Fact Check: ಮಹಾಕುಂಭದಲ್ಲಿ ಅಖಿಲೇಶ್ ಯಾದವ್ ಶಾಹಿ ಸ್ನಾನ ಮಾಡಿದ್ದು ನಿಜವೇ, ಇಲ್ಲ ಇದು ಗಂಗಾ ಸ್ನಾನ
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಶಾಹಿ ಸ್ನಾನ ಮಾಡಿದರು ಎಂದು ಕೆಲ ಬಳಕೆದಾರರು ಈ ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ.
By Vinay Bhat Published on 16 Jan 2025 9:26 PM ISTClaim: ಅಖಿಲೇಶ್ ಯಾದವ್ ಕುಂಭಮೇಳದಲ್ಲಿ ಶಾಹೀ ಸ್ನಾನ ಮಾಡಿದ್ದಾರೆ.
Fact: ಅಖಿಲೇಶ್ ಯಾದವ್ ಅವರು ಜನವರಿ 14, 2025 ರಂದು ಹರಿದ್ವಾರದಲ್ಲಿ ಗಂಗಾ ಸ್ನಾನ ಮಾಡಿದ ಫೋಟೋ ಇದಾಗಿದೆ.
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನವರಿ 13 ರಿಂದ ಆರಂಭವಾಗಿರುವ ಮಹಾಕುಂಭ ಮೇಳೆ ಅದ್ಧೂರಿಯಾಗಿ ಸಾಗುತ್ತಿದೆ. ಮಕರ ಸಂಕ್ರಮಣದ ಪುಣ್ಯದಿನದಂದು ಮಹಾ ಕುಂಭಮೇಳದ ಮೊದಲ ಶಾಹಿ ಸ್ನಾನ (ಅಮೃತ ಸ್ನಾನ) ಮಂಗಳವಾರ ಸಂಪನ್ನಗೊಂಡಿತು. ಈ ದಿನ ಸುಮಾರು 3.5 ಕೋಟಿ ಭಕ್ತರು ಶಾಹಿಸ್ನಾನ ಮಾಡಿದ್ದಾರೆಂದು ಕುಂಭಮೇಳ ಆಡಳಿತ ಮಾಹಿತಿ ನೀಡಿದೆ. ಮೈ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ಲಕ್ಷಾಂತರ ಸಂಖ್ಯೆಯ ಜನರು ಬುಧವಾರವೂ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಇದರ ನಡುವೆ ಫೋಟೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ನೀರಿನಲ್ಲಿ ನಿಂತಿರುವುದನ್ನು ಕಾಣಬಹುದು. ಮಹಾಕುಂಭದಲ್ಲಿ ಅಖಿಲೇಶ್ ಯಾದವ್ ಶಾಹಿ ಸ್ನಾನ ಮಾಡಿದರು ಎಂದು ಕೆಲ ಬಳಕೆದಾರರು ಈ ಫೋಟೋವನ್ನು ಹಂಚಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು, ‘‘ಕುಂಭಮೇಳದ ಶಾಹೀ ಸ್ನಾನಕ್ಕೆ ಬಂದ್ರೆ ಯಾರಿಗೂ ಗೊತ್ತಾಗಲ್ಲ ಅಂತ ಅನ್ಕೊಂಡಿದಿಯಾ ಅಖಿಲೇಶ್ ಯಾದವ್’’ ಎಂದು ಬರೆದುಕೊಂಡಿದ್ದಾರೆ. ಹಾಗೆಯೆ ಇನ್ನೊಬ್ಬ ಬಳಕೆದಾರ ‘‘ಯೋಗಿ ಎಫೆಕ್ಟ್; ಅಖಿಲೇಶ್ ಯಾದವ್ ಇನ್ ಕುಂಭಮೇಳ’’ ಎಂದಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ಫೋಟೋವನ್ನು ಕೆಲ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ ಎಂಬುದು ಕಂಡುಬಂದಿದೆ. ಈ ಫೋಟೋಕ್ಕೂ ಮಹಾಕುಂಭಕ್ಕೂ ಯಾವುದೇ ಸಂಬಂಧವಿಲ್ಲ. ಅಖಿಲೇಶ್ ಯಾದವ್ ಅವರು ಜನವರಿ 14, 2025 ರಂದು ಹರಿದ್ವಾರದಲ್ಲಿ ಗಂಗಾ ಸ್ನಾನ ಮಾಡಿದ ಫೋಟೋ ಇದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ಫೋಟೋವನ್ನು ಗೂಗಲ್ ಲೆನ್ಸ್ ಸಹಾಯದಿಂದ ಸರ್ಚ್ ಮಾಡಿದ್ದೇವೆ. ಆಗ ಅಖಿಲೇಶ್ ಯಾದವ್ ಅವರ ಎಕ್ಸ್ ಖಾತೆಯಲ್ಲಿ ಇದೇ ಫೋಟೋ ಅಪ್ಲೋಡ್ ಆಗಿರುವು ಕಂಡುಬಂತು. ಈ ವೈರಲ್ ಫೋಟೋದ ಜೊತೆಗೆ ಇನ್ನೆರಡು ಫೋಟೋವನ್ನು ಕೂಡ ಅವರು ಜನವರಿ 14, 2025 ರಂದು ಹಂಚಿಕೊಂಡಿದ್ದಾರೆ. ಇದಕ್ಕೆ ‘‘ಮಕರ ಸಂಕ್ರಾಂತಿಯ ಪವಿತ್ರ ಹಬ್ಬದಂದು ಗಂಗಾ ಮಾತೆಯ ಆಶೀರ್ವಾದ ಪಡೆದರು’’ ಎಂಬ ಕ್ಯಾಪ್ಶನ್ ನೀಡಲಾಗಿದೆ.
मकर संक्रांति के पावन पर्व पर लिया माँ गंगा का आशीर्वाद। pic.twitter.com/Rx1ZRHsH7m
— Akhilesh Yadav (@yadavakhilesh) January 14, 2025
ಈ ಮಾಹಿತಿಯ ಆಧಾರದ ಮೇಲೆ ನಾವು ಗೂಗಲ್ನಲ್ಲಿ ‘ಅಖಿಲೇಶ್ ಯಾದವ್ ಗಂಗಾ ಸ್ನಾನ’ ಎಂಬ ಕೀವರ್ಡ್ ಬಳಸಿ ಸರ್ಚ್ ಮಾಡಿದ್ದೇವೆ. ಈ ಸಂದರ್ಭ NDTV ‘‘ಅಖಿಲೇಶ್ ಯಾದವ್ ಮಕರ ಸಂಕ್ರಾಂತಿಯಂದು ಗಂಗಾದಲ್ಲಿ ಪವಿತ್ರ ಸ್ನಾನ ಮಾಡಿದರು’’ ಎಂಬ ಶೀರ್ಷಿಕೆ ನೀಡಿ ಜನವರಿ 14, 2025 ರಂದು ಇದೇ ವೈರಲ್ ಫೋಟೋದೊಂದಿಗೆ ಸುದ್ದಿ ಪ್ರಕಟಿಸಿರುವುದು ನಮಗೆ ಕಂಡಿದೆ. ‘‘ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಮಂಗಳವಾರ ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಹರಿದ್ವಾರದಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡಿದರು. ಈ ಕುರಿತು ಅವರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಸ್ಥಳವನ್ನು ಬಹಿರಂಗಪಡಿಸದಿದ್ದರೂ, ಅವರು ಹರಿದ್ವಾರದಲ್ಲಿ ಸ್ನಾನ ಮಾಡಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ’’ ಎಂಬುದನ್ನು NDTV ಬರೆದಿದೆ.
ಹಾಗೆಯೆ Aamar Ujala ಕೂಡ ವೈರಲ್ ಫೋಟೋದ ಜೊತೆ ಜನವರಿ 14, 2025 ರಂದು ಅಖಿಲೇಶ್ ಯಾದವ್ ಅವರು ಮಕರ ಸಂಕ್ರಾಂತಿಯ ಸಂದರ್ಭ ಹರಿದ್ವಾರದಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡಿದರು ಎಂದು ಹೇಳಿದೆ. ‘‘ಇದು ಅಖಿಲೇಶ್ ಅವರ ವೈಯಕ್ತಿಕ ಭೇಟಿಯಾಗಿದ್ದು, ಹರಿದ್ವಾರದ ಸ್ಥಳೀಯ ಪಕ್ಷದ ಕಾರ್ಯಕರ್ತರಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲ. ಪ್ರವಾಸದ ನಂತರ, ಅವರು ತಮ್ಮ ಫೋಟೋವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅಖಿಲೇಶ್ ಹರಿದ್ವಾರದ ವಿಐಪಿ ಘಾಟ್‌ನಲ್ಲಿ ಗಂಗಾದಲ್ಲಿ ಸ್ನಾನ ಮಾಡುತ್ತಿರುವುದು ಕಂಡುಬಂದಿದೆ’’ ಎಂದು ಬರೆಯಲಾಗಿದೆ.
ಜನವರಿ 14, 2025 ರಂದು ಅಖಿಲೇಶ್ ಯಾದವ್ ಅವರು ಮಕರ ಸಂಕ್ರಾಂತಿಯ ಸಂದರ್ಭ ಹರಿದ್ವಾರದಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡಿದರು ಎಂದು ಸುದ್ದಿ ಪ್ರಕಟ ಆಗಿರುವುದನ್ನು ಇಲ್ಲಿ, ಇಲ್ಲಿ ನೋಡಬಹುದು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಅಖಿಲೇಶ್ ಯಾದವ್ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಸ್ನಾನ ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಪೋಸ್ಟ್ ನಕಲಿ ಎಂದು ನಾವು ಖಚಿತವಾಗಿ ಹೇಳುತ್ತೇವೆ.