ಇಲ್ಲಿಯವರೆಗೆ, ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ 10 ಕೋಟಿಗೂ ಹೆಚ್ಚು ಜನರು ಸ್ನಾನ ಮಾಡಿದ್ದಾರೆ. ಒಟ್ಟು 45 ಕೋಟಿಗೂ ಹೆಚ್ಚು ಭಕ್ತರು ಪ್ರಯಾಗರಾಜ್‌ನಲ್ಲಿರುವ ತ್ರಿವೇಣಿ ಸಂಗಮದ ಪವಿತ್ರ ನೀರಿನಲ್ಲಿ ಸ್ನಾನ ಮಾಡುವ ನಿರೀಕ್ಷೆಯಿದೆ. ಇದೀಗ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಜನವರಿ 27, 2025 ರಂದು ಈ ಫೋಟೋವನ್ನು ಹಂಚಿಕೊಂಡು, ‘‘ಮಹಾ ಕುಂಭಮೇಳದಲ್ಲಿ ಪ್ರಕಾಶ್ ರಾಜ್. ಅಲ್ಲಿ ಪಾಪಕ್ಕೆ ಪ್ರಾಯಶ್ಚಿತ ಇದೆ. ಸನಾತನವೇ ಸತ್ಯ ಸತ್ಯವೇ ಸನಾತನ. ಜೈ ಸನಾತನ ಧರ್ಮ’’ ಎಂದು ಬರೆದುಕೊಂಡಿದ್ದಾರೆ.
ಮಹಾ ಕುಂಭಮೇಳದಲ್ಲಿ ಪ್ರಕಾಶ್ ರಾಜ್ ಸ್ನಾನ ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಫೋಟೋವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಪೋಸ್ಟ್ನ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಇದು ಸುಳ್ಳು ಸುದ್ದಿ ಎಂಬುದು ಕಂಡುಬಂದಿದೆ. ನಟ ಪ್ರಕಾಶ್ ರಾಜ್ ಮಹಾಕುಂಭದಲ್ಲಿ ಸ್ನಾನ ಮಾಡಿಲ್ಲ, ಇದು ಕೃತಕ ಬುದ್ದಿಮತ್ತೆ (ಎಐ) ಯಿಂದ ರಚಿಸಲಾದ ಫೋಟೋ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಗೂಗಲ್ನಲ್ಲಿ ಪ್ರಕಾಶ್ ರಾಜ್ ಮಹಾಕುಂಭ ಮೇಳ ಎಂಬ ಕೀವರ್ಡ್ ಸಹಾಯದಿಂದ ಹುಡುಕಿದ್ದೇವೆ. ಆದರೆ, ಇದಕ್ಕೆ ಸಂಬಂಧಿಸಿದ ಯಾವುದೇ ವರದಿ ನಮಗೆ ಕಂಡುಬಂದಿಲ್ಲ. ಖ್ಯಾತ ನಟನೊಬ್ಬ ಮಹಾಕುಂಭದಲ್ಲಿ ಸ್ನಾನ ಮಾಡಿದ್ದಾರೆ ಎಂದಾದರೆ ಅದು ಸುದ್ದಿ ಆಗಿರುತ್ತಿತ್ತು. ಅಲ್ಲದೆ ಪ್ರಕಾಶ್ ರಾಜ್ ಅವರ ಸಾಮಾಜಿಕ ಮಾಧ್ಯಮ ಖಾತೆಯನ್ನು ಕೂಡ ನೋಡಿದ್ದೇವೆ. ಅಲ್ಲೂ ಅವರು ಮಹಾಕುಂಭಕ್ಕೆ ಹೋದ ಬಗ್ಗೆ ಯಾವುದೇ ಪೋಸ್ಟ್ ಹಂಚಿಕೊಂಡಿಲ್ಲ.
ಹೀಗಾಗಿ ನಾವು ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಇದರಲ್ಲಿ ಪ್ರಕಾಶ್ ರಾಜ್ ಅವರ ದಪ್ಪಗಿರುವಂತೆ ಕಾಣುತ್ತಾರೆ. ಅವರು ಇತ್ತೀಚೆಗೆ ಜನವರಿ 25, 2025 ರಂದು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಫೋಟೋಕ್ಕು ಈ ಫೋಟೋಕ್ಕೂ ಮ್ಯಾಚ್ ಆಗುತ್ತಿಲ್ಲ. ಮಣಿರತ್ನಂ ಅವರ ಜೊತೆ ಹಂಚಿಕೊಂಡ ಫೋಟೋದಲ್ಲಿ ಅವರು ವೈರಲ್ ಫೋಟೋದಲ್ಲಿ ಇರುವುದಕ್ಕಿಂತ ಸಪುರ ಕಾಣುತ್ತಾರೆ.
ಹೀಗಾಗಿ ಈ ಫೋಟೋವನ್ನು ಎಐ ಯಿಂದ ರಚಿಸಿರಬಹುದು ಎಂಬ ಅನುಮಾನ ಮೂಡಿತು. ಹೀಗಾಗಿ ಖಚಿತ ಪಡಿಸಿಕೊಳ್ಳಲು ನಾವು AI ಫೋಟೋಗಳನ್ನು ಗುರುತಿಸುವ hivemoderation ಮತ್ತು sightengine ವೆಬ್ಸೈಟ್ನಲ್ಲಿ ವೈರಲ್ ಚಿತ್ರವನ್ನು ಪರಿಶೀಲಿಸಿದ್ದೇವೆ. ಆಗ ಈ ಫೋಟೋ hivemoderation ನಲ್ಲಿ ಶೇ. 99.4 ರಷ್ಟು ಮತ್ತು sightengine ನಲ್ಲಿ ಶೇ. 96 ರಷ್ಟು AIಯಿಂದ ರಚಿತವಾಗಿದೆ ಎಂದು ತಿಳಿಸಿದೆ.
ಹಾಗೆಯೆ WasItAI ನಲ್ಲಿ ನೋಡಿದಾಗ ಇದು ಕೂಡ ಈ ಫೋಟೋ ಎಐ ಯಿಂದ ಮಾಡಲಾಗಿದೆ ಎಂದು ಹೇಳಿದೆ.
ಹೀಗಾಗಿ ಈ ಮಾಹಿತಿಯ ಆಧಾರದ ಮೇಲೆ ಪ್ರಕಾಶ್ ರಾಜ್ ಅವರು ಮಹಾ ಕುಂಭಮೇಳದಲ್ಲಿ ಸ್ನಾನ ಮಾಡಿದ್ದಾರೆ ಎಂದು ವೈರಲ್ ಆಗುತ್ತಿರುವ ಫೋಟೋ ಎಐ ಯಿಂದ ರಚಿತವಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.