Fact Check: ಮಹಾಕುಂಭ ಮೇಳದಲ್ಲಿ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಎಂದು 2019ರ ವೀಡಿಯೊ ವೈರಲ್
ಮಹಾಕುಂಭ ಮೇಳದಲ್ಲಿ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಎಂಬ ಹೇಳಿಕೆಯೊಂದಿಗೆ ಅವರ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
By Vinay Bhat Published on 24 Jan 2025 2:35 PM ISTClaim: ಮಹಾಕುಂಭ ಮೇಳದಲ್ಲಿ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ.
Fact: ಹಕ್ಕು ಸುಳ್ಳು. ಇದು 2019ರಲ್ಲಿ ಋಷಿಕೇಶಷ ಪರಮಾರ್ಥ ನಿಕೇತನದಲ್ಲಿ ನಡೆದ ಗಂಗಾರತಿ ಸಮಯದಲ್ಲಿ ತೇಜಸ್ವಿ ಮಾತನಾಡಿದ ವೀಡಿಯೊ.
45 ದಿನಗಳ ಕಾಲ ನಡೆಯುವ ಮಹಾಕುಂಭ ಮೇಳ ಈಗಾಗಲೇ 11ನೇ ದಿನಕ್ಕೆ ಕಾಲಿಟ್ಟಿದೆ. 144 ವರ್ಷಗಳ ನಂತರ ಪ್ರಯಾಗರಾಜ್ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ಕರ್ನಾಟಕದಿಂದಲೂ ಸಾವಿರಾರು ಭಕ್ತರು ಹಾಗೂ ವಿಐಪಿಗಳು ಮಹಾ ಕುಂಭಮೇಳಕ್ಕೆ ಭೇಟಿ ನೀಡುತ್ತಿದ್ದಾರೆ. ಈಗಾಗಲೇ ಕೇಂದ್ರ ಸಚಿವ ವಿ. ಸೋಮಣ್ಣ ಭೇಟಿ ನೀಡಿದ್ದಾರೆ. ರಾಜ್ಯಸಭಾ ಸಂಸದೆ, ಇನ್ಫೋಸಿಸ್ ಫೌಂಡೇಶನ್ ಸಹ ಸಂಸ್ಥಾಪಕಿ ಸುಧಾಮೂರ್ತಿ ಕೂಡ ಮಹಾಕುಂಭ ಮೇಳಕ್ಕೆ ಭೇಟಿ ನೀಡಿ, ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಮಹಾಕುಂಭಕ್ಕೆ ಹೋಗುವ ಮುನ್ನ ಸ್ಯಾಂಡಲ್ವುಡ್ ನಟ ಜಗ್ಗೇಶ್ ಮನೆಯಲ್ಲಿ ರುದ್ರಾಭಿಷೇಕ ಮಾಡಿದ್ದಾರೆ. ಇದರ ಮಧ್ಯೆ ಬೆಂಗಳೂರು ದಕ್ಷಿಣದ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿರುವ ವೀಡಿಯೊದಲ್ಲಿ ತೇಜಸ್ವಿ ಸೂರ್ಯ ಭಾಷಣ ಮಾಡುತ್ತಿರುವುದು ನೋಡಬಹುದು. ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಕುಂಭಮೇಳದಲ್ಲಿ ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯ’’ ಎಂದು ಬರೆದುಕೊಂಡಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ತೇಜಸ್ವಿ ಸೂರ್ಯ ಅವರು ಮಾತನಾಡುತ್ತಿರುವುದು ಕುಂಭಮೇಳದಲ್ಲಿ ಅಲ್ಲ. ಇದು 2019ರ ವೀಡಿಯೊ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಗೂಗಲ್ನಲ್ಲಿ ತೇಜಸ್ವಿ ಸೂರ್ಯ ಅವರು ಕುಂಭಮೇಳದಲ್ಲಿ ಭಾಷಣ ಮಾಡಿದ್ದಾರೆಯೆ ಎಂದು ಕೀವರ್ಡ್ ಮೂಲಕ ಹುಡುಕಿದ್ದೇವೆ. ಆದರೆ, ಇದಕ್ಕೆ ಸಂಬಂಧಿಸಿದ ಯಾವುದೇ ವರದಿ ನಮಗೆ ಕಂಡುಬಂದಿಲ್ಲ. ಅಲ್ಲದೆ ಅವರು ಕುಂಭಮೇಳಕ್ಕೆ ಹೋಗಿದ್ದಾರೆ ಎಂಬ ಬಗ್ಗೆಯೂ ಎಲ್ಲೂ ವರದಿ ಇಲ್ಲ. ತೇಜಸ್ವಿ ಅವರ ಸಾಮಾಜಿಕ ಮಾಧ್ಯಮ ಖಾತೆಯನ್ನು ಕೂಡ ನೋಡಿದ್ದೇವೆ. ಅದರಲ್ಲೂ ಅವರು ಮಹಾಕುಂಭ ಮೇಳಕ್ಕೆ ಹೋದ ಬಗ್ಗೆ ಯಾವುದೇ ಪೋಸ್ಟ್ ಹಂಚಿಕೊಂಡಿಲ್ಲ.
