ಸಾಮಾಜಿಕ ಜಾಲತಾಣದಲ್ಲಿ ವೀಡಿಯೊವೊಂದು ವೈರಲ್ ಆಗುತ್ತಿದೆ. ಇದರಲ್ಲಿ ವ್ಯಕ್ತಿಯೊಬ್ಬರು ಭಾರತ್ ಮಾತಾ ಕಿ ಜೈ ಎಂಬ ಘೋಷಣೆಗಳನ್ನು ಕೂಗುತ್ತಿದ್ದಾರೆ. ಅದೇ ವೀಡಿಯೊದಲ್ಲಿ, ಆ ವ್ಯಕ್ತಿಯನ್ನು ಕೆಲವರು ಎತ್ತಿಕೊಂಡು ಹೊರಗೆ ಕರೆದೊಯ್ಯುವುದನ್ನು ಕಾಣಬಹುದು. ಜಮ್ಮು ಮತ್ತು ಕಾಶ್ಮೀರ ಅಸೆಂಬ್ಲಿಯಲ್ಲಿ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದಕ್ಕಾಗಿ ಬಿಜೆಪಿ ಶಾಸಕರನ್ನು ಹೊರಹಾಕಲಾಯಿತು ಎಂದು ಸಾಮಾಜಿಕ ತಾಣಗಳಲ್ಲಿ ಈ ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ನವೆಂಬರ್ 12, 2024 ರಂದು ಈ ವೀಡಿಯೊ ಹಂಚಿಕೊಂಡು, ‘‘ಜಮ್ಮು ಕಾಶ್ಮೀರದ ಸದನದಲ್ಲಿ ಭಾರತ್ ಮಾತಾಕಿ ಜೈ ಘೋಷಣೆ ಮಾಡಿದಕ್ಕೆ ಸದನದಿಂದ ಹೊರ ಹಾಕಿದರು! ಕಾರಣ ಮುಸ್ಲಿಂ ಬಾಹುಳ್ಯ’’ ಎಂದು ಬರೆದುಕೊಂಡಿದ್ದಾರೆ.
ಇದೇರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಭಾರತ್ ಮಾತಾ ಕೀ ಜೈ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಶಾಸಕರನ್ನು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಿಂದ ಹೊರಹಾಕಲಾಗಿಲ್ಲ. 370 ನೇ ವಿಧಿ ಮರುಸ್ಥಾಪನೆಯ ಪ್ರಸ್ತಾಪವನ್ನು ವಿರೋಧಿಸುವ ಸಲುವಾಗಿ, ಬಿಜೆಪಿ ಶಾಸಕರು ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗೆ ಇಳಿದರು, ನಂತರ ಸ್ಪೀಕರ್ ಅವರನ್ನು ಹೊರಹಾಕಲು ಆದೇಶಿಸಿದರು.
ನಿಜಾಂಶವನ್ನು ತಿಳಿಯಲು ನಾವು ಸಂಬಂಧಿತ ಕೀವರ್ಡ್‌ಗಳ ಮೂಲಕ ಗೂಗಲ್ನಲ್ಲಿ ಸರ್ಚ್ ಮಾಡಿದ್ದೇವೆ. ಆಗ ನವೆಂಬರ್ 08, 2024 ರಂದು ANI ನ್ಯೂಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿರುವ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ಇದರಲ್ಲಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯು 'ಅಖಾಡಾ' ಆಗಿ ಮಾರ್ಪಟ್ಟಿದೆ ಮತ್ತು ಸ್ಪೀಕರ್ ಆದೇಶದ ಮೇರೆಗೆ ಬಾವಿಗೆ ಪ್ರವೇಶಿಸಿದ ಬಿಜೆಪಿ ಶಾಸಕರನ್ನು ಮಾರ್ಷಲ್‌ಗಳು ಹೊರಗೆ ಕರೆದೊಯ್ದಿದ್ದಾರೆ ಎಂದು ಹೇಳಲಾಗಿದೆ.
‘‘370 ನೇ ವಿಧಿಯನ್ನು ತೆಗೆದುಹಾಕುವ ವಿಷಯದ ಬಗ್ಗೆ ನವೆಂಬರ್ 8 ರಂದು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಕೋಲಾಹಲ ಮುಂದುವರೆದಿದೆ ಎಂದು ಈ ವೀಡಿಯೊದ ವಿವರಣೆಯಲ್ಲಿ ಹೇಳಲಾಗಿದೆ. ಕುಪ್ವಾರದ ಪಿಡಿಪಿ ಶಾಸಕ ಆರ್ಟಿಕಲ್ 370 ರ ಮರುಸ್ಥಾಪನೆಯ ಬ್ಯಾನರ್ ಅನ್ನು ತೋರಿಸಿದ ನಂತರ ಸದನದಲ್ಲಿ ಕೋಲಾಹಲ ಉಂಟಾಯಿತು, ಇದನ್ನು ಅನುಸರಿಸಿ ಬಿಜೆಪಿ ಶಾಸಕರು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ 'ಭಾರತ್ ಮಾತಾ ಕೀ ಜೈ' ಘೋಷಣೆಗಳನ್ನು ಕೂಗಿದರು. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಸ್ಪೀಕರ್ ಅಬ್ದುಲ್ ರಹೀಮ್ ರಾಥರ್ ಅವರ ಆದೇಶದ ಮೇರೆಗೆ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಅಧಿವೇಶನದ 5 ನೇ ದಿನವಾದ ನವೆಂಬರ್ 8 ರಂದು ಸದನದ ಬಾವಿಗೆ ಇಳಿದ ಬಿಜೆಪಿ ಶಾಸಕರನ್ನು ಮಾರ್ಷಲ್‌ಗಳು ಹೊರಹಾಕಿದರು,’’ ಎಂಬ ಮಾಹಿತಿ ಇದರಲ್ಲಿದೆ.
ಮನಿ ಕಂಟ್ರೋಲ್ ಈ ಬೆಳವಣಿಗೆಯ ಸಂಪೂರ್ಣ ವೀಡಿಯೊವನ್ನು ಹಂಚಿಕೊಂಡಿದೆ. ಮೂರು ಗಂಟೆ ನಲವತ್ತೇಳು ನಿಮಿಷಗಳ ವೀಡಿಯೊದಲ್ಲಿ 33 ನಿಮಿಷದಿಂದ 38 ನಿಮಿಷಗಳವರೆಗೆ ಸದ್ಯ ವೈರಲ್ ಆಗುತ್ತಿರುವ ವೀಡಿಯೊ ಕ್ಲಿಪ್ ಅನ್ನು ನೋಡಬಹುದು.
ಒಂದೆಡೆ ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ ಶಾಸಕರು ನಿರಂತರವಾಗಿ ಘೋಷಣೆಗಳನ್ನು ಕೂಗುತ್ತಿದ್ದಾರೆ. 33 ನಿಮಿಷ 33 ಸೆಕೆಂಡ್ಗೆ ವೈರಲ್ ವೀಡಿಯೊದ ಭಾಗ ಬರುತ್ತದೆ, ಅಲ್ಲಿ ಶಾಸಕರು ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯನ್ನು ಕೂಗುತ್ತಾರೆ. ಇದಾದ ಬಳಿಕ ಹಲವು ಶಾಸಕರು ಮೂರು ನಿಮಿಷಗಳ ಕಾಲ ನಿರಂತರವಾಗಿ ಘೋಷಣೆಗಳನ್ನು ಕೂಗುತ್ತಲೇ ಇದ್ದರು. ನಂತರ 37:35 ನಿಮಿಷಕ್ಕೆ ಶಾಸಕರು ಪೀಠದಿಂದ ಜಿಗಿದು ಬಲವಂತವಾಗಿ ಬಾವಿಗೆ ಇಳಿದರು, ನಂತರ ಸ್ಪೀಕರ್ ಅವರನ್ನು ಹೊರಗೆ ಹಾಕಲು ಆದೇಶಿಸಿದ್ದಾರೆ.
ಇದಲ್ಲದೆ, 370 ನೇ ವಿಧಿಯ ಗದ್ದಲದ ನಂತರ ಬಿಜೆಪಿ ಶಾಸಕರನ್ನು ಮಾರ್ಷಲ್‌ಗಳ ಮೂಲಕ ಸದನದಿಂದ ಹೊರಹಾಕಲಾಯಿತು ಎಂದು ಬಿಬಿಸಿ ಹಿಂದಿ ಮತ್ತು ಇಂಡಿಯಾಟುಡೇ ವರದಿಗಳಲ್ಲಿ ಹೇಳಲಾಗಿದೆ.
ಹೀಗಾಗಿ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯಲ್ಲಿ ಭಾರತ ಮಾತೆಯ ಘೋಷಣೆಗಳನ್ನು ಕೂಗಿದ್ದಕ್ಕಾಗಿ ಬಿಜೆಪಿ ಶಾಸಕರನ್ನು ಮಾರ್ಷಲ್ ಹೊರಗೆ ಹಾಕಿದರು ಎಂಬುದು ಸುಳ್ಳು ಎಂದು ನಾವು ಸ್ಪಷ್ಟಪಡಿಸುತ್ತೇವೆ. 370 ನೇ ವಿಧಿಯ ಗದ್ದಲದ ನಂತರ ಸ್ಪೀಕರ್ ಆದೇಶದ ಮೇರೆಗೆ ಮಾರ್ಷಲ್‌ಗಳು ಬಿಜೆಪಿ ಶಾಸಕರನ್ನು ಹೊರಗೆ ಹಾಕುತ್ತಿರುವ ವೀಡಿಯೊ ಇದಾಗಿದೆ.