Fact Check: ಸೆಪ್ಟೆಂಬರ್ 15 ರಂದು ಬೆಂಗಳೂರಿಗೆ ಕ್ಷುದ್ರಗ್ರಹ ಅಪ್ಪಳಿಸಿದೆ ಎಂದು ಸುಳ್ಳು ವೀಡಿಯೊ ವೈರಲ್
ಹಸಿರು ಉಲ್ಕೆಯೊಂದು ಭೂಮಿಯ ಕಡೆಗೆ ಬರುತ್ತಿರುವ ವೀಡಿಯೊ ಒಂದು ವೈರಲ್ ಆಗಿದೆ. ಸೆಪ್ಟೆಂಬರ್ 15, 2024 ರಂದು ಬೆಂಗಳೂರು ನಗರಕ್ಕೆ ಕ್ಷುದ್ರಗ್ರಹ ಅಪ್ಪಳಿಸಿದೆ ಎಂಬ ಹೇಳಿಕೆಯೊಂದಿಗೆ ಈ ಪೋಸ್ಟ್‌ಗಳನ್ನು ಶೇರ್ ಮಾಡಲಾಗುತ್ತಿದೆ.
By Vinay Bhat Published on 17 Sep 2024 12:11 PM GMTClaim: ಸೆಪ್ಟೆಂಬರ್ 15, 2024 ರಂದು ಬೆಂಗಳೂರಿನಲ್ಲಿ ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸುತ್ತಿರುವುದನ್ನು ವೈರಲ್ ವೀಡಿಯೊ ತೋರಿಸುತ್ತಿದೆ.
Fact: ಈ ವಿಡಿಯೋ ಬೆಂಗಳೂರಿಗೆ ಸಂಬಂಧಿಸಿದ್ದಲ್ಲ. ಇದು ಇಸ್ತಾನ್‌ಬುಲ್‌ನಲ್ಲಿ ನಡೆದ ಘಟನೆಯ ವಿಡಿಯೋ ಆಗಿದೆ.
ಅಪಾಯಕಾರಿ ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸಲಿದೆ ಎಂದು ಇತ್ತೀಚೆಗಷ್ಟೇ ನಾಸಾ ಎಚ್ಚರಿಕೆ ನೀಡಿತ್ತು. '2024 ON' ಹೆಸರಿನ ಕ್ಷುದ್ರಗ್ರಹವು ಸೆಪ್ಟೆಂಬರ್ 15, 2024 ರಂದು ಭೂಮಿಯ ಕಡೆಗೆ ತಲುಪಲಿದೆ ಎಂದು ನಾಸಾ ತಿಳಿಸಿತ್ತು. ಈ ಗ್ರಹದ ತುಣುಕು ಗಂಟೆಗೆ 40233 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ ಎಂದು ನಾಸಾ ಹೇಳಿದ್ದು, ಭೂಮಿಯ ಮೇಲೆ ಬಿದ್ದರೆ ಸಂಪೂರ್ಣ ವಿನಾಶವಾಗುತ್ತದೆ ಎಂಬ ದೊಡ್ಡ ಪ್ರಚಾರ ನಡೆದಿದೆ. ಪ್ರಪಂಚದಾದ್ಯಂತ ಈ ಕ್ಷುದ್ರಗ್ರಹದ ಬಗ್ಗೆ ದೊಡ್ಡ ಚರ್ಚೆ ಕೂಡ ನಡೆಯಿತು.
ಈ ಮಧ್ಯೆ, ಹಸಿರು ಉಲ್ಕೆಯೊಂದು ಭೂಮಿಯ ಕಡೆಗೆ ಬರುತ್ತಿರುವ ವೀಡಿಯೊ ಒಂದು ವೈರಲ್ ಆಗಿದೆ. ಸೆಪ್ಟೆಂಬರ್ 15, 2024 ರಂದು ಬೆಂಗಳೂರು ನಗರಕ್ಕೆ ಕ್ಷುದ್ರಗ್ರಹ ಅಪ್ಪಳಿಸಿದೆ ಎಂಬ ಹೇಳಿಕೆಯೊಂದಿಗೆ ಈ ಪೋಸ್ಟ್‌ಗಳನ್ನು ಶೇರ್ ಮಾಡಲಾಗುತ್ತಿದೆ.
ಟ್ರೆಂಡಿಂಗ್ ಎಂಬ ಯೂಟ್ಯೂಬ್ ಖಾತೆಯಿಂದ ಸೆ. 16 ರಂದು ಈ ವೀಡಿಯೊ ಅಪ್ಲೋಡ್ ಮಾಡಲಾಗಿದ್ದು, ಇದಕ್ಕೆ “ಬೆಂಗಳೂರಿನಲ್ಲಿ ಎರಡು ಕ್ಷುದ್ರಗ್ರಹ ನೋಡಿ’’ ಎಂಬ ಶೀರ್ಷಿಕೆ ನೀಡಲಾಗಿದೆ. ಈ ಘಟನೆ ನಡೆದಿರುವುದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಎಂದು ಪೋಸ್ಟ್‌ಗಳು ಹೇಳುತ್ತವೆ.
ಹಾಗೆಯೆ ಬ್ರಿಜೇಶ್ ಎಂಬ ಯೂಟ್ಯೂಬ್ ಖಾತೆಯಿಂದ ಕೂಡ ಇದೇ ವೀಡಿಯೊ ಅಪ್ಲೋಡ್ ಆಗಿದ್ದು, ‘ಸೆಪ್ಟೆಂಬರ್ 15 ರಂದು ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸುತ್ತಿದೆ ಎಂದು’ ಹೇಳಿದ್ದಾರೆ.
Fact Check:
ಈ ವೈರಲ್ ವೀಡಿಯೊದ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಕಂಡುಬಂದಿದೆ. ಇದು ಹಳೆಯ ವೀಡಿಯೊ ಆಗಿದ್ದು, ಸೆಪ್ಟೆಂಬರ್ 15 2024 ರ ಕ್ಷುದ್ರಗ್ರಹಕ್ಕೆ ಸಂಬಂಧಿಸಿಲ್ಲ.
ನಿಜಾಂಶವನ್ನು ತಿಳಿಯಲು ನಾವು ವೀಡಿಯೊದಿಂದ ಕೀಫ್ರೇಮ್‌ಗಳನ್ನು ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಆಗ ಜುಲೈ 2024 ರಿಂದ ಈ ವೀಡಿಯೊ ಆನ್‌ಲೈನ್‌ನಲ್ಲಿದೆ ಎಂದು ನಾವು ಕಂಡುಕೊಂಡಿದ್ದೇವೆ. ಜುಲೈ 06, 2024 ರಂದು, ಟರ್ಕಿಯ ಇಸ್ತಾನ್‌ಬುಲ್ ನಗರದಲ್ಲಿ ಉಲ್ಕಾಪಾತ ಕಂಡುಬಂದಿದೆ ಎಂಬ ಶೀರ್ಷಿಕೆಯೊಂದಿಗೆ “ಗ್ಲೋಬಲ್ ಡಿಸಾಸ್ಟರ್ಸ್ ನ್ಯೂಸ್” ಎಂಬ ಫೇಸ್‌ಬುಕ್ ಪುಟದಲ್ಲಿ ಇದರ ಸುದೀರ್ಘ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ಹಾಗೆಯೆ ಈ ವೈರಲ್ ವೀಡಿಯೊ ನಮಗೆ ಡೈಲಿಮೋಷನ್‌ನಲ್ಲಿ ಕಂಡುಬಂದಿದ್ದು, ಇದನ್ನು Haberler.com ಅಪ್ಲೋಡ್ ಮಾಡಿದೆ. ಈ ಘಟನೆಯು ಇಸ್ತಾಂಬುಲ್‌ನಲ್ಲಿ ಕಂಡುಬಂದಿದೆ ಎಂದು ಅವರು ಕೂಡ ಬರೆದುಕೊಂಡಿದ್ದಾರೆ. ಇಸ್ತಾಂಬುಲ್, ಅಂಕಾರಾ, ಸಕಾರ್ಯ ಮತ್ತು ಬುರ್ಸಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಈ ಉಲ್ಕೆಯು ಆಕಾಶದಲ್ಲಿ ಕಾಣಿಸಿಕೊಂಡಿದೆ ಎಂದು ವೀಡಿಯೊದ ವಿವರಣೆಯಲ್ಲಿ ತಿಳಿಸಲಾಗಿದೆ.
ಈ ವೀಡಿಯೊವನ್ನು ಜುಲೈ 6, 2024 ರಂದು Torquenews ಯೂಟ್ಯೂಬ್ ಚಾನೆಲ್ನಲ್ಲಿ ‘ಇಸ್ತಾಂಬುಲ್ ಮತ್ತು ಟರ್ಕಿಯ ಇತರ ನಗರಗಳಲ್ಲಿ ಬೃಹತ್ ಉಲ್ಕೆಯು ಕಾಣಿಸಿಕೊಂಡಿದೆ’ ಎಂದು ಪೋಸ್ಟ್ ಮಾಡಲಾಗಿದೆ.
ಹಲವಾರು ಟರ್ಕಿಶ್ ಬಳಕೆದಾರರು ಆಕಾಶದಲ್ಲಿ ಈ ಬೆಂಕಿಯ ಚೆಂಡುಗಳನ್ನು ನೋಡಿದ್ದಾರೆಂದು ಫೋಸ್ಟ್ ಹಂಚಿಕೊಂಡಿದ್ದಾರೆ. ಇದರ ವೀಡಿಯೊಗಳು ಮತ್ತು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಜುಲೈನಲ್ಲಿ ವೈರಲ್ ಆಗಿತ್ತು.
ಆ ಬಗ್ಗೆ ದಿ ಸನ್ನಲ್ಲಿ ಜುಲೈ 6, 2024 ರಂದು ಲೇಖನವೂ ಪ್ರಕಟವಾಗಿತ್ತು. ‘ಸ್ಕೈ ಫೈರ್‌ಬಾಲ್: ಬೃಹತ್ ಆಕಾರದ ನಿಗೂಢ ಹಸಿರು ಉಲ್ಕೆಯು ರಾತ್ರಿಯ ಆಕಾಶವನ್ನು ಬೆಳಗಿಸಿತು: ಜನರು ಆಘಾತಕ್ಕೊಳಗಾದರು’ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗಿದೆ.
ದಿ ಗಾರ್ಡಿಯನ್ ವರದಿಯಲ್ಲಿ ಹೀಗಿದೆ: ಉಲ್ಕಾಪಾತವು ಸಫ್ರಾನ್ಬೋಲು ನಗರದಲ್ಲಿ ಕಂಡುಬಂದಿದೆ. ಸಫ್ರಾನ್ಬೋಲುವಿನಿಂದ 100 ಕಿಲೋಮೀಟರ್ ದೂರದಲ್ಲಿರುವ ಕಸ್ತಮೋನುದಲ್ಲಿಯೂ ಇದು ಕಾಣಿಸಿಕೊಂಡಿದೆ. ಈ ಉಲ್ಕಾಪಾತವು ಟರ್ಕಿಯ ಮೇಲೆ ಆಕಾಶವನ್ನು ಬೆಳಗಿಸಿತು, ಮೋಡಗಳ ಮೂಲಕ ಹಸಿರು ಬೆಳಕನ್ನು ಹಾರಿಸಿದೆ ಎಂದು ಬರೆಯಲಾಗಿದೆ.
ಹಾಗೆಯೆ ಟರ್ಕಿಶ್ ಬಾಹ್ಯಾಕಾಶ ಸಂಸ್ಥೆ ಕೂಡ ಉಲ್ಕಾಪಾತ ಸಂಭವಿಸಿದೆ ಎಂದು ದೃಢಪಡಿಸಿದೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಸಂಪೂರ್ಣ ಮಾಹಿತಿಯನ್ನು ನೀಡಿದೆ.
Bu gece ülkemizin çeşitli yerlerinde gökyüzünde görülen meteor heyecana neden oldu☄️Meteorların atmosferden girişi sırasında oluşan renkler; meteorun kimyasal bileşimi, hızı ve Dünya atmosferinde bulunan gazlar gibi birkaç faktöre bağlı olarak farklılık göstermektedir.…
— Türkiye Uzay Ajansı (@tuajans) July 5, 2024
ಹೀಗಾಗಿ, ವೈರಲ್ ವೀಡಿಯೊವು ಸೆಪ್ಟೆಂಬರ್ 15, 2024 ರಂದು ಬೆಂಗಳೂರು ನಗರಕ್ಕೆ ಕ್ಷುದ್ರಗ್ರಹ ಅಪ್ಪಳಿಸುವುದು ಅಲ್ಲ ಎಂಬುದನ್ನು ನಾವು ಖಚಿತವಾಗಿ ಹೇಳುತ್ತೇವೆ. ಇದು ಜುಲೈ 2024 ರಿಂದ ಆನ್‌ಲೈನ್‌ನಲ್ಲಿದೆ. ಟರ್ಕಿಯಲ್ಲಿ ನಡೆದಿರುವ ಘಟನೆ ಇದಾಗಿದೆ.