Fact Check: ʼಮುಸ್ಲಿಂ ಆಗಿ ಪುನರ್ಜನ್ಮʼ ಎಂಬ ಸಿದ್ಧರಾಮಯ್ಯ ಹೇಳಿಕೆ ಹಿಂದಿನ ವಾಸ್ತವವೇನು?
ನ್ಯೂಸ್ ಮೀಟರ್ ಈ ಕುರಿತು ಪರಿಶೀಲನೆ ನಡೆಸಿದಾಗ ಈ ವೀಡಿಯೊವನ್ನು ಎಡಿಟ್ ಮಾಡಿ ತಮಗೆ ಬೇಕಾದಂತೆ ತಿರುಚಲಾಗಿದೆ ಎಂದು ತಿಳಿದು ಬಂದಿದೆ.
By Newsmeter Network Published on 14 March 2024 9:43 PM ISTಫ್ಯಾಕ್ಟ್ ಚೆಕ್: ʼಮುಸ್ಲಿಂ ಆಗಿ ಪುನರ್ಜನ್ಮʼ ಎಂಬ ಸಿದ್ಧರಾಮಯ್ಯ ಹೇಳಿಕೆ ಹಿಂದಿನ ವಾಸ್ತವವೇನು?ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಾರ್ವಜನಿಕವಾಗಿ ಮಾಡಿದ್ದ ಭಾಷಣವೊಂದು ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ. ʼಮುಂದಿನ ಜನ್ಮದಲ್ಲಿ ನಾನು ಮುಸ್ಲಿಂ ಆಗಿ ಮರಹುಟ್ಟು ಪಡೆಯಬೇಕು" ಎಂದು ಅವರು ಹೇಳುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. (Archive 1)
ಫ್ಯಾಕ್ಟ್ ಚೆಕ್:
ನ್ಯೂಸ್ ಮೀಟರ್ ಈ ಕುರಿತು ಪರಿಶೀಲನೆ ನಡೆಸಿದಾಗ ಈ ವೀಡಿಯೊವನ್ನು ಎಡಿಟ್ ಮಾಡಿ ತಮಗೆ ಬೇಕಾದಂತೆ ತಿರುಚಲಾಗಿದೆ ಎಂದು ತಿಳಿದು ಬಂದಿದೆ.ತಮ್ಮ ಭಾಷಣದ ವೇಳೆ ಸಿದ್ದರಾಮಯ್ಯರವರಯ ಜಾತ್ಯತೀತ ಜನತಾದಳದ ಮುಖ್ಯಸ್ಥ ದೇವೇಗೌಡರು ಹೇಳಿದ್ದನ್ನು ಯಥಾವತ್ತಾಗಿ ನುಡಿದಿದ್ದರು ಎಂದು ತಿಳಿದು ಬಂದಿದೆ.
ಈ ವೀಡಿಯೊ ಕ್ಲಿಪ್ ಅನ್ನು ಪರಿಶೀಲನೆಗೆ ಒಳಪಡಿಸಿದಾಗ ಅದರಲ್ಲಿ ಟಿವಿ9 ಕನ್ನಡದ ಲೋಗೊ ಇರುವುದು ಕಂಡು ಬಂತು. ಬಳಿಕ ಈ ವೀಡಿಯೊವನ್ನು ಪೂರ್ಣವಾಗಿ ವೀಕ್ಷಿಸಿದಾಗ ಸರಿಯಾದ ವಿಚಾರ ತಿಳಿದು ಬಂತು. ಟಿವಿ9 ಕನ್ನಡ ಚಾನೆಲ್ ನಲ್ಲಿ ಇದರ ಪೂರ್ಣ ವೀಡಿಯೊ ಸಿದ್ದರಾಮಯ್ಯ: ದೇವೇಗೌಡ ಕುಟುಂಬದ ವಿರುದ್ಧ ಮಿಂಚುಹರಿಸಿದ ಸಿಎಂ ಎಂಬ ತಲೆಬರೆಹದಲ್ಲಿ ಪತ್ತೆಯಾಗಿತ್ತು. ಈ ವೀಡಿಯೊವನ್ನು 2024ರ ಮಾರ್ಚ್ 10ರಂದು ಪ್ರಕಟಿಸಲಾಗಿತ್ತು.
ಪೂರ್ತಿ ವೀಡಿಯೊದಲ್ಲಿ, ದೇವೇಗೌಡ ಈ ಹಿಂದೆ ಏನು ಹೇಳಿದ್ದರು ಎನ್ನುವುದನ್ನು ತಮ್ಮ ಭಾಷಣದಲ್ಲಿ ಹೇಳಿದ ಸಿದ್ದರಾಮಯ್ಯ, "ಒಮ್ಮೆ ದೇವೇಗೌಡರು ಹೇಳಿದ್ದರು, ನಾನು ಯಾವುದೇ ಕಾರಣಕ್ಕೂ ಬಿಜೆಪಿಯೊಂದಿಗೆ ಸೇರುವುದಿಲ್ಲ. ನನಗೆ ಮುಂದಿನ ಜನ್ಮವೊಂದಿದ್ದರೆ ನಾನು ಮುಸ್ಲಿಂ ಆಗಿ ಹುಟ್ಟಲು ಬಯಸುತ್ತೇನೆ ಎಂದು, ಯಾಕೆ?" ಎಂದು ಹೇಳಿದ್ದಾರೆ. ದೇವೇಗೌಡರ ಪಕ್ಷ ಬಿಜೆಪಿಗೆ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಅವರು ಮಾತನಾಡುತ್ತಿದ್ದರು. ಇದೇ ವೀಡಿಯೊವನ್ನು ಹಲವು ಕನ್ನಡ ಚಾನೆಲ್ ಗಳೂ ಪ್ರಕಟ ಮಾಡಿದೆ.
