ವಕ್ಫ್ ತಿದ್ದುಪಡಿ ಮಸೂದೆಯನ್ನು ಸಂಸತ್ತು ಅಂಗೀಕರಿಸಿದೆ. ಲೋಕಸಭೆಯಲ್ಲಿ ಸತತ 12 ಗಂಟೆಗಳ ಕಾಲ ನಡೆದ ಚರ್ಚೆ ಬಳಿಕ ವಕ್ಫ್ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆಯಿತು. ಲೋಕಸಭೆಯ ನಂತರ, ವಕ್ಫ್ ತಿದ್ದುಪಡಿ ಮಸೂದೆ 2025 ಅನ್ನು ರಾಜ್ಯಸಭೆಯಲ್ಲಿಯೂ ಅಂಗೀಕರಿಸಲಾಗಿದೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ಹರಿದಾಡುತ್ತಿದೆ. ಏಪ್ರಿಲ್ 3 ರ ಗುರುವಾರ ಮುಂಜಾನೆ ಲೋಕಸಭೆಯಲ್ಲಿ ಅಂಗೀಕರಿಸಲ್ಪಟ್ಟ ವಕ್ಫ್ ತಿದ್ದುಪಡಿ ಮಸೂದೆಯ ಬಗ್ಗೆ AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸಂಸತ್ತಿನಲ್ಲಿ ಅಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
ಫೇಸ್ಬುಕ್ ಬಳಕೆದಾರರು ಏಪ್ರಿಲ್ 3, 2025 ರಂದು ಈ ವೀಡಿಯೊವನ್ನು ಹಂಚಿಕೊಂಡು, ‘‘ಅಸಂಖ್ಯಾತ ಬಡವರ ಹಾಗೂ ರೈತರ ಆಸ್ತಿಯನ್ನು ನುಂಗಿ ನೀರು ಕುಡಿದಿದ್ದ ವಕ್ಫ್ ಬೋರ್ಡ್ ಮಂಡಳಿಯ ಪರ ಲೋಕಸಭೆಯಲ್ಲಿ ವಾದ ಮಾಡಿ ಅಸಂಖ್ಯಾತ ಬಡವರ ಹಾಗೂ ರೈತರ ಕಣ್ಣೀರಿಗೆ ಕಾರಣವಾಗಿದ್ದ ಓವೈಸಿ ನಿನ್ನೆ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆಗೆ ಅನುಮೋದನೆ ಸಿಕ್ಕಿದ ನಂತರ ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ’’ ಎಂದು ಬರೆದುಕೊಂಡಿದ್ದಾರೆ.
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೀಡಿಯೊ 2024ರ ಆಗಸ್ಟ್ನದ್ದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಯೂಟ್ಯೂಬ್‌ನಲ್ಲಿ ಅಸಾದುದ್ದೀನ್ ಓವೈಸಿ ಪಾರ್ಲಿಮೆಂಟ್ ಎಂಬ ಕೀ ವರ್ಡ್ ಬಳಸಿ ಕಳೆದ 24 ಗಂಟೆಯ ಸುದ್ದಿಯನ್ನು ಹುಡುಕಿದ್ದೇವೆ. ಈ ಸಂದರ್ಭ ವಕ್ಫ್ ತಿದ್ದುಪಡಿ ಮಸೂದೆಯ ಕುರಿತಾದ ಸಂಸತ್ತಿನ ಅಧಿವೇಶನದಲ್ಲಿ ಅಸಾದುದ್ದೀನ್ ಬಿಳಿ ಉಡುಪಿನಲ್ಲಿ ಭಾಗವಹಿಸಿರುವುದು ಕಂಡುಬಂದಿದೆ. ಆದರೆ, ವೈರಲ್ ಕ್ಲಿಪ್ ಅನ್ನು ಎಚ್ಚರಿಕೆಯಿಂದ ವಿಶ್ಲೇಷಿಸಿದಾಗ, ಓವೈಸಿ ನೀಲಿ ಬಣ್ಣದ ಉಡುಪನ್ನು ಧರಿಸಿರುವುದು ಕಂಡುಬಂದಿದೆ.
