Fact Check: ರೈಲ್ವೇ ಟ್ರ್ಯಾಕ್‌ ಮೇಲೆ ಕಲ್ಲು ಇಟ್ಟ ಬಾಲಕ ಮುಸ್ಲಿಂ ಸಮುದಾಯದವನಲ್ಲ, ಇದು 2018ರ ವೀಡಿಯೊ

ಕೆಲ ಮುಸ್ಲಿಂ ಸಮುದಾಯವು ತಮ್ಮ ಮಕ್ಕಳನ್ನು ರೈಲು ಹಳಿತಪ್ಪಿಸಲು ಬಳಸುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೊ ಎಲ್ಲ ಕಡೆ ವೈರಲ್ ಆಗುತ್ತಿದೆ.

By Vinay Bhat  Published on  9 Sep 2024 9:04 AM GMT
Fact Check: ರೈಲ್ವೇ ಟ್ರ್ಯಾಕ್‌ ಮೇಲೆ ಕಲ್ಲು ಇಟ್ಟ ಬಾಲಕ ಮುಸ್ಲಿಂ ಸಮುದಾಯದವನಲ್ಲ, ಇದು 2018ರ ವೀಡಿಯೊ
Claim: ಮುಸ್ಲಿಂ ಸಮುದಾಯದ ಬಾಲಕ ರೈಲ್ವೇ ಟ್ರ್ಯಾಕ್‌ ಮೇಲೆ ಕಲ್ಲು ಇಟ್ಟು ಸಿಕ್ಕಿಬಿದ್ದಿದ್ದಾನೆ.
Fact: ಇದು 2018ರ ವೀಡಿಯೊ. ರೈಲ್ವೇ ಟ್ರ್ಯಾಕ್‌ ಮೇಲೆ ಕಲ್ಲು ಇಟ್ಟಿರುವುದು ಹಿಂದೂ ಬಾಲಕ.

ರೈಲ್ವೇ ಟ್ರ್ಯಾಕ್‌ ಮೇಲೆ ಕಲ್ಲು ಇಟ್ಟು ಸಿಕ್ಕಿಬಿದ್ದ ಅಪ್ರಾಪ್ತ ಬಾಲಕನೊಬ್ಬನನ್ನು ಕೆಲವು ರೈಲ್ವೆ ಟ್ರ್ಯಾಕ್‌ಮೆನ್‌ಗಳು ವಿಚಾರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ಕಾಂಗ್ರೆಸ್ ಸರ್ಕಾರ ಇರುವ ಕರ್ನಾಟಕದಲ್ಲಿ ಇತ್ತೀಚೆಗೆ ನಡೆದಿದೆ ಎಂದು ಹೇಳಲಾಗುತ್ತಿದೆ. ಕೆಲ ಮುಸ್ಲಿಂ ಸಮುದಾಯವು ತಮ್ಮ ಮಕ್ಕಳನ್ನು ರೈಲು ಹಳಿತಪ್ಪಿಸಲು ಬಳಸುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೊ ಎಲ್ಲ ಕಡೆ ವೈರಲ್ ಆಗುತ್ತಿದೆ.

ಅರುಣ್ ಕುಮಾರ್ ಹಿಂದೂ ಎಂಬ ಎಕ್ಸ್ ಖಾತೆಯಲ್ಲಿ ಸೆಪ್ಟೆಂಬರ್ 9, 2024 ರಂದು ಈ ವೀಡಿಯೊ ಅಪ್ಲೋಡ್ ಆಗಿದೆ. ‘ಜಿಹಾದಿಗಳು ತಮ್ಮ ಮಕ್ಕಳನ್ನು ಬಳಸಿಕೊಂಡು ಈ ರೀತಿ ಕೆಟ್ಟ ಕೆಲಸವನ್ನು ಕರ್ನಾಟಕದಲ್ಲೂ ಶುರು ಮಾಡಿದ್ದಾರೆ. ಇವರ ಸರ್ಕಾರ ಇದ್ದ ಮೇಲೆ ಇವರಿಗೆ ಭಯ ಯಾಕೆ ಹೇಳಿ. ಎಚ್ಚೆತ್ತುಕೊಳ್ಳು ಹಿಂದೂಗಳೇ...’ ಎಂದು ಬರೆದುಕೊಂಡಿದ್ದಾರೆ.

ಹಾಗೆಯೆ ದೀಪಕ್ ಶರ್ಮಾ ಎಂಬವರು ಸೆ. 6 ರಂದು ಇದೇ ವೀಡಿಯೊ ಹಂಚಿಕೊಂಡಿದ್ದು, ‘ಹಿಂದೂಗಳೆ ನಿಮ್ಮನ್ನು ಕೊಲ್ಲಲು ನರಭಕ್ಷಕ ಜಿಹಾದಿಗಳ ಮಗು ಸಿದ್ಧವಾಗಿದೆ. ನಿಮ್ಮ ಪ್ರೀತಿಪಾತ್ರರ ಮೃತ ದೇಹಗಳನ್ನು ನಿಮ್ಮ ನಾಲ್ಕು ಭುಜಗಳ ಮೇಲೆ ಹೊತ್ತುಕೊಂಡು ಹೋಗುತ್ತೀರಿ. ಈ ವಿಡಿಯೋ ಕರ್ನಾಟಕದ್ದು ಎನ್ನಲಾಗಿದೆ. ಎಕ್ಸ್ ಪ್ರೆಸ್ ಪಲ್ಟಿಯಾಗಿ ಎಷ್ಟೋ ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಎಚ್ಚರಿಕೆ’ ಎಂದು ಹೇಳಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಮತ್ತು ಇದು 2018ರ ವೀಡಿಯೊ ಎಂಬುದು ಕಂಡುಬಂದಿದೆ.

ಈ ವೀಡಿಯೊದ ಸ್ಕ್ರೀನ್‌ಶಾಟ್‌ ತೆಗೆದುಕೊಂಡು ನಾವು ಗೂಗಲ್​ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ಮಾಡುವಾಗ ಇದು ಮೇ 12, 2018 ರಂದು ಫೇಸ್‌ಬುಕ್​ನಲ್ಲಿ ಅಪ್ಲೋಡ್ ಆಗಿರುವುದು ಸಿಕ್ಕಿತು. Kahi Na Kahi ಎಂಬ ಖಾತೆಯಿಂದ ಇದು ಪೋಸ್ಟ್‌ ಆಗಿದೆ. ಈ ಮೂಲಕ ಈ ವೀಡಿಯೊ ಇತ್ತೀಚಿನದಲ್ಲ, ಕನಿಷ್ಠ ಐದು ವರ್ಷ ಹಳೆಯದು ಎಂಬುದು ಸ್ಪಷ್ಟವಾಯಿತು.

ವೀಡಿಯೊ ಸಂಭಾಷಣೆಯಲ್ಲಿ ಏನಿದೆ?:

ಈ ವೀಡಿಯೊದಲ್ಲಿರುವ ಸಂಭಾಷಣೆ ಕನ್ನಡದಲ್ಲಿರುವ ಕಾರಣ ಇದು ಕರ್ನಾಟಕದಲ್ಲಿ ನಡೆದ ಘಟನೆ ಎಂಬುದು ತಿಳಿಯಿತು. ಆದರೆ, ಕರ್ನಾಟಕದಲ್ಲಿ ಎಲ್ಲಿ ಎಂಬುದನ್ನು ಪತ್ತೆ ಹಚ್ಚಲು ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ. ಇಬ್ಬರು ರೈಲ್ವೇ ಕಾರ್ಮಿಕರು ಬಾಲಕನೊಬ್ಬನ ಕೈ ಹಿಡಿದು ವಿಚಾರಣೆ ನಡೆಸುವ ದೃಶ್ಯ ಇದರಲ್ಲಿದೆ. “ಇದನ್ನು ಯಾರು ಇಟ್ಟಿದ್ದಾರೆ ಎಂದು ಕೇಳಿದಾಗ, ಬಾಲಕ ಇದನ್ನು ಬೇರೊಬ್ಬ ಇಟ್ಟಿದ್ದಾನೆ ಎಂದು ಹೇಳುತ್ತಾನೆ. ಯಾರು ಇಟ್ಟಿದ್ದಾರೆ ಎಂದು ಮತ್ತೆ ಕೇಳಿದಾಗ ಆತ ಇನ್ನೊಬ್ಬ ಬಾಲಕನ ಹೆಸರನ್ನು ಪಪ್ಪು ಎಂದು ಹೇಳುತ್ತಾನೆ. ಜೊತೆಗೆ ಆತ ಎಲ್ಲಿರುತ್ತಾನೆ ಎಂದಾಗ ಆತ “ದೇವನಗರ” ಎಂದು ಹೇಳುತ್ತಾನೆ. ಈ ವೇಳೆ ಇನ್ನೊಬ್ಬ ವ್ಯಕ್ತಿ ಇಂತಹ ಕೆಲಸ ಮಾಡುತ್ತೀಯಾ ಎಂದು ಕೇಳಿದಾಗ ಬಾಲಕ ವ್ಯಕ್ತಿಯ ಕಾಲು ಹಿಡಿಯಲು ಮುಂದಾಗುತ್ತಾನೆ. ಇದೇ ವೇಳೆ ಬಾಲಕನ ಕೈ ಹಿಡಿದ ವ್ಯಕ್ತಿ ಬಾಲಕನ ತಂದೆಯ ಬಗ್ಗೆ ಕೇಳಿದಾಗ ಅವರೊಬ್ಬರು ಕಂಡಕ್ಟರ್‌ ಎಂದು ಹೇಳುತ್ತಾನೆ. ಜೊತೆಗೆ ಬಾಲಕನ ಬಳಿ ವ್ಯಕ್ತಿ ತಂದೆಯ ಮೊಬೈಲ್‌ ನಂಬರ್‌ ಹೇಳುವಂತೆ ಹೇಳುತ್ತಾನೆ. ಜೊತೆಗೆ ಎಷ್ಟು ರೈಲುಗಳಿಗೆ ಈ ರೀತಿ ಕಲ್ಲು ಇಡಲಾಗಿದೆ ಎಂದು ಕೇಳುತ್ತಾರೆ. ಈ ವೇಳೆ ಬಾಲಕ ನಾನು ಇದೇ ಮೊದಲು ಇಟ್ಟಿದ್ದಾಗಿ ಅಳುತ್ತ ಹೇಳುತ್ತಾನೆ.

ಈ ವೀಡಿಯೊದ ಸಂಭಾಷಣೆಯಲ್ಲಿ ಬಾಲಕ “ದೇವನಗರ” ಎಂಬ ಊರಿನ ಹೆಸರನ್ನು ಹೇಳುತ್ತಾನೆ. ಜೊತೆಗೆ ಈ ರೀತಿಯ ಕನ್ನಡ ಮಾತನಾಡುವುದು ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟದ ಶೈಲಿ ಆಗಿದೆ. ಈ ಆಧಾರದ ಮೇಲೆ ನಾವು ಗೂಗಲ್​​ನಲ್ಲಿ ‘ಕಲಬುರಗಿ’ ‘ಬಾಲಕ’ ‘ರೈಲು’ ‘ಕಲ್ಲು’ ‘ದೇವನಗರ’ ಎಂದು ಸರ್ಚ್ ಮಾಡಿದ್ದೇವೆ. ಆಗ ಈಟಿವಿ ಭಾರತ್ ಮತ್ತು ಹಿಂದೂಸ್ಥಾನ್ ಟೈಮ್ಸ್ ಕನ್ನಡ ಜೂನ್ 6, 2023 ರಂದು ರೈಲು ಹಳಿಯ ಮೇಲೆ ಕಲ್ಲು ಜೋಡಿಸಿಟ್ಟ ಬಾಲಕನ ಕುರಿತು ಸುದ್ದಿ ಪ್ರಕಟಿಸಿರುವುದು ಕಂಡುಬಂತು. ಜೊತೆಗೆ ಕಲಬುರಗಿ ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜು ಮುಂಭಾಗದಲ್ಲಿರುವ ರೈಲು ಹಳಿಯಲ್ಲಿ ಈ ಘಟನೆ ನಡೆದಿದೆ ಎಂದು ಬರೆಯಲಾಗಿದೆ.

ಈ ಕುರಿತು ಇನ್ನಷ್ಟು ಸ್ಪಷ್ಟ ಮಾಹಿತಿಗಾಗಿ ನಾವು ಅಲ್ಲಿನ ಟಿವಿ9 ವರದಿಗಾರ ಭೀಮೇಶ್ ಅವರನ್ನು ಸಂಪರ್ಕಿಸಲಾಗಿದ್ದು, ಅವರು ಮಾತನಾಡಿ, “ಇದು ಕಲಬುರಗಿಯ ವಾಡೆಯಲ್ಲಿ 2018 ರಲ್ಲಿ ಜರುಗಿದ ಘಟನೆ. 2023 ರಲ್ಲಿ ರಾಯಚೂರಿನವರು ಮತ್ತೆ ಇದೇ ವೀಡಿಯೊವನ್ನು ಹಂಚಿಕೊಂಡಿದ್ದರು. ಆದರೆ, ಈ ಘಟನೆ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ’’ ಎಂದು ತಿಳಿಸಿದ್ದಾರೆ.

ಹಾಗೆಯೆ ನಾವು ವಾಡೆ ರೈಲ್ವೇ ಪೊಲೀಸ್‌ ಇನ್ಸ್‌ಪೆಕ್ಟರ್‌ ಮೊಹಮ್ಮದ್ ಪಾಶಾ ಅವರನ್ನು ಸಂಪರ್ಕಿಸಿದ್ದೇವೆ. ‘ಇದು 2018ರಲ್ಲಿ ನಡೆದ ಪ್ರಕರಣವಾಗಿದ್ದು, ಯಾವುದೇ ಪೊಲೀಸ್‌ ಕೇಸ್‌ ದಾಖಲಾಗಿಲ್ಲ. ರೈಲ್ವೇ ಟ್ರ್ಯಾಕ್‌ ಮೇಲೆ ಮಕ್ಕಳು ಆಟವಾಡುತ್ತ ಕಲ್ಲು ಇಟ್ಟಿದ್ದಾರೆ, ಇದು ಗಂಭೀರ ಪ್ರಕರಣವಲ್ಲ. ಟ್ರ್ಯಾಕ್‌ ಮೇಲೆ ಕಲ್ಲು ಇಟ್ಟದ್ದನ್ನು ಕಂಡ ವೇಳೆ ರೈಲ್ವೇ ಕಾರ್ಮಿಕರು ವಿಚಾರಿಸಿದ್ದಾರೆ. ರೈಲಿಗೆ ಯಾವುದೇ ಹಾನಿ ಮಾಡುವ ಉದ್ದೇಶ ಮಕ್ಕಳಿಗೆ ಇರಲಿಲ್ಲ. ಹಾಗೆಯೆ ಈ ಘಟನೆಯಲ್ಲಿ ಭಾಗಿಯಾಗಿರುವ ಹುಡುಗರು ಹಿಂದೂಗಳು.’ ಎಂದು ಮಾಹಿತಿ ನೀಡಿದ್ದಾರೆ.

ಹೀಗಾಗಿ ರೈಲ್ವೇ ಟ್ರ್ಯಾಕ್‌ ಮೇಲೆ ಬಾಲಕರು ಕಲ್ಲು ಇಟ್ಟ ಪ್ರಕರಣ 2018 ರದ್ದು ಎಂಬುದು ಸ್ಪಷ್ಟವಾಗಿದೆ. ಅಲ್ಲದೆ ಈ ಘಟನೆ ಉದ್ದೇಶಪೂರ್ವಕವಾಗಿ ನಡೆದಿಲ್ಲ ಮತ್ತು ಯಾವುದೇ ಕೋಮು ಕೋನವಿಲ್ಲ ಎಂಬುದನ್ನು ನಾವು ಖಚಿತವಾಗಿ ಹೇಳುತ್ತೇವೆ.

Claim Review:ಮುಸ್ಲಿಂ ಸಮುದಾಯದ ಬಾಲಕ ರೈಲ್ವೇ ಟ್ರ್ಯಾಕ್‌ ಮೇಲೆ ಕಲ್ಲು ಇಟ್ಟು ಸಿಕ್ಕಿಬಿದ್ದಿದ್ದಾನೆ.
Claimed By:X User
Claim Reviewed By:News Meter
Claim Source:Social Media
Claim Fact Check:False
Fact:ಇದು 2018ರ ವೀಡಿಯೊ. ರೈಲ್ವೇ ಟ್ರ್ಯಾಕ್‌ ಮೇಲೆ ಕಲ್ಲು ಇಟ್ಟಿರುವುದು ಹಿಂದೂ ಬಾಲಕ.
Next Story