Fact Check: ಪಂಜಾಬ್​ನ ಪ್ರವಾಹ ಪೀಡಿತ ಪ್ರದೇಶಗಳಿಗೆ ಅಮಿತ್ ಶಾ ಭೇಟಿ ಎಂದು ಜಮ್ಮುವಿನ ವೀಡಿಯೊ ವೈರಲ್

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಅಮಿತ್ ಶಾ ಅವರು ಪ್ರವಾಹ ಪೀಡಿತ ಪಂಜಾಬ್‌ಗೆ ತಲುಪಿದ್ದಾರೆ, ಆದರೆ, ಅವರ ಭೇಟಿಯ ವೇಳೆ ಅಲ್ಲಿ ಸಂತ್ರಸ್ತರು ಇರಲಿಲ್ಲ ಎಂದು ಹೇಳಲಾಗುತ್ತಿದೆ.

By -  Vinay Bhat
Published on : 10 Sept 2025 5:16 PM IST

Fact Check: ಪಂಜಾಬ್​ನ ಪ್ರವಾಹ ಪೀಡಿತ ಪ್ರದೇಶಗಳಿಗೆ ಅಮಿತ್ ಶಾ ಭೇಟಿ ಎಂದು ಜಮ್ಮುವಿನ ವೀಡಿಯೊ ವೈರಲ್

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಅಮಿತ್ ಶಾ ಅವರು ಪ್ರವಾಹ ಪೀಡಿತ ಪಂಜಾಬ್‌ಗೆ ತಲುಪಿದ್ದಾರೆ, ಆದರೆ, ಅವರ ಭೇಟಿಯ ವೇಳೆ ಅಲ್ಲಿ ಸಂತ್ರಸ್ತರು ಇರಲಿಲ್ಲ ಎಂದು ಹೇಳಲಾಗುತ್ತಿದೆ. ಈ ವಿಡಿಯೋವನ್ನು ಹಂಚಿಕೊಂಡ ಫೇಸ್​ಬುಕ್ ಬಳಕೆದಾರರೊಬ್ಬರು, ‘‘ಪಂಜಾಬ್​​ನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಅಮಿತ್ ಶಾ.! ಭೇಟಿಯ ಸಂದರ್ಭದಲ್ಲಿ ಯಾವ ಸಂತ್ರಸ್ತರು ಅಲ್ಲಿಗೆ ಬರಲಿಲ್ಲ, ಅಮಿತ್ ಶಾ ತಮ್ಮ ಬೆಂಬಲಿಗರಿಗೆ ಹೋಗಿ ನಾಲ್ಕೈದು ಸಂತ್ರಸ್ಥರನ್ನು ಕರ್ಕೊಂಡು ಬನ್ನಿ ಎಂದು ಹೇಳುವ ವಿಡಿಯೋ ವೈರಲ್ ಆಗಿದೆ ನೋಡಿ.’’ ಎಂದು ಬರೆದುಕೊಂಡಿದ್ದಾರೆ. (Archive)

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ ಪಂಜಾಬ್‌ನದ್ದಲ್ಲ, ಬದಲಾಗಿ ಜಮ್ಮುವಿನದ್ದಾಗಿದೆ, ಅಲ್ಲಿ ಅಮಿತ್ ಶಾ ಪ್ರವಾಹ ಪೀಡಿತ ಜನರನ್ನು ಭೇಟಿ ಮಾಡಲು ಹೋಗಿದ್ದರು.

ನಿಜಾಂಶವನ್ನು ತಿಳಿಯಲು ನಾವು ಮೊದಲು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟುಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ, PTI ನ್ಯೂಸ್ ತನ್ನ ಯೂಟ್ಯೂಬ್ ಚಾನೆಲ್​ನಲ್ಲಿ ಇದೇ ವೈರಲ್ ವೀಡಿಯೊವನ್ನು ಹಂಚಿಕೊಂಡು ವರದಿ ಮಾಡಿರುವುದು ಸಿಕ್ಕಿತು. ಇದನ್ನು ಸೆಪ್ಟೆಂಬರ್ 1, ರಂದು ಪ್ರಕಟಿಸಲಾಗಿದೆ. ವೀಡಿಯೊದಲ್ಲಿ, ನಾವು 30 ಸೆಕೆಂಡುಗಳಿಂದ 45 ಸೆಕೆಂಡುಗಳವರೆಗಿನ ವೈರಲ್ ಕ್ಲಿಪ್ ಅನ್ನು ಕಾಣಬಹುದು. ಇದರೊಂದಿಗೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಜಮ್ಮುವಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಹಠಾತ್ ಪ್ರವಾಹ, ಮೇಘಸ್ಫೋಟ ಮತ್ತು ಭೂಕುಸಿತದಿಂದ ಉಂಟಾದ ಹಾನಿಯನ್ನು ಪರಿಶೀಲಿಸಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರೊಂದಿಗೆ, ಶಾ ಅವರು ಬಿಕ್ರಮ್ ಚೌಕ್ ಬಳಿಯ ತಾವಿ ಸೇತುವೆಯನ್ನು ಪರಿಶೀಲಿಸಿದರು ಮತ್ತು ಸ್ಥಳೀಯ ಜನರನ್ನು ಭೇಟಿಯಾದರು ಎಂದು ವರದಿಯಲ್ಲಿ ಹೇಳಲಾಗಿದೆ.

ಇದೇವೇಳೆ ದಿ ಟ್ರಿಬ್ಯೂನ್ ವೀಡಿಯೊ ವರದಿಯನ್ನು ನಾವು ಕಂಡುಕೊಂಡೆವು. ಈ ವರದಿಯನ್ನು ಸೆಪ್ಟೆಂಬರ್ 1, ರಂದು ಪ್ರಕಟಿಸಲಾಗಿದೆ. 15 ಸೆಕೆಂಡುಗಳಿಂದ 30 ಸೆಕೆಂಡುಗಳ ನಡುವಿನಲ್ಲಿ ವೈರಲ್ ಕ್ಲಿಪ್‌ನ ಕೆಲವು ಭಾಗಗಳನ್ನು ಕಾಣಬಹುದು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಜಮ್ಮು ಮತ್ತು ಕಾಶ್ಮೀರದ ಎಲ್‌ಜಿ ಮನೋಜ್ ಸಿನ್ಹಾ ಮತ್ತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರೊಂದಿಗೆ ಜಮ್ಮುವಿನಲ್ಲಿ ಭಾರೀ ಪ್ರವಾಹದ ನಂತರ ಹಾನಿಗೊಳಗಾದ ತಾವಿ ಸೇತುವೆಯನ್ನು ಪರಿಶೀಲಿಸಿದರು ಎಂದು ವರದಿ ಹೇಳಿದೆ. ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸ್ಥಳೀಯ ನಿವಾಸಿಗಳನ್ನು ಭೇಟಿ ಮಾಡಿ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳನ್ನು ಪರಿಶೀಲಿಸಿದರು.

ಈ ಕುರಿತು ಇನ್ನಷ್ಟು ಹುಡುಕಿದಾಗ ಅಮರ್ ಉಜಾಲಾ ಮತ್ತು ನವಭಾರತ್ ಟೈಮ್ಸ್ ವರದಿ ಸಿಕ್ಕಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮುವಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಗಳನ್ನು ಪರಿಶೀಲಿಸಿದ್ದಾರೆ ಎಂದು ವರದಿ ಹೇಳುತ್ತದೆ. ಇದರೊಂದಿಗೆ, ಅವರು ವೈಮಾನಿಕ ಸಮೀಕ್ಷೆ ಮತ್ತು ಉನ್ನತ ಮಟ್ಟದ ಸಭೆಗಳ ಮೂಲಕ ಪರಿಸ್ಥಿತಿಯನ್ನು ಅವಲೋಕಿಸಿದರು. ಜಿಲ್ಲೆಯ ಅತ್ಯಂತ ಪೀಡಿತ ಗ್ರಾಮವಾದ ಮಂಗುಚಕ್‌ಗೆ ಸಹ ಅವರು ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂಬ ಮಾಹಿತಿ ಇದರಲ್ಲಿದೆ.

ಇನ್ನು ಅಮಿತ್ ಶಾ ಅವರು ಪಂಜಾಬ್​ನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆಯೆ ಎಂದು ಹುಡುಕಿದ್ದೇವೆ. ಈ ಸಂದರ್ಭ ‘‘ಪಂಜಾಬ್​ನಲ್ಲಿ ಭೀಕರ ಪ್ರವಾಹದಿಂದಾಗಿ ಕುಟುಂಬಗಳು ಮನೆಗಳನ್ನು ಮತ್ತು ಕಷ್ಟಪಟ್ಟು ಸಂಪಾದಿಸಿದ ಬೆಳೆಗಳನ್ನು ಕಳೆದುಕೊಂಡಿರುವ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು ಮತ್ತು ಸಹಾಯದ ಭರವಸೆ ನೀಡಿದರು’’ ಎಂದು ಸೆಪ್ಟೆಂಬರ್ 1 ರಂದು The SaveraTimes ಮಾಡಿದೆ. ಇದು ಬಿಟ್ಟರೆ ಅಮಿತ್ ಶಾ ಪಂಜಾಬ್​​ನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಯಾವುದೇ ವಿಶ್ವಾಸರ್ಹ ವರದಿ ಕಂಡುಬಂದಿಲ್ಲ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಅಮಿತ್ ಶಾ ಅವರ ಪಂಜಾಬ್ ಭೇಟಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಹೇಳಿಕೆ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.

Next Story