ಭಾರತ ಮತ್ತು ಚೀನಾ ತಮ್ಮ ವಿವಾದಿತ ಗಡಿಯಲ್ಲಿ ಮಿಲಿಟರಿ ಬಿಕ್ಕಟ್ಟನ್ನು ಕೊನೆಗೊಳಿಸಲು ಮಹತ್ವದ ಒಪ್ಪಂದ ಮಾಡಿಕೊಂಡಿವೆ. ರಷ್ಯಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಪರಸ್ಪರ ಹ್ಯಾಂಡ್ ಶೇಕ್ ಮಾಡಿ ಶಾಂತಿ ಮಾತುಕತೆಗೆ ಮುನ್ನುಡಿ ಬರೆದರು. ಸೈನ್ಯವನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆಯು ಮಂಗಳವಾರ ಡೆಪ್ಸಾಂಗ್ ಮೈದಾನ ಮತ್ತು ಡೆಮ್ಚೋಕ್ನಲ್ಲಿ ಪ್ರಾರಂಭವಾಯಿತು. ಇದನ್ನು ಭಾರತೀಯ ಸೇನಾ ಮೂಲಗಳು ಖಚಿತಪಡಿಸಿವೆ. ಇದೀಗ ಲಡಾಖ್‌ನಲ್ಲಿ ಸೈನ್ಯವನ್ನು ಹಿಂತೆಗೆದುಕೊಳ್ಳುವ ಸಂದರ್ಭ ಚೀನಾ ಸೈನಿಕರು "ಜೈ ಶ್ರೀ ರಾಮ್" ಎಂದು ಘೋಷಣೆ ಕೂಗಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಭಾರತೀಯ ಸೈನಿಕರು ಚೀನೀ ಸೈನಿಕರಿಗೆ ಹೇಗೆ ಉಚ್ಚರಿಸಬೇಕು ಎಂಬುದನ್ನು ಕಲಿಸುತ್ತಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಭಾರತ - ಚೀನೀ ಸೈನಿಕರಿಂದ ಜೊತೆಯಾಗಿ 'ಜೈ ಶ್ರೀರಾಮ್' ಘೋಷಣೆ!. ಇತ್ತೀಚಿಗೆ ಭಾರತ ಮತ್ತು ಚೀನಾ ಸರ್ಕಾರದ ಅಧಿಕಾರಿಗಳ ಮಟ್ಟದಲ್ಲಿ ಆದ ಒಪ್ಪಂದದ ಪ್ರಕಾರ (ಇದನ್ನು ನಂತರ ಪ್ರಧಾನಿ ಶ್ರೀ ಮೋದಿ ಮತ್ತು ಚೀನಾ ಅಧ್ಯಕ್ಷ ಷೀ ಜಿಂಪಿಂಗ್ ಕಜ಼ಾನ್ ಸಮ್ಮೇಳನದಲ್ಲಿ ಅನುಮೋದಿಸಿದ್ದಾರೆ) ಭಾರತದ ಮತ್ತು ಚೀನೀಯರ ಹೆಚ್ಚುವರಿ ಸೈನಿಕರು ಗಡಿ ಭಾಗದಿಂದ ಹಿಂದಿರುಗಿ ಹೋಗಲು ಶುರು ಮಾಡಿದ್ದಾರೆ. ಅಂತಹ ಒಂದು ಕಾರ್ಯಕ್ರಮದಲ್ಲಿ ಭಾರತ ಚೀನೀ ಸೈನಿಕರು ಪರಸ್ಪರ ಔತಣ ಕೂಟ ಏರ್ಪಡಿಸಿ ನಂತರ ಜೊತೆಯಾಗಿ 'ಜೈ ಶ್ರೀ ರಾಮ್' ಘೋಷಣೆ ಮೊಳಗಿಸಿ ತಮ್ಮ ವಾಪಾಸಾತಿಯನ್ನು ಶುರು ಮಾಡಿದ್ದಾರೆ!’’ ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ, ಈ ವೀಡಿಯೊ 2024 ರ ಜನವರಿಯಿಂದಲೂ ಸಾಮಾಜಿಕ ಮಾಧ್ಯಮದಲ್ಲಿದೆ ಎಂಬುದು ಕಂಡುಬಂದಿದೆ. ಹೀಗಾಗಿ ಈ ವೀಡಿಯೊ ಇತ್ತೀಚಿನದ್ದಲ್ಲ ಎಂಬುದು ಸ್ಪಷ್ಟವಾಗಿದೆ.
ನಿಜಾಂಶವನ್ನಿ ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಹಲವು ತಿಂಗಳ ಹಿಂದೆಯೇ (ಜನವರಿ 22, 2024 ರಂದು) ಈ ವೀಡಿಯೊ ಅನೇಕ ಕಡೆಗಳಲ್ಲಿ ಅಪ್ಲೋಡ್ ಆಗಿರುವುದು ಸಿಕ್ಕಿದೆ. ಇದು ಭಾರತ-ಚೀನಾ ಪಡೆಗಳ ವಾಪಸಾತಿಯ ಹಲವಾರು ತಿಂಗಳುಗಳ ಹಿಂದೆಯೇ ಇದೆ ಎಂದು ಸ್ಪಷ್ಟಪಡಿಸುತ್ತದೆ.
ಹೆಚ್ಚಿನ ಹುಡುಕಾಟ ನಡೆಸಿದಾಗ ಈ ವರ್ಷದ ಜನವರಿಯಲ್ಲಿ ಈ ವೀಡಿಯೊದ ಕುರಿತು ಪ್ರಕಟವಾದ ವರದಿಗಳು ನಮಗೆ ಸಿಕ್ಕಿದೆ. ಇಂಡಿಯಾ ಟಿವಿ ಪ್ರಕಾರ, ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದ ಸಂದರ್ಭದಲ್ಲಿ ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಗಡಿಯ ಎರಡೂ ಬದಿಗಳಲ್ಲಿನ ಸೈನಿಕರು ಪೂರ್ವ ಲಡಾಖ್ ನ ಡೆಪ್ಸಾಂಗ್ ಮತ್ತು ಡೆಮ್ಚೋಕ್ನಲ್ಲಿ ಹಿಂತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ ಎಂದು ಹೇಳಿದೆ.
ಜನವರಿ 23, 2024 ರಂದು ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, “ಚೀನಾದ ಸೈನಿಕರು ಭಾರತೀಯ ಸೈನಿಕರೊಂದಿಗೆ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ‘ಜೈ ಶ್ರೀ ರಾಮ್’ ಎಂಬ ಹಿಂದೂ ಘೋಷಣೆಯನ್ನು ಕೂಗುತ್ತಿರುವ ದಿನಾಂಕವಿಲ್ಲದ ವೀಡಿಯೊ ವೈರಲ್ ಆಗಿದೆ. ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ದಿನದಂದು ಈ ವೀಡಿಯೊ ಹೊರಬಂದಿದೆ. ವೈರಲ್ ವೀಡಿಯೊಗೆ ಭಾರತೀಯ ಸೇನೆಯಾಗಲೀ ಅಥವಾ ಚೀನಾದ ಮಿಲಿಟರಿಯಾಗಲೀ ಈವರೆಗೆ ಪ್ರತಿಕ್ರಿಯಿಸಿಲ್ಲ.’’ ