Fact Check: ಸೇನಾ ಲಾಠಿಚಾರ್ಜ್‌ನ ಈ ವೀಡಿಯೊ ಪಶ್ಚಿಮ ಬಂಗಾಳದ್ದಲ್ಲ, ಇದು ಬಾಂಗ್ಲಾದೇಶದಲ್ಲಿ ನಡೆದ ಘಟನೆ

ವಿಡಿಯೋದಲ್ಲಿ, ಸೇನಾ ಸಿಬ್ಬಂದಿ ಕೆಲವರನ್ನು ಕೋಲುಗಳಿಂದ ಹೊಡೆಯುತ್ತಿರುವುದು ಕಾಣಬಹುದು. ಕೆಲವರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ ಮತ್ತು ಭಾರತೀಯ ಸೇನೆ ಪಶ್ಚಿಮ ಬಂಗಾಳದಲ್ಲಿ ತಮ್ಮ ಕೆಲಸ ಶುರುಮಾಡಿದೆ ಎಂದು ಬರೆದುಕೊಂಡಿದ್ದಾರೆ.

By -  Vinay Bhat
Published on : 7 April 2026 10:20 AM IST

Fact Check: ಸೇನಾ ಲಾಠಿಚಾರ್ಜ್‌ನ ಈ ವೀಡಿಯೊ ಪಶ್ಚಿಮ ಬಂಗಾಳದ್ದಲ್ಲ, ಇದು ಬಾಂಗ್ಲಾದೇಶದಲ್ಲಿ ನಡೆದ ಘಟನೆ
Claim:ಪಶ್ಚಿಮ ಬಂಗಾಳದಲ್ಲಿ ಭಾರತೀಯ ಸೇನೆ ಕ್ರಮಕೈಗೊಳ್ಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
Fact:ಹಕ್ಕು ಸುಳ್ಳು. ಇದು ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ನಡೆದ ಗಲಭೆಗಳದ್ದಾಗಿದೆ.

ಏಪ್ರಿಲ್ 1 ರಂದು, ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ, ಚುನಾವಣಾ ಸಂಬಂಧಿತ ಕರ್ತವ್ಯದಲ್ಲಿದ್ದಾಗ ಜನರ ಗುಂಪೊಂದು ನ್ಯಾಯಾಂಗ ಅಧಿಕಾರಿಗಳನ್ನು ಗಂಟೆಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡಿತ್ತು. ಹಲವಾರು ವರದಿಗಳ ಪ್ರಕಾರ, ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಲಾಯಿತು. ಈ ಘಟನೆಯ ತನಿಖೆಯನ್ನು ಈಗ NIA ಗೆ ಹಸ್ತಾಂತರಿಸಲಾಗಿದೆ. NIA ತನ್ನ ಪ್ರಾಥಮಿಕ ವರದಿಯನ್ನು ನೇರವಾಗಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸುತ್ತದೆ.

ಈ ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ಸೇನಾ ಸಿಬ್ಬಂದಿ ಕೆಲವರನ್ನು ಕೋಲುಗಳಿಂದ ಹೊಡೆಯುತ್ತಿರುವುದು ಕಾಣಬಹುದು. ಕೆಲವರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ ಮತ್ತು ಭಾರತೀಯ ಸೇನೆ ಪಶ್ಚಿಮ ಬಂಗಾಳದಲ್ಲಿ ತಮ್ಮ ಕೆಲಸ ಶುರುಮಾಡಿದೆ ಎಂದು ಬರೆದುಕೊಂಡಿದ್ದಾರೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಪಶ್ಚಿಮ ಬಂಗಾಳದಲ್ಲಿ ಸೇನಾ ಭೇಟೆ ಶುರು. ಇಷ್ಟು ವರ್ಷ ಅಧಿಕಾರದ ಅಮಲಿನಲ್ಲಿ ಗೂಂಡಾಗಿರಿ ಮಾಡುತ್ತಿದ್ದ ಮಮತಾ ಬ್ಯಾನರ್ಜಿಯ ಚೇಲಾಗಳನ್ನು ಹೊಡೆದು ಓದಿಸುತ್ತಿರುವ ಸೇನೆ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಭಾರತದಲ್ಲಿ ನಡೆದ ಘಟನೆ ಅಲ್ಲ, ಬದಲಾಗಿ ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ನಡೆದ ಗಲಭೆಗಳದ್ದಾಗಿದೆ.

ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಇದರಲ್ಲಿ ಬಾಂಗ್ಲಾದೇಶದ ಸುದ್ದಿವಾಹಿನಿಯ ಜಮುನಾ ಟಿವಿಯ ಲೋಗೋವನ್ನು ಕಾಣಬಹುದು. ನಮಗೆ ಜಮುನಾ ಟಿವಿಯಫೇಸ್‌ಬುಕ್ ಪುಟ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ ಹುಡುಕಾಟ ನಡೆಸಿದಾಗ ಇದೇ ವೈರಲ್ ವೀಡಿಯೊ ಕಂಡುಬಂದಿದೆ. ಅಲ್ಲಿ ಫೆಬ್ರವರಿ 12 ರಂದು ಅದನ್ನು ಪೋಸ್ಟ್ ಮಾಡಲಾಗಿತ್ತು. ವೀಡಿಯೊದ ಪ್ರಕಾರ, ಬಾಂಗ್ಲಾದೇಶದ ಬ್ರಹ್ಮನ್‌ಬರಿಯಾದಲ್ಲಿ ಚುನಾವಣೆಯ ಸಮಯದಲ್ಲಿ, ಮತದಾನ ಕೇಂದ್ರವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಲಾಯಿತು, ಇದು ಸ್ಥಳೀಯ ಸೈನ್ಯವು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಲು ಪ್ರೇರೇಪಿಸಿತು.



ಹೆಚ್ಚುವರಿಯಾಗಿ, ಬಾಂಗ್ಲಾದೇಶದ ಸ್ಥಳೀಯ ಸುದ್ದಿ ಸಂಸ್ಥೆ ಬೋಯಿಶಾಖಿ ಟಿವಿನ್ಯೂಸ್ ಮತ್ತು ದಿನಜ್‌ಪುರ ಟಿವಿ ಸೇರಿದಂತೆ ಹಲವಾರು ಬಾಂಗ್ಲಾದೇಶದ ಸುದ್ದಿವಾಹಿನಿಗಳು ಫೆಬ್ರವರಿ 12 ರಂದು ಅದೇ ಮಾಹಿತಿಯೊಂದಿಗೆ ವೀಡಿಯೊವನ್ನು ಹಂಚಿಕೊಂಡವು. ಎಲ್ಲಾ ಮಾಧ್ಯಮಗಳ ಪ್ರಕಾರ, ಬ್ರಹ್ಮನ್‌ಬರಿಯಾದ ಮತದಾನ ಕೇಂದ್ರವೊಂದರಲ್ಲಿ ನಡೆದ ಗಲಭೆಯ ನಂತರ ಸೈನ್ಯವು ಹಿಡಿತ ಸಾಧಿಸಿ ಲಾಠಿ ಚಾರ್ಜ್ ಮಾಡಲು ಪ್ರಾರಂಭಿಸಿದ ಸಮಯದಿಂದ ಈ ವೀಡಿಯೊ ಬಂದಿದೆ.

ಆಗಸ್ಟ್ 2024 ರ ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ, ಶೇಖ್ ಹಸೀನಾ ಬಾಂಗ್ಲಾದೇಶದಿಂದ ಪಲಾಯನ ಮಾಡಿ ಭಾರತದಲ್ಲಿ ಆಶ್ರಯ ಪಡೆಯಬೇಕಾಯಿತು. 85 ವರ್ಷದ ಮುಹಮ್ಮದ್ ಯೂನಸ್ 18 ತಿಂಗಳ ಕಾಲ ಮಧ್ಯಂತರ ಸರ್ಕಾರವನ್ನು ಮುನ್ನಡೆಸಿದರು. ತರುವಾಯ, ಫೆಬ್ರವರಿ 12, 2026 ರಂದು ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದವು, ಇದರಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ಭರ್ಜರಿ ಜಯ ಸಾಧಿಸಿತು. ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ಫೆಬ್ರವರಿ 17, 2026 ರಂದು ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೈರಲ್ ಆಗುತ್ತಿರುವ ವೀಡಿಯೊ ಭಾರತದ್ದಲ್ಲ, ಬದಲಾಗಿ ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ನಡೆದ ಗಲಭೆಯ ಸಮಯದಲ್ಲಿ ಸೇನೆಯ ಲಾಠಿ ಚಾರ್ಜ್‌ನದ್ದು ಎಂಬುದು ನಾವು ಖಚಿತವಾಗಿ ಹೇಳುತ್ತೇವೆ.

Claimed By:Facebook User
Claim Reviewed By:NewsMeter
Claim Source:Social Media
Claim Fact Check:False
Fact:ಹಕ್ಕು ಸುಳ್ಳು. ಇದು ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ನಡೆದ ಗಲಭೆಗಳದ್ದಾಗಿದೆ.
Next Story