ಜನಬಿಡದಿ ಪ್ರದೇಶದಲ್ಲಿ ಆನೆಗಳ ದೊಡ್ಡ ಹಿಂಡು ರಸ್ತೆ ದಾಟುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಕರ್ನಾಟಕದ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಸಕಲೇಶಪುರ ನಗರದಲ್ಲಿ ಕಾಡಾನೆಗಳ ದಂಡು ಜನರಿಗೆ ಆತಂಕ’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಸಕಲೇಶಪುರದಲ್ಲಿ ನಡೆದ ಘಟನೆ ಅಲ್ಲ ಬದಲಾಗಿ ಇದು ಅಸ್ಸಾಂನ ವೀಡಿಯೊ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ-ಫ್ರೇಮ್ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ನವೆಂಬರ್ 13 ರಂದು ನ್ಯೂಸ್ 18 ಅಸ್ಸಾಮ್ ತನ್ನ ಫೇಸ್ಬುಕ್ ಖಾತೆಯಲ್ಲಿ ಇದೇ ವೈರಲ್ ವೀಡಿಯೊದ ಪೂರ್ಣ ಆವೃತ್ತಿಯನ್ನು ಹಂಚಿಕೊಂಡಿರುವುದು ಸಿಕ್ಕಿತು. ಅಸ್ಸಾಂನ ಗೋಲಾಘಾಟ್ ಜಿಲ್ಲೆಯ ನುಮಲಿಗಢದಲ್ಲಿ ಆನೆ ದಾಳಿಯ ಬಗ್ಗೆ ಚರ್ಚಿಸಲಾಗುತ್ತಿದೆ, ಇದು ದಟ್ಟವಾದ ಕಾಡುಗಳಿಂದ ಆವೃತವಾಗಿದೆ ಎಂಬ ಮಾಹಿತಿ ಇದೆ.
ಹೆಚ್ಚಿನ ಪರಿಶೀಲನೆಯ ನಂತರ, ಇದೇ ವೈರಲ್ ಕ್ಲಿಪ್ ಅನ್ನು Life Of TheWildlife ಮತ್ತು Elephant Zoom ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ಕೂಡ ನವೆಂಬರ್ನಲ್ಲಿ ಹಂಚಿಕೊಂಡಿರುವುದು ಕಂಡುಬಂದಿವೆ. ಈ ವೀಡಿಯೊಗಳು ಒಂದೇ ಘಟನೆಯನ್ನು ವಿಭಿನ್ನ ಕೋನಗಳಿಂದ ತೋರಿಸುತ್ತವೆ. ಒಂದರ ಶೀರ್ಷಿಕೆ "ಅಸ್ಸಾಂನ ಮರಂಗಿ ಸರ್ಕಲ್ ಆಫೀಸ್ ಬಳಿ ರಾಷ್ಟ್ರೀಯ ಹೆದ್ದಾರಿ 39 ಅನ್ನು ದಾಟುತ್ತಿರುವ ಕಾಡು ಆನೆಗಳ ದೊಡ್ಡ ಹಿಂಡು" ಎಂದು ಬರೆಯಲಾಗಿದೆ.
ಈ ಮಾಹಿತಿಯ ಆಧಾರದ ಮೇಲೆ ನಾವು ಮರಂಗಿ ಸರ್ಕಲ್ ಆಫೀಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 39 ಅನ್ನು ಜಿಯೋಲೋಕಲೈಸ್ ಮಾಡಿದಾಗ, ವೈರಲ್ ವೀಡಿಯೋದಲ್ಲಿ ಗೋಚರಿಸುವ ಅಂಗಡಿಗಳು ಮತ್ತು ರಚನೆಗಳು ಸ್ಥಳಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತವೆ ಎಂದು ನಾವು ಕಂಡುಕೊಂಡಿದ್ದೇವೆ. ಇದು ವೈರಲ್ ವೀಡಿಯೊ ಕರ್ನಾಟಕದ್ದಲ್ಲ, ಅಸ್ಸಾಂನದ್ದು ಎಂದು ಸ್ಪಷ್ಟವಾಗಿ ದೃಢಪಡಿಸುತ್ತದೆ.
ಇನ್ನು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಇತ್ತೀಚೆಗೆ ನಡೆದ ಆನೆ ಸಂಬಂಧಿತ ಘಟನೆಗಳನ್ನು ನಾವು ಪರಿಶೀಲಿಸಿದ್ದೇವೆ. ಸಕಲೇಶಪುರದ ಸುತ್ತಮುತ್ತಲಿನ ಅರಣ್ಯ ಮತ್ತು ಕಾಫಿ-ಎಸ್ಟೇಟ್ ಪ್ರದೇಶಗಳಲ್ಲಿ ಆನೆಗಳು ಅಲೆದಾಡುವುದು ಸಾಮಾನ್ಯ. ಆದರೆ ಇತ್ತೀಚೆಗೆ ದೊಡ್ಡ ಹಿಂಡು ಪಟ್ಟಣಕ್ಕೆ ಪ್ರವೇಶಿಸಿದ ಯಾವುದೇ ವರದಿಗಳಿಲ್ಲ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಳೆ, ಅಸ್ಸಾಂನಲ್ಲಿ ರಸ್ತೆ ದಾಟುತ್ತಿರುವ ದೊಡ್ಡ ಆನೆ ಹಿಂಡಿನ ವೀಡಿಯೊವನ್ನು ಕರ್ನಾಟಕದ ಸಕಲೇಶಪುರದ ದೃಶ್ಯವೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.