Fact Check: ದೆಹಲಿಯ ರಾಜೀವ್ ಗಾಂಧಿ ಮೆಟ್ರೋ ನಿಲ್ದಾಣದಲ್ಲಿ ಮಗುವಿನ ಅಪಹರಣ ಎಂದು ಸ್ಕ್ರಿಪ್ಟೆಡ್ ವೀಡಿಯೊ ವೈರಲ್
ಮಕ್ಕಳ ಅಪಹರಣದ ಈ ವೀಡಿಯೊ ನಿಜವಾದ ಘಟನೆಯಲ್ಲ, ಬದಲಿಗೆ ಜಾಗೃತಿ ಉದ್ದೇಶಕ್ಕಾಗಿ ರಚಿಸಲಾದ ಸ್ಕ್ರಿಪ್ಟ್ ಮಾಡಿದ ಕ್ಲಿಪ್ ಎಂದು ನಾವು ಖಚಿತವಾಗಿ ಹೇಳುತ್ತೇವೆ.
By Vinay Bhat
Claim:ದೆಹಲಿಯ ರಾಜೀವ್ ಗಾಂಧಿ ಮೆಟ್ರೋ ನಿಲ್ದಾಣದಲ್ಲಿ ಮಗುವಿನ ಅಪಹರಣ.
Fact:ಈ ಮಾಹಿತಿ ತಪ್ಪಾಗಿದೆ. ವೈರಲ್ ಆದ ವೀಡಿಯೊವನ್ನು ಸ್ಕ್ರಿಪ್ಟ್ ಮಾಡಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಮೆಟ್ರೋ ನಿಲ್ದಾಣದಲ್ಲಿ ಮಗುವನ್ನು ಅಪಹರಿಸುತ್ತಿರುವುದನ್ನು ಕಾಣಬಹುದು. ಹಳದಿ ಹೂಡಿ ಧರಿಸಿದ ವ್ಯಕ್ತಿಯೊಬ್ಬ ಮೆಟ್ರೋ ನಿಲ್ದಾಣದಲ್ಲಿ ಮಗುವನ್ನು ಹಿಡಿದುಕೊಂಡು ಫೋನ್ ಮೂಲಕ ಮಾತಾಡುತ್ತಾ ಇರುತ್ತಾನೆ. ಇದೇವೇಳೆ ಹತ್ತಿರದಲ್ಲಿ ನಿಂತಿದ್ದ ಇಬ್ಬರು ಹುಡುಗರು ತಮ್ಮತಮ್ಮಲ್ಲೇ ಮಾತನಾಡಿಕೊಳ್ಳುವುದನ್ನು ಕಾಣಬಹುದು. ನಂತರ, ಈ ಹುಡುಗರಲ್ಲಿ ಒಬ್ಬ ಹಳದಿ ಹೂಡಿ ಧರಿಸಿದ ವ್ಯಕ್ತಿಯ ಬಳಿಗೆ ಹೋಗಿ ಅವನ ಫೋನ್ ತೋರಿಸಿ ಕೆಲವು ಪ್ರಶ್ನೆಗಳನ್ನು ಕೇಳುತ್ತಾನೆ. ಆಗ ಆತ ಕೈ ಹಿಡಿದುಕೊಂಡಿದ್ದ ಮಗುವಿನ ಕೈಯನ್ನು ಬಿಟ್ಟು ಆ ವ್ಯಕ್ತಿಗೆ ಕೈ ಸನ್ನೆ ಮೂಲಕ ದಾರಿ ತೋರಿಸಲು ಪ್ರಾರಂಭಿಸುತ್ತಾನೆ. ಅಷ್ಟರಲ್ಲಿ, ಹಿಂದೆ ನಿಂತಿದ್ದ ಇನ್ನೊಬ್ಬ ಹುಡುಗ ಮಗುವಿನ ಬಾಯಿಯ ಮೇಲೆ ಕೈ ಇಟ್ಟು, ಅವನನ್ನು ಎತ್ತಿಕೊಂಡು ಅಲ್ಲಿಂದ ಓಡಿಹೋಗುತ್ತಾನೆ.
ಫೇಸ್‌ಬುಕ್ ಬಳಕೆದಾರರು ಈ ವೀಡಿಯೊವನ್ನು ಮಾರ್ಚ್ 26, 2025 ರಂದು ಹಂಚಿಕೊಂಡು, ‘‘ದೆಹಲಿಯ ರಾಜೀವ್ ಗಾಂಧಿ ಮೆಟ್ರೋ ನಿಲ್ದಾಣದಲ್ಲಿ ಸುತ್ತಮುತ್ತಲಿನ ಚಟುವಟಿಕೆಗಳನ್ನು ನಿರ್ಲಕ್ಷಿಸುತ್ತಾ ಮೊಬೈಲ್‌ನಲ್ಲಿ ಬ್ಯುಸಿಯಾಗಿರುವ ತಂದೆ. ಆ ಒಂದೇ ಕ್ಷಣದಲ್ಲಿ ಕೈ ಬಿಟ್ಟ ಮಗು ಕ್ಷಣಾರ್ಧದಲ್ಲಿ ಹೇಗೆ ಕಿಡ್ನಾಪ್ ಆಯಿತು ನೋಡಿ. *ಇದು ಒಂದು ರೀತಿಯ ಜಿಹಾದ್. ಚಿಕ್ಕ ಮಕ್ಕಳೊಂದಿಗೆ ಬೇಸಿಗೆ ರಜೆಗಳು ದೀರ್ಘ ಪ್ರವಾಸಗಳೊಂದಿಗೆ ಬಂದಿವೆ. ಪ್ರಯಾಣ ಮಾಡುವಾಗ, ತುಂಬಾ ಜಾಗರೂಕರಾಗಿರಿ ಮತ್ತು ಜಾಗರೂಕರಾಗಿರಿ’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದೊಂದು ಸ್ಕ್ರಿಪ್ಟ್ ಮಾಡಿದ ವೀಡಿಯೊ ಆಗಿದ್ದು, ಜಾಗೃತಿ ಉದ್ದೇಶಕ್ಕಾಗಿ ಮಾಡಲಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಮೂಲಕ ಸರ್ಚ್ ನಡೆಸಿದ್ದೇವೆ. ಆಗ ಮಾರ್ಚ್ 23, 2025 ರಂದು official_rajthakur__ ಹೆಸರಿನ ಇನ್‌ಸ್ಟಾಗ್ರಾಮ್ ಪೇಜ್ನಲ್ಲಿ ಅಪ್ಲೋಡ್ ಮಾಡಲಾದ ಅದೇ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ಅದರ ಜೊತೆಗೆ ‘‘ದೆಹಲಿ ರಾಜೀವ್ ಚೌಕ್ನಲ್ಲಿ ಮಗುವಿನ ಕಳ್ಳತನವಾಗಿದೆ’’ ಎಂಬ ಶೀರ್ಷಿಕೆ ನೀಡಲಾಗಿದೆ. ಜೊತೆಗೆ ಕೇಳಗಡೆ ‘‘ಈ ವೀಡಿಯೊವನ್ನು ಸಂಪೂರ್ಣವಾಗಿ ಸ್ಕ್ರಿಪ್ಟ್ ಮಾಡಲಾಗಿದೆ. ಇದು ನಿಜವಲ್ಲ, ಎಲ್ಲಾ ವಿಷಯವು ಮನರಂಜನೆ ಮತ್ತು ಜಾಗೃತಿಗಾಗಿ ಮಾತ್ರ’’ ಎಂದು ಬರೆಯಲಾಗಿದೆ.
ಹಾಗೆ ಇದೇ ಇನ್‌ಸ್ಟಾಗ್ರಾಮ್ ಪೇಜ್ನಲ್ಲಿ ಮೆಟ್ರೋದ ಒಳಗಡೆ ಅದೇ ಹುಡುಗ ಅದೇ ಮಗುವನ್ನು ಅಪಹರಿಸುವ ಮತ್ತೊಂದು ವೀಡಿಯೊ ಕೂಡ ನಮಗೆ ಕಂಡುಬಂತು. ಇದನ್ನು ಕೂಡ ಮಾರ್ಚ್ 23, 2025 ರಂದು ಅಪ್ಲೋಡ್ ಮಾಡಲಾಗಿದೆ. ವೈರಲ್ ವೀಡಿಯೊದಲ್ಲಿ ಅಪಹರಿಸಲ್ಪಟ್ಟಿದ್ದ ಮಗುವನ್ನು ಇಲ್ಲಿಯೂ ಅಪಹರಿಸಲಾಗುತ್ತಿದೆ. ಈ ವೀಡಿಯೊದ ಶೀರ್ಷಿಕೆಯಲ್ಲಿ ಕೂಡ ಇದು ಸ್ಕ್ರಿಪ್ಟ್ ಮಾಡಲಾದ ವೀಡಿಯೊ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಈ ಪುಟದಲ್ಲಿ ಇಂತಹ ಇನ್ನೂ ಹಲವು ವೀಡಿಯೊಗಳಿದ್ದು, ಎಲ್ಲದರ ವಿವರಣೆಯಲ್ಲೂ ಇದು ಸ್ಕ್ರಿಪ್ಟ್ ಮಾಡಲಾಗಿದೆ ಎಂದು ಬರೆಯಲಾಗಿದೆ. ಈ ಇನ್‌ಸ್ಟಾಗ್ರಾಮ್ ಖಾತೆಯ ಬಯೋ ಪ್ರಕಾರ, ರಾಜ್ ಠಾಕೂರ್ ದೆಹಲಿಯಲ್ಲಿ ನೆಲೆಸಿರುವ ಕಂಟೆಂಟ್ ಕ್ರಿಯೇಟರ್. ಅವರ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ ಕೂಡ ಇದೇ ರೀತಿಯ ಸ್ಕ್ರಿಪ್ಟ್ ಮಾಡಿದ ಹಲವು ವೀಡಿಯೊಗಳಿವೆ. ಮಾರ್ಚ್ 19 ರಂದು ರಾಜ್ ಠಾಕೂರ್ ಅವರ ಫೇಸ್‌ಬುಕ್ ಪುಟದಲ್ಲಿ ಹಾಗೂ ಯೂಟ್ಯೂಬ್ ಖಾತೆಯಲ್ಲಿ ಕೂಡ ಇದೇ ವೈರಲ್ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಮಕ್ಕಳ ಅಪಹರಣದ ಈ ವೀಡಿಯೊ ನಿಜವಾದ ಘಟನೆಯಲ್ಲ, ಬದಲಿಗೆ ಜಾಗೃತಿ ಉದ್ದೇಶಕ್ಕಾಗಿ ರಚಿಸಲಾದ ಸ್ಕ್ರಿಪ್ಟ್ ಮಾಡಿದ ಕ್ಲಿಪ್ ಎಂದು ನಾವು ಖಚಿತವಾಗಿ ಹೇಳುತ್ತೇವೆ.