Fact Check: ಮಹಾಕುಂಭಕ್ಕೆ ಹೋಗುತ್ತಿದ್ದ ವೃದ್ಧ ಭಕ್ತನಿಂದ ಟಿಟಿಇ ಹಣ ಪಡೆದಿದ್ದಾರೆಂದು 2019ರ ವೀಡಿಯೊ ವೈರಲ್

ಕುಂಭಮೇಳಕ್ಕೆ ಪ್ರಯಾಣಿಸುತ್ತಿದ್ದ ವೃದ್ಧ ಪ್ರಯಾಣಿಕರಿಂದ ಟಿಟಿಇ ಬಲವಂತವಾಗಿ ಹಣ ಪಡೆಯುತ್ತಿದ್ದಾರೆ ಎಂದು ತೋರಿಸುವ ವೈರಲ್ ವೀಡಿಯೊ ನಕಲಿ ಎಂದು ನಾವು ಖಚಿತವಾಗಿ ಹೇಳುತ್ತೇವೆ.

By Vinay Bhat  Published on  10 Feb 2025 5:41 PM IST
Fact Check: ಮಹಾಕುಂಭಕ್ಕೆ ಹೋಗುತ್ತಿದ್ದ ವೃದ್ಧ ಭಕ್ತನಿಂದ ಟಿಟಿಇ ಹಣ ಪಡೆದಿದ್ದಾರೆಂದು 2019ರ ವೀಡಿಯೊ ವೈರಲ್
Claim: ಮಹಾಕುಂಭಕ್ಕೆ ತೆರಳುತ್ತಿದ್ದ ಪ್ರಯಾಣಿಕರಿಂದ ಹಣ ಪಡೆದ ಟಿಟಿಇ.
Fact: ಹಕ್ಕು ಸುಳ್ಳು. ಇದು 2019 ರ ವೀಡಿಯೊ ಆಗಿದ್ದು, ಉತ್ತರ ಪ್ರದೇಶದ ಚಂದೌಲಿಯಿಂದ ಬಂದಿದ್ದಾಗಿದೆ.

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹೀಗಾಗಿ ಪ್ರಯಾಣಿಕರ ಅನುಕೂಲಕ್ಕೆಂದು ಪ್ರಯಾಗ್‌ರಾಜ್ ತಲುಪುವಲ್ಲಿ ಯಾವುದೇ ತೊಂದರೆ ಅನುಭವಿಸದಂತೆ ರೈಲ್ವೆ ಇಲಾಖೆ ಹಲವಾರು ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಇದರ ಮಧ್ಯೆ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೃದ್ಧ ಪ್ರಯಾಣಿಕರೊಬ್ಬರಿಂದ ಪ್ರಯಾಣ ಟಿಕೆಟ್ ಪರೀಕ್ಷಕ (ಟಿಟಿಇ) ಬಲವಂತವಾಗಿ ಹಣ ಪಡೆಯುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಅನೇಕರು ಹಂಚಿಕೊಳ್ಳುತ್ತಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಪ್ರಯಾಣಿಸುತ್ತಿರುವಾಗ ಈ ಘಟನೆ ನಡೆದಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಒಂದು ಒಂದು ರೂಪಾಯಿ ಜೋಡಿಸಿ ಮಹಾಕುಂಭ್ ಮೇಳಕ್ಕೆ ಹೋದ ಇವರ ಹತ್ತಿರ ದುಡ್ಡು ತಕೊಂಡ ಟಿ ಟಿ’’ ಎಂದು ಬರೆದುಕೊಂಡಿದ್ದಾರೆ.

ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು 2019 ರ ವೀಡಿಯೊ ಆಗಿದ್ದು, ಉತ್ತರ ಪ್ರದೇಶದ ಚಂದೌಲಿಯಿಂದ ಬಂದಿದ್ದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ಈ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಈ ವೀಡಿಯೊ ಹಲವು ವರ್ಷಗಳಿಂದ ಇಂಟರ್ನೆಟ್‌ನಲ್ಲಿದೆ ಎಂಬುದು ತಿಳಿದುಬಂತು. ಹೀಗಾಗಿ ಮಹಾ ಕುಂಭಕ್ಕೂ ಈ ವಿಡಿಯೊಕ್ಕು ಯಾವುದೇ ಸಂಬಂಧವಿಲ್ಲ ಎಂಬುದು ಖಚಿತವಾಯಿತು.

ಇದೇ ಸಂದರ್ಭ ಜುಲೈ 23, 2019 ರಂದು ಎಕ್ಸ್ ಪೋಸ್ಟ್ ಒಂದನ್ನು ಕಂಡಿದ್ದೇವೆ. ಬಳಕೆದಾರರೊಬ್ಬರು ಇದೇ ವೈರಲ್ ವೀಡಿಯೊವನ್ನು ಹಂಚಿಕೊಂಡು, ‘‘ಸರ್ ಈ ಭ್ರಷ್ಟ ರೈಲ್ವೆ ಟಿಸಿ ಹಿರಿಯ ನಾಗರಿಕರಿಂದ (ರೈತರು) ಹಣ ಪಡೆಯುತ್ತಿದ್ದಾರೆ’’ ಎಂದು ಬರೆದು ರೈಲ್ವೆ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದಾರೆ.

ಇದಕ್ಕೆ ರೈಲ್ವೆ ಸೇವಾದ ಅಧಿಕೃತ ಖಾತೆ ರಿಪ್ಲೇ ಕೊಟ್ಟಿದ್ದು, ಈ ಘಟನೆಯನ್ನು ಪರಿಶೀಲಿಸಿ ಎಂದು ಡಿವಿಷನಲ್ ರೈಲ್ವೆ ಮ್ಯಾನೇಜರ್​ಗೆ ಹೇಳಿದೆ. ಇದಕ್ಕೆ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರೈಲ್ವೆ ವಿಭಾಗ ಉತ್ತರ ಕೊಟ್ಟಿದ್ದು, ‘‘ವೀಡಿಯೊ ಕ್ಲಿಪ್‌ಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಉದ್ಯೋಗಿಯಿಂದ ವಿವರಣೆಯನ್ನು ಕೇಳಲಾಗಿದೆ. ಈ ಘಟನೆ 3-4 ತಿಂಗಳ ಹಿಂದೆ ನಡೆದಿದೆ. ಟಿಕೆಟ್ ತಯಾರಿಸಲು ಪ್ರಯಾಣಿಕರಿಂದ ಹಣ ಪಡೆಯುತ್ತಿದ್ದೆ ಮತ್ತು ಟಿಕೆಟ್ ಮಾಡಿದ್ದೇನೆ ಎಂದು ಉದ್ಯೋಗಿ ಹೇಳಿದ್ದರು. ಸಂಬಂಧಪಟ್ಟ ಉದ್ಯೋಗಿಯನ್ನು ವಿವರವಾದ ತನಿಖೆಗಾಗಿ ಅಮಾನತುಗೊಳಿಸಲಾಗಿದೆ’’ ಎಂದು ಅಬರು ಹೇಳಿದ್ದಾರೆ.

ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್​ನಲ್ಲಿ ‘Rail TT Farmer Take Money Suspended’ ಎಂಬ ಕೀವರ್ಡ್ ಬಳಸಿ ಹುಡುಕಿದ್ದೇವೆ. ಆಗ ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ Patrika.com ಜುಲೈ 25, 2019 ರಂದು "ಚಲಿಸುವ ರೈಲಿನಲ್ಲಿ ವೃದ್ಧನಿಂದ ಹಣ ಕಸಿದುಕೊಂಡಿದ್ದಕ್ಕಾಗಿ ಟಿಟಿಇ ಅಮಾನತುಗೊಂಡಿದ್ದಾರೆ, ವೀಡಿಯೊ ವೈರಲ್ ಆಗಿದೆ" ಎಂಬ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿದೆ.

