ಸಾಮಾಜಿಕ ಜಾಲತಾಣಗಳಲ್ಲಿ 10-ಸೆಕೆಂಡ್‌ಗಳ ವೀಡಿಯೊ ಒಂದು ವೈರಲ್ ಆಗುತ್ತಿದೆ. ನಡು ದಾರಿಯಲ್ಲಿ ಮೃತದೇಹವೊಂದಿದ್ದು, ಅದರ ಸುತ್ತಲೂ ಜನಸಂದಣಿ ನೆರೆದಿದೆ. ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂವಿನ ಕೊಲೆಯಾಗಿದೆ ಎಂಬ ಹೇಳಿಕೆಯೊಂದಿಗೆ ಅನೇಕರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಬಾಂಗ್ಲಾದೇಶದ ನರಸಿಂಗಡಿ ಜಿಲ್ಲೆಯಲ್ಲಿ ಈದ್ಗಾ ಗೇಟ್, ಕೌರಿಯಾ ಪಾರಾ ಮುಂಭಾಗದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಅಕ್ಟೋಬರ್ 11, 2024 ರಂದು ಹಂಚಿಕೊಂಡು, ‘‘ಬಾಂಗ್ಲಾದೇಶದಲ್ಲಿ ಇನ್ನೂ ನಿಂತಿಲ್ಲ ಹಿಂದೂಗಳ ಮೇಲಿನ ದಾಳಿ. ಬಾಂಗ್ಲಾದ ನಾರ್ಸಿಂಗಡಿ ಜಿಲ್ಲೆಯ ಕೌರಿಯಾ ಪಾರಾದ ಈದ್ಗಾ ಗೇಟ್‌ನಲ್ಲಿ ಎಲ್ಲರ ಸಮ್ಮುಖದಲ್ಲೇ ಮುಸ್ಲಿಮರು ಹಿಂದೂವನ್ನು ಕತ್ತು ಸೀಳಿ ಕೊಂದಿದ್ದಾರೆ. ಇದು ನಾಳೆ ಇನ್ನಷ್ಟು ಹೆಚ್ಚಾಗಲಿದೆ. ನಾವಲ್ಲದಿದ್ದರೆ ಬಾಂಗ್ಲಾದೇಶಿ ಹಿಂದೂಗಳ ಪರ ಧ್ವನಿ ಎತ್ತುವವರು ಯಾರು?’’ ಎಂದು ಬರೆದುಕೊಂಡಿದ್ದಾರೆ.
ಇದೇ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ರಕ್ತದ ಮಡುವಿನಲ್ಲಿ ಬಿದ್ದಿರುವ ವ್ಯಕ್ತಿಯ ದೇಹವನ್ನು ತೋರಿಸುವ ವೀಡಿಯೊ ಭಾರತದಲ್ಲಿ ಸುಳ್ಳು ಕೋಮುವಾದಿ ಹಕ್ಕುಗಳೊಂದಿಗೆ ಹರಿದಾಡುತ್ತಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಬಾಂಗ್ಲಾದೇಶದ ಸುದ್ದಿ ಚಾನೆಲ್ ಸೊರೆಜೊಮಿನ್ ಬಾರ್ಟಾ ಇದೇ ವೀಡಿಯೊವನ್ನು ಅಕ್ಟೋಬರ್ 1, 2024 ರಂದು ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ‘ನರಸಿಂಗಡಿ ಪೇಟೆಯಲ್ಲಿ ಹಳೆಯ ದ್ವೇಷದಿಂದ ಹನೀಫ್ ಎಂಬ ಯುವಕನ ಹತ್ಯೆಯಾಗಿದೆ’ ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಿರುವುದು ಸಿಕ್ಕಿದೆ.
ವರದಿಯಲ್ಲಿ ಪೊಲೀಸರು ಮತ್ತು ಸಂಬಂಧಿಕರ ಹೇಳಿಕೆಗಳ ಪ್ರಕಾರ, ಕೊಲೆಯ ಹಿಂದಿನ ಉದ್ದೇಶವು ಕೌಟುಂಬಿಕ ಕಲಹದಿಂದ ಉಂಟಾದ ವೈಯಕ್ತಿಕ ದ್ವೇಷವಾಗಿದೆ. ಹನೀಫ್ ಮಿಯಾ ತನ್ನ ಚಿಕ್ಕಪ್ಪ ಹಬು ಮಿಯಾನನ್ನು ಮೂರು ತಿಂಗಳ ಹಿಂದೆ ಕೊಂದಿದ್ದಾನೆ. ಇದೇ ಕಾರಣಕ್ಕೆ ಹಬು ಮಿಯಾನ ಸಂಬಂಧಿಕರು ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
bd-bulletin ಕೂಡ ಈ ಕುರಿತು ವರದಿ ಮಾಡಿದ್ದು, ‘‘ಬಾಂಗ್ಲಾದೇಶದ ನರಸಿಂಗಡಿ ಪ್ರದೇಶದಲ್ಲಿ, ಅಕ್ಟೋಬರ್ 1 ರಂದು ಹಾಡು ಹಗಲೇ ಕೌರಿಯಾ ಪಾರಾ ಅವರ ಈದ್ಗಾ ಗೇಟ್ ಬಳಿ ವೈಯಕ್ತಿಕ ದ್ವೇಷದ ಕಾರಣ ಹನೀಫ್ ಮಿಯಾ ಅವರನ್ನು ಕೊಂದಿದ್ದಾರೆ. ಹನೀಫ್ ಬಾಂಗ್ಲಾದೇಶದ ಕಾನೂನಿನಡಿಯಲ್ಲಿ ಕೊಲೆ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಮೃತ ವ್ಯಕ್ತಿಯ ಸಂಬಂಧಿಕರು ಹನೀಫ್ ಅವರನ್ನು ಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಂಬಂಧಿಕರ ನಡುವಿನ ವೈಯಕ್ತಿಕ ದ್ವೇಷದ ಕಾರಣದಿಂದ ಕೊಲೆ ನಡೆದಿದೆ. ಹನೀಫ್ ಮಿಯಾ ಅವರ ಸೋದರಸಂಬಂಧಿ ನಯೀಮ್ ಮತ್ತು ನದೀಮ್ ಆರೋಪಿಗಳಾಗಿದ್ದಾರೆ ಎಂದು ನರಸಿಂಗಡಿ ಡಿಟೆಕ್ಟಿವ್ ಡಿಪಾರ್ಟ್‌ಮೆಂಟ್ ಪ್ರಭಾರಿ ಪೊಲೀಸ್ ಅಧಿಕಾರಿ ಎಸ್‌ಎಂ ಕಬ್ರುಜಮಾನ್ ಸುದ್ದಿವಾಹಿನಿಗೆ ತಿಳಿಸಿದ್ದಾರೆ.’’ ಎಂದು ವರದಿಯಲ್ಲಿದೆ.
ಹೀಗಾಗಿ ಬಾಂಗ್ಲಾದೇಶದಲ್ಲಿ ಮುಸ್ಲಿಮರು ಹಿಂದೂ ವ್ಯಕ್ತಿಯ ಕತ್ತು ಸೀಳಿ ಕೊಂದಿದ್ದಾರೆಂದು ಎಂಬ ಹೇಳಿಕೆ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ. ಬಾಂಗ್ಲಾದ ನರಸಿಂಗಡಿ ಜಿಲ್ಲೆಯಲ್ಲಿ ಕೌಟುಂಬಿಕ ಕಲಹದಿಂದ ನಡೆದಿರುವ ಈ ಘಟನೆ ಇದಾಗಿದ್ದು, ಕೊಲೆಯಾದ ವ್ಯಕ್ತಿಯ ಹೆಸರು ಹನೀಫ್ ಮಿಯಾ ಆಗಿದೆ.