ಸೇನೆಯಲ್ಲಿನ ಕೆಲಸವೆಂದರೆ ದೇಶಕ್ಕಾಗಿ ತನ್ನ ಪ್ರಾಣವನ್ನೇ ಮುಡಿಪಾಗಿಡುವುದು. ಅನೇಕರು ತಮ್ಮ ಕುಟುಂಬದಿಂದ ದೂರವಾಗಿ ಸೇನೆಗೆ ಸೇವೆ ಸಲ್ಲಿಸುತ್ತಿದ್ದಾರೆ. ರಜೆ ಸಿಕ್ಕಾಗಲೆಲ್ಲ ಮನೆಗೆ ಬಂದು ಸಂಸಾರದೊಂದಿಗೆ ಕಳೆಯುತ್ತಾರೆ. ಅನೇಕ ಪೋಷಕರು ಗಡಿ ಭದ್ರತೆಯಲ್ಲಿ ತಮ್ಮ ಮಕ್ಕಳ ಬಗ್ಗೆ ಯೋಚಿಸುತ್ತಾ ತಮ್ಮ ಊರಿನಲ್ಲಿಯೇ ಇರುತ್ತಾರೆ. ತಮ್ಮ ಮಕ್ಕಳು ಅನಿರೀಕ್ಷಿತವಾಗಿ ಭೇಟಿಯಾದಾಗ ಆಗುವ ಆನಂದ ವರ್ಣನಾತೀತ. ಕೆಲವು ಸೈನಿಕರು ತಮ್ಮ ಪೋಷಕರಿಗೆ ಅಂತಹ ಆಶ್ಚರ್ಯವನ್ನು ನೀಡುತ್ತಾರೆ. ಇಂತಹದೊಂದು ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಒಬ್ಬ ಮಹಿಳೆ ಎಳನೀರು ಮಾರುತ್ತಿರುತ್ತಾಳೆ. ಅಷ್ಟರಲ್ಲಿ ಮಿಲಿಟರಿ ಸಮವಸ್ತ್ರ ಧರಿಸಿದ ವ್ಯಕ್ತಿಯೊಬ್ಬ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬರುತ್ತಾನೆ. ಎಳನೀರು ಕೇಳಿದಾಗ, ಮಹಿಳೆ ಅದನ್ನು ಒಡೆಯಲು ಮುಂದಾಗುತ್ತಾಳೆ. ಅಷ್ಟರಲ್ಲಿ ಆತ ತನ್ನ ಮಾಸ್ಕ್ ತೆಗೆಯುತ್ತಾರೆ, ಮಹಿಳೆ ಭಾವುಕಳಾಗುತ್ತಾಳೆ.
ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ರೈಲ್ವೆ ಸ್ಟೇಷನ್ ಬಳಿ ಎಳನೀರು ಮಾರುವ ಈ ಮಹಾತಾಯಿಯ ಮಗ ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದು, ರಜೆ ಮೇಲೆ ತನ್ನ ತಾಯಿಗೆ ಅರಿವಿಲ್ಲದಂತೆ ಬಳಿ ಬಂದು ಭೇಟಿಯಾದ ಕ್ಷಣ. ತಾಯಿ- ಮಗನ ಭಾವನಾತ್ಮಕ ದೃಶ್ಯ ನೋಡಿ ಕಣ್ಣಲ್ಲಿ ನೀರು ಸುರಿಯಿತು’’ ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಇದೊಂದು ಮನೋರಂಜನಾ ಉದ್ದೇಶಕ್ಕಾಗಿ ಮಾಡಿದ ವೀಡಿಯೊ ಎಂಬುದು ತಿಳಿದುಬಂದಿದೆ, ಅಂದರೆ ಇದು ಸ್ಕ್ರಿಪ್ಟೆಡ್ ವೀಡಿಯೊ ಆಗಿದೆ.
ಇದರ ನಿಜಾಂಶವನ್ನು ಕಂಡುಹಿಡಿಯಲು ನಾವು ಮೊದಲು ವೀಡಿಯೊವನ್ನು ಸೂಕ್ಷ್ಮವಾಗು ಗಮನಿಸಿದ್ದೇವೆ. ಈ ವೀಡಿಯೊದ ಕೊನೆಯಲ್ಲಿ, "ಈ ವೀಡಿಯೊವನ್ನು ಮನರಂಜನಾ ಉದ್ದೇಶಕ್ಕಾಗಿ ಮಾಡಲಾಗಿದೆ ಮತ್ತು ಇದು ರೀಲ್ ವೀಡಿಯೊ" ಎಂದು ನಮೂದಿಸಿದ್ದಾರೆ. ಹೀಗಾಗಿ ಇದು ಮನರಂಜನಾ ಉದ್ದೇಶಕ್ಕಾಗಿ ಮಾಡಿದ ವೀಡಿಯೊ ಎಂದು ಸ್ಪಷ್ಟಪಡಿಸುತ್ತದೆ.
ವೀಡಿಯೊದ ಒಂದು ಭಾಗವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಕಳೆದ ನವೆಂಬರ್ 12 ರಂದು ನಟಿ ಸಂಜನಾ ಗಲ್ರಾನಿ ಇದೇ ವೈರಲ್ ವೀಡಿಯೊವನ್ನು ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿರುವುದು ಸಿಕ್ಕಿದೆ. ಅವರು ಈ ವೀಡಿಯೊವನ್ನು ಮನೋರಂಜನಾ ಉದ್ದೇಶಕ್ಕಾಗಿ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಎಳನೀರು ಮಾರುವ ತನ್ನ ತಾಯಿಗೆ ಸರ್ಪ್ರೈಸ್ ನೀಡುವ ಸೇನಾ ಸೈನಿಕನ ಸ್ಕ್ರಿಪ್ಟ್ ವೀಡಿಯೊವನ್ನು ನೈಜ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.