(Warning: This article contains sensitive content that some readers may find disturbing. Viewer discretion is advised.)
ಮಹಿಳೆಯೊಬ್ಬರಿಗೆ ಥಳಿಸಿದ ಆಘಾತಕಾರಿ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದು ಸಿಸಿಟಿವಿ ಕ್ಯಾಮೆರಾದ ರೆಕಾರ್ಡಿಂಗ್‌ನಂತೆ ಕಂಡುಬರುತ್ತಿದೆ. ಇದರಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯನ್ನು ತಡೆದು ಜಗಳವಾಡುತ್ತಾನೆ. ನಂತರ ಅವಳನ್ನು ಥಳಿಸಲು ಪ್ರಾರಂಭಿಸುತ್ತಾನೆ. ಸುಮಾರು ಎರಡೂವರೆ ನಿಮಿಷದ ಈ ವೀಡಿಯೊದಲ್ಲಿ ಅನೇಕರು ಮಹಿಳೆಯೊಂದಿಗೆ ಜಗಳವಾಡುತ್ತಿರುವುದನ್ನು ಕಾಣಬಹುದು.
ವೀಡಿಯೊ ಶೇರ್ ಮಾಡಿರುವ ಸಾಮಾಜಿಕ ಜಾಲತಾಣ ಬಳಕೆದಾರರು ಹಲ್ಲೆಗೊಳಗಾದ ಮಹಿಳೆ ಪೊಲೀಸ್ ಪೇದೆ ಮತ್ತು ಆಕೆ ಹಿಂದೂ ಎಂದು ಹೇಳಿಕೊಂಡಿದ್ದಾರೆ. ಅದೇ ವೇಳೆ ಬೈಕ್‌ನಲ್ಲಿ ಬಂದು ಥಳಿಸಿದ ವ್ಯಕ್ತಿ ಮುಸ್ಲಿಂ ಸಮುದಾಯದವನು ಎಂದು ಹಂಚಿಕೊಳ್ಳುತ್ತಿದ್ದಾರೆ. ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಅಪ್ಲೋಡ್ ಮಾಡಿ, ‘‘ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಹಿಂದೂ ಮಹಿಳೆಗೆ ಇರ್ಫಾನ್ ಎಂಬ ಮುಸ್ಲಿಂ ಹುಡುಗ ಕ್ರೂರವಾಗಿ ಕಿರುಕುಳ ನೀಡಿ ಹಲ್ಲೆ ಮಾಡಿ ಥಳಿಸಿದ್ದಾನೆ. ಸಮವಸ್ತ್ರದಲ್ಲಿರುವ ಹುಡುಗಿಯನ್ನು ಆಕ್ರಮಣ ಮಾಡಲು ಧೈರ್ಯಮಾಡುತ್ತಿದ್ದಾರೆ, ಇನ್ನೂ ಅವರು ನಿಮಗೆ ಏನು ಮಾಡಬಹುದೆಂದು ಊಹಿಸಿ! ಇಂತಹ ಉ_ಗ್ರರ ವಿರುದ್ಧ ಕಠಿಣ ಕ್ರಮದ ಅಗತ್ಯವಿದೆ’’ ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಈ ವೀಡಿಯೊ ತಪ್ಪುದಾರಿಗೆಳೆಯುತ್ತಿದೆ ಎಂಬುದು ಕಂಡುಬಂದಿದೆ. ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನವೆಂಬರ್ 30 ರಂದು ನಡೆದ ಈ ಘಟನೆಯಲ್ಲಿ ಥಳಿತಕ್ಕೊಳಗಾದ ಮಹಿಳಾ ಕಾನ್‌ಸ್ಟೆಬಲ್ ಹಿಂದೂ ಅಲ್ಲ, ಆಕೆ ಮುಸ್ಲಿಂ ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಡಿಸೆಂಬರ್ 2, 2024 ರಂದು ಇದೇ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ಹೊಂದಿರುವ ಆಜ್ ತಕ್ ಪ್ರಕಟಿಸಿದ ಸುದ್ದಿ ಕಂಡುಬಂದಿದೆ. ಇದರಲ್ಲಿ ವೈರಲ್ ವೀಡಿಯೊವನ್ನು ಮೊರಾದಾಬಾದ್‌ನಿಂದ ಎಂದು ವಿವರಿಸಲಾಗಿದೆ.
