Fact Check: ಬುರ್ಜ್ ಖಲೀಫಾ ಮೇಲೆ ಇರಾನ್​ನಿಂದ ಏರ್ ಸ್ಟ್ರೈಕ್?, ವೈರಲ್ ವೀಡಿಯೊದ ಸತ್ಯ ಇಲ್ಲಿದೆ

ಮಿಲಿಟರಿ ಘರ್ಷಣೆಗಳ ಮಧ್ಯೆ, ಯುಎಇಯ ದುಬೈನಲ್ಲಿರುವ ಬುರ್ಜ್ ಖಲೀಫಾ ಗೋಪುರದ ಮೇಲೆ ಏರ್ ಸ್ಟ್ರೈಕ್ ನಡೆದಿದೆ ಎಂದು ಹೇಳಲಾಗುತ್ತಿರುವ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಉದ್ದನೆಯ ಬಿಲ್ಡಿಂಗ್ಗೆ ಬೆಂಕಿ ತಗುಲಿರುವುದನ್ನು ಕಾಣಬಹುದು.

By -  Vinay Bhat
Published on : 3 March 2026 11:00 AM IST

Fact Check: ಬುರ್ಜ್ ಖಲೀಫಾ ಮೇಲೆ ಇರಾನ್​ನಿಂದ ಏರ್ ಸ್ಟ್ರೈಕ್?, ವೈರಲ್ ವೀಡಿಯೊದ ಸತ್ಯ ಇಲ್ಲಿದೆ
Claim:ಇರಾನ್ ಬುರ್ಜ್ ಖಲೀಫಾ ಮೇಲೆ ಏರ್ ಸ್ಟ್ರೈಕ್ ಮಾಡಿರುವುದನ್ನು ವೀಡಿಯೊ ತೋರಿಸುತ್ತದೆ.
Fact:ಹಕ್ಕು ಸುಳ್ಳು. ಇದು ಎಐ ರಚಿತ ವೀಡಿಯೊ ಆಗಿದೆ.

ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ಮೇಲೆ ಯುದ್ಧ ನಡೆಸುತ್ತಿವೆ. ಇರಾನ್ ಕೂಡ ಪ್ರತಿದಾಳಿ ನಡೆಸುತ್ತಿವೆ. ಗಲ್ಫ್ ಪ್ರದೇಶದಲ್ಲಿರುವ ಹೆಚ್ಚಿನ ದೇಶಗಳ ಪ್ರಮುಖ ಸ್ಥಳಗಳನ್ನು ಇರಾನ್ ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿದೆ. ಈ ಮಿಲಿಟರಿ ಘರ್ಷಣೆಗಳ ಮಧ್ಯೆ, ಯುಎಇಯ ದುಬೈನಲ್ಲಿರುವ ಬುರ್ಜ್ ಖಲೀಫಾ ಗೋಪುರದ ಮೇಲೆ ಏರ್ ಸ್ಟ್ರೈಕ್ ನಡೆದಿದೆ ಎಂದು ಹೇಳಲಾಗುತ್ತಿರುವ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ ಉದ್ದನೆಯ ಬಿಲ್ಡಿಂಗ್​​ಗೆ ಬೆಂಕಿ ತಗುಲಿರುವುದನ್ನು ಕಾಣಬಹುದು.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬುರ್ಜ್ ಖಾಲಿಫಾ ಮೇಲೆ ಏರ್ ಸ್ಟ್ರೈಕ್ ಭಾರಿ ಅನಾಹುತ ಬೆಚ್ಚಿ ಬಿದ ಜನತೆ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಬುರ್ಜ್ ಖಲೀಫಾ ಮೇಲೆ ಅಂತಹ ಯಾವುದೇ ದಾಳಿ ನಡೆದಿಲ್ಲ, ಈ ವೀಡಿಯೊವನ್ನು ಕೃತಕ ಬುದ್ದಿಮತ್ತೆಯಿಂದ ರಚಿಸಲಾಗಿದೆ.

ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ "ಬೆಂಕಿ" ಮತ್ತು "ಬುರ್ಜ್ ಖಲೀಫಾ" ಎಂಬ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್​ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಬುರ್ಜ್ ಖಲೀಫಾ ವಿಶ್ವದ ಅತಿ ಎತ್ತರದ ಗಗನಚುಂಬಿ ಕಟ್ಟಡಗಳಲ್ಲಿ ಒಂದಾಗಿದೆ. ಹೀಗಿರುವಾಗ ಈ ಕಟ್ಟಡಕ್ಕೆ ಹಾನಿಯಾಗಿದ್ದರೆ ಅದು ಖಂಡಿತವಾಗಿಯೂ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿರುತ್ತಿತ್ತು. ಆದರೆ, ಇದನ್ನು ದೃಢೀಕರಿಸುವ ವಿಶ್ವಾಸಾರ್ಹ ಮಾಧ್ಯಮಗಳು ನಮಗೆ ಎಲ್ಲೂ ಕಂಡುಬಂದಿಲ್ಲ.

ಬಳಿಕ ನಾವು ವೈರಲ್ ವೀಡಿಯೊವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದೇವೆ. ಈ ಸಂದರ್ಭ ಇದರಲ್ಲಿ ನೈಜ್ಯತೆಗೆ ದೂರವಾದ ಅನೇಕ ಅಂಶಗಳು ಕಂಡುಬಂದವು. ಕ್ಲಿಪ್‌ನಲ್ಲಿ ಕಾಣಿಸಿಕೊಳ್ಳುವ ಕೆಲವು ಜನರ ತೋಳುಗಳು ಮತ್ತು ದೇಹಗಳ ಮೇಲೆ ಕೃತಕ ಬುದ್ಧಿಮತ್ತೆಯನ್ನು ಬಳಸಿದ ಉದಾಹರಣೆಗಳನ್ನು ತೋರಿಸುತ್ತದೆ. ಉದಾಹರಣೆಗೆ, ಒಬ್ಬರಿಗೆ ಹೆಚ್ಚುವರಿ ತೋಳು ಇದ್ದರೆ, ಇನ್ನು ಕೆಲವರು ಪರಸ್ಪರ ಹತ್ತಿರ ನಡೆಯುವಾಗ ವಿಲೀನಗೊಳ್ಳುತ್ತಾರೆ, ಕೆಲವರು ಕಣ್ಮರೆಯಾಗುತ್ತಾರೆ. ಅಲ್ಲದೆ ವೀಡಿಯೊದಲ್ಲಿ ಉರಿಯುತ್ತಿರುವ ಬೆಂಕಿ ಕೂಡ ವಿಚಿತ್ರವಾಗಿ ಕಾಣುತ್ತದೆ. ಇದೆಲ್ಲ ಎಐ ವೀಡಿಯೊದ ಲಕ್ಷಣಗಳಾಗಿವೆ.

ಈ ಸೂಚನೆಗಳನ್ನು ಗಣನೆಗೆ ತೆಗೆದುಕೊಂಡು, ನಾವು ಎಐ ವೀಡಿಯೊವನ್ನು ಪತ್ತೆ ಹಚ್ಚುವ ಹೈವ್ ಮಾಡರೇಶನ್ ಉಪಕರಣವನ್ನು ಬಳಸಿಕೊಂಡು ಪರೀಕ್ಷಿಸಿದ್ದೇವೆ. ಇದು ಈ ವೀಡಿಯೊ ಶೇ. 99 ರಷ್ಟು ಎಐಯಿಂದ ರಚಿಸಲಾಗಿದೆ ಎಂದು ಹೇಳಿದೆ. ಸೈಟ್ ಎಂಜಿನ್ ಹಾಗೂ WasitAI ಕೂಡ ಇದನ್ನು ಎಐಯಿಂದ ರಚಿಸಲಾಗಿದೆ ಎಂದು ಖಚಿತಪಡಿಸಿದೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಬುರ್ಜ್ ಖಲೀಫಾ ಮೇಲೆ ಇರಾನ್​ ಏರ್ ಸ್ಟ್ರೈಕ್ ನಡೆಸಿದೆ ಎಂದು ವೈರಲ್ ಆಗುತ್ತಿರುವ ವೀಡಿಯೊ ಸುಳ್ಳು ಮತ್ತು ಇದನ್ನು ಎಐಯಿಂದ ರಚಿಸಲಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.
Claim Review:ಇರಾನ್ ಬುರ್ಜ್ ಖಲೀಫಾ ಮೇಲೆ ಏರ್ ಸ್ಟ್ರೈಕ್ ಮಾಡಿರುವುದನ್ನು ವೀಡಿಯೊ ತೋರಿಸುತ್ತದೆ.
Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಹಕ್ಕು ಸುಳ್ಳು. ಇದು ಎಐ ರಚಿತ ವೀಡಿಯೊ ಆಗಿದೆ.
Next Story