ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಒಂಬತ್ತು ತಿಂಗಳುಗಳನ್ನು ಕಳೆದ ನಂತರ ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಬುಧವಾರ ಭೂಮಿಗೆ ಮರಳಿದರು. ಸುನಿತಾ ಜೊತೆಗೆ, ಅವರ ಸಹೋದ್ಯೋಗಿಗಳಾದ ಬುಚ್ ವಿಲ್ಮೋರ್, ನಿಕ್ ಹೇಗ್ ಮತ್ತು ಅಲೆಕ್ಸಾಂಡರ್ ಗೋರ್ಬುನೋವ್ ಕೂಡ ಸ್ಪೇಸ್‌ಎಕ್ಸ್‌ನ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಅವರೊಂದಿಗೆ ಮರಳಿದರು. ಕ್ರೂ ಡ್ರ್ಯಾಗನ್ ಕ್ಯಾಪ್ಸುಲ್ ಬುಧವಾರ ಭಾರತೀಯ ಕಾಲಮಾನ ಬೆಳಗಿನ ಜಾವ 3:27 ಕ್ಕೆ ಫ್ಲೋರಿಡಾದ ತಲ್ಲಹಸ್ಸಿ ಕರಾವಳಿಯ ಸಮುದ್ರದಲ್ಲಿ ಸುರಕ್ಷಿತವಾಗಿ ಇಳಿಯಿತು.
ಇದೀಗ ಸುನಿತಾ ಅವರು ಬಾಹ್ಯಾಕಾಶದಿಂದ ಹಿಂದಿರುಗುತ್ತಿರುವಾಗ, ಶೂನ್ಯ-ಗುರುತ್ವಾಕರ್ಷಣೆಯ ಪ್ರದೇಶವನ್ನು ಪ್ರವೇಶಿಸಿ ನೃತ್ಯ ಮಾಡುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಭೂಮಿಗೆ ಹಿಂದಿರುಗಿದ ಸಂದರ್ಭದ ವೀಡಿಯೊ ಇದು ಎಂದು ಅನೇಕರು ಹೇಳಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಮಾರ್ಚ್ 19, 2025 ರಂದು ಹಂಚಿಕೊಂಡಡು, ‘‘ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಹಾಗೂ ನಾಸಾ ವಿಜ್ಞಾನಿ, ಗಗನಯಾತ್ರಿ ಬುಚ್ ವಿಲ್ಮೋರ್ ಅವರು ಕಳೆದ 9 ತಿಂಗಳಿಂದ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲೇ ಇದ್ದರು. ತಾಂತ್ರಿಕ ಸಮಸ್ಯೆಯಿಂದ ಅವರು ಭೂಮಿಗೆ ಬರಲು ಸಾಧ್ಯವಾಗಿರಲಿಲ್ಲ. ಕಡೆಗೂ ಅವರ ಬಾಹ್ಯಾಕಾಶ ವಾಸ ಮುಗಿದಿದ್ದು ಭೂಮಿಗೆ ಸುರಕ್ಷಿತವಾಗಿ ವಾಪಾಸಾಗಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ.
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವಾಸ್ತವವಾಗಿ ಈ ವೀಡಿಯೊ ಜೂನ್ 2024 ರದ್ದಾಗಿದೆ. ಸುನೀತಾ ಮತ್ತು ಅವರ ಸಿಬ್ಬಂದಿ ವಿಲ್ಮೋರ್ ಬೋಯಿಂಗ್ ಸ್ಟಾರ್‌ಲೈನರ್‌ನಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಅನ್ನು ಪ್ರವೇಶಿಸಿದ ಸಂದರ್ಭದ ವೀಡಿಯೊ ಇದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿ ಹುಡುಕಿದ್ದೇವೆ. ಆಗ ಬೋಯಿಂಗ್ ಸ್ಪೇಸ್ನ ಅಧಿಕೃತ ಎಕ್ಸ್ ಹ್ಯಾಂಡಲ್, ಇದು ಜೂನ್ 07, 2024 ರಂದು ಇದೇ ವೈರಲ್ ವೀಡಿಯೊವನ್ನು ಉತ್ತಮ ಕ್ವಾಲಿಟಿಯಲ್ಲಿ ಅಪ್‌ಲೋಡ್ ಮಾಡಿರುವುದು ಕಂಡುಬಂತು.
‘‘Hugs all around! The Expedition 71 crew greets Butch Wilmore and @Astro_Suni aboard @Space_Station after #Starliner docked at 1:34 p.m. ET on June 6.’’ ಎಂದು ಈ ವೀಡಿಯೊಕ್ಕೆ ಶೀರ್ಷಿಕೆ ನೀಡಲಾಗಿದೆ. ಇದು ವೀಡಿಯೊವು ವಾಸ್ತವವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಅವರ ಆಗಮನವನ್ನು ತೋರಿಸುತ್ತದೆ.
ಜೂನ್ 07, 2024 ರಂದು NDTV ಪ್ರಾಫಿಟ್‌ನ ಯೂಟ್ಯೂಬ್ ಚಾನೆಲ್ ಅಪ್‌ಲೋಡ್ ಮಾಡಿದ ಇದೇ ವೈರಲ್ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ಈ ವೀಡಿಯೊಗೆ ‘‘ISS ತಲುಪಿದ ನಂತರ NASA ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರ ವಿಜಯ ನೃತ್ಯ’’ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.
ANI ಕೂಡ ಜೂನ್ 7, 2024 ರಂದು ಇದೇ ವೈರಲ್ ವೀಡಿಯೊವನ್ನು ಹಂಚಿಕೊಂಡು ಸುದ್ದಿ ಪ್ರಕಟಿಸಿದೆ. ‘‘ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಶುಕ್ರವಾರ ಬೆಳಿಗ್ಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿದ್ದಾರೆ. ನಾಸಾದ ದೃಶ್ಯಗಳು ಗುರುವಾರ ಮಧ್ಯಾಹ್ನ 3:46 ET ಕ್ಕೆ (ಶುಕ್ರವಾರ ಬೆಳಿಗ್ಗೆ IST) ಇಬ್ಬರು ನಾಸಾ ಗಗನಯಾತ್ರಿಗಳು ಯುಎಸ್‌ಎಸ್‌ನ ಹ್ಯಾಚ್ ಬಾಗಿಲಿನ ಮೂಲಕ ಪ್ರವೇಶಿಸುತ್ತಿರುವುದನ್ನು ತೋರಿಸಿದೆ. ಐಎಸ್‌ಎಸ್‌ನಲ್ಲಿರುವ ಎಕ್ಸ್‌ಪೆಡಿಶನ್ 71 ಸಿಬ್ಬಂದಿಯ ಏಳು ಗಗನಯಾತ್ರಿಗಳು ಬೋಯಿಂಗ್‌ನ ಹೊಸ ಕ್ಯಾಪ್ಸುಲ್‌ನಲ್ಲಿ ಹಾರಿದ ಮೊದಲ ಗಗನಯಾತ್ರಿಗಳಾದ ಸುನೀತಾ ಮತ್ತು ಬುಚ್ ಅವರನ್ನು ಸ್ವಾಗತಿಸಿದರು’’ ಎಂದು ಬರೆದುಕೊಂಡಿದೆ.
ಈ ಮೂಲಕ ಸದ್ಯ ವೈರಲ್ ಆಗುತ್ತಿರುವ ವೀಡಿಯೊ ಇತ್ತೀಚಿನದಲ್ಲ ಎಂಬುದು ಸ್ಪಷ್ಟವಾಗಿದೆ. ಇದು ಜೂನ್ 2024 ರಲ್ಲಿ ಸುನೀತಾ ವಿಲಿಯಮ್ಸ್ ಮತ್ತು ಅವರ ಸಹೋದ್ಯೋಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸುವುದನ್ನು ತೋರಿಸುತ್ತದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.