Fact Check: ಹಿಮಾಚಲದ ಕಂಗ್ರಾದಲ್ಲಿ ಶಿವಲಿಂಗ ಒಡೆದ ಘಟನೆ ಸುಳ್ಳು ಕೋಮುವಾದಿ ಹೇಳಿಕೆಯೊಂದಿಗೆ ವೈರಲ್
ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಶಿವಲಿಂಗವನ್ನು ಒಡೆದಿರುವುದನ್ನು ಕಾಣಬಹುದು. ಪೊಲೀಸರೊಬ್ಬರು ಹೇಳಿಕೆಯೂ ವಿಡಿಯೋದಲ್ಲಿದ್ದು, ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
By Vinay Bhat Published on 4 Oct 2024 2:40 PM ISTClaim: ಹಿಮಾಚಲ ಪ್ರದೇಶದಲ್ಲಿ ಶಿವಲಿಂಗವನ್ನು ಇಸ್ಲಾಮಿಕ್ ಮೂಲಭೂತವಾದಿಗಳು ಕೆಡವಿದ್ದಾರೆ.
Fact: ಈ ಘಟನೆಗೆ ಕೋಮು ಬಣ್ಣ ಬಳಿದು ಪೋಸ್ಟ್ ಹಂಚಿಕೊಳ್ಳಲಾಗುತ್ತಿದೆ. ಈ ಪ್ರಕರಣದಲ್ಲಿ ನಿಶಾ ದೇವಿ ಎಂಬ ಮಹಿಳೆಯನ್ನು ಕಂಗ್ರಾ ಪೊಲೀಸರು ಬಂಧಿಸಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋಧಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಕೆಲ ಸಾಮಾಜಿಕ ಬಳಕೆದಾರರು ಈ ಘಟನೆಗೆ ಕೋಮು ಬಣ್ಣ ಬಳಿದು ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಈ ಪ್ರಕರಣದಲ್ಲಿ ನಿಶಾ ದೇವಿ ಎಂಬ ಮಹಿಳೆಯನ್ನು ಕಂಗ್ರಾ ಪೊಲೀಸರು ಬಂಧಿಸಿದ್ದು, ಇವರು ಹಿಂದೂ ಆಗಿದ್ದಾರೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವಿಡಿಯೋಗೆ ಸಂಬಂಧಿಸಿದ ಕೀವರ್ಡ್‌ಗಳನ್ನು ಮೊದಲಿಗೆ ಎಕ್ಸ್ ಖಾತೆಯಲ್ಲಿ ಹುಡುಕಿದೆವು. ಆಗ ಪತ್ರಕರ್ತ ಸಚಿನ್ ಗುಪ್ತಾ ಮಾಡಿದ ಟ್ವೀಟ್ ಅನ್ನು ನಾವು ಕಂಡುಕೊಂಡಿದ್ದೇವೆ. ಈ ಟ್ವೀಟ್‌ನಲ್ಲಿ ವೈರಲ್ ವಿಡಿಯೋ ಕೂಡ ಇದೆ. “ಹಿಮಾಚಲ ಪ್ರದೇಶ: ಕಾಂಗ್ರಾ ಜಿಲ್ಲೆಯ ನಗ್ರೋಟಾದಲ್ಲಿ ಸೆಪ್ಟೆಂಬರ್ 26 ರಂದು ಶಿವಲಿಂಗವನ್ನು ಒಡೆದಿದ್ದಕ್ಕಾಗಿ 35 ವರ್ಷದ ಮಹಿಳೆ ನಿಶಾ ದೇವಿ ಅವರನ್ನು ಬಂಧಿಸಲಾಗಿದೆ. ಇದಕ್ಕೂ ಮುನ್ನ ನಿಶಾ ಎರಡು ಬೇರೆ ಬೇರೆ ದೇವಾಲಯಗಳ ಶಿವಲಿಂಗಗಳನ್ನು ಒಡೆದಿದ್ದಳು. ಇಲ್ಲಿ, ಹಿಂದೂ ಸಂಘಟನೆಗಳು ಈ ಘಟನೆಯ ನಂತರ ಮುಸ್ಲಿಮರು ತಮ್ಮ ಅಂಗಡಿಗಳು ಮತ್ತು ಮನೆಗಳನ್ನು ಖಾಲಿ ಮಾಡುವಂತೆ ಒತ್ತಡ ಹೇರುತ್ತಿವೆ,’’ ಎಂದು ಸಚಿನ್ ಗುಪ್ತಾ ಬರೆದುಕೊಂಡಿದ್ದಾರೆ.
