2025 ರ ಬಿಹಾರ ಚುನಾವಣೆಯಲ್ಲಿ ಎನ್ಡಿಎ ಗೆಲ್ಲುವ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಹೇಳಿಕೆಗಳು ಪ್ರಸಾರವಾಗುತ್ತಿವೆ. ಇದೀಗ ಕಟ್ಟಡವೊಂದು ಬೆಂಕಿಯಿಂದ ಹೊತ್ತಿ ಇರಿಯುತ್ತಿರುವ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಬಿಹಾರ ಚುನಾವಣಾ ಫಲಿತಾಂಶಗಳ ನಂತರ, ಬಿಹಾರಿಗಳು ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿದ್ದಾರೆ ಎಂದು ಕೆಲ ಬಳಕೆದಾರರು ಈ ವೀಡಿಯೊವನ್ನು ಅಪ್ಲೋಡ್ ಮಾಡುತ್ತಿದ್ದಾರೆ.
ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಬಿಹಾರದ ಪಾಟ್ನಾದಲ್ಲಿ ಬಿಹಾರಿಗಳ ಆಕ್ರೋಶ ಭುಗಿಲೆದ್ದಿದೆ. ಬಿಜೆಪಿ ಕಚೇರಿಗೆ ಬೆಂಕಿ ಇಟ್ಟು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ಸೆಪ್ಟೆಂಬರ್ ಆರಂಭದಲ್ಲಿ ನೇಪಾಳದಲ್ಲಿ ನಡೆದ ಜನರಲ್ ಸಿ ಪ್ರತಿಭಟನೆಗಳಿಗೆ ಸಂಬಂಧಿಸಿದ್ದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಚೌಕಟ್ಟನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ವೈರಲ್ ವೀಡಿಯೊಕ್ಕೆ ಹೋಲುವ ವೀಡಿಯೋದ ದೃಶ್ಯಾವಳಿ ಸೆಪ್ಟೆಂಬರ್ 9 ರಂದು ಯಾತ್ರಾಡೈಲಿ ಎಂಬ ಸ್ಥಳೀಯ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿರುವುದು ಕಂಡುಕೊಂಡೆವು. ಬಿರ್ಗುಂಜ್ ಮೆಟ್ರೋಪಾಲಿಟನ್ ಸಿಟಿ ಮೇಯರ್ ರಾಜೇಶ್‌ಮನ್ ಸಿಂಗ್ ಅವರ ಮನೆಗೆ ಝೆನ್- ಝಡ್ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ ಎಂದು ಪೋಸ್ಟ್‌ನಲ್ಲಿ ವಿವರಿಸಲಾಗಿದೆ. ಅದೇ ವೀಡಿಯೊವನ್ನು ಸೆಪ್ಟೆಂಬರ್ 9 ರಂದು Press 4ktv ಪುಟದಲ್ಲಿಯೂ ಹಂಚಿಕೊಳ್ಳಲಾಗಿದೆ. ಇಲ್ಲೂಕೂಡ ಅದೇ ಮಾಹಿತಿ ನೀಡಲಾಗಿದೆ.
ಸೆಪ್ಟೆಂಬರ್ 9 ರಂದು ಬಿರ್ಗುಂಜ್‌ನಲ್ಲಿ ನಡೆದ ಬೆಂಕಿ ಹಚ್ಚುವ ದಾಳಿಯ ಮರುದಿನ, ಪಿಟಿಐ ಮೇಯರ್ ರಾಜೇಶ್‌ಮನ್ ಸಿಂಗ್ ಅವರ ಮನೆಯ ದೃಶ್ಯಗಳನ್ನು ಒಳಗೊಂಡ ವರದಿಯನ್ನು ಪ್ರಕಟಿಸಿತು. ಇದರಲ್ಲಿ ಕೂಡ ವೈರಲ್ ವೀಡಿಯೊದಲ್ಲಿರುವ ಅದೇ ಕಟ್ಟಡವನ್ನು ಕಾಣಬಹುದು. ಸೆಪ್ಟೆಂಬರ್ 10 ರಂದು ಹಂಚಿಕೊಂಡು ಈ ಪೋಸ್ಟ್ಗೆ, ‘‘ನೇಪಾಳ: ನಿನ್ನೆ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಧ್ವಂಸಗೊಂಡು ಬೆಂಕಿ ಹಚ್ಚಲಾದ ಬಿರ್ಗುಂಜ್ ಮೇಯರ್ ರಾಜೇಶ್ ಮಾನ್ ಸಿಂಗ್ ಅವರ ನಿವಾಸದ ಹೊರಗಿನ ದೃಶ್ಯಗಳು’’ ಎಂದು ಕ್ಯಾಪ್ಶನ್ ನೀಡಲಾಗಿದೆ.
ಇನ್ನು ನಾವು ಗೂಗಲ್ನಲ್ಲಿ ಬಿಹಾರದ ಪಾಟ್ನಾ ಬಿಜೆಪಿ ಕಚೇರಿ ಬಗ್ಗೆ ಸರ್ಚ್ ಮಾಡಿದ್ದೇವೆ. ಈ ವೇಳೆ ಇತ್ತೀಚಿನ ವಿಧಾನಸಭೆ ಚುನಾವಣೆ ಸಂದರ್ಭ ಬಿಜೆಪಿ-ಜೆಡಿಯು ಮೈತ್ರಿಕೂಟದ ಕಾರ್ಯಕರ್ತರು ಕಚೇರಿ ಎದುರು ಸಂಭ್ರಮಿಸಿದ ಕುರಿತ ವರದಿಗಳು ಲಭ್ಯವಾಗಿವೆ. ಇದು ಹೊರತಾಗಿ ಯಾವುದೇ ಬೆಂಕಿ ಹಚ್ಚಿದ ವಿದ್ಯಮಾನ ನಡೆದಿದೆ ಎನ್ನುವುದಕ್ಕೆ ಸಾಕ್ಷ್ಯಗಳು ಕಂಡುಬಂದಿಲ್ಲ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೈರಲ್ ವೀಡಿಯೊ ನೇಪಾಳದ ಜೆನ್ ಝಿ ಪ್ರತಿಭಟನೆಯ ಸಂದರ್ಭದ್ದಾಗಿದೆ. ಪಾಟ್ನಾದಲ್ಲಿ ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಲಾಗಿದೆ ಎಂಬುದು ಸಂಪೂರ್ಣ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.