ಬುಧವಾರ ಬೆಳಿಗ್ಗೆ ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ರಿಕ್ಟರ್ ಮಾಪಕದಲ್ಲಿ 8.8 ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತು. ಭೂಕಂಪದ ನಂತರ ಜಪಾನ್ ಮತ್ತು ಹವಾಯಿ ಸೇರಿದಂತೆ ಹಲವಾರು ದೇಶಗಳಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಕೆಲವು ಸ್ಥಳಗಳಲ್ಲಿ ಭಾರೀ ಉಬ್ಬರವಿಳಿತದ ಅಲೆಗಳು ಸಹ ಕಂಡುಬಂದಿವೆ.
ಈ ಸಂದರ್ಭದಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದೆ. ಎತ್ತರದ ಸ್ಥಳದಿಂದ ತೆಗೆದ ಈ ವೀಡಿಯೊ, ಹಠಾತ್ತನೆ ಬಲವಾದ ಉಬ್ಬರವಿಳಿತದ ಅಲೆ ಬೀಚ್ ಪ್ರದೇಶಕ್ಕೆ ಅಪ್ಪಳಿಸುತ್ತಿರುವುದನ್ನು ಮತ್ತು ಜನರು ತಮ್ಮ ಜೀವ ರಕ್ಷಣೆಗಾಗಿ ಓಡುತ್ತಿರುವುದನ್ನು ತೋರಿಸುತ್ತದೆ. ಅನೇಕ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ರಷ್ಯಾದಲ್ಲಿ ಇದುವರೆಗಿನ ಅತ್ಯಂತ ವಿನಾಶಕಾರಿ ಭೂಕಂಪದ ನಂತರ ಸುನಾಮಿ ಪರಿಸ್ಥಿತಿ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವೈರಲ್ ಆಗಿರುವ ವೀಡಿಯೊಗೆ ರಷ್ಯಾದ ಭೂಕಂಪ ಅಥವಾ ಸುನಾಮಿಗೆ ಯಾವುದೇ ಸಂಬಂಧವಿಲ್ಲ. ಇದು 2017 ರಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್ ನಗರದಲ್ಲಿ ನಡೆದ ಘಟನೆ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ ಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ಸನ್ ನ್ಯೂಸ್‌ಪೇಪರ್ಸ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅದೇ ವೈರಲ್ ವೀಡಿಯೊವನ್ನು ಕಂಡುಕೊಂಡೆವು. ಈ ವೀಡಿಯೊವನ್ನು ಮಾರ್ಚ್ 12, 2017 ರಂದು ಅಪ್‌ಲೋಡ್ ಮಾಡಲಾಗಿದ್ದು, ರಷ್ಯಾದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪ ಅಥವಾ ನಂತರದ ಸುನಾಮಿಗೆ ಈ ವೀಡಿಯೊಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. "ಹೆಚ್ಚಿನ ಅಲೆಗಳಿಂದಾಗಿ ಡರ್ಬನ್ ಬೀಚ್ ಮುಚ್ಚಲ್ಪಟ್ಟಿದೆ, ವೀಡಿಯೊ" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ.
ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್ನಲ್ಲಿ ಕೀವರ್ಡ್ ಹುಡುಕಾಟ ನಡೆಸಿದಾಗ ಮಾರ್ಚ್ 12, 2017 ರಂದು ಪ್ರಕಟವಾದ ದಕ್ಷಿಣ ಆಫ್ರಿಕಾದ ಸುದ್ದಿ ವರದಿಯಲ್ಲಿ ತೋರಿಸಲಾದ ಅದೇ ವೀಡಿಯೊದ ಸ್ಕ್ರೀನ್‌ಶಾಟ್ ಸಹ ಸಿಕ್ಕಿತು. ‘‘ಮಡಗಾಸ್ಕರ್‌ನಿಂದ ಬಂದ ಚಂಡಮಾರುತವು ಡರ್ಬನ್‌ನ ಉತ್ತರದ ಕಡಲತೀರಗಳಲ್ಲಿ ಹಾನಿಯನ್ನುಂಟುಮಾಡಿತು, ಇದರಿಂದಾಗಿ ಅಧಿಕಾರಿಗಳು ಬೀಚ್ ಅನ್ನು ಮುಚ್ಚಬೇಕಾಯಿತು’’ ಎಂದು ವರದಿಯಲ್ಲಿದೆ.
ದ. ಆಫ್ರಿಕಾದ ಸ್ಥಳೀಯ ಸುದ್ದಿ ಸಂಸ್ಥೆ ಎಕ್ಸ್‌ಪ್ರೆಸ್ಸೊ ಶೋ ಯೂಟ್ಯೂಬ್ ಚಾನೆಲ್‌ನಲ್ಲಿ ಕೂಡ ಮಾರ್ಚ್ 14, 2017 ರಂದು ವೈರಲ್ ವೀಡಿಯೊಗೆ ಸಂಬಂಧಿಸಿದ ವೀಡಿಯೊ ಬುಲೆಟಿನ್ ಅನ್ನು ನಾವು ಕಂಡುಕೊಂಡಿದ್ದೇವೆ. ಇದರಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಇದು ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿರುವ ಬ್ರಾಹಿಮಾ ಫೋಫಾನಾ ಬೀಚ್‌ಗೆ ಅಪ್ಪಳಿಸಿದ ಸಮುದ್ರ ಬಿರುಗಾಳಿಯ ದೃಶ್ಯವಾಗಿದೆ. ವೈರಲ್ ವೀಡಿಯೊದ ದೃಶ್ಯವನ್ನು 1.32 ನಿಮಿಷಗಳ ಚೌಕಟ್ಟಿನಲ್ಲಿ ಕಾಣಬಹುದು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಳೆ, 2017 ರಲ್ಲಿ ಡರ್ಬನ್ ನಗರವನ್ನು ಅಪ್ಪಳಿಸಿದ ಉಬ್ಬರವಿಳಿತದ ಅಲೆಯ ದೃಶ್ಯವನ್ನು ರಷ್ಯಾದಲ್ಲಿ ಸಂಭವಿಸಿದ ಭೂಕಂಪದ ನಂತರ ಸುನಾಮಿ ಎಂದು ತಪ್ಪಾಗಿ ಪ್ರಚಾರ ಮಾಡಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.