Fact Check: ಸ್ಥಗಿತಗೊಂಡ ನಂತರ ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಯ ಪರಿಸ್ಥಿತಿ ಎಂದು ಸೀಸನ್ 11ರ ವೀಡಿಯೊ ವೈರಲ್
ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಬಿಗ್ ಬಾಸ್ ಮನೆಯನ್ನು ಕೆಡವುತ್ತಿರುವ ದೃಶ್ಯ ಇದೆ. ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಥಗಿತಗೊಂಡ ನಂತರ ಇದು ಮನೆಯ ಪರಿಸ್ಥಿತಿ ಎಂದು ಅನೇಕರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.
By - Vinay Bhat |
Claim:ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆ ಧ್ವಂಸ ಮಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
Fact:ಹಕ್ಕು ಸುಳ್ಳು. ಇದು ಬಿಗ್ ಬಾಸ್ ಕನ್ನಡ ಸೀಸನ್ 11ರ ಮನೆ ಆಗಿದೆ.
ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯದ ಕಾರಣ ಬಿಡದಿಯಲ್ಲಿರುವ ಜಾಲಿವುಡ್ ಸ್ಟುಡಿಯೋಸ್ಗೆ ಮಂಗಳವಾರ ಅಧಿಕಾರಿಗಳು ಬೀಗ ಜಡಿದರು. ಜಾಲಿವುಡ್ ಸ್ಟುಡಿಯೋಸ್ನಲ್ಲೇ ಬಿಗ್ ಬಾಸ್ ಕನ್ನಡ ಸೀಸನ್ 12 ಕೂಡ ನಡೆಯುತ್ತಿರುವ ಕಾರಣ ಈ ಶೋ ಅನ್ನು ಕೂಡ ನಿಲ್ಲಿಸಲಾಯಿತು. ಸ್ಪರ್ಧಿಗಳನ್ನೆಲ್ಲ ಮನೆಯಿಂದ ಹೊರ ಕಳುಹಿಸಲಾಯಿತು. ಈ ಹಿಂದೆ ನೋಟಿಸ್ ಕೊಟ್ಟಿದ್ದರೂ ಅದನ್ನು ಜಾಲಿವುಡ್ ಆಡಳಿತ ಮಂಡಳಿ ನಿರಾಕರಿಸಿದ ಕಾರಣ ಸದ್ಯ ಬಿಗ್ ಬಾಸ್ ಆಯೋಜಕರು ಬೆಲೆ ತೆತ್ತಂತಾಗಿದೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿವೀಡಿಯೊ (Archive) ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಬಿಗ್ ಬಾಸ್ ಮನೆಯನ್ನು ಕೆಡವುತ್ತಿರುವ ದೃಶ್ಯ ಇದೆ. ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಥಗಿತಗೊಂಡ ನಂತರ ಇದು ಮನೆಯ ಪರಿಸ್ಥಿತಿ ಎಂದು ಅನೇಕರು ಈ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಬಿಗ್ ಬಾಸ್ ಕನ್ನಡ ಸೀಸನ್ 11ರ ಮನೆಯನ್ನು ಕೆಡವುತ್ತಿರುವ ವೀಡಿಯೊ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ನಲ್ಲಿ ಹುಡುಕಿದಾಗ, ಇದೇ ವೈರಲ್ ವೀಡಿಯೊವನ್ನು ಸೆಪ್ಟೆಂಬರ್ 12 ರಂದು ಟಿವಿ9 ಕನ್ನಡಹಂಚಿಕೊಂಡಿರುವುದು ಕಂಡಿಬಂತು. ‘‘ಹೇಗಾಗಿದೆ ನೋಡಿ ಬಿಗ್ ಬಾಸ್ ಕನ್ನಡ 11ರ ಮನೆಯ ಸ್ಥಿತಿ. ಬಿಗ್ ಬಾಸ್ ಕನ್ನಡ 11ರ ಮನೆಯ ಸ್ಥಿತಿ ನೋಡಿ ಅನೇಕರು ಬೇಸರು ಮಾಡಿಕೊಂಡಿದ್ದಾರೆ. ಏಕೆಂದರೆ ಮನೆಯ ಸೆಟ್ನ ಸಂಪೂರ್ಣವಾಗಿ ಒಡೆದು ಹಾಕಲಾಗಿದೆ. 12ನೇ ಸೀಸನ್ಗೆ ಬಿಡದಿಯಲ್ಲಿ ಮನೆ ನಿರ್ಮಾಣ ಆಗಲಿದೆ’’ ಎಂಬ ಮಾಹಿತಿ ಇದರಲ್ಲಿದೆ.
ಖಚಿತ ಮಾಹಿತಿಗಾಗಿ ನಾವು ಜಿಯೋಹಾಟ್ ಸ್ಟಾರ್ನಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11ರ ಕೆಲ ಎಪಿಸೋಡ್ಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಈ ಸಂದರ್ಭ ವೈರಲ್ ವೀಡಿಯೊದಲ್ಲಿ ಕಾಣುವ ಮನೆಯ ದೃಶ್ಯಕ್ಕು ಬಿಬಿಕೆ 11ರ ಎಪಿಸೋಡ್ನಲ್ಲಿನ ದೃಶ್ಯಕ್ಕು ಸರಿಯಾಗಿ ಹೊಂದಿಕೆ ಆಗುವುದನ್ನು ಕೆಳಗೆ ಕಾಣಬಹುದು.
ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಯನ್ನು ಕೆಡವಲಾಗಿದೆಯೇ ಎಂದು ಗೂಗಲ್ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಆದರೆ, ಇದಕ್ಕೆ ಸಂಬಂಧಿಸಿದ ಯಾವುದೇ ವಿಶ್ವಾಸರ್ಹ ವರದಿ ನಮಗೆ ಕಂಡುಬಂದಿಲ್ಲ. ಬದಲಾಗಿ ಮಂಗಳವಾರ ಸಂಜೆ ಬಿಗ್ ಬಾಸ್ ಮನೆಯಿಂದ ಹೊರಹೋದ ಸ್ಪರ್ಧಿಗಳು ಗುರುವಾದ ಬೆಳಗಿನ ಜಾವ ಪುನಃ ಅದೇ ಮನೆಯ ಒಳಗೆ ಪ್ರವೇಶಿಸಿದ್ದಾರೆ ಎಂಬ ವರದಿ ಸಿಕ್ಕಿತು.
ಅಕ್ಟೋಬರ್ 9 ರಂದು ಟಿವಿ9 ಕನ್ನಡ ಪ್ರಕಟಿಸಿದ ವರದಿಯಲ್ಲಿ, ‘‘ಬಿಗ್ಬಾಸ್ ಆಯೋಜಕರು, ಜಾಲಿವುಡ್ ರೆಸಾರ್ಟ್ನ ಅಧಿಕಾರಿಗಳು, ಕಿಚ್ಚ ಸುದೀಪ್ ಇನ್ನೂ ಕೆಲವರ ಸಂಘಟಿತ ಪ್ರಯತ್ನದಿಂದಾಗಿ ಬಿಗ್ಬಾಸ್ ಶೋ ಪ್ರಾರಂಭಕ್ಕೆ ಅನುಮತಿ ನೀಡಲಾಗಿದೆ. ಅದರ ಬೆನ್ನಲ್ಲೆ ಎಲ್ಲ 17 ಸ್ಪರ್ಧಿಗಳನ್ನು ಮತ್ತೆ ಬಿಗ್ಬಾಸ್ ಮನೆಗೆ ಕಳಿಸಲಾಗಿದೆ. ಜಾಲಿವುಡ್ ಸ್ಟುಡಿಯೋ ಉಲ್ಲಂಘಿಸಿರುವ ಮಾಲಿನ್ಯಕ್ಕೆ ಸಂಬಂಧಿಸಿದ ನಿಯಮಗಳನ್ನು ಸರಿಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು 10 ದಿನಗಳ ಕಾಲಾವಕಾಶ ನೀಡಿದ್ದಾರೆ. ಹಾಗೂ ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳು, ಜಾಲಿವುಡ್ ಸ್ಟುಡಿಯೋಕ್ಕೆ ಬೀಗ ಹಾಕಿರುವುದಕ್ಕೂ ಬಿಗ್ಬಾಸ್ ಶೋಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಅದರ ಬೆನ್ನಲ್ಲೆ ಬಿಗ್ಬಾಸ್ ಶೋ ನಡೆಸಲು ಅನುಮತಿ ದೊರೆತಿದ್ದು ಮುಖ್ಯ ದ್ವಾರವನ್ನಲ್ಲದೆ ಜಾಲಿವುಡ್ ಸ್ಟುಡಿಯೋಸ್ನ ಸಿ ಗೇಟ್ ಮಾತ್ರ ಓಪನ್ ಮಾಡಿಸಿ ಬಿಗ್ಬಾಸ್ ಸಿಬ್ಬಂದಿ ಮತ್ತು ಸ್ಪರ್ಧಿಗಳನ್ನು ಒಳಗೆ ಬಿಟ್ಟಿದ್ದಾರೆ’’ ಎಂಬ ಮಾಹಿತಿ ಇದೆ.
ನಾವು ಬಿಗ್ ಬಾಸ್ ಕನ್ನಡ ತಂಡವನ್ನು ಕೂಡ ಸಂಪರ್ಕಸಿದ್ದೇವೆ. ಪ್ರೋಮೋ ಪ್ರೊಡ್ಯೂಸರ್ ಆಗಿರುವ ಸಾಗರ್ ಹೆಗ್ಡೆ ಅವರು ಈ ಕುರಿತು ನ್ಯೂಸ್ ಮೀಟರ್ಗೆ ಸ್ಪಷ್ಟನೆ ನೀಡಿದ್ದಾರೆ. ‘‘ಇದು ಬಿಗ್ ಬಾಸ್ ಕನ್ನಡ ಸೀಸನ್ 11ರ ಮನೆ. ಇದನ್ನು ಬೆಂಗಳೂರಿನ ಮಾಗಡಿ ಹಾಗೂ ದೊಡ್ಡ ಆಲದ ಮರದ ಮಧ್ಯೆ ಇರುವ ಪ್ರದೇಶದಲ್ಲಿ ಬೃಹತ್ ಮನೆ ನಿರ್ಮಿಸಲಾಗಿತ್ತು. ಹೊಸ ಸೀಸನ್ ಶುರುವಾಗುವ ಮುನ್ನ ಇದನ್ನ ಕೆಡವಲಾಗಿದೆ. ಆದರೆ, ಈ ಮನೆಯನ್ನು ಕೆಡವಿ ಅದೇ ಸ್ಥಳದಲ್ಲಿ ಸೀಸನ್ 12ರ ಹೊಸ ಮನೆ ನಿರ್ಮಿಸಲಾಗಿಲ್ಲ. ಸೀಸನ್ 12 ನಡೆಯುತ್ತಿರುವುದು ಬಿಡದಿ ಪಕ್ಕದಲ್ಲಿರುವ ಜಾಲಿವುಡ್ ಸ್ಟುಡಿಯೋಸ್ನಲ್ಲಿ’’ ಎಂದು ನ್ಯೂಸ್ ಮೀಟರ್ಗೆ ತಿಳಿಸಿದ್ದಾರೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಥಗಿತಗೊಂಡ ನಂತರ ಮನೆಯ ಪರಿಸ್ಥಿತಿ ಎಂದು ವೈರಲ್ ಆಗುತ್ತಿರುವ ವೀಡಿಯೊ ಸೀಸನ್ 11 ರದ್ದಾಗಿದೆ. ಹೊಸ ಸೀಸನ್ನ ಮನೆಯ ನಿರ್ಮಾಣ ಮಾಡಲು ಹಳೆಯ ಸೀಸನ್ನ ಮನೆಯನ್ನು ಕೆಡವುತ್ತಿರುವ ವೀಡಿಯೊ ಇದಾಗಿದೆ. ಹೀಗಾಗಿ ಹಕ್ಕು ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.