ಎಂಬಾತ ಟ್ವೀಟ್ ಮಾಡಿದ್ದು, ಆತ ಹೇಳಿರುವಂತೆ ಕಾಂಗ್ರೆಸ್ ಗ್ಯಾರಂಟಿಗೂ ಜೆಸ್ಕಾಂ ಸಿಬ್ಬಂದಿ ಮೇಲಿನ ಹಲ್ಲೆಗೂ ಏನೂ ಸಂಬಂಧ ಇಲ್ಲ ಎಂಬುದು ನ್ಯೂಸ್ ಮೀಟರ್ ಗೆ ಕಂಡುಬಂದಿದೆ. ಈ ಬಗ್ಗೆ ಕೊಪ್ಪಳ ಜಿಲ್ಲೆಯ ಎಸ್ಪಿ ಯಶೋದಾ ವಂಟಗೋಡಿ ಅವರೇ ನೀಡಿರುವ ಹೇಳಿಕೆಯ ವಿಡಿಯೋವನ್ನು ಪತ್ರಕರ್ತೆ ಅನುಷಾ ರವಿ ಸೂದ್ ಟ್ವೀಟ್ ಮಾಡಿದ್ದಾರೆ. ಆದ್ದರಿಂದ ರಿಶಿ ಬಗ್ರಿ ಅವರು ಹೇಳಿರುವಂತೆ ಇದು ಕಾಂಗ್ರೆಸ್ ಗ್ಯಾರಂಟಿ ಕಾರಣಕ್ಕೆ ಜೆಸ್ಕಾಂ ಸಿಬ್ಬಂದಿ ಮೇಲೆ ಆದ ಹಲ್ಲೆಯಲ್ಲ.
FACTCHECK
ಇಡೀ ಘಟನೆಯ ಬಗ್ಗೆ “ಪ್ರಜಾವಾಣಿ” ವೆಬ್ ಸೈಟ್ ನ ಕೊಪ್ಪಳ ಜಿಲ್ಲಾ ವಿಭಾಗದಲ್ಲಿ ಸುದ್ದಿಯೊಂದು ಪ್ರಕಟವಾಗಿದೆ. “ವಿದ್ಯುತ್ ಬಿಲ್ ಬಾಕಿ; ಜೆಸ್ಕಾಂ ಸಿಬ್ಬಂದಿ, ಗ್ರಾಹಕನ ಮಧ್ಯೆ ಸಂಘರ್ಷ” ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಕೊಪ್ಪಳ ಜಿಲ್ಲೆಯ ಕೂಕನಪಳ್ಳಿ ಗ್ರಾಮದಲ್ಲಿ ಚಂದ್ರಶೇಖರ ಈರಯ್ಯ ಹಿರೇಮಠ ಎಂಬ ವ್ಯಕ್ತಿ ಜೆಸ್ಕಾಂಗೆ 9000 ರೂಪಾಯಿ ಬಾಕಿ ಉಳಿಸಿಕೊಂಡಿದ್ದ. ಆ ಕಾರಣಕ್ಕೆ ಆತನ ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಲಾಗಿತ್ತು. ಆದರೆ ಚಂದ್ರಶೇಖರ ಹಿರೇಮಠ ಅನಧಿಕೃತವಾಗಿ ಸಂಪರ್ಕ ಪಡೆದುಕೊಂಡಿದ್ದ. ಆ ನಂತರ ಸಿಬ್ಬಂದಿಗೆ ಕರೆ ಮಾಡಿ, ತಾನು ಮನೆಯಲ್ಲಿ ಇಲ್ಲದ ವೇಳೆ ವಿದ್ಯುತ್ ಸಂಪರ್ಕ ಏಕೆ ಕಡಿತಗೊಳಿಸಿದಿರಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಆ ನಂತರ ಆತನ ಮನೆಯ ಬಳಿ ಹೋದ ಜೆಸ್ಕಾಂ ಸಿಬ್ಬಂದಿ ಮೇಲೆಯೂ ಆತ ಚಪ್ಪಲಿಯಿಂದ ಹೊಡೆದಿದ್ದಾನೆ ಹಾಗೂ ಕಪಾಳಕ್ಕೆ ಹೊಡೆದಿದ್ದಾನೆ. ಈ ಘಟನೆಯು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಚಂದ್ರಶೇಖರ ವಿರುದ್ಧ ದೂರು ದಾಖಲಾಗಿದ್ದು, ಆತನನ್ನು ಬಂಧಿಸಿಯೂ ಆಗಿದೆ.
ಇದೇ ವಿಚಾರವನ್ನು ಕೊಪ್ಪಳ ಎಸ್ಪಿ ಯಶೋದಾ ವಂಟಗೋಡಿ ತಿಳಿಸಿದ್ದಾರೆ.ಒಂಬತ್ತು ಸಾವಿರ ರೂಪಾಯಿ ಬಾಕಿ ಉಳಿಸಿಕೊಂಡಿದ್ದಕ್ಕಾಗಿ ವಿದ್ಯುತ್ ಸಂಪರ್ಕವನ್ನು ಜೆಸ್ಕಾಂ ಸಿಬ್ಬಂದಿ ಕಡಿತಗೊಳಿಸಿದ್ದಾರೆ, ಚಂದ್ರಶೇಖರ ಮತ್ತೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಾನೆ, ಕರೆ ಮಾಡಿ ಸಿಬ್ಬಂದಿಯನ್ನು ನಿಂದಿಸಿದ್ದಾನೆ. ಮತ್ತೆ ಮನೆಯ ಬಳಿ ಬಂದಂಥ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದು, ಈ ಸಂಬಂಧ ದೂರು ದಾಖಲಾಗಿ, ಚಂದ್ರಶೇಖರನನ್ನು ಬಂಧಿಸಲಾಗಿದೆ. ಇದು ನಡೆದ ಘಟನೆಯ ಸತ್ಯ ಸಂಗತಿ.
CONCLUSION
ಕಾಂಗ್ರೆಸ್ ಗ್ಯಾರಂಟಿ ನೀಡಿದೆ, ಆದ್ದರಿಂದ ವಿದ್ಯುತ್ ಬಿಲ್ ಕಟ್ಟಲ್ಲ ಎಂದು ಕೊಪ್ಪಳ ಜಿಲ್ಲೆಯ ಗ್ರಾಮವೊಂದರಲ್ಲಿ ಜೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಆಗಿದೆ ಎಂಬುದು ಸಂಪೂರ್ಣ ಸುಳ್ಳು ಮಾಹಿತಿ. ಇದಕ್ಕೆ ಪೂರಕ ಸಾಕ್ಷ್ಯವಾಗಿ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಅವರ ಹೇಳಿಕೆ, ಪ್ರಜಾವಾಣಿಯ ವೆಬ್ ಸೈಟ್ ನಲ್ಲಿ ಪ್ರಕಟವಾಗಿರುವ ಸುದ್ದಿ ಇದೆ. ಪತ್ರಕರ್ತೆ ಅನುಷಾ ಸೂದ್ ಅವರು ಎಸ್ಪಿ ಯಶೋದಾ ಅವರ ಹೇಳಿಕೆಯ ವಿಡಿಯೋ ಪೋಸ್ಟ್ ಮಾಡಿದ್ದಾರೆ.