Fact Check: ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಜೀವಂತವಾಗಿ ಸುಟ್ಟುಹಾಕಿದ್ದಾರೆಂದು ಚೀನಾದ ಹ್ಯಾಲೋವೀನ್ ಪಾರ್ಟಿಯ ವೀಡಿಯೊ ವೈರಲ್

ಸಾಮಾಜಿಕ ಮಾಧ್ಯಮದಲ್ಲಿ ಆಘಾತಕಾರಿ ವೀಡಿಯೊ ಒಂದು ಹರಿದಾಡುತ್ತಿದ್ದು, ಇದರಲ್ಲಿ ಮನುಷ್ಯರನ್ನು ಜೀವಂತವಾಗಿ ಸುಟ್ಟುಹಾಕಲಾಗಿದೆ ಎಂದು ಹೇಳಲಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂ ಸಹೋದರ ಸಹೋದರಿಯರ ಮೇಲಿನ ಚಿತ್ರಹಿಂಸೆ ಉತ್ತುಂಗಕ್ಕೇರಿದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

By Vinay Bhat  Published on  19 Dec 2024 4:26 PM IST
Fact Check: ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಜೀವಂತವಾಗಿ ಸುಟ್ಟುಹಾಕಿದ್ದಾರೆಂದು ಚೀನಾದ ಹ್ಯಾಲೋವೀನ್ ಪಾರ್ಟಿಯ ವೀಡಿಯೊ ವೈರಲ್
Claim: ಬಾಂಗ್ಲಾದೇಶದಲ್ಲಿ ಹಿಂದೂ ಸಹೋದರ ಸಹೋದರಿಯರ ಮೇಲಿನ ಚಿತ್ರಹಿಂಸೆ ಉತ್ತುಂಗಕ್ಕೇರಿದೆ.
Fact: ಇದು ಚೀನಾದಲ್ಲಿ ನಡೆದ ಹ್ಯಾಲೋವೀನ್ ಪಾರ್ಟಿಯಲ್ಲಿ ಮನುಷ್ಯಾಕೃತಿಗಳನ್ನು ಸುಡುವ ವೀಡಿಯೊ ಆಗಿದೆ.

(Content Warning: This article reports graphic visuals, which some readers may find distressing. Reader discretion is advised.)

ಮಾಜಿ ಪ್ರಧಾನಿ ಶೇಖ್ ಹಸೀನಾ ಬಾಂಗ್ಲಾದೇಶವನ್ನು ತೊರೆದು ಮೊಹಮ್ಮದ್ ಯೂನಸ್ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆಯಾದ ನಂತರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು, ವಿಶೇಷವಾಗಿ ಹಿಂದೂಗಳ ಮೇಲೆ ಹಿಂಸಾಚಾರದ ಘಟನೆಗಳು ವರದಿಯಾಗುತ್ತಿವೆ. ಇದರ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ಆಘಾತಕಾರಿ ವೀಡಿಯೊ ಒಂದು ಹರಿದಾಡುತ್ತಿದ್ದು, ಇದರಲ್ಲಿ ಮನುಷ್ಯರನ್ನು ಜೀವಂತವಾಗಿ ಸುಟ್ಟುಹಾಕಲಾಗಿದೆ ಎಂದು ಹೇಳಲಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂ ಸಹೋದರ ಸಹೋದರಿಯರ ಮೇಲಿನ ಚಿತ್ರಹಿಂಸೆ ಉತ್ತುಂಗಕ್ಕೇರಿದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಫೇಸ್​ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಎಲ್ಲಾ ಹಿಂದೂಗಳು ಮತ್ತು ಭಾರತದ ಕೇಂದ್ರ, ರಾಜ್ಯ ಸರ್ಕಾರಗಳು ವಿಶಾಲ ಕಣ್ಣುಗಳಿಂದ ನೋಡಬೇಕು. ಬಾಂಗ್ಲಾದೇಶದಲ್ಲಿ ಹಿಂದೂ ಸಹೋದರ ಸಹೋದರಿಯರ ಮೇಲಿನ ಚಿತ್ರಹಿಂಸೆ ಉತ್ತುಂಗಕ್ಕೇರಿದೆ! ಸಾಧ್ಯವಾದರೆ ಇದನ್ನು ಆದಷ್ಟು ಜನರಿಗೆ ಹರಡಿ, ಜಾತಿಗಳಾಗಿ ಒಡೆದು ಹೋಗಿರುವ ಹಿಂದೂಗಳು ಮತ್ತು ಚುನಾವಣೆಯಲ್ಲಿ ಸಿಕ್ಕು ಸೆಕ್ಯುಲರ್ ಸರ್ಕಾರಗಳು ನೆಮ್ಮದಿಯಿಂದ ನಿದ್ದೆ ಮಾಡದಿರಲಿ’’ ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

Fact Check:

ನ್ಯೂಸ್‌ ಮೀಟರ್ ಈ ಹೇಳಿಕೆಯು ಸುಳ್ಳು ಎಂದು ಕಂಡುಹಿಡಿದಿದೆ. ಇದು ಚೀನಾದಲ್ಲಿ ನಡೆದ ಹ್ಯಾಲೋವೀನ್ ಪಾರ್ಟಿಯಲ್ಲಿ ಮನುಷ್ಯಾಕೃತಿಗಳನ್ನು ಸುಡುವ ವೀಡಿಯೊ ಆಗಿದೆ.

ನಿಜಾಂಶವನ್ನು ತಿಳಿಯಲು ನಾವು ವೀಡಿಯೊದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಅಕ್ಟೋಬರ್ 31, 2018 ರಂದು ಇನ್​ಸ್ಟಾಗ್ರಾಮ್​ನಲ್ಲಿ ಇದೇ ರೀತಿಯ ವೀಡಿಯೊವನ್ನು ಕಂಡುಕೊಂಡಿದ್ದೇವೆ. ಸ್ಥಳವನ್ನು ಹೆಂಗ್ಕಿನ್, ಗುವಾಂಗ್ಡಾಂಗ್, ಚೀನಾ ಎಂದು ಟ್ಯಾಗ್ ಮಾಡಲಾಗಿದೆ. ವೀಡಿಯೊದಲ್ಲಿ ಹ್ಯಾಲೋವೀನ್ ವೇಷಭೂಷಣದಲ್ಲಿರುವ ವ್ಯಕ್ತಿ ರೋಸ್ಟರ್ ಅನ್ನು ಬೆಂಕಿಯ ಮೇಲೆ ತಿರುಗಿಸುವುದನ್ನು ಸಹ ಕಾಣಬಹುದು. ಹೀಗಾಗಿ ವೈರಲ್ ವೀಡಿಯೊ ಇತ್ತೀಚೆಗಲ್ಲ ಎಂಬುದು ಇದರಿಂದ ದೃಢಪಟ್ಟಿದೆ.

ಇದರ ಜೊತೆಗೆ ನಾವು ಜನವರಿ 14, 2020 ರಂದು ಸಿನ್ ಚ್ಯೂ ಅವರ ಚೈನೀಸ್ ವರದಿಯನ್ನು ಸಹ ಕಂಡುಕೊಂಡಿದ್ದೇವೆ. ಇದರಲ್ಲಿ ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್ ಕೂಡ ಇದೆ. ವರದಿಯ ಪ್ರಕಾರ, ‘‘ನೈಜೀರಿಯಾದ ರೆಸ್ಟೋರೆಂಟ್‌ನಲ್ಲಿ ಮಾನವ ಮಾಂಸವನ್ನು ಜೀವಂತವಾಗಿ ಸುಡಲಾಗುತ್ತಿದೆ ಎಂಬ ಸುಳ್ಳು ಹೇಳಿಕೆಯೊಂದಿಗೆ ವೀಡಿಯೊವನ್ನು ಈ ಹಿಂದೆ ವೈರಲ್ ಮಾಡಲಾಗಿತ್ತು. ಆದಾಗ್ಯೂ, ಅಕ್ಟೋಬರ್ 2018 ರಲ್ಲಿ ಚೀನಾದ ಝುಹೈನಲ್ಲಿರುವ ಚಿಮೆಲಾಂಗ್ ಓಷನ್ ಕಿಂಗ್ಡಮ್ ಥೀಮ್ ಪಾರ್ಕ್ನಲ್ಲಿ ಹ್ಯಾಲೋವೀನ್ ಪಾರ್ಟಿಯಲ್ಲಿ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ’’ ಎಂಬ ಮಾಹಿತಿ ಇದರಲ್ಲಿದೆ.

ಹೆಚ್ಚುವರಿಯಾಗಿ, "ಹ್ಯಾಲೋವೀನ್ ಪಾರ್ಟಿ ಅಟ್ ಚಿಮೆಲಾಂಗ್ ಓಷನ್ ಕಿಂಗ್‌ಡಮ್" ಎಂಬ ಕೀವರ್ಡ್‌ಗಳೊಂದಿಗೆ ಹುಡುಕಿದಾಗ ನಾವು ಅಕ್ಟೋಬರ್ 27 2018 ರಿಂದ ಯೂಟ್ಯೂಬ್ ಚಾನೆಲ್ ಒಂದರಲ್ಲಿ ವ್ಲಾಗ್ ಒಂದನ್ನು ಕಂಡುಕೊಂಡಿದ್ದೇವೆ, ಇದು ವೈರಲ್ ವೀಡಿಯೊದಲ್ಲಿನ ದೃಶ್ಯಗಳಿಗೆ ಹೋಲಿಕೆಯಾಗುತ್ತಿದೆ. ಅಸ್ಥಿಪಂಜರಗಳು, ತಲೆಬುರುಡೆಗಳು ಮತ್ತು ಕತ್ತರಿಸಿದ ಮಾನವ ಅಂಗಗಳಂತಹ ಆರ್ಟ್​​ನೊಂದಿಗೆ ಹ್ಯಾಲೋವೀನ್ ವೇಷಭೂಷಣಗಳಲ್ಲಿ ಅಲ್ಲಿಯವರು ಕಾಣಿಸಿಕೊಳ್ಳುತ್ತಾರೆ. 5:26 ಟೈಮ್‌ಸ್ಟ್ಯಾಂಪ್‌ನಲ್ಲಿ, ಮನುಷ್ಯಾಕೃತಿಗಳನ್ನು ಸುಡುವ ಹಾಗೂ ವೈರಲ್ ಕ್ಲಿಪ್ ಅನ್ನು ಹೋಲುವ ದೃಶ್ಯಗಳನ್ನು ಕಾಣಬಹುದು.

ಚೈಮೆಲಾಂಗ್ ಓಷನ್ ಕಿಂಗ್ಡಮ್, ಚೀನಾದ ಝುಹೈನಲ್ಲಿರುವ ಥೀಮ್ ಪಾರ್ಕ್, ಈ ರೀತಿಉ ಈವೆಂಟ್‌ಗಳನ್ನು ಆಯೋಜಿಸುವಲ್ಲಿ ಹೆಸರುವಾಸಿಯಾಗಿದೆ. ವೈರಲ್ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಅಲಂಕಾರಗಳಿಗೆ ಹೊಂದಿಕೆಯಾಗುವ ಹಲವಾರು ಸಂದರ್ಶಕರು-ಅಪ್‌ಲೋಡ್ ಮಾಡಿದ ಫೋಟೋಗಳನ್ನು ನಾವು ಗೂಗಲ್ ಮ್ಯಾಪ್ಸ್ ಮತ್ತು ಫೇಸ್​ಬುಕ್​​ನಲ್ಲಿ ಕಂಡುಕೊಂಡಿದ್ದೇವೆ.

ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಜೀವಂತವಾಗಿ ಸುಡುವುದನ್ನು ವೀಡಿಯೊ ತೋರಿಸುತ್ತದೆ ಎಂಬ ಹೇಳಿಕೆಯು ಸುಳ್ಳು ಎಂದು ನಾವು ತೀರ್ಮಾನಿಸುತ್ತೇವೆ.

Claim Review:ಬಾಂಗ್ಲಾದೇಶದಲ್ಲಿ ಹಿಂದೂ ಸಹೋದರ ಸಹೋದರಿಯರ ಮೇಲಿನ ಚಿತ್ರಹಿಂಸೆ ಉತ್ತುಂಗಕ್ಕೇರಿದೆ.
Claimed By:Facebook User
Claim Reviewed By:News Meter
Claim Source:Social Media
Claim Fact Check:False
Fact:ಇದು ಚೀನಾದಲ್ಲಿ ನಡೆದ ಹ್ಯಾಲೋವೀನ್ ಪಾರ್ಟಿಯಲ್ಲಿ ಮನುಷ್ಯಾಕೃತಿಗಳನ್ನು ಸುಡುವ ವೀಡಿಯೊ ಆಗಿದೆ.
Next Story