हिमाचल प्रदेश : कांगड़ा जिले के नगरोटा में 26 सितंबर को शिवलिंग तोड़ने के आरोप में 35 वर्षीय महिला निशा देवी गिरफ्तार हुई है। निशा इससे पहले भी 2 अलग–अलग मंदिरों के शिवलिंग तोड़ चुकी है। इधर, हिंदू संगठन इस घटना के बाद मुस्लिमों से दुकान–मकान खाली कराने का दवाब बना रहे थे। pic.twitter.com/chJua5JSOn
— Sachin Gupta (@SachinGuptaUP) September 30, 2024
ಈ ಮಾಹಿತಿಯ ಆಧಾರದ ಮೇಲೆ, ನಾವು ಗೂಗಲ್ನಲ್ಲಿ ‘Himachal-Kangra-Shivling’ ಎಂಬ ಕೀವರ್ಡ್ ಹಾಕಿ ಸರ್ಚ್ ಕೊಟ್ಟಿದ್ದೇವೆ. ಆಗ 30 ಸೆಪ್ಟೆಂಬರ್ 2024 ರಂದು The Print ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿ ಈ ವರದಿ ಪ್ರಕಟಿಸಿದೆ.
‘ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಶಿವಲಿಂಗವನ್ನು ಒಡೆದ ಮಹಿಳೆಯನ್ನು ಹಿಂದೂ ಸಮುದಾಯಕ್ಕೆ ಸೇರಿದ ನಿಶಾದೇವಿ ಎಂದು ಪೊಲೀಸರು ಗುರುತಿಸಿದ್ದಾರೆ ಎಂದು ಕಾಂಗ್ರಾ ಜಿಲ್ಲಾ ಎಸ್ಪಿ ಶಾಲಿನಿ ಅಗ್ನಿಹೋತ್ರಿ ಪಿಟಿಐಗೆ ತಿಳಿಸಿದ್ದಾರೆ. ಮಹಿಳೆ ಮಾನಸಿಕ ಅಸ್ವಸ್ಥೆಯಾಗಿದ್ದು, ಈ ಹಿಂದೆ ಹಲವು ಪ್ರತಿಮೆಗಳನ್ನು ಭಗ್ನಗೊಳಿಸಿದ್ದಾಳೆ. ಸೆಪ್ಟೆಂಬರ್ 27 ರಂದು ಕಾಂಗ್ರಾ ಜಿಲ್ಲೆಯ ನಗ್ರೋಟಾ ಬಾಗವಾನ್‌ನಲ್ಲಿ ಶಿವಲಿಂಗ ಒಡೆದ ಪ್ರಕರಣ ಬೆಳಕಿಗೆ ಬಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಶಿವಲಿಂಗ ಒಡೆದಿರುವ ಬಗ್ಗೆ ಮಾಹಿತಿ ಪಡೆದ ಅಪಾರ ಸಂಖ್ಯೆಯ ಜನರು ಪ್ರತಿಭಟನೆ ಆರಂಭಿಸಿದರು. ಇದೇ ವೇಳೆ ಅಲ್ಲಿದ್ದ ಹಿಂದೂ ಸಂಘಟನೆಗಳ ಜನರು ಅಂಗಡಿ ಖಾಲಿ ಮಾಡುವಂತೆ ಮುಸ್ಲಿಂ ಸಮುದಾಯದವರನ್ನು ಒತ್ತಾಯಿಸಿದರು’ ಎಂಬ ಮಾಹಿತಿ ಇದರಲ್ಲಿದೆ.
ಇದಲ್ಲದೆ, ಕಾಂಗ್ರಾ ಡಿಎಸ್‌ಪಿ ಅಂಕಿತ್ ಶರ್ಮಾ ಅವರ ಹೇಳಿಕೆಯನ್ನು ಒಳಗೊಂಡಿರುವ ಪಂಜಾಬ್ ಕೇಸರಿ ಹಿಮಾಚಲ ಪ್ರದೇಶದ ಯೂಟ್ಯೂಬ್ ಖಾತೆಯಿಂದ 28 ಸೆಪ್ಟೆಂಬರ್ 2024 ರಂದು ಅಪ್‌ಲೋಡ್ ಮಾಡಿದ ವೀಡಿಯೊವನ್ನು ಸಹ ನಾವು ಕಂಡುಕೊಂಡಿದ್ದೇವೆ. ‘ಸೆಪ್ಟೆಂಬರ್ 27 ರಂದು ಬೆಳಿಗ್ಗೆ ಗಾಂಧಿ ಗ್ರೌಂಡ್ ಬಳಿಯ ಶಿವ ದೇವಾಲಯದಲ್ಲಿ ಶಿವಲಿಂಗವನ್ನು ಒಡೆಯುವ ಬಗ್ಗೆ ನಗ್ರೋಟಾ ಪೊಲೀಸರಿಗೆ ಮಾಹಿತಿ ಬಂದಿತ್ತು. ವಿಷಯ ಸೂಕ್ಷ್ಮ ಸ್ವರೂಪವಿದ್ದ ಕಾರಣ, ಭಾರತೀಯ ನ್ಯಾಯಾಂಗ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಬೆಳಗಿನ ಜಾವ 3ರಿಂದ 4ರ ನಡುವೆ ಮಹಿಳೆಯೊಬ್ಬರು ಈ ಕೃತ್ಯ ಎಸಗಿರುವುದು ಪತ್ತೆಯಾಗಿದೆ. ಮಾಹಿತಿಯ ಆಧಾರದ ಮೇಲೆ, 35 ವರ್ಷದ ಮಹಿಳೆ ನಿಶಾ ದೇವಿಯನ್ನು ಯೋಲ್ ಪ್ರದೇಶದ ಬಳಿ ಬಂಧಿಸಲಾಯಿತು. ಮಹಿಳೆಯ ಮಾನಸಿಕ ಸಮತೋಲನ ಸರಿಯಾಗಿಲ್ಲ,’ ಎಂದು ಡಿಎಸ್ಪಿ ಅಂಕಿತ್ ಶರ್ಮಾ ಪ್ರಕಾರ ಆಡಿರುವ ಮಾತು ಇದರಲ್ಲಿದೆ.
ಹೀಗಾಗಿ ಕಾಂಗ್ರಾದಲ್ಲಿ ಶಿವಲಿಂಗ ಒಡೆದ ಘಟನೆಯಲ್ಲಿ ಯಾವುದೇ ಕೋಮು ಕೋನ ಇಲ್ಲ. ಇಸ್ಲಾಮಿಕ್ ಮೂಲಭೂತವಾದಿಗಳು ಶಿವಲಿಂಗವನ್ನು ಒಡೆದಿದ್ದಾರೆ ಎಂಬ ಹೇಳಿಕೆ ಸುಳ್ಳು ಎಂದು ನಾವು ಈ ಸಾಕ್ಷ್ಯಗಳಿಂದ ಸ್ಪಷ್ಟಪಡಿಸುತ್ತಿದ್ದೇವೆ.