ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಇದೀಗ ಮಳೆರಾಯನ ಅಬ್ಬರ ಮಿತಿ ಮೀರಿ ಹೋಗಿದೆ. ಅದರಲ್ಲೂ ರಾಜಧಾನಿ ಬೆಂಗಳೂರು ನಗರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ವರುಣನ ಆರ್ಭಟ ಜೋರಾಗಿದ್ದು, ಜನಸಾಮಾನ್ಯರು ಮನೆಯಿಂದ ಹೊರಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ರಸ್ತೆಯಲ್ಲಿ ನೀರು ತುಂಬಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ರಸ್ತೆ ಕಾಣದಂತೆ ಸಂಪೂರ್ಣವಾಗಿ ಮಳೆ ನೀರು ತುಂಬಿದ್ದು ಜನರು ಓಡಾಡಲು, ಗಾಡಿ ಓಡಿಸಲು ಪರದಾಡುತ್ತಿದ್ದಾರೆ. ಮೊಣಕಾಲಿನ ವರೆಗೆ ನೀರು ತುಂಬಿದೆ. ಫೇಸ್ಬುಕ್ ಬಳಕೆದಾರರೊಬ್ಬರು ಅಕ್ಟೋಬರ್ 17, 2024 ರಂದು ಈ ವಿಡಿಯೋ ಹಂಚಿಕೊಂಡು ‘‘ಇದೆ ನೋಡ್ರಿ ಬ್ರಾಂಡ್ ಬೆಂಗಳೂರು & ಬೆಂಗಳೂರಿನ ಹೊಸ ಬೀಚ್..’’ ಎಂದು ಬರೆದುಕೊಂಡಿದ್ದಾರೆ.
ಹಾಗೆಯೆ ಎಕ್ಸ್ನಲ್ಲಿ ಕೂಡ ಈ ವಿಡಿಯೋ ವೈರಲ್ ಆಗುತ್ತಿದ್ದು, ‘‘ಬೆಂಗಳೂರಿನ ಮೊಟ್ಟಮೊದಲ ಬೀಚ್ ಉದ್ಘಾಟನೆಗೊಂಡಿದೆ. ಬೆಂಗಳೂರಿನ ಪ್ರಜೆಗಳು ಈ ರಮಣೀಯ ಬೀಚಿಗೆ ಬೇಟಿನೀಡಬೇಕಾಗಿ ಸವಿನಯ ವಿನಂತಿ’’ ಎಂದು ಬರೆದಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಹಳೆಯ ವಿಡಿಯೋ ಈಗ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೋದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ಆಗ ಸನ್ ಟಿವಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವೈರಲ್ ವಿಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಈ ವೀಡಿಯೊವನ್ನು 5 ಸೆಪ್ಟೆಂಬರ್ 2022 ರಂದು ಯೂಟ್ಯೂಬ್ ಶಾರ್ಟ್ನಲ್ಲಿ ಹಂಚಿಕೊಳ್ಳಲಾಗಿದೆ. ಬೆಂಗಳೂರಿನ ಬೆಳ್ಳಂದೂರಿನಲ್ಲಿ ಜಲಾವೃತ ಎಂದು ಶೀರ್ಷಿಕೆ ನೀಡಲಾಗಿದೆ.
ಹಾಗೆಯೆ ಟೈಮ್ಸ್ ನೌ ಹಿಂದಿ ಕೂಡ ಇದೇ ವೈರಲ್ ವಿಡಿಯೋದ ಫೋಟೋ ಬಳಸಿ ಸೆಪ್ಟೆಂಬರ್ 7, 2022 ರಂದು ವೆಬ್ ಸ್ಟೋರಿ ಮಾಡಿರುವುದು ನಮಗೆ ಸಿಕ್ಕಿದೆ. ಬೆಂಗಳೂರಿನಲ್ಲಿ ಭಾರೀ ಮಳೆ ಎಂಬ ಶೀರ್ಷಿಕೆ ನೀಡಿದೆ.
ಈ ಕುರಿತು ಇನ್ನೂ ಹೆಚ್ಚಿನ ಶೋಧ ನಡೆಸಿದಾಗ, ಸೆಪ್ಟೆಂಬರ್ 5, 2022 ರಂದು ಇಂಡಿಯಾ.ಕಾಮ್ ಪ್ರಕಟಿಸಿದ ಬೆಂಗಳೂರು ಮಳೆಯ ಕುರಿತ ಫೋಟೋ ವರದಿಯಲ್ಲಿ ವೈರಲ್ ವಿಡಿಯೋವನ್ನು ಹೋಲುವ ಫೊಟೋ ಸಿಕ್ಕಿದೆ. ಇದರಲ್ಲಿ, ಧಾರಾಕಾರ ಮಳೆಯ ನಂತರ ಕರ್ನಾಟಕದ ಬೆಂಗಳೂರಿನಲ್ಲಿ ಜಲಾವೃತವಾಗಿದೆ ಎಂದು ಬರೆಯಲಾಗಿದೆ.
ಹೀಗಾಗಿ 2022ರ ಸೆಪ್ಟೆಂಬರ್ನಲ್ಲಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿ ಬೆಳ್ಳಂದೂರು ಭಾಗದಲ್ಲಿ ಸೃಷ್ಟಿಯಾದ ನೆರೆಯ ದೃಶ್ಯ ಇದಾಗಿದೆ ಎಂದು ನಾವು ಖಚಿತ ಪಡಿಸುತ್ತೇವೆ. ಎರಡು ವರ್ಷಗಳ ಹಳೆಯ ವಿಡಿಯೋವನ್ನು ಇತ್ತೀಚಿನದ್ದು ಎಂದು ಹಂಚಿಕೊಳ್ಳಲಾಗುತ್ತಿದೆ.