ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಪರಿಸ್ಥಿತಿಯ ನಡುವೆ, ಭಾರತೀಯ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಯುದ್ಧ ವಿಮಾನಗಳು ಪ್ರಯಾಣಿಕ ವಿಮಾನವನ್ನು ಭಾರತೀಯ ಗಡಿಗೆ ಕರೆದೊಯ್ಯುತ್ತಿವೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.
12 ಸೆಕೆಂಡುಗಳಷ್ಟು ಉದ್ದವಿರುವ ಈ ವೈರಲ್ ವೀಡಿಯೊದಲ್ಲಿ, ಯುದ್ಧ ವಿಮಾನವು ವಿಮಾನಕ್ಕೆ ಬೆಂಗಾವಲು ನೀಡುವುದನ್ನು ತೋರಿಸುತ್ತದೆ. ನಂತರ ಜೆಟ್ ತಿರುಗುತ್ತದೆ. ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಭಾರತೀಯರಿದ್ದ ವಿಮಾನವನ್ನು ಭಾರತದ ಗಡಿಯವರೆಗೆ ಬಂದು ಬಿಟ್ಟು ಹೋದ ಅಮೆರಿಕಾದ ಯುದ್ಧ ವಿಮಾನ. ಮೋದೀಜೀ ಇದ್ದರೆ ಎಲ್ಲವೂ ಸಾಧ್ಯ’’ ಎಂದು ಬರೆದುಕೊಂಡಿದ್ದಾರೆ. (Archive)
Fact Check
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಫೆಬ್ರವರಿ 23 ರದ್ದಾಗಿದ್ದು, ಎರಡು ಡಚ್ ವಾಯುಪಡೆಯ ಫೈಟರ್ ಜೆಟ್‌ಗಳು ಚಳಿಗಾಲದ ಒಲಿಂಪಿಕ್ಸ್‌ನಿಂದ ಹಿಂತಿರುಗುತ್ತಿದ್ದ ಡಚ್ ತಂಡವನ್ನು ಬೆಂಗಾವಲು ಮಾಡುತ್ತಿರುವುದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀಫ್ರೇಮ್‌ಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ, ಫೆಬ್ರವರಿ 23 ರಂದು ನೆದರ್ಲ್ಯಾಂಡ್ಸ್ ಒಲಿಂಪಿಕ್ ತಂಡದೊಂದಿಗೆ ಸಂಬಂಧ ಹೊಂದಿರುವ ಎರಿಕ್ ವಿಂಕ್ ಅವರ ಇನ್‌ಸ್ಟಾಗ್ರಾಮ್ ಖಾತೆಗೆ ಅಪ್‌ಲೋಡ್ ಮಾಡಲಾದ ಅದೇ ವೈರಲ್ ವೀಡಿಯೊವನ್ನು ಕಂಡುಕೊಂಡಿದ್ದೇವೆ. ವೀಡಿಯೊದ ಜೊತೆಗಿನ ಶೀರ್ಷಿಕೆಯು ನೆದರ್ಲ್ಯಾಂಡ್ಸ್ ತಂಡವನ್ನು ಮನೆಗೆ ಹಿಂತಿರುಗಿಸಲಾಗುತ್ತಿದೆ ಎಂದು ಹೇಳಿಕೊಂಡಿದೆ.
ವೀಡಿಯೊದಲ್ಲಿರುವ ಪ್ರಯಾಣಿಕ ವಿಮಾನದ ಮೇಲೆ KLM ಏರ್ಲೈನ್ಸ್ (ಡಚ್ ಏರ್ಲೈನ್ಸ್) ಲೋಗೋವನ್ನು ಕಾಣಬಹುದು. ಹೀಗಾಗಿ ನಾವು KLM ನ ಇನ್‌ಸ್ಟಾಗ್ರಾಮ್ ಖಾತೆಯನ್ನು ಹುಡುಕಿದ್ದೇವೆ. ಆಗ ಫೆಬ್ರವರಿ 23 ರಂದು ಮಾಡಿದ ಪೋಸ್ಟ್‌ಗಳಲ್ಲಿ ವೈರಲ್ ವೀಡಿಯೊಗೆ ಸಂಬಂಧಿಸಿದ ಹಲವಾರು ಚಿತ್ರಗಳು ಕಂಡುಬಂದಿವೆ.
ಮಿಲನ್‌ನಲ್ಲಿ ನಡೆದ 2026 ರ ಚಳಿಗಾಲದ ಕ್ರೀಡಾಕೂಟ ಮುಗಿದ ನಂತರ ಮನೆಗೆ ಹಿಂದಿರುಗುತ್ತಿದ್ದ ಕೆಲವು ಕ್ರೀಡಾಪಟುಗಳ ಹಾರಾಟಕ್ಕೆ ನೆದರ್ಲ್ಯಾಂಡ್ಸ್ ವಾಯುಪಡೆಯ ಎರಡು F-35 ವಿಮಾನಗಳು ಬೆಂಗಾವಲು ನೀಡಿದ್ದವು ಎಂದು ಪೋಸ್ಟ್‌ನಲ್ಲಿರುವ ಶೀರ್ಷಿಕೆ ಹೇಳುತ್ತದೆ.
ಈ ಸಮಯದಲ್ಲಿ, ಫೆಬ್ರವರಿ 23 ರಂದು ನೆದರ್ಲ್ಯಾಂಡ್ಸ್ ತಂಡದ ಇನ್‌ಸ್ಟಾಗ್ರಾಮ್ಖಾತೆಯಿಂದ ಮತ್ತು ಫೆಬ್ರವರಿ 24 ರಂದು ವಾಯುಪಡೆಯ ಇನ್‌ಸ್ಟಾಗ್ರಾಮ್ ಖಾತೆಯಿಂದ ಮಾಡಿದ ಪೋಸ್ಟ್‌ಗಳಲ್ಲಿ ವೈರಲ್ ವೀಡಿಯೊಗೆ ಸಂಬಂಧಿಸಿದ ದೃಶ್ಯಗಳನ್ನು ನಾವು ಕಂಡುಕೊಂಡಿದ್ದೇವೆ.
ಫೆಬ್ರವರಿ 23 ರಂದು ಡಚ್ ವೆಬ್‌ಸೈಟ್ Luchtvaart Nieuws ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಇಟಲಿಯ ಮಿಲನ್‌ನಿಂದ ಹಿಂತಿರುಗುತ್ತಿದ್ದ ಚಳಿಗಾಲದ ಒಲಿಂಪಿಕ್ ತಂಡದ ವಿಮಾನವು ಡಚ್ ವಾಯುಪ್ರದೇಶವನ್ನು ಪ್ರವೇಶಿಸಿದಾಗ, ಅವರನ್ನು F-35 ವಿಮಾನಗಳು ಸ್ವಾಗತಿಸಿದವು ಮತ್ತು ಫೈಟರ್ ಜೆಟ್‌ನ ಪೈಲಟ್ ಕಾಕ್‌ಪಿಟ್‌ನಿಂದ ತಂಡವನ್ನು ಅಭಿನಂದಿಸಿದರು.
ತನಿಖೆಯ ಸಮಯದಲ್ಲಿ ನಾವು, ಯುಎಇ ವಾಯುಪಡೆಯು ಯುಎಇಯಿಂದ ಭಾರತಕ್ಕೆ ವಿಮಾನಗಳಿಗೆ ಬೆಂಗಾವಲು ನೀಡಿದೆಯೇ ಎಂದು ಹುಡುಕಿದ್ದೇವೆ. ಆದರೆ ಈ ಬಗ್ಗೆ ನಮಗೆ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಭಾರತೀಯ ಗಡಿಗೆ ಪ್ರಯಾಣಿಕ ವಿಮಾನವನ್ನು ಫೈಟರ್ ಜೆಟ್ ಬೆಂಗಾವಲು ಮಾಡುವುದನ್ನು ತೋರಿಸುವ ವೈರಲ್ ವೀಡಿಯೊ ನೆದರ್‌ಲ್ಯಾಂಡ್ಸ್‌ನಿಂದ ಬಂದಿದ್ದು, ಇತ್ತೀಚಿನ ಇರಾನ್-ಇಸ್ರೇಲ್ ಯುದ್ಧಕ್ಕೂ ಹಿಂದಿನದು ಎಂದು ನಾವು ಖಚಿತವಾಗಿ ಹೇಳುತ್ತೇವೆ.