ನೋಡಲು ಇಲ್ಲಿ ಕ್ಲಿಕ್ ಮಾಡಿ
ಬಳಿಕ ಕೀವರ್ಡ್ ಸರ್ಚ್ ಮಾಡುವ ವೇಳೆ ಜೆಡಿಎಸ್ ನ ದೇವೇಗೌಡ ವಿರುದ್ಧ ಸಿದ್ದರಾಮಯ್ಯ ಮಾಡಿದ ಭಾಷಣವನ್ನು ANI, ನ್ಯೂ ಇಂಡಿಯನ್ ಎಕ್ಸ್‌ಪಪ್ರೆಸ್ ಮತ್ತು ದಿ ಹಿಂದೂ ಸುದ್ದಿಯಾಗಿಸಿತ್ತು.
ಮಾರ್ಚ್ 11ರಂದು ಹಿಂದುಸ್ತಾನ್ ಟೈಮ್ಸ್ ಮಾಡಿದ ವರದಿ ಪ್ರಕಾರ, ಕಾಂಗ್ರೆಸ್ ಎಂಎಲ್ಸಿ ಪುಟ್ಟಣ್ಣರವರು ಐದನೇ ಬಾರಿಗೆ ಬೆಂಗಳೂರು ಉಪನ್ಯಾಸಕರ ಚುನಾವಣೆಯನ್ನು ಗೆದ್ದಿದ್ದರು. ಅವರಿಗೆ ಸನ್ಮಾನ ಕಾರ್ಯಕ್ರಮವನ್ನೂ ಈ ಸಂದರ್ಭ ಏರ್ಪಡಿಸಲಾಗಿತ್ತು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ "ದೇವೇಗೌಡ ಇದೀಗ ನರೇಂದ್ರ ಮೋದಿಯನ್ನು ಹೊಗಳುತ್ತಿದ್ದಾರೆ. ನಾನು ಮತ್ತು ನರೇಂದ್ರ ಮೋದಿ ಬಿಡಿಸಲಾರದ ನಂಟು ಹೊಂದಿದ್ದೇವೆ ಎಂದು ಅವರು ಹೇಳಿತ್ತಾರೆ. ಅವರು ಏಕೆ ಹೀಗಾಗಿದ್ದಾರೆ ಎನ್ನುವುದು ನನಗೆ ಆಶ್ಚರ್ಯಕರ ವಿಚಾರ. ಇದೇ ದೇವೇಗೌಡ ಈ ಹಿಂದೆ, ಈ ನರೇಂದ್ರ ಮೋದಿ ಪ್ರಧಾನಿ ಆದರೆ ದೇಶ ಬಿಡುತ್ತೇನೆ ಅಂತ ಹೇಳಿದ್ರು. ಈಗ ಪ್ರಧಾನಿಯನ್ನು ಹೊಗಳಿ ಅಟ್ಟಕ್ಕೇರಿಸುತ್ತಿದ್ದಾರೆ. ಅವರು ದ್ವಿಮುಖ ಧೋರಣೆ ತೋರುತ್ತಿದ್ದಾರೆ. ಒಬ್ಬ ಮಾಜಿ ಪ್ರಧಾನಿ ಇಂತಹಾ ಮಾತುಗಳನ್ನು ಹೇಳುತ್ತಾರೆಂದು ನಾನು ಭಾವಿಸಿರಲಿಲ್ಲ." ಎಂದು ಹೇಳಿದ್ದಾರೆ.
ವರದಿಯ ಪ್ರಕಾರ, ಸಿದ್ದರಾಮಯ್ಯ ಅವರು ದೇವೇಗೌಡರು ಈ ಹಿಂದೆ ಹೇಳಿದ್ದ ಮಾತನ್ನು ಪುನರಾವರ್ತನೆ ಮಾಡಿದ್ದಾರೆ.
ಹಾಗಾಗಿ, ಮುಸ್ಲಿಮನಾಗಿ ಮರುಜನ್ಮ ಪಡೆಯಬೇಕು ಎಂದು ಸಿದ್ದರಾಮಯ್ಯಇಚ್ಚೆ ವ್ಯಕ್ತಪಡಿಸಿದ್ದಾರೆ ಎಂಬ ವೀಡಿಯೊ ತಿರುಚಲ್ಪಟ್ಟಿದೆ ಮತ್ತು ಈ ಪ್ರತಿಪಾದನೆ ಸುಳ್ಳು ಎಂಬುವುದು ವ್ಯಕ್ತವಾಗಿದೆ.-