Fact Check: ಜಮ್ಮು-ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಸೇನಾ ವಾಹನ ಅಪಘಾತದ ಎಐ ಫೋಟೋ ವೈರಲ್

ಜನವರಿ 22 ರಂದು, ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಭಾರತೀಯ ಸೇನೆಯ ವಾಹನ ಅಪಘಾತಕ್ಕೀಡಾಗಿತ್ತು. ಹತ್ತು ಸೈನಿಕರು ಹುತಾತ್ಮರಾದರು ಮತ್ತು ಹಲವಾರು ಜನರು ಗಾಯಗೊಂಡರು. ಈ ಘಟನೆಗೆ ಸಂಬಂಧಿಸಿದ ಫೋಟೋವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

By -  Vinay Bhat
Published on : 29 Jan 2026 12:58 PM IST

Fact Check: ಜಮ್ಮು-ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಸೇನಾ ವಾಹನ ಅಪಘಾತದ ಎಐ ಫೋಟೋ ವೈರಲ್
Claim:ಜಮ್ಮು-ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಸೇನಾ ವಾಹನ ಅಪಘಾತ ಆಗಿರುವುದನ್ನು ಫೋಟೋ ತೋರಿಸುತ್ತದೆ.
Fact:ಹಕ್ಕು ಸುಳ್ಳು. ಇದು ಕೃತಕ ಬುದ್ದಿಮತ್ತೆಯಿಂದ ರಚಿಸಿದ ಫೋಟೋ ಆಗಿದೆ.

ಜನವರಿ 22 ರಂದು, ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಭಾರತೀಯ ಸೇನೆಯ ವಾಹನ ಅಪಘಾತಕ್ಕೀಡಾಗಿತ್ತು. ಹತ್ತು ಸೈನಿಕರು ಹುತಾತ್ಮರಾದರು ಮತ್ತು ಹಲವಾರು ಜನರು ಗಾಯಗೊಂಡರು. ಈ ಘಟನೆಗೆ ಸಂಬಂಧಿಸಿದ ಫೋಟೋವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಫೋಟೋದಲ್ಲಿ, ಸೇನಾ ವಾಹನವು ಆಳವಾದ ಕಂದಕಕ್ಕೆ ಬಿದ್ದಿರುವುದನ್ನು ಕಾಣಬಹುದು, ಅದರ ಪಕ್ಕದಲ್ಲಿ ಹಲವಾರು ಸೈನಿಕರಿದ್ದಾರೆ. ಈ ಚಿತ್ರವನ್ನು ದೋಡಾದಲ್ಲಿ ನಡೆದ ಅಪಘಾತವನ್ನು ಚಿತ್ರಿಸುತ್ತದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು, ‘‘ಜಮ್ಮು ಕಾಶ್ಮೀರದ ದೋಡಾ ಪ್ರದೇಶದಲ್ಲಿ ಕಂದಕಕ್ಕೆ ಉರುಳಿ ಸಂಭವಿಸಿದ ಸೇನಾ ವಾಹನ ಅಪಘಾತದಲ್ಲಿ ಭಾರತೀಯ ಸೇನೆಯ ವೀರ ಯೋಧರು ಹುತಾತ್ಮರಾದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಅಮರ ಯೋಧರಿಗೆ ನನ್ನ ಗೌರವಪೂರ್ವಕ ಶ್ರದ್ಧಾಂಜಲಿಗಳನ್ನು ಸಮರ್ಪಿಸುತ್ತೇನೆ. ಮೃತರ ಕುಟುಂಬ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತಾ, ಗಾಯಗೊಂಡ ಯೋಧರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ವೈರಲ್ ಚಿತ್ರವನ್ನು ಕೃತಕ ಬುದ್ಧಿಮತ್ತೆಯನ್ನು ಬಳಸಿ ರಚಿಸಲಾಗಿದೆ ಎಂದು ತಿಳಿದುಬಂದಿದೆ. ಇದು ಅಪಘಾತದ ನಿಜವಾದ ಚಿತ್ರವಲ್ಲ.

ನಿಜಾಂಶವನ್ನು ತಿಳಿಯಲು ನಾವು ಮೊದಲು ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಇದರಲ್ಲಿ ಹಲವಾರು ನ್ಯೂನತೆಗಳಿರುವುದನ್ನು ಗಮನಿಸಿದ್ದೇವೆ. ಉದಾಹರಣೆಗೆ, ಸೇನಾ ಟ್ರಕ್‌ನ ಧ್ವಂಸಗೊಂಡ ಭಾಗದಲ್ಲಿ ಕಂಡುಬರುವ ಸೈನಿಕನ ದೇಹವು ವಿಭಿನ್ನವಾಗಿದೆ. ಇದಲ್ಲದೆ, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಮತ್ತು ರಸ್ತೆಯಲ್ಲಿ ನಿಂತಿರುವ ಜನರ ಅಂಗಗಳು ಸಹ ಅಸಾಮಾನ್ಯವಾಗಿ ಕಾಣುತ್ತವೆ. ಸೇನಾ ಬಸ್​ನ ಹಿಂಭಾಗದಲ್ಲಿ ನಿಂತಿರುವ ಸೈನಿಕರ ಮುಖ ವಿರೂಪಗೊಂಡಿದೆ. ಈ ಅಂಶಗಳನ್ನು ಕಂಡ ನಂತರ, ಇದು AI- ರಚಿತವಾಗಿದೆ ಎಂದು ನಾವು ಅನುಮಾನಿಸಿದ್ದೇವೆ.

ಹೆಚ್ಚಿನ ದೃಢೀಕರಣಕ್ಕಾಗಿ, ನಾವು ಈ ಫೋಟೋವನ್ನು AI ಪತ್ತೆ ಪರಿಕರಗಳೊಂದಿಗೆ ಪರೀಕ್ಷಿಸಿದ್ದೇವೆ. Hive Moderation ನಲ್ಲಿ ಪರೀಕ್ಷಿಸಿದಾಗ ಇದನ್ನು ಶೇ. 98.8 ರಷ್ಟು ಎಐಯಿಂದ ಸೃಷ್ಟಿಸಲಾಗಿದೆ ಎಂದು ಹೇಳಿದೆ. Sightengine ​ನಲ್ಲಿ ಪರೀಕ್ಷಿಸಿದಾಗ ಇದು ಶೇ. 99 ರಷ್ಟು ಎಐಯಿಂದ ರಚಿತವಾಗಿದೆ ಎಂದು ಹೇಳಿದೆ.

ನಾವು ನಮ್ಮ ತನಿಖೆಯ ಸಮಯದಲ್ಲಿ ಜನವರಿ 22 ರ NDTV, India Today ಮತ್ತು ಹಿಂದೂಸ್ಥಾನ್ ಟೈಮ್ಸ್​ನ ವರದಿಯನ್ನು ಗಮನಿಸಿದ್ದೇವೆ. ನಾವು ಘಟನೆಯ ಫೋಟೋ ಮತ್ತು ವೀಡಿಯೊವನ್ನು ಮುಖಪುಟದಲ್ಲಿ ಕಂಡುಕೊಂಡೆವು. ವೈರಲ್ ಚಿತ್ರ ಮತ್ತು ಮೂಲ ಚಿತ್ರದ ನಡುವಿನ ವ್ಯತ್ಯಾಸವನ್ನು ಕೆಳಗಿನ ಕೊಲಾಜ್‌ನಲ್ಲಿ ಕಾಣಬಹುದು.

ಜನವರಿ 22 ರ ಟಿವಿ9 ಕನ್ನಡ ವರದಿಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಭಾರತೀಯ ಸೇನಾ ವಾಹನವೊಂದು ಕಂದಕಕ್ಕೆ ಉರುಳಿದ್ದು, 10 ಮಂದಿ ಸೈನಿಕರು ಸಾವನ್ನಪ್ಪಿದ್ದಾರೆ. 9 ಮಂದಿ ಗಾಯಗೊಂಡಿದ್ದಾರೆ. ವಾಹನವು ರಸ್ತೆಯಿಂದ ಜಾರಿ ಆಳವಾದ ಕಂದಕಕ್ಕೆ ಉರುಳಿಬಿದ್ದಿದೆ. ಭದೇರ್ವಾ-ಚಂಬಾ ಅಂತಾರಾಜ್ಯ ರಸ್ತೆಯ ಖನ್ನಿ ಟಾಪ್‌ನಲ್ಲಿ ಈ ಅಪಘಾತ ಸಂಭವಿಸಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೈರಲ್ ಚಿತ್ರವನ್ನು ಕೃತಕ ಬುದ್ಧಿಮತ್ತೆಯನ್ನು ಬಳಸಿ ರಚಿಸಲಾಗಿದೆ, ಇದು ಅಪಘಾತದ ನಿಜವಾದ ಚಿತ್ರವಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.

Claimed By:Facebook User
Claim Reviewed By:NewsMeter
Claim Source:Social Media
Claim Fact Check:Misleading
Fact:ಹಕ್ಕು ಸುಳ್ಳು. ಇದು ಕೃತಕ ಬುದ್ದಿಮತ್ತೆಯಿಂದ ರಚಿಸಿದ ಫೋಟೋ ಆಗಿದೆ.
Next Story