ನೇಪಾಳದಲ್ಲಿ ನಡೆದ ಹಿಂಸಾತ್ಮಕ ಚಳವಳಿಯ ನಂತರ, ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಲಾಗಿದೆ. ಕರ್ಕಿ ನೇಪಾಳದ ಮಧ್ಯಂತರ ಸರ್ಕಾರವನ್ನು ಮುನ್ನಡೆಸಲಿದ್ದಾರೆ. ನೇಪಾಳದಲ್ಲಿನ ರಾಜಕೀಯ ಪ್ರಕ್ಷುಬ್ಧತೆಯ ನಡುವೆ ನೇಪಾಳದ್ದು ಎಂದು ಹೇಳುವ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಕೆಲವು ಜನರು ತಮ್ಮ ಕೈಯಲ್ಲಿ ಭಾರತೀಯ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ರ್ಯಾಲಿ ನಡೆಸುತ್ತಿರುವುದನ್ನು ಕಾಣಬಹುದು. ಅಲ್ಲದೆ ರ್ಯಾಲಿಯಲ್ಲಿ ಭಾರತ್ ಮಾತಾ ಕಿ ಜೈ ಮತ್ತು ವಂದೇ ಮಾತರಂ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಫೇಸ್‌ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡು, ‘‘ನಮ್ಮ ದೇಶದ ಗುಲಾಮರಿಗಿಂತ ನೇಪಾಳದವರು ಎಷ್ಟೋ ವಾಸಿ ಪ್ರತಿಭಟನೆಯಲ್ಲಿ ಭಾರತದ ಧ್ವಜ ಬಳಸಸಲಾಗುತ್ತಿದೆ.. ಭಾರತವನ್ನ ಕೊಂಡಾಡುತ್ತಿದ್ದಾರೆ.. ಭಾರತ್ ಮಾತಾಕಿ ಜೈ’’ ಎಂದು ಬರೆದುಕೊಂಡಿದ್ದಾರೆ. (Archive)

Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಈ ವೀಡಿಯೊ ನೇಪಾಳದದ್ದಲ್ಲ ಬದಲಾಗಿ ಸಿಕ್ಕಿಂನದ್ದಾಗಿದೆ.
ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದಾಗ ಆಗಸ್ಟ್ 12, 2025 ರ ದಿನಾಂಕದ ಬಹು ಮಾಧ್ಯಮ ವರದಿಗಳಿಗೆ ನಮ್ಮನ್ನು ಕರೆದೊಯ್ಯಿತು. ಈ ವರದಿಗಳು ವಿಭಿನ್ನ ಕೋನಗಳಿಂದ ಒಂದೇ ರೀತಿಯ ದೃಶ್ಯಗಳನ್ನು ಹೊಂದಿದ್ದು, ವೈರಲ್ ವೀಡಿಯೊದಲ್ಲಿ ಕಂಡುಬರುವ ಅದೇ ಜನರನ್ನು ಕಾಣಬಹುದು. ಇದು ಸೆಪ್ಟೆಂಬರ್ 2025 ರ ನೇಪಾಳ ಪ್ರತಿಭಟನೆಗಿಂತ ಹಿಂದಿನದು ಎಂದು ದೃಢಪಡಿಸುತ್ತದೆ.
ವರದಿಗಳ ಪ್ರಕಾರ, ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಾಕ್‌ನಲ್ಲಿ ಆಗಸ್ಟ್ 12, 2025 ರಂದು 'ಹರ್ ಘರ್ ತಿರಂಗ' ರ್ಯಾಲಿಯೊಂದಿಗೆ 79 ನೇ ಸ್ವಾತಂತ್ರ್ಯ ದಿನಾಚರಣೆಯ ಆರಂಭವನ್ನು ಶುರುಮಾಡಲಾಯಿತು. ರಾಜ್ಯಪಾಲ ಓಂ ಪ್ರಕಾಶ್ ಮಾಥುರ್, ಮುಖ್ಯಮಂತ್ರಿ ಪ್ರೇಮ್ ಸಿಂಗ್ ಗೋಲೆ, ಕ್ಯಾಬಿನೆಟ್ ಮಂತ್ರಿಗಳು, ಶಾಸಕರು, ನಾಗರಿಕರು ಮತ್ತು ಶಾಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರ್ಯಾಲಿಯು ಎಂಜಿ ಮಾರ್ಗದಿಂದ ಪ್ರಾರಂಭವಾಗಿ ಮನನ್ ಕೇಂದ್ರದಲ್ಲಿ ಸುಮಾರು ಒಂದು ಕಿಲೋಮೀಟರ್ ಕ್ರಮಿಸಿ ಕೊನೆಗೊಂಡಿತು.
ನಂತರ ನಾವು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರ ಆಗಸ್ಟ್ 12, 2025 ರ ಫೇಸ್‌ಬುಕ್ ಪೋಸ್ಟ್ ಕಂಡುಬಂದಿದೆ. ಇದರಲ್ಲಿ ಅವರು ರ್ಯಾಲಿಯ ಬಗ್ಗೆ ಉಲ್ಲೇಖಿಸಿದ್ದಾರೆ. ಈ ಪೋಸ್ಟ್‌ನಲ್ಲಿ ಕಾರ್ಯಕ್ರಮದ ಹಲವಾರು ಫೋಟೋಗಳು ಸಹ ಇದ್ದವು. ಈ ಚಿತ್ರಗಳಲ್ಲಿ ಪ್ರೇಮ್ ಸಿಂಗ್ ತಮಾಂಗ್ ಬಿಳಿ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ವೈರಲ್ ವೀಡಿಯೊದಲ್ಲಿ ಅವರು ಅದೇ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಭೇಟಿಯಲ್ಲಿ ಸಿಕ್ಕಿಂ ರಾಜ್ಯಪಾಲ ಒ.ಪಿ. ಮಾಥುರ್ ಕೂಡ ಅವರೊಂದಿಗೆ ಇದ್ದರು, ಅವರನ್ನು ಕೂಡ ವೈರಲ್ ವೀಡಿಯೊದಲ್ಲಿ ಕಾಣಬಹುದು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಆಗಸ್ಟ್ 2025 ರಲ್ಲಿ ಗ್ಯಾಂಗ್ಟಾಕ್‌ನಲ್ಲಿ ನಡೆದ ಹರ್ ಘರ್ ತಿರಂಗ ರ್ಯಾಲಿಯ ವೀಡಿಯೊವನ್ನು ನೇಪಾಳದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.