ಬಳಿಕ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಪರಮಾರ್ಥ ನಿಕೇತನ್ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ವೈರಲ್ ವೀಡಿಯೊದ ದೃಶ್ಯಾವಳಿಯನ್ನು ಹೋಲುವ ವಿಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಜುಲೈ 3, 2019 ರಂದು ಪಬ್ಲಿಶ್ ಮಾಡಲಾದ ಈ ವೀಡಿಯೊಕ್ಕೆ ‘‘Shri Tejasvi Surya speech- Ganga Aarti- Parmarth Niketan Ashram - July 2019’’ ಎಂಬ ಶೀರ್ಷಿಕೆ ನೀಡಲಾಗಿದೆ. ‘‘ಬಿಜೆಪಿಯ ಅತ್ಯಂತ ಕಿರಿಯ ಸಂಸದ, 28 ವರ್ಷದ ತೇಜಸ್ವಿ ಸೂರ್ಯ ಅವರನ್ನು ಗಂಗಾ ಮಾತೆಯ ದಡದಲ್ಲಿ ಪವಿತ್ರ ಗಂಗಾ ಆರತಿಗಾಗಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಅವರು ಪೂಜ್ಯ ಸ್ವಾಮಿ ಚಿದಾನಂದ್ ಸರಸ್ವತಿಜಿ ಅವರೊಂದಿಗೆ ಗೌರವಾನ್ವಿತ ಶ್ರೀ ನರೇಂದ್ರ ಮೋದಿಜಿಯವರ ನಾಯಕತ್ವ ಮತ್ತು ದೂರದೃಷ್ಟಿಯ ಅಡಿಯಲ್ಲಿ ರಾಷ್ಟ್ರದ ದಿಕ್ಕು ಮತ್ತು ಉಜ್ವಲ ಭವಿಷ್ಯದ ಬಗ್ಗೆ ಚರ್ಚೆ ನಡೆಸಿದರು’’ ಎಂದು ವಿವರಣೆ ನೀಡಲಾಗಿದೆ.
ಈ ವೀಡಿಯೊವನ್ನು ನಾವು ಸಂಪೂರ್ಣವಾಗಿ ವೀಕ್ಷಿಸಿದ್ದೇವೆ. ಆಗ 3.46 ಸೆಕೆಂಡ್ ಗಳ ಇದೇ ವೀಡಿಯೋವನ್ನು ಕುಂಭಮೇಳದ ಹೇಳಿಕೆಯೊಂದಿಗೆ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ ಎಂಬುದು ಖಚಿತವಾಗಿದೆ.
ಜೊತೆಗೆ ನಾವು ಗೂಗಲ್ನಲ್ಲಿ ‘ತೇಜಸ್ವಿ ಸೂರ್ಯ, ಪರಮಾರ್ಥ ನಿಕೇತನ್’ ಎಂದು ಸರ್ಚ್ ಮಾಡಿದ್ದೇವೆ. ಈ ಸಂದರ್ಭ ತೇಜಸ್ವಿ ಸೂರ್ಯ ಅವರು ಜುಲೈ 8, 2019 ರಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವೈರಲ್ ಆಗುತ್ತಿರುವ ವೀಡಿಯೊದ ಪೂರ್ಣ ಆವೃತ್ತಿಯನ್ನು ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಇದರಲ್ಲಿ ಅವರು ‘‘ತಾಯಿ ಗಂಗಾ ಅನೇಕ ವಿಧಗಳಲ್ಲಿ ಹಿಂದೂ ನಾಗರಿಕತೆಯ ಆದರ್ಶ ಸಂಕೇತವಾಗಿದೆ. ದೀರ್ಘಕಾಲಿಕ ಮತ್ತು ಯಾವಾಗಲೂ ಯೌವನಿಕೆಯದ್ದಾಗಿದೆ. ಪರಮಾರ್ಥ ನಿಕೇತನ, ಹೃಷಿಕೇಶಕ್ಕೆ ಭೇಟಿ ನೀಡಲು ಮತ್ತು ಸ್ವಾಮಿ ಜಿಯವರ ನೇತೃತ್ವದಲ್ಲಿ ಅವರು ಮಾಡುತ್ತಿರುವ ಸ್ಫೂರ್ತಿದಾಯಕ ಕೆಲಸವನ್ನು ನೋಡಲು ನನಗೆ ಅವಕಾಶ ಸಿಕ್ಕಿತು. ಈ ಸಂದರ್ಭದಲ್ಲಿ ನನ್ನ ಭಾಷಣ’’ ಎಂದು ಪರಮಾರ್ಥ ನಿಕೇತನದ ಯೂಟ್ಯೂಬ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
Ma Ganga in many ways is ideal symbol of the Hindu civilization - perennial and ever youthful.I had the opportunity to visit Paramarth Niketan, Hrishikesh & see the inspiring work they are doing under Swami Ji's leadership.My speech on the occasionhttps://t.co/jX4Kd7Xi5I
— Tejasvi Surya (@Tejasvi_Surya) July 8, 2019
ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಮಹಾಕುಂಭ ಮೇಳದಲ್ಲಿ ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಎಂದು ವೈರಲ್ ಆಗುತ್ತಿರುವ 2019ರದ್ದು ಎಂದು ನಾವು ಖಚಿತವಾಗಿ ಹೇಳುತ್ತೇವೆ.