ಇದರಲ್ಲಿರುವ ಮಾಹಿತಿಯ ಪ್ರಕಾರ, ‘‘ವಿನಯ್ ಸಿಂಗ್ ಎಂಬ ಟಿಟಿಇ ವೃದ್ಧನಿಂದ ಬಲವಂತವಾಗಿ ಹಣವನ್ನು ಕಸಿದುಕೊಂಡಿದ್ದಾರೆ. ರೈಲ್ವೆ ಸಚಿವಾಲಯದ ಟ್ವಿಟರ್ ಹ್ಯಾಂಡಲ್‌ಗೆ ಟ್ಯಾಗ್ ಮಾಡಿ ಜನರು ಈ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಇದಾದ ನಂತರ ಈ ವೀಡಿಯೊ ಸಾಕಷ್ಟು ಟ್ರೋಲ್ ಆಗುತ್ತಿದೆ. ಆರೋಪಿ ಟಿಟಿಇ ವಿನಯ್ ಸಿಂಗ್ ಅವರು ಮೊಘಲ್‌ಸರಾಯ್ ರೈಲ್ವೆ ವಿಭಾಗದ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವೀಡಿಯೊ ವೈರಲ್ ಆದ ನಂತರ, ಮೊಘಲ್‌ಸರಾಯ್ ರೈಲ್ವೆ ವ್ಯವಸ್ಥಾಪಕ ಪಂಕಜ್ ಸಕ್ಸೇನಾ ಅವರು ಆರೋಪಿ ಟಿಟಿಇಯನ್ನು ಅಮಾನತುಗೊಳಿಸಿದ್ದಾರೆ. ಅಲ್ಲದೆ, ಈ ವಿಷಯದ ತನಿಖೆಗಾಗಿ ಒಂದು ತಂಡವನ್ನು ರಚಿಸಲಾಗಿದೆ. ತನಿಖಾ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು’’ ಎಂದು ಬರೆಯಲಾಗಿದೆ.

ಜುಲೈ 25, 2019 ರಂದು ಅಮರ್ ಉಜಾಲಾ ಕೂಡ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್​ನೊಂದಿಗೆ ಸುದ್ದಿ ಪ್ರಕಟಿಸಿದ್ದು, ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಪೂರ್ವ ಮಧ್ಯ ರೈಲ್ವೆ ಮೊಘಲ್‌ಸರಾಯ್ ವಿಭಾಗದಲ್ಲಿ ಟಿಟಿಇ ರೈಲಿನಲ್ಲಿ ವೃದ್ಧನಿಂದ ಹಣವನ್ನು ಕಸಿದುಕೊಂಡರು, ವೀಡಿಯೊ ವೈರಲ್ ಆದ ನಂತರ ಅವರನ್ನು ಅಮಾನತುಗೊಳಿಸಲಾಗಿದೆ’’ ಎಂದು ಬರೆದುಕೊಂಡಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಕುಂಭಮೇಳಕ್ಕೆ ಪ್ರಯಾಣಿಸುತ್ತಿದ್ದ ವೃದ್ಧ ಪ್ರಯಾಣಿಕರಿಂದ ಟಿಟಿಇ ಬಲವಂತವಾಗಿ ಹಣ ಪಡೆಯುತ್ತಿದ್ದಾರೆ ಎಂದು ತೋರಿಸುವ ವೈರಲ್ ವೀಡಿಯೊ ನಕಲಿ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Claim Review:ಮಹಾಕುಂಭಕ್ಕೆ ತೆರಳುತ್ತಿದ್ದ ಪ್ರಯಾಣಿಕರಿಂದ ಹಣ ಪಡೆದ ಟಿಟಿಇ.
Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಹಕ್ಕು ಸುಳ್ಳು. ಇದು 2019 ರ ವೀಡಿಯೊ ಆಗಿದ್ದು, ಉತ್ತರ ಪ್ರದೇಶದ ಚಂದೌಲಿಯಿಂದ ಬಂದಿದ್ದಾಗಿದೆ.
Next Story