ವರದಿಯ ಪ್ರಕಾರ, ಈ ಘಟನೆ ನವೆಂಬರ್ 30, 2024 ರಂದು ಸಿವಿಲ್ ಲೈನ್ಸ್‌ನ ಚಕ್ಕರ್ ಕಿ ಮಿಲಾಕ್ ಪ್ರದೇಶದ ಬಳಿ ನಡೆದಿದೆ. ‘‘ಮಹಿಳಾ ಪೇದೆಯ ಹೆಸರು ಅಮ್ರೀನ್. ಇವರು ಸಿವಿಲ್ ಡ್ರೆಸ್‌ನಲ್ಲಿ ತನ್ನ ಜಮೀನುದಾರನ ಮನೆಗೆ ಹೋಗುತ್ತಿದ್ದಳು. ಅಷ್ಟರಲ್ಲಿ ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ಬೈಕ್ ಸ್ಟಾರ್ಟ್ ಮಾಡುವಂತೆ ಕೇಳಿದ್ದಾನೆ. ಈ ವಿಚಾರವಾಗಿ ಮಾತಿನ ಚಕಮಕಿ ನಡೆದಿದ್ದು, ಬಳಿಕ ಬೈಕ್ ಚಲಾಯಿಸುತ್ತಿದ್ದ ಯುವಕ ಹಾಗೂ ಆತನ ಸಹಚರರು ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿ ಥಳಿಸಿದ್ದಾರೆ. ಈ ವೇಳೆ ಮಹಿಳೆಯ ತಲೆ ಮತ್ತು ಮೊಣಕಾಲಿಗೆ ಗಂಭೀರ ಗಾಯಗಳಾಗಿವೆ.’’
‘‘ಅಮ್ರೀನ್ ಅವರು ಸಿವಿಲ್ ಲೈನ್ಸ್ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಹಳೆ ಆರ್‌ಟಿಒ ಕಚೇರಿ ನಿವಾಸಿ ಶಹಾದತ್ ಎಂಬುವವರ ಪುತ್ರ ಇರ್ಫಾನ್, ಚಕ್ಕರ್‌ನ ಮಿಲಕ್, ಸಮೋಸಾವಲಿ ಗಲಿ ನಿವಾಸಿ ಅಫ್ಸರ್ ಅಲಿ ಪುತ್ರ ಸಲೀಂ, ನಯೀಮ್ ಮತ್ತು ನಯೀಮ್ ಸಹೋದರಿ ಸೇರಿದಂತೆ ಆರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆ 2023 ರ ಸೆಕ್ಷನ್ 191 (2), 315 (2), 352 ಮತ್ತು ಸೆಕ್ಷನ್ 76 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅದೇ ಸಮಯದಲ್ಲಿ, ಸಿವಿಲ್ ಲೈನ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳಾ ಕಾನ್‌ಸ್ಟೆಬಲ್ ದೂರು ದಾಖಲಿಸಿ ಪ್ರಕರಣ ದಾಖಲಿಸಿದ್ದಾರೆ ಎಂದು ಎಸ್‌ಪಿ ಸಿಟಿ ತಿಳಿಸಿದ್ದಾರೆ’’ ಎಂದು ವರದಿಯಲ್ಲಿದೆ.
ದಿ ಫ್ರೀ ಪ್ರೆಸ್ ಜರ್ನಲ್ ಇಂಗ್ಲಿಷ್ ನ್ಯೂಸ್ ಪೋರ್ಟಲ್ ಕೂಡ ಇದೇ ವೀಡಿಯೊವನ್ನು ಹಂಚಿಕೊಂಡು ವರದಿ ಮಾಡಿದೆ. ‘‘ಮೊರಾದಾಬಾದ್ ಪೊಲೀಸರು ಈ ಘಟನೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದು, ಸಂತ್ರಸ್ತ ಕಾನ್‌ಸ್ಟೆಬಲ್ ಅಮ್ರೀನ್ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ. ಪೊಲೀಸ್ ಠಾಣೆ ಸಿವಿಲ್ ಲೈನ್ಸ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ.’’ ಎಂದು ಬರೆಯಲಾಗಿದೆ.
ಇನ್ ಖಬರ್ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಕೂಡ ಈ ಘಟನೆಗೆ ಸಂಬಂಧಿಸಿದ ವರದಿಯನ್ನು ನಾವು ಕಂಡುಕೊಂಡಿದ್ದು, ಇದರಲ್ಲಿ ಮಹಿಳಾ ಕಾನ್‌ಸ್ಟೆಬಲ್ ಅನ್ನು ಅಮ್ರೀನ್ ಎಂದು ಗುರುತಿಸಲಾಗಿದೆ.
ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಸಿಸಿಟಿವಿ ದೃಶ್ಯಗಳಲ್ಲಿ ಕಾಣಿಸುತ್ತಿರುವ ಸಂತ್ರಸ್ತೆ ಕಾನ್‌ಸ್ಟೆಬಲ್‌ನ ಹೆಸರು ಅಮ್ರೀನ್ ಮತ್ತು ಆಕೆ ಮುಸ್ಲಿಂ ಮಹಿಳೆ ಎಂಬುದು ಸ್ಪಷ್ಟವಾಗಿದೆ. ವೈರಲ್ ಪೋಸ್ಟ್‌ನಲ್ಲಿ, ವೀಡಿಯೊಗೆ ಕೋಮು ಬಣ್ಣ ಬಳಿದು ಹಿಂದೂ ಎಂದು ಕರೆದು ಸಾರ್ವಜನಿಕರನ್ನು ದಾರಿ ತಪ್ಪಿಸಲಾಗುತ್ತಿದೆ. ಹೀಗಾಗಿ ವೈರಲ್ ಆಗಿರುವ ವೀಡಿಯೊ ತಪ್ಪುದಾರಿಗೆಳೆಯುವಂತಿದೆ.