Fact Check: ಉತ್ತರ ಪ್ರದೇಶದಲ್ಲಿ ವೃದ್ಧನ ಮುಖಕ್ಕೆ ಸ್ಪ್ರೇ ಮಾಡಿದ್ದು ಮುಸ್ಲಿಂ ಯುವಕ ಎಂದು ಸುಳ್ಳು ಹೇಳಿಕೆ ವೈರಲ್

ಸೈಕಲ್‌ನಲ್ಲಿ ಹೋಗುತ್ತಿದ್ದ ವೃದ್ಧರೊಬ್ಬರ ಜೊತೆ ಅನುಚಿತವಾಗಿ ವರ್ತಿಸಿ ಅವರ ಮುಖಕ್ಕೆ ಸ್ನೋ ಫೋಮ್ ಸ್ಪ್ರೇ ಮಾಡುತ್ತಿರುವ ಯುವಕನ ವೀಡಿಯೊ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

By Vinay Bhat  Published on  27 Sept 2024 12:37 PM IST
Fact Check: ಉತ್ತರ ಪ್ರದೇಶದಲ್ಲಿ ವೃದ್ಧನ ಮುಖಕ್ಕೆ ಸ್ಪ್ರೇ ಮಾಡಿದ್ದು ಮುಸ್ಲಿಂ ಯುವಕ ಎಂದು ಸುಳ್ಳು ಹೇಳಿಕೆ ವೈರಲ್
Claim: ಉತ್ತರ ಪ್ರದೇಶದಲ್ಲಿ ಸೈಕಲ್‌ನಲ್ಲಿ ಹೋಗುತ್ತಿದ್ದ ವೃದ್ಧನ ಮುಖಕ್ಕೆ ಸ್ಪ್ರೇ ಮಾಡಿದ್ದು ಮುಸ್ಲಿಂ ಯುವಕ.
Fact: ವೃದ್ಧನ ಮುಖಕ್ಕೆ ಸ್ಪ್ರೇ ಮಾಡಿದ್ದು ಮುಸ್ಲಿಂ ಯುವಕನಲ್ಲ. ಆರೋಪಿಯ ಹೆಸರು ವಿನಯ್ ಯಾದವ್ ಎಂದು ಪೊಲೀಸರೇ ಖಚಿತ ಪಡಿಸಿದ್ದಾರೆ.

ಸೈಕಲ್‌ನಲ್ಲಿ ಹೋಗುತ್ತಿದ್ದ ವೃದ್ಧರೊಬ್ಬರ ಜೊತೆ ಅನುಚಿತವಾಗಿ ವರ್ತಿಸಿ ಅವರ ಮುಖಕ್ಕೆ ಸ್ನೋ ಫೋಮ್ ಸ್ಪ್ರೇ ಮಾಡುತ್ತಿರುವ ಯುವಕನ ವೀಡಿಯೊ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಝಾನ್ಸಿಯಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಝಾನ್ಸಿಯ ನವಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಓರ್ವ ಆರೋಪಿಯನ್ನು ಕೂಡ ಬಂಧಿಸಲಾಗಿದೆ. ಇದೀಗ ವೃದ್ಧನ ಮುಖಕ್ಕೆ ಸ್ಪ್ರೇ ಮಾಡಿದ್ದು ಮುಸ್ಲಿಂ ಯುವಕ ಎಂಬ ಹೇಳಿಕೆಯೊಂದಿಗೆ ಅನೇಕ ಪೋಸ್ಟ್​ಗಳು ವೈರಲ್ ಆಗುತ್ತಿವೆ.

ನಾಗೇಶ್ ಪ್ರೀತಮ್ ಎಂಬವರು ತಮ್ಮ ಫೇಸ್​ಬುಕ್ ಖಾತೆಯಲ್ಲಿ ಸೆಪ್ಟೆಂಬರ್ 24, 2024 ರಂದು ಈ ವೀಡಿಯೊ ಹಂಚಿಕೊಂಡು, ‘‘ಸೈಕಲ್ ಅಲ್ಲಿ ಹೋಗುತ್ತಿದ್ದ ಅಮಾಯಕ ವೃದ್ಧನಿಗೆ ಮುಸ್ಲಿಂ ಯುವಕ ಅನುಚಿತ ವರ್ತನೆ ಯುಪಿ ಪೊಲೀಸರಿಂದ ಭರ್ಜರಿ ಬ್ಯಾಟಿಂಗ್’’ ಎಂದು ಬರೆದುಕೊಂಡಿದ್ದಾರೆ.

ಹಾಗೆಯೆ ಅರುಣ್ ಕುಮಾರ್ ಎಂಬ ಎಕ್ಸ್ ಖಾತೆಯಲ್ಲಿ ಕೂಡ ಇದೇ ವೀಡಿಯೊ ಅಪ್ಲೋಡ್ ಆಗಿದ್ದು, ‘‘ತನ್ನ ಪಾಡಿಗೆ ಹೋಗುತ್ತಿದ್ದ ಅಮಾಯಕ ವೃದ್ಧನಿಗೆ ಪುಂಡ ಮುಸ್ಲಿಂ ಯುವಕರಿಂದ ಅನುಚಿತ ವರ್ತನೆ. ಆದರೆ ನಂತರ ನಡೆದಿದ್ದು ಯುಪಿ ಪೊಲೀಸರ ಕಾರ್ಯಾಚರಣೆ. ಈ ರೀತಿ ಕರ್ನಾಟಕದಲ್ಲೂ ಆಗಬೇಕು. ಆಗ ಈ ವೀಲಿಂಗ್ ಮಾಡುವ ಮುಸ್ಲಿಂ ಯುವಕರಿಗೆ ಬಿಸಿ ಮುಟ್ಟುತ್ತದೆ.’’ ಎಂದು ಹೇಳಿಕೊಂಡಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ವೃದ್ಧನ ಮುಖಕ್ಕೆ ಸ್ಪ್ರೇ ಮಾಡಿದ್ದು ಮುಸ್ಲಿಂ ಯುವಕನಲ್ಲ ಎಂಬುದು ನಮ್ಮ ತನಿಖೆಯಿಂದ ತಿಳಿದುಬಂದಿದೆ.

ನಿಜಾಂಶವನ್ನು ತಿಳಿಯಲು ನಾವು ಗೂಗಲ್​ನಲ್ಲಿ ವೈರಲ್ ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದೆವು. ಆಗ ಇದಕ್ಕೆ ಸಂಬಂಧಿಸಿದ ಅನೇಕ ವರದಿಗಳು ಕಂಡುಬಂತು. ಸೆಪ್ಟೆಂಬರ್ 24, 2024 ರಂದು ನ್ಯೂಸ್ 18 ‘ಝಾನ್ಸಿ ಯೂಟ್ಯೂಬರ್ ವೃದ್ಧನ ಮೇಲೆ ಮೇಲೆ ಫೋಮ್ ಎರಚಿದ್ದಾನೆ, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆದ ನಂತರ ಬಂಧಿಸಲಾಗಿದೆ’ ಎಂಬ ಹೆಡ್​ಲೈನ್​ನೊಂದಿಗೆ ಸುದ್ದಿ ಪ್ರಕಟವಾಗಿದೆ.

ವರದಿಯಲ್ಲಿ ಏನಿದೆ?: ಝಾನ್ಸಿಯ ನವಾಬಾದ್ ಪ್ರದೇಶದ ಎಲೈಟ್-ಚಿತ್ರಾ ರಸ್ತೆಯ ಮೇಲ್ಸೇತುವೆ ಬಳಿ ಇಬ್ಬರು ಬೈಕ್‌ ಸವಾರರು ವೃದ್ಧರೊಬ್ಬರ ಮುಖಕ್ಕೆ ನೊರೆ ಎರಚಿ ತನ್ನ ಸ್ಮಾರ್ಟ್ ಫೋನ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಲೈಕ್ಸ್​ಗೋಸ್ಕರ ಈ ವಿಲಕ್ಷಣ ತಮಾಷೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊ ವೈರಲ್ ಆಗಿ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತನ ಹೆಸರು ವಿನಯ್ ಯಾದವ್ ಆಗಿದ್ದು, ಈತ ಯೂಟ್ಯೂಬರ್ ಎಂದು ಪೊಲೀಸರು ನೀಡಿರುವ ಹೇಳಿಕೆ ನ್ಯೂಸ್​ 18ನಲ್ಲಿದೆ.

ಹಾಗೆಯೆ ಹಿಂದೂಸ್ಥಾನ್ ಟೈಮ್ಸ್ ಕೂಡ ಈ ಬಗ್ಗೆ ವರದಿ ಮಾಡಿರುವುದು ನಮಗೆ ಸಿಕ್ಕಿದೆ. ‘‘ವೃದ್ಧನ ಮುಖಕ್ಕೆ ಸ್ಪ್ರೇ ಮಾಡಿದ್ದ ಯುವಕನನ್ನು ಝಾನ್ಸಿ ಪೊಲೀಸರು ಬಂಧಿಸಿದ್ದಾರೆ. ಫೋಮ್ ಅನ್ನು ಸ್ಪ್ರೇ ಮಾಡಿ ವ್ಯಕ್ತಿಯನ್ನು ಯೂಟ್ಯೂಬರ್ ವಿನಯ್ ಯಾದವ್ ಎಂದು ಗುರುತಿಸಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಈ ರೀತಿಯ ಕುಚೇಷ್ಟೆ ಮತ್ತು ಸಾಹಸಗಳನ್ನು ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ,’’ ಎಂದು ಬರೆಯಲಾಗಿದೆ.

ಇನ್ನು ಝಾನ್ಸಿ ಪೊಲೀಸ್​ನ ಅಧಿಕೃತ ಎಕ್ಸ್ ಖಾತೆಯಲ್ಲಿ ಕೂಡ ಈ ಕುರಿತು ಮಾಹಿತಿ ನೀಡಲಾಗಿದೆ. ಫೋಟೋ, ವೀಡಿಯೊವನ್ನು ಹಂಚಿಕೊಳ್ಳಲಾಗಿದ್ದು ಇದರಲ್ಲಿ ವಿನಯ್ ಯಾದವ್ ಅವರನ್ನು ಪೊಲೀಸ್ ಠಾಣೆಯಿಂದ ಹೊರಗೆ ಕರೆದೊಯ್ಯುತ್ತಿರುವಾಗ ಕುಂಟುತ್ತಿರುವುದನ್ನು ಕಾಣಬಹುದು. ಜೊತೆಗೆ ಪೋಲಿಸ್ ಠಾಣೆಯ ಕಂಬಿಗಳ ಹಿಂದೆ ಕೈಮುಗಿಯುತ್ತಿರುವ ಫೋಟೋ ಇದೆ.

"ರಸ್ತೆಯಲ್ಲಿ ವಯಸ್ಸಾದ ವ್ಯಕ್ತಿಯ ಮುಖದ ಮೇಲೆ ನೊರೆ ಎರಚುತ್ತಿರುವ ವೀಡಿಯೊ ನಮ್ಮ ಗಮನಕ್ಕೆ ಬಂದಿದ್ದು, ನವಾಬಾದ್ ಪೊಲೀಸರು ವಿನಯ್ ಯಾದವ್ ಅವರನ್ನು ಬಂಧಿಸಿದ್ದಾರೆ. ಅವನು ಯೂಟ್ಯೂಬರ್ ಎಂದು ಹೇಳಿಕೊಂಡಿದ್ದಾನೆ. ಅವನ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಝಾನ್ಸಿ ಪೊಲೀಸರು ನೀಡಿರುವ ಹೇಳಿಕೆ ಕೂಡ ಪೋಸ್ಟ್‌ನಲ್ಲಿ ಇದೆ.

ನವಭಾರತ್ ಟೈಮ್ಸ್ ಮಾಡಿರುವ ವರದಿಯಲ್ಲಿ ಹೀಗಿದೆ. ‘ನಂದನಪುರ ನಿವಾಸಿ ಕಾನ್ಶಿರಾಂ ಪ್ರಜಾಪತಿ ಎಂಬವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದೂರಿನ ಪ್ರಕಾರ, ಘಟನೆಯ ದುಷ್ಕರ್ಮಿಗಳು ಖೋಡಾನ್ ಗ್ರಾಮದ ವಿನಯ್ ಯಾದವ್, ಪಾಲಿ ಪಹಾರಿ ಗ್ರಾಮದ ರಿತೇಶ್ ಕೇವತ್ ಮತ್ತು ಡೈಲಿ ಗ್ರಾಮದ ಆರ್ಯನ್ ಶ್ರೀವಾಸ್ತವ ಎಂದು ತಿಳಿದು ಬಂದಿದೆ. ನವಾಬಾದ್ ಠಾಣೆ ಪೊಲೀಸರು ಮೂವರು ಯುವಕರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಖೋಡನ್ ಗ್ರಾಮದ ವಿನಯ್ ಯಾದವ್ ಎಂಬಾತನನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಹೆಸರಿಸಲಾದ ಇತರ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.’ ಎಂದು ವರದಿಯಲ್ಲಿದೆ.

ಹೀಗಾಗಿ ಸೈಕಲ್ ಅಲ್ಲಿ ಹೋಗುತ್ತಿದ್ದ ವೃದ್ಧನಿಗೆ ಸ್ನೋ ಫೋಮ್ ಸ್ಪ್ರೇ ಮಾಡಿದ್ದು ಮುಸ್ಲಿಂ ಯುವಕ ಎಂಬ ಹೇಳಿಕೆ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಆರೋಪಿಯ ಹೆಸರು ವಿನಯ್ ಯಾದವ್ ಎಂದು ಸ್ವತಃ ಪೊಲೀಸರೇ ಖಚಿತ ಪಡಿಸಿದ್ದಾರೆ.

Claim Review:ಉತ್ತರ ಪ್ರದೇಶದಲ್ಲಿ ಸೈಕಲ್‌ನಲ್ಲಿ ಹೋಗುತ್ತಿದ್ದ ವೃದ್ಧನ ಮುಖಕ್ಕೆ ಸ್ಪ್ರೇ ಮಾಡಿದ್ದು ಮುಸ್ಲಿಂ ಯುವಕ.
Claimed By:Facebook User
Claim Reviewed By:News Meter
Claim Source:Social Media
Claim Fact Check:False
Fact:ವೃದ್ಧನ ಮುಖಕ್ಕೆ ಸ್ಪ್ರೇ ಮಾಡಿದ್ದು ಮುಸ್ಲಿಂ ಯುವಕನಲ್ಲ. ಆರೋಪಿಯ ಹೆಸರು ವಿನಯ್ ಯಾದವ್ ಎಂದು ಪೊಲೀಸರೇ ಖಚಿತ ಪಡಿಸಿದ್ದಾರೆ.
Next Story