Fact Check: ಚಂದ್ರ ಆರ್ಯ ಅವರು ಕೆನಡಾ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿ ಕನ್ನಡದಲ್ಲಿ ಮಾತನಾಡಿಲ್ಲ, ನಿಜಾಂಶ ಇಲ್ಲಿದೆ
ಚಂದ್ರ ಆರ್ಯ ಅವರು ನಾಮಪತ್ರ ಸಲ್ಲಿಸಿದ ಬಳಿಕ ಕನ್ನಡದಲ್ಲಿ ಮಾತನಾಡಿದ್ದಾರೆ ಎಂದು ಕೆಲ ಸುದ್ದಿ ಮಾಧ್ಯಮದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ವೈರಲ್ ಆಗುತ್ತಿದೆ.
By Vinay Bhat Published on 21 Jan 2025 2:18 PM ISTClaim: ಕೆನಡಾ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿ ಕನ್ನಡದಲ್ಲೇ ಮಾತನಾಡಿದ ಚಂದ್ರ ಆರ್ಯ.
Fact: ಚಂದ್ರ ಆರ್ಯ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿದ ಬಳಿಕ ಕನ್ನಡದಲ್ಲಿ ಮಾತನಾಡಿಲ್ಲ. ವೈರಲ್ ಆಗುತ್ತಿರುವ ವೀಡಿಯೊ 2022ರಲ್ಲಿ ಅವರು ಸಂಸತ್ತಿನಲ್ಲಿ ಮಾತನಾಡಿದ ಸಂದರ್ಭದ್ದಾಗಿದೆ.
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ತಮ್ಮ ಹುದ್ದೆಗೆ ಹಠಾತ್ ರಾಜೀನಾಮೆ ನೀಡಿದ ಕಾರಣ ಮುಂದಿನ ಪ್ರಧಾನಿ ಯಾರಾಗುತ್ತಾರೆ ಎಂಬ ಕುತೂಹಲ ಸಾಕಷ್ಟು ಮೂಡಿದೆ. ಈಗಾಗಲೇ ಹಲವು ಪ್ರಮುಖ ನಾಯಕರು ಪ್ರಧಾನಿ ರೇಸ್‌ನಲ್ಲಿದ್ದು, ಕನ್ನಡಿಗ ಚಂದ್ರ ಆರ್ಯ ಕೂಡ ಕೆನಡಾ ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಇದಕ್ಕಾಗಿ ನಾಮಪತ್ರ ಸಲ್ಲಿಕೆ ಕೂಡ ಮಾಡಿದ್ದಾರೆ. ಇದರ ಬೆನ್ನಲ್ಲೇ ಚಂದ್ರ ಆರ್ಯ ಅವರು ನಾಮಪತ್ರ ಸಲ್ಲಿಸಿದ ಬಳಿಕ ಕನ್ನಡದಲ್ಲಿ ಮಾತನಾಡಿದ್ದಾರೆ ಎಂದು ಕೆಲ ಸುದ್ದಿ ಮಾಧ್ಯಮದಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ವೈರಲ್ ಆಗುತ್ತಿದೆ.
ನ್ಯೂಸ್ ಫಸ್ಟ್ ಜನವರಿ 17, 2025 ರಂದು, ‘‘ಕೆನಡಾ ಪ್ರಧಾನಿ ಹುದ್ದೆಗೆ ಜಸ್ಟಿನ್ ಟ್ರುಡೊ ರಾಜೀನಾಮೆ ಕೊಟ್ಟ ಬಳಿಕ ಭಾರತ ಮೂಲದ ಚಂದ್ರ ಆರ್ಯಾ ಅವರ ಹೆಸರು ಹೆಚ್ಚು ಚಾಲ್ತಿಯಲ್ಲಿದೆ. ಮುಂದಿನ ಪ್ರಧಾನ ಮಂತ್ರಿ ರೇಸ್‌ನಲ್ಲಿ ತಮ್ಮ ಹೆಸರು ಕೇಳಿ ಬರುತ್ತಿರುವಾಗಲೇ ಚಂದ್ರ ಆರ್ಯ ಅವರು ಕೆನಡಾ ಪ್ರಧಾನಿ ಹುದ್ದೆಗೆ ಕನ್ನಡದಲ್ಲೇ ಮಾತನಾಡಿ ನಾಮಪತ್ರ ಸಲ್ಲಿಸಿದ್ದಾರೆ’’ ಎಂದು ಬರೆದುಕೊಂಡಿದೆ. ಇದರಲ್ಲಿ ಅವರು ಕನ್ನಡದಲ್ಲಿ ಮಾತನಾಡಿರುವ ವೀಡಿಯೊ ಇದೆ.
ಕರ್ನಾಟಕದ ಮತ್ತೊಂದು ಪ್ರಸಿದ್ಧಿ ಡಿಜಿಟಲ್ ಸುದ್ದಿ ಮಾಧ್ಯಮ ಕನ್ನಡ ಪ್ರಭ ಕೂಡ ಜನವರಿ 17, 2025 ರಂದು ‘‘ಭಾರತ ಮೂಲದ ಚಂದ್ರ ಆರ್ಯ ಕೆನಡಾದ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದು, ಬಳಿಕ ಅವರು ಕನ್ನಡದಲ್ಲಿಯೇ ಮಾತನಾಡಿದ್ದು ಸುದ್ದಿಯಾಗಿದೆ’’ ಎಂದು ವರದಿ ಮಾಡಿದೆ.
ಇನ್ನು ಫೇಸ್ಬುಕ್ ಬಳಕೆದಾರರೊಬ್ಬರು ಜನವರಿ 17, 2025 ರಂದು ಚಂದ್ರ ಆರ್ಯಾ ಕನ್ನಡದಲ್ಲಿ ಮಾತನಾಡುವ ವೀಡಿಯೊ ಹಂಚಿಕೊಂಡು, ‘‘ಕೆನಡಾ ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿ ಕನ್ನಡದಲ್ಲೇ ಮಾತನಾಡಿದ ಚಂದ್ರ ಆರ್ಯ’’ ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ನೋಡಬಹುದು.
ವೀಡಿಯೊದಲ್ಲಿ ಏನಿದೆ?:
‘‘ಕೆನಡಾ ದೇಶದ ಸಂಸತ್ತಿನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದಕ್ಕೆ ಸಂತೋಷವಾಗುತ್ತಿದೆ. ಭಾರತ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ, ಸಿರಾ ತಾಲೂಕಿನ ವ್ಯಕ್ತಿಯೊಬ್ಬ ಕೆನಡಾದಲ್ಲಿ ಸಂಸತ್ ಸದಸ್ಯನಾಗಿ ಆಯ್ಕೆಯಾಗಿ ಮತ್ತು ಕನ್ನಡದಲ್ಲಿ ಮಾತನಾಡುವುದು, ಸುಮಾರು ಐದು ಕೋಟಿ ಕನ್ನಡಿಗರಿಗೆ ಹಮ್ಮೆಯ ಕ್ಷಣವಾಗಿದೆ. ಕೆನಡಾ ದೇಶದ ಕನ್ನಡಿಗರು 2018ನೇ ಇಸವಿಯಲ್ಲಿ ಕೆನಡಾದ ಈ ಸಂಸತ್ತಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದರು. ರಾಷ್ಟ್ರಕವಿ ಕುವೆಂಪು ಬರೆದಿರುವ ಹಾಗೂ ನಟಸಾರ್ವಭೌಮ ಡಾ. ರಾಜ್ಕುಮಾರ್ ಬರೆದಿರುವ ಭಾವಗೀತೆ ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂದು ಹೇಳುವ ಮೂಲಕ ನನ್ನ ಮಾತು ಮುಗಿಸುತ್ತಿದ್ದೇನೆ’’ ಎಂದು ವೀಡಿಯೊದಲ್ಲಿ ಚಂದ್ರ ಶರ್ಯಾ ಅವರು ಹೇಳಿದ್ದಾರೆ.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ಸೌತ್ ಚೆಕ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಚಂದ್ರ ಆರ್ಯ ಅವರು ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿದ ಬಳಿಕ ಕನ್ನಡದಲ್ಲಿ ಮಾತನಾಡಿಲ್ಲ. ಸದ್ಯ ವೈರಲ್ ಆಗುತ್ತಿರುವ ವೀಡಿಯೊ 2022ರಲ್ಲಿ ಅವರು ಸಂಸತ್ತಿನಲ್ಲಿ ಮಾತನಾಡಿದ ಸಂದರ್ಭದ್ದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದದಲ್ಲಿ ಚಂದ್ರ ಆರ್ಯಾ ಅವರು ಮಾತನಾಡುವ ಸಂದರ್ಭ ಅದನ್ನು ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ಸಂದರ್ಭ ಮೇ 20, 2022 ರಂದು ಆಜ್ತಕ್ ‘ಕೆನಡಾದ ಸಂಸತ್ತಿನಲ್ಲಿ ಕನ್ನಡ ಭಾಷೆಯಲ್ಲಿ ಭಾಷಣ ಮಾಡಿದಾಗ, ಸದನವು ಚಪ್ಪಾಳೆಯಿಂದ ಪ್ರತಿಧ್ವನಿಸಿತು’ ಎಂದು ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟಿಸಿರುವುದು ಕಂಡುಬಂದು.
ಇದರಲ್ಲಿರುವ ಮಾಹಿತಿ ಪ್ರಕಾರ, ‘‘ಕೆನಡಾದ ಸಂಸದ ಚಂದ್ರ ಆರ್ಯ ಅವರು ಸಂಸತ್ತಿನಲ್ಲಿ ಭಾಷಣ ಮಾಡುವಾಗ ತಮ್ಮ ಮಾತೃಭಾಷೆ ಕನ್ನಡ ಬಳಸಿದ್ದಾರೆ. ಚಂದ್ರ ಆರ್ಯ ಅವರ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಸ್ವತಃ ಚಂದ್ರ ಆರ್ಯ ಕೂಡ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಅವರು, ಭಾರತದ ಹೊರಗೆ ಜಗತ್ತಿನ ಯಾವುದೇ ದೇಶದ ಸಂಸತ್ತಿನಲ್ಲಿ ಕನ್ನಡ ಭಾಷೆ ಮಾತನಾಡುತ್ತಿರುವುದು ಇದೇ ಮೊದಲು’’ ಎಂದು ವರದಿಯಲ್ಲಿದೆ.
ಆಜ್ತಕ್ ಪ್ರಕಟಿಸಿರುವ ಸುದ್ದಿಯಲ್ಲಿ ಸ್ವತಃ ಚಂದ್ರ ಆರ್ಯ ಅವರೇ ಟ್ವೀಟ್ ಮಾಡಿರುವು ವೀಡಿಯೊವನ್ನು ಕೂಡ ನಾವು ಕಂಡಿದ್ದೇವೆ. ಮೇ. 20, 2022 ರಂದು ಅವರು ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಸದ್ಯ ವೈರಲ್ ಆಗುತ್ತಿರುವ ವೀಡಿಯೊ ಹಾಗೂ ಈ ವೀಡಿಯೊ ಒಂದೇ ಆಗಿದೆ.
ಈ ಫೋಸ್ಟ್ಗೆ ಕ್ಯಾಪ್ಶನ್ ನೀಡಿರುವ ಚಂದ್ರ ಆರ್ಯ ಅವರು, ‘‘ಕೆನಡಾದ ಸಂಸತ್ತಿನಲ್ಲಿ ನಾನು ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಿದ್ದೇನೆ. ಈ ಸುಂದರವಾದ ಭಾಷೆ ಸುದೀರ್ಘ ಇತಿಹಾಸವನ್ನು ಹೊಂದಿದೆ ಮತ್ತು ಸುಮಾರು 50 ಮಿಲಿಯನ್ ಜನರು ಮಾತನಾಡುತ್ತಾರೆ. ಭಾರತದ ಹೊರಗಿನ ಜಗತ್ತಿನ ಯಾವುದೇ ಸಂಸತ್ತಿನಲ್ಲಿ ಕನ್ನಡ ಮಾತನಾಡುತ್ತಿರುವುದು ಇದೇ ಮೊದಲು’’ ಎಂದು ಬರೆದುಕೊಂಡಿದ್ದಾರೆ.
I spoke in my mother tongue (first language) Kannada in Canadian parliament.This beautiful language has long history and is spoken by about 50 million people.This is the first time Kannada is spoken in any parliament in the world outside of India. pic.twitter.com/AUanNlkETT
— Chandra Arya (@AryaCanada) May 19, 2022
ಮೇ 21, 2022 ರಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ಯೂಟ್ಯೂಬ್ ಚಾನೆಲ್ನಲ್ಲಿ ‘‘Canadian MP Chandra Arya from Karnataka speaks in Kannada in Parliament’’ ಶೀರ್ಷಿಕೆಯಡಿ ಇದೇ ವೀಡಿಯೊ ಅಪ್ಲೋಡ್ ಮಾಡಲಾಗಿದೆ. ಭಾರತೀಯ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅವರು ಗುರುವಾರ ಕೆನಡಾ ಸಂಸತ್ತಿನಲ್ಲಿ ತಮ್ಮ ಮಾತೃಭಾಷೆ ಕನ್ನಡದಲ್ಲಿ ಮಾತನಾಡಿದರು. ತಮ್ಮ ಅನುಭವದ ಕ್ಲಿಪ್ ಅನ್ನು ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ ಎಂಬ ಮಾಹಿತಿ ಇದರಲ್ಲಿದೆ.
ಇನ್ನು ಗೂಗಲ್ನಲ್ಲಿ ಈ ಈ ಕುರಿತು ಸರ್ಚ್ ಮಾಡಿದಾಗ 2022ರ ಮೇ ತಿಂಗಳಿನಲ್ಲಿ ಚಂದ್ರ ಆರ್ಯಾ ಸಂಸತ್ತಿನಲ್ಲಿ ಕನ್ನಡ ಮಾತನಾಡಿದರು ಎಂದು ಅನೇಕ ಸುದ್ದಿ ಸಂಸ್ಥೆ ಇದೇ ವೈರಲ್ ವೀಡಿಯೊವನ್ನು ಯೂಟ್ಯೂಬ್ನಲ್ಲಿ ಹಾಗೂ ವೆಬ್ಸೈಟ್ನಲ್ಲಿ ಸುದ್ದಿ ಪ್ರಕಟಿಸಿರುವುದು ಸಿಕ್ಕಿದೆ. ಇದನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಚಂದ್ರ ಆರ್ಯ ಅವರು ಪ್ರಧಾನಿ ಹುದ್ದೆಗೆ ನಾಮಪತ್ರ ಸಲ್ಲಿಸಿದ ಬಳಿಕ ಕನ್ನಡದಲ್ಲಿ ಮಾತನಾಡಿದ್ದಾರೆ ಎಂದು ವೈರಲ್ ಆಗುತ್ತಿರುವ ವೀಡಿಯೊ ಇತ್ತೀಚಿನದ್ದಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ. ಇದು 2022ರಲ್ಲಿ ಅವರು ಸಂಸತ್ತಿನಲ್ಲಿ ಮಾತನಾಡಿದ ಸಂದರ್ಭದ್ದಾಗಿದೆ.