ಇರಾನ್ ಜೊತೆಗಿನ ಸಂಘರ್ಷದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಳ್ಳುವ ಒಂದು ವೈರಲ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಫೋಟೋದಲ್ಲಿ ಅವರು ಗಾಯಗೊಂಡಿದ್ದಾರೆ ಮತ್ತು ಸೈನಿಕರು ಅವರನ್ನು ಹಿಡಿದುಕೊಂಡಿರುವುದನ್ನು ಕಾಣಬಹುದು.
ಫೇಸ್ಬುಕ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು, ‘‘ವಿಶ್ವಶಾಂತಿಗೆ ಸೈತಾನನಂತೆ ವಕ್ಕರಿಸಿದ ಬೆಂಜಮಿನ್ ನೆತನ್ಯಾಹು ಎಂಬ ಮಕ್ಕಳ ಹಂತಕ ಸತ್ತಿದ್ದಾನೆ ಅಥವಾ ಗಾಯಗೊಂಡಿದ್ದಾನೆಯೆಂಬ ಸುದ್ದಿ ಕೇಳಿಬರುತ್ತಿದೆ.ಸಂತಸದ ಸುದ್ದಿ ಆದಷ್ಟು ಬೇಗ ಧೃಢವಾಗಲಿ. ಜನರು ನೆಮ್ಮದಿಯಿಂದ ಜೀವಿಸುವಂತಾಗಲಿ.’’ ಎಂದು ಬರೆದುಕೊಂಡಿದ್ದಾರೆ. (Archive)
Fact Check
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ನಿಜವಾದ ಫೋಟೋವಲ್ಲ, ಬದಲಾಗಿ ಇದನ್ನು ಕೃತಕ ಬುದ್ದಿಮತ್ತೆ ಸಹಾಯದಿಂದ ರಚಿಸಲಾಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ನೆತನ್ಯಾಹು ಸಾವಿನ ಬಗ್ಗೆ ಹುಡುಕಿದ್ದೇವೆ. ಆದರೆ, ಇದಕ್ಕೆ ಸಂಬಂಧಿಸಿದ ಯಾವುದೇ ವಿಶ್ವಾಸಾರ್ಹ ವರದಿ ಕಂಡುಬಂದಿಲ್ಲ. ಅಲ್ಲದೆ, ಈ ಹೇಳಿಕೆಯನ್ನು ದೃಢೀಕರಿಸುವ ಯಾವುದೇ ಇಸ್ರೇಲಿ ಮಾಧ್ಯಮ ವರದಿಗಳು ಕೂಡ ನಮಗೆ ಕಂಡುಬಂದಿಲ್ಲ.
ಹೆಚ್ಚುವರಿಯಾಗಿ, ಇರಾನ್‌ನ ತಸ್ನಿಮ್ ಸುದ್ದಿ ಸಂಸ್ಥೆ ಮಾರ್ಚ್ 10 ರಂದು ನೆತನ್ಯಾಹು ಅವರ "ಸಂಭವನೀಯ ಸಾವು ಮತ್ತು ಗಾಯದ" ಬಗ್ಗೆ ಊಹಾಪೋಹಗಳಿವೆ ಎಂದು ಹೇಳುವ ಲೇಖನವನ್ನು ಪ್ರಕಟಿಸಿದೆ ಎಂದು ನಾವು ಕಂಡುಕೊಂಡಿದ್ದೇವೆ.
ಬಳಿಕ ನಾವು ಫೋಟೋವನ್ನು ಸೂಕ್ಷ್ಮವಾಗಿ ಗಮಮಿಸಿದ್ದೇವೆ. ಆಗ ಇದರಲ್ಲಿ AI- ರಚಿತವಾದ ವಿಷಯದಲ್ಲಿ ಹೆಚ್ಚಾಗಿ ಕಂಡುಬರುವ ವೈಪರೀತ್ಯಗಳನ್ನು ಗಮನಿಸಿದ್ದೇವೆ. ನೆತನ್ಯಾಹು ಅವರ ಮುಖದ ಮೇಲಿದ್ದ ಗಾಯವು ಅಸ್ವಾಭಾವಿಕ ಮತ್ತು ತುಂಬಾ ಸ್ವಚ್ಛವಾಗಿರುವಂತೆ ಕಂಡಿತು, ಇದು ಚಿತ್ರವನ್ನು ಕುಶಲತೆಯಿಂದ ಮಾಡಿರಬಹುದು ಎಂದು ಸೂಚಿಸುತ್ತದೆ. ಹೆಚ್ಚುವರಿಯಾಗಿ, ನೆತನ್ಯಾಹು ಸುತ್ತಮುತ್ತಲಿನ ಧೂಳು ನೈಜ್ಯವಾಗಿರದಂತೆ ಮಸುಕಾಗುವಂತೆ ಕಾಣಬಹುದು.
ಬಳಿಕ ನಾವು ಎಐ ಫೋಟೋವನ್ನು ಪತ್ತೆ ಹಚ್ಚುವ ಸಾಧನ ಸೈಟ್‌ಎಂಜಿನ್ ಮತ್ತು ವಾಸ್ ಇಟ್ AI ನಲ್ಲಿ ಪರಿಶೀಲಿಸಿದ್ದೇವೆ. ಇದು ಚಿತ್ರವು AI-ರಚಿತವಾಗಿದೆ ಎಂದು ಖಚಿತ ಪಡಿಸಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೈರಲ್ ಚಿತ್ರವು AI- ರಚಿತವಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.