ಈ ಮೂಲಕ ವೈರಲ್ ಆಗುತ್ತಿರುವ ವೀಡಿಯೊ ಇತ್ತೀಚಿನದ್ದಲ್ಲ ಎಂಬುದು ಸ್ಪಷ್ಟವಾಯಿತು. ಬಳಿಕ ವೈರಲ್ ವೀಡಿಯೊದಲ್ಲಿ ನಾವು ‘‘AIMIM RR ಜಿಲ್ಲೆ’’ ಎಂಬ ವಾಟರ್‌ಮಾರ್ಕ್ ಅನ್ನು ಸಹ ಗಮನಿಸಿದ್ದೇವೆ. ಈ ಕುರಿತು ಹುಡುಕಿದಾಗ @aimim_rr_district ನ ಇನ್ಸ್ಟಾಗ್ರಾಮ್ ಖಾತೆ ನಮಗೆ ಸಿಕ್ಕಿದೆ. ಈ ಅಕೌಂಟ್ನಲ್ಲಿ ಆಗಸ್ಟ್ 7, 2024 ರಂದು ಇದೇ ವೈರಲ್ ವೀಡಿಯೊ ಹಂಚಿಕೊಂಡಿರುವುದು ಕಂಡುಬಂದಿದೆ. ಇದಕ್ಕೆ ‘‘ಇಂದು (ಲೋಕಸಭೆ) ಸಂಸತ್ತಿನಲ್ಲಿ ಬ್ಯಾರಿಸ್ಟರ್ ಅಸಾದುದ್ದೀನ್ ಓವೈಸಿ ಸಾಹಬ್ ಅವರ ದೃಶ್ಯಗಳು’’ ಎಂಬ ಕ್ಯಾಪ್ಶನ್ ನೀಡಲಾಗಿದೆ.
ಇದರಿಂದ ಸುಳಿವು ಪಡೆದ ನಾವು ಯೂಟ್ಯೂಬ್‌ನಲ್ಲಿ ಆಗಸ್ಟ್ 7, 2024 ರ ಲೋಕಸಭಾ ಅಧಿವೇಶನವನ್ನು ಸರ್ಚ್ ಮಾಡಿದ್ದೇವೆ. ಆಗ ಒಡಿಶಾಲೈವ್ ಯೂಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಲಾದ ವೀಡಿಯೊ ನಮಗೆ ಕಂಡುಬಂತು. ಇದರಲ್ಲಿ ಸುಮಾರು 4:46:55 ಗಂಟೆಗಳ ಸಮಯದಲ್ಲಿ ಅದೇ ವೈರಲ್ ಕ್ಲಿಪ್ ಅನ್ನು ನಾವು ಕಂಡುಕೊಂಡಿದ್ದೇವೆ, ಇಲ್ಲಿ ಓವೈಸಿ ಕೇವಲ ಕಣ್ಣುಗಳನ್ನು ಉಜ್ಜುತ್ತಿದ್ದಾರಷ್ಟೆ, ಅಳುತ್ತಿಲ್ಲ ಎಂದು ಸ್ಪಷ್ಟವಾಗಿ ಕಂಡುಬರುತ್ತದೆ.
ಹೀಗಾಗಿ 2025 ರ ವಕ್ಫ್ (ತಿದ್ದುಪಡಿ) ಮಸೂದೆಯ ಕುರಿತು ಅಸದುದ್ದೀನ್ ಓವೈಸಿ ಸಂಸತ್ತಿನಲ್ಲಿ ಅಳುತ್ತಿರುವುದನ್ನು ತೋರಿಸುವ ವೀಡಿಯೊ ಹಳೆಯದು ಎಂದು ನಾವು ಖಚಿತವಾಗಿ ಹೇಳುತ್ತೇವೆ.