ತೆಲಂಗಾಣದಲ್ಲಿ ಕಳೆದ ಒಂದು ವಾರದಲ್ಲಿ ನಡೆದ ಪ್ರತ್ಯೇಕ ವಿದ್ಯುತ್ ಆಘಾತ ಘಟನೆಗಳಲ್ಲಿ ಹಲವಾರು ಸಾವುಗಳ ನಂತರ, ಇದೀಗ ಕರೀಂನಗರ ಜಿಲ್ಲೆಯಲ್ಲಿ ಗಣೇಶನ ವಿಗ್ರಹವು ಲೈನ್ ವೈರ್‌ಗಳಿಗೆ ತಗುಲಿ ಒಂಬತ್ತುಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ದಾರಿತಪ್ಪಿಸುವ ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವಿಡಿಯೋ ಜಗ್ತಿಯಾಲ್ ಜಿಲ್ಲೆಯ ಕೊರುಟ್ಲಾದಿಂದ ಬಂದಿದೆ. ಈ ಘಟನೆ ಜೂನ್ 15, 2025 ರಂದು ನಡೆದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದ್ದೇವೆ. ಈ ಸಂದರ್ಭ The Hans India ವೆಬ್ಸೈಟ್ 15 ಜೂನ್ 2025 ರಂದು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ‘‘ಗಣೇಶ ಮೂರ್ತಿ ತಯಾರಿಕಾ ಕೇಂದ್ರದಲ್ಲಿ ದುರಂತ: ಇಬ್ಬರು ಸಾವು, ಏಳು ಮಂದಿಗೆ ಗಾಯ’’ ಎಂಬ ಶೀರ್ಷಿಕೆ ನೀಡಿ ಸುದ್ದಿ ಪ್ರಕಟಿಸಿರುವುದು ಕಂಡುಬಂತು.
ವರದಿಯ ಪ್ರಕಾರ, ‘‘ತೆಲಂಗಾಣದ ಕೊರುಟ್ಲಾ ಪಟ್ಟಣದ ಹೊರವಲಯದಲ್ಲಿರುವ ಬಾಲಾಜಿ ವಿನಾಯಕ ವಿಗ್ರಹ ತಯಾರಿಕಾ ಕೇಂದ್ರದಲ್ಲಿ ವಿದ್ಯುತ್ ಆಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿ, ಏಳು ಮಂದಿ ಗಂಭೀರವಾಗಿ ಗಾಯಗೊಂಡಿರುವ ದುರಂತ ಘಟನೆ ನಡೆದಿದೆ. ದುರದೃಷ್ಟವಶಾತ್, ವಿನೋದ್ ಮತ್ತು ಸಾಯಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದರು.’’
ಈ ಮಾಹಿತಿಯ ಆಧಾರದ ಮೇಲೆ ಕೀವರ್ಡ್ ಸರ್ಚ್ ನಡೆಸಿದಾಗ, Jagital News ಎಂಬಯೂಟ್ಯೂಬ್ ಚಾನೆಲ್ನಲ್ಲಿ ಜೂನ್ 15, 2025 ರಂದು ವೀಡಿಯೊ ಸುದ್ದಿ ಮಾಡಿರುವುದು ಕಂಡಿತು. ಇದರಲ್ಲಿ ಕೂಡ ಅದೇ ವೈರಲ್ ವೀಡಿಯೊವನ್ನು ಬ್ಲರ್ ಮಾಡಿ ಹಾಕಲಾಗಿದೆ. ಕೊರುಟ್ಲಾ ಪಟ್ಟಣದಲ್ಲಿ ವಿನಾಯಕ ಮೂರ್ತಿಗಳನ್ನು ತಯಾರಿಸುವ ಕಂಪನಿಯ ಜನರು ವಿಗ್ರಹವನ್ನು ಸ್ಥಳಾಂತರಿಸುತ್ತಿದ್ದಾಗ, ಹೈಟೆನ್ಷನ್ ವಿದ್ಯುತ್ ತಂತಿಗಳು ವಿಗ್ರಹಕ್ಕೆ ತಗುಲಿ ಕಂಪನಿಯ ಮಾಲೀಕ ವಿನೋದ್ ಮತ್ತು ಸಾಯಿ ಕುಮಾರ್ ಎಂಬ ಕೆಲಸಗಾರ ಸಾವನ್ನಪ್ಪಿದರು ಎಂಬ ಮಾಹಿತಿ ಇದರಲ್ಲಿದೆ.
ಜೂನ್ 15, 2025 ರಂದು ದಿ ಹಿಂದೂ ಕೂಡ ಈ ಘಣನೆ ಕುರಿತು ವರದಿ ಮಾಡಿದ್ದು, ‘‘ಜಗ್ತಿಯಾಲ್ ಜಿಲ್ಲೆಯ ಕೊರುಟ್ಲಾದಲ್ಲಿ ಭಾನುವಾರ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಕೊರುಟ್ಲಾದ ಮೆಟ್ಪಲ್ಲಿ ರಸ್ತೆಯಲ್ಲಿರುವ ಬಾಲಾಜಿ ಗಣೇಶ ವಿಗ್ರಹ ತಯಾರಿಕಾ ಘಟಕದಲ್ಲಿ ಈ ಅಪಘಾತ ಸಂಭವಿಸಿದೆ’’ ಎಂಬ ಮಾಹಿತಿ ಇದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೈರಲ್ ವೀಡಿಯೊ ಜೂನ್ 15, 2025 ರಂದು ಕೊರುಟ್ಲಾದಲ್ಲಿ ನಡೆದ ವಿದ್ಯುತ್ ಅಪಘಾತವನ್ನು ತೋರಿಸುತ್ತದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.