Fact Check: ದೆಹಲಿ ಚುನಾವಣೆಯಲ್ಲಿ ಸೋತ ಬಳಿಕವೂ ತಾಹಿರ್ ಹುಸೇನ್ ಮೆರವಣಿಗೆ ನಡೆಸಿದ್ದಾರೆಯೇ?

2020 ರ ದೆಹಲಿ ಗಲಭೆಗಳಿಗೆ ಸಂಬಂಧಿಸಿದಂತೆ ಜೈಲಿನಲ್ಲಿರುವ ತಾಹಿರ್ ಹುಸೇನ್ ಚುನಾವಣೆಯಲ್ಲಿ ಸೋತಿದ್ದಾರೆ. ಆದರೆ ಇವರಿಗೆ 33 ಸಾವಿರಕ್ಕೂ ಹೆಚ್ಚು ಮತ ಬಂದಿದೆ. ಇದೀಗ ಅವರ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

By Vinay Bhat  Published on  11 Feb 2025 10:09 AM IST
Fact Check: ದೆಹಲಿ ಚುನಾವಣೆಯಲ್ಲಿ ಸೋತ ಬಳಿಕವೂ ತಾಹಿರ್ ಹುಸೇನ್ ಮೆರವಣಿಗೆ ನಡೆಸಿದ್ದಾರೆಯೇ?
Claim: ದೆಹಲಿ ಚುನಾವಣೆಯಲ್ಲಿ ಸೋತ ಬಳಿಕವೂ ತಾಹಿರ್ ಹುಸೇನ್ ಮೆರವಣಿಗೆ ನಡೆಸಿದ್ದಾರೆ.
Fact: ಹಕ್ಕು ದಾರಿತಪ್ಪಿಸುವಂತಿದೆ. ವೈರಲ್ ಆಗುತ್ತಿರುವ ವೀಡಿಯೊ ಚುನಾವಣಾ ಪೂರ್ವ ರ್ಯಾಲಿಯದ್ದಾಗಿದೆ.

ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ಫೆಬ್ರವರಿ 8, 2025 ರಂದು ಘೋಷಿಸಲಾಯಿತು. ವರ್ಷಗಳ ನಂತರ ದೆಹಲಿಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಬಿಜೆಪಿ 48 ಸ್ಥಾನಗಳನ್ನು ಮತ್ತು ಆಮ್ ಆದ್ಮಿ ಪಕ್ಷ 22 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿತ್ತು. ಇದರಲ್ಲಿ ಅಸಾದುದ್ದೀನ್ ಓವೈಸಿ ಅವರ ಪಕ್ಷ AIMIM, ಮುಸ್ತಾಬಾದ್ ಸ್ಥಾನದಿಂದ ತಾಹಿರ್ ಹುಸೇನ್ ಅವರಿಗೆ ಟಿಕೆಟ್ ನೀಡಿತ್ತು. 2020 ರ ದೆಹಲಿ ಗಲಭೆಗಳಿಗೆ ಸಂಬಂಧಿಸಿದಂತೆ ಜೈಲಿನಲ್ಲಿರುವ ತಾಹಿರ್ ಹುಸೇನ್ ಚುನಾವಣೆಯಲ್ಲಿ ಸೋತಿದ್ದಾರೆ. ಆದರೆ ಇವರಿಗೆ 33 ಸಾವಿರಕ್ಕೂ ಹೆಚ್ಚು ಮತ ಬಂದಿದೆ. ಇದೀಗ ಅವರ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ತಾಹಿರ್ ವಾಹನದ ಮೇಲೆ ನಿಂತು ರೋಡ್ ಶೋ ನಡೆಸುತ್ತಿರುವುದು ಕಾಣಬಹುದು. ಇವರ ಹೊತೆ ಅನೇಕ ಬೆಂಬಲಿಗರು ಸುತ್ತುವರೆದಿದ್ದಾರೆ. ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ದೆಹಲಿ ಗಲಭೆ ಆರೋಪಿ ತಾಹಿರ್ ಹುಸೇನ್‌ಗೆ ಮುಸ್ತಫಾಬಾದ್‌ನ ಜನರು 30 ಸಾವಿರ ಮತಗಳನ್ನು ನೀಡಿದ್ದಾರೆ ಮತ್ತು ಅವನು ಸೋತ ನಂತರವೂ ಮೆರವಣಿಗೆ ನಡೆಸುತ್ತಿದ್ದಾರೆ. ಇದು ಇಡೀ ಭಾರತವನ್ನು ತಮ್ಮತ್ತ ನೋಡುವಂತೆ ತನ್ನ ಶಕ್ತಿಯನ್ನು ಪ್ರದರ್ಶಿಸಲು ನಡೆಸುತ್ತಿರುವ ಬಿಲ್ಡಪ್ ಕಾರ್ಯಗಳೆನ್ನಿಸುತ್ತವೆ. ಇವನ್ನೆಲ್ಲಾ ನೋಡಿದ ಮೇಲೆ ದೇಶದ ಕಾನೂನು ವ್ಯವಸ್ಥೆಯನ್ನು ಇನ್ನೂ ಹೆಚ್ಚು ಕಠಿಣವಾಗಿ ಮಾಡ್ಬೇಕು ಎಂದು ಅರ್ಥವಾಗ್ತಿದೆ’’ ಎಂದು ಬರೆದುಕೊಂಡಿದ್ದಾರೆ. (ಆರ್ಕೈವ್ )

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಈ ಹೇಳಿಕೆ ದಾರಿತಪ್ಪಿಸುವಂತಿದೆ ಎಂದು ಕಂಡುಬಂದಿದೆ. ವೈರಲ್ ಆಗುತ್ತಿರುವ ವೀಡಿಯೊ ಚುನಾವಣಾ ಪೂರ್ವ ರ್ಯಾಲಿಯದ್ದಾಗಿದ್ದು, ಸುಪ್ರೀಂ ಕೋರ್ಟ್ ಹುಸೇನ್ ಅವರಿಗೆ ಜನವರಿ 29 ರಿಂದ ಫೆಬ್ರವರಿ 3 ರವರೆಗೆ ಚುನಾವಣಾ ಪ್ರಚಾರಕ್ಕಾಗಿ ಕಸ್ಟಡಿ ಪೆರೋಲ್ ನೀಡಿತ್ತು. ಈ ಪೆರೋಲ್ ಅವಧಿ ಮುಗಿದ ನಂತರ, ಹುಸೇನ್ ಮತ್ತೆ ಜೈಲಿಗೆ ತೆರಳಿದ್ದು, ಪ್ರಸ್ತುತ ಅವರು ಜೈಲಿನಲ್ಲಿದ್ದಾರೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಅನೇಕ ಸಾಮಾಜಿಕ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿರುವುದು ಕಂಡುಬಂದಿದೆ. ಈ ಪೈಕಿ ಎಕ್ಸ್-ಬಳಕೆದಾರರೊಬ್ಬರು ಚುನಾವಣಾ ಫಲಿತಾಂಶ ಪ್ರಕಟವಾಗುವ ಹಿಂದಿನ ದಿನ, ಫೆಬ್ರವರಿ 7 ರಂದು ಇದೇ ವೈರಲ್ ವೀಡಿಯೊವನ್ನು ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ‘‘ನನ್ನ ಎಲ್ಲಾ ಸಹೋದರರೇ, ಪ್ರಾರ್ಥಿಸಿ.. ದಯವಿಟ್ಟು ಪ್ರಾರ್ಥಿಸಿ.. ಇನ್ಶಾ ಅಲ್ಲಾಹ್ ನಾವು ಮುಸ್ತಾಬಾದ್ ಮತ್ತು ಓಖ್ಲಾ ಎರಡೂ ಸ್ಥಾನಗಳನ್ನು ಗೆಲ್ಲುತ್ತೇವೆ’’ ಎಂದು ಶೀರ್ಷಿಕೆ ನೀಡಿದ್ದಾರೆ.

ಹಾಗೆಯೆ ಮತ್ತೊಬ್ಬ ಎಕ್ಸ್ ಬಳಕೆದಾರ ಇದೇ ವೀಡಿಯೊವನ್ನು ಫೆಬ್ರವರಿ 6 ರಂದು ಅಂದರೆ ಚುನಾವಣಾ ಫಲಿತಾಂಶ ಪ್ರಕಟವಾಗುವ ಎರಡು ದಿನಗಳ ಮೊದಲು ಟ್ವೀಟ್ ಮಾಡಿದ್ದು, ‘‘ನಿಮ್ಮೆಲ್ಲರ ಪ್ರಾರ್ಥನೆ ಅಗತ್ಯವಿದೆ.. ನನ್ನ ಎಲ್ಲಾ ಸಹೋದರರೇ, ಪ್ರಾರ್ಥಿಸಿ..’’ ಎಂದು ಬರೆದುಕೊಂಡಿದ್ದಾರೆ.

ಚುನಾವಣ ಫಲಿತಾಂಶ ಪ್ರಕಟವಾಗುವುದಕ್ಕೂ ಇದೇ ವೀಡಿಯೊ ಸಾಮಾಜಿಕ ತಾಣಗಳಲ್ಲಿ ಅಪ್ಲೋಡ್ ಆಗಿರುವುದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

ಇನ್ನು hajitahirhussainaimim ಇನ್‌ಸ್ಟಾಗ್ರಾಮ್ ಪ್ರೊಫೈಲ್ ಕೂಡ ವೈರಲ್ ವೀಡಿಯೊದಂತೆಯೇ ಇರುವ ಹಲವಾರು ವೀಡಿಯೊಗಳನ್ನು ಹಂಚಿಕೊಂಡಿದೆ. ಫೆಬ್ರವರಿ 3 ರಂದು ಹಂಚಿಕೊಳ್ಳಲಾದ ಇದೇ ರೀತಿಯ ವೀಡಿಯೊದಲ್ಲಿ, ತಾಹಿರ್ ಹುಸೇನ್ ಪ್ರಚಾರದ ನಂತರ ಜೈಲಿಗೆ ಹಿಂತಿರುಗುವ ಮೊದಲು ತೆಗೆದ ವೀಡಿಯೊ ಎಂದು ಹೇಳಲಾಗಿದೆ.

ಇನ್ನು ABPLive ಫೆಬ್ರವರಿ 3, 2025 ರಂದು ಪ್ರಕಟಿಸಿರುವ ವರದಿಗಳ ಪ್ರಕಾರ, ದೆಹಲಿ ಚುನಾವಣಾ ಪ್ರಚಾರದ ಕೊನೆಯ ದಿನವಾದ ಫೆಬ್ರವರಿ 3 ರಂದು, ತಾಹಿರ್ ಹುಸೇನ್ ಮುಸ್ತಾಬಾದ್‌ನಲ್ಲಿ ರೋಡ್ ಶೋ ನಡೆಸಿದರು. ಇದು ಅವರ ಕಸ್ಟಡಿ ಪೆರೋಲ್‌ನ ಕೊನೆಯ ದಿನವೂ ಆಗಿತ್ತು ಎಂದು ಹೇಳಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಚುನಾವಣೆಯಲ್ಲಿ ಸೋತ ಬಳಿಕವೂ ತಾಹಿರ್ ಹುಸೇನ್ ಮೆರವಣಿಗೆ ಮಾಡಿದ್ದಾರೆ ಎಂದು ಹೇಳಲಾಗುತ್ತಿರುವ ಪೋಸ್ಟ್ ದಾರಿತಪ್ಪಿಸುವಂತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ. ಇದು ಚುನಾವಣಾ ಪೂರ್ವ ರ್ಯಾಲಿಯ ವೀಡಿಯೊ ಆಗಿದೆ.

Claim Review:ದೆಹಲಿ ಚುನಾವಣೆಯಲ್ಲಿ ಸೋತ ಬಳಿಕವೂ ತಾಹಿರ್ ಹುಸೇನ್ ಮೆರವಣಿಗೆ ನಡೆಸಿದ್ದಾರೆ.
Claimed By:Facebook User
Claim Reviewed By:NewsMeter
Claim Source:Social Media
Claim Fact Check:Misleading
Fact:ಹಕ್ಕು ದಾರಿತಪ್ಪಿಸುವಂತಿದೆ. ವೈರಲ್ ಆಗುತ್ತಿರುವ ವೀಡಿಯೊ ಚುನಾವಣಾ ಪೂರ್ವ ರ್ಯಾಲಿಯದ್ದಾಗಿದೆ.
Next Story