ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, 65 ವರ್ಷದ ಮಹಿಳೆಯೊಬ್ಬರು 21 ವರ್ಷದ ಪುರುಷನನ್ನು ಮದುವೆಯಾಗಿರುವುದನ್ನು ಕಾಣಬಹುದು. ಈ ವೀಡಿಯೊದಲ್ಲಿ, ಇಬ್ಬರೂ ತಾವು ಮದುವೆಯಾಗಿದ್ದೇವೆ ಎಂದು ಹೇಳುತ್ತಿದ್ದಾರೆ. ಹರಿಯಾಣದ 21 ವರ್ಷದ ಮೊಹಮ್ಮದ್ ಇರ್ಫಾನ್ ತನ್ನ ಅಜ್ಜಿ ಸುಲ್ತಾನಾ ಖತೂನ್ ಅವರನ್ನು ವಿವಾಹವಾದರು ಎಂಬ ಹೇಳಿಕೆಯೊಂದಿಗೆ ನವವಿವಾಹಿತ ಯುವಕ ಮತ್ತು ವೃದ್ಧ ಮಹಿಳೆಯ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘21 ವರ್ಷದ ಯುವಕನೊಬ್ಬ 65 ವರ್ಷದ ಅಜ್ಜಿ ಸುಲ್ತಾನಾ ಕಟೂನ್ ಜೊತೆ ಮದುವೆಯಾಗಿರೋ ವಿಲಕ್ಷಣ ಘಟನೆ ಹರಿಯಾಣದಲ್ಲಿ ನಡೆದಿದೆ. 21 ವರ್ಷದ ಮೊಹಮ್ಮದ್ ಇರ್ಫಾನ್ ಆತನ ಅಜ್ಜಿ 65 ವರ್ಷದ ಸುಲ್ತಾನಾ ಖತೂನ್ ಅವರನ್ನು ಮದುವೆಯಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಮೊಹಮ್ಮದ್ ಇರ್ಪಾನ್ ತನ್ನ ಸ್ವಂತ ಅಜ್ಜಿಯನ್ನು ಮದುವೆಯಾಗಿದ್ದಾನೆ’’ ಎಂದು ಬರೆದುಕೊಂಡಿದ್ದಾರೆ. (Archive)
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಫೋಟೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಇದು ನಿಜವಾಗಿ ನಡೆದ ಘಟನೆ ಅಲ್ಲ, ಬದಲಾಗಿ ಇದೊಂದು ಸ್ಕ್ರಿಪ್ಟ್ ಮಾಡಲಾಗ ವೀಡಿಯೊ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ಹರಿಯಾಣದ ಸ್ಥಳೀಯ ಮತ್ತು ರಾಷ್ಟ್ರೀಯ ಮಾಧ್ಯಮಗಳನ್ನು ಪರಿಶೀಲಿಸಿದ್ದೇವೆ ಆದರೆ ಅಂತಹ ವಿವಾಹದ ಬಗ್ಗೆ ಎಲ್ಲಿಯೂ ಯಾವುದೇ ಮಾಹಿತಿ ಸಿಗಲಿಲ್ಲ. ನಂತರ ನಾವು ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ, ದೇಸಿ ಛೋರಾ 2.0 ಎಂಬ ಯೂಟ್ಯೂಬ್ ಚಾನೆಲ್ನಲ್ಲಿನ ಒಂದು ವೀಡಿಯೊಗೆ ನಮ್ಮನ್ನು ಕರೆದೊಯ್ಯಿತು. ಈ ವೀಡಿಯೊವನ್ನು ನವೆಂಬರ್ 20, 2022 ರಂದು ಅಪ್‌ಲೋಡ್ ಮಾಡಲಾಗಿದೆ. ವೀಡಿಯೊದ ಪ್ರಕಾರ, ರೋಹಿತ್ ಎಂಬ 21 ವರ್ಷದ ವ್ಯಕ್ತಿ ತನ್ನ 52 ವರ್ಷದ ಪ್ರಾಧ್ಯಾಪಕಿ ಶಾಂತಿಯನ್ನು ಮದುವೆಯಾಗಿದ್ದಾನೆ.
ಇದು ವೈರಲ್ ಆಗಿರುವ ಚಿತ್ರಗಳು ಈ ಸ್ಕ್ರಿಪ್ಟ್ ಮಾಡಿದ ವೀಡಿಯೊದಿಂದ ಬಂದಿವೆ ಎಂದು ಸೂಚಿಸುತ್ತದೆ. ಸುಮಾರು 10 ನಿಮಿಷಗಳ ಈ ವೀಡಿಯೋವನ್ನು ನಾವು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಈ ಸಂದರ್ಭ 0.23 ಸೆಕೆಂಡುಗಳಲ್ಲಿ ಒಂದು ಹಕ್ಕು ನಿರಾಕರಣೆ ಇದೆ. ಈ ಹಕ್ಕು ನಿರಾಕರಣೆಯ ಪ್ರಕಾರ, ಈ ವೀಡಿಯೊ ಸಂಪೂರ್ಣವಾಗಿ ಸ್ಕ್ರಿಪ್ಟ್ ಆಗಿದೆ ಮತ್ತು ನೈಜವಲ್ಲ.
ಈ ಯೂಟ್ಯೂಬ್ ಚಾನೆಲ್ನಲ್ಲಿ ನಾವು ಇದೇ ರೀತಿಯ ಇನ್ನೂ ಹಲವು ವೀಡಿಯೊಗಳನ್ನು ಕಂಡುಕೊಂಡಿದ್ದೇವೆ, ಅವುಗಳಲ್ಲಿ ಈ ವೈರಲ್ ವೀಡಿಯೊದಲ್ಲಿರುವ ಯುವಕ ಮತ್ತು ಹೆಂಗಸು ಇರುವುದನ್ನು ಕಾಣಬಹುದು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ನ್ಯೂಸ್ ಮೀಟರ್ ವೈರಲ್ ಚಿತ್ರದೊಂದಿಗೆ ಮಾಡಲಾದ ಹೇಳಿಕೆ ಸುಳ್ಳು ಎಂದು ಕಂಡುಕೊಂಡಿದೆ. ಚಿತ್ರಗಳು ಸ್ಕ್ರಿಪ್ಟ್ ಮಾಡಿದ ವೀಡಿಯೊದಿಂದ ಬಂದಿದ್ದು, ಇದು ನಿಜವಾದ ಘಟನೆಯಲ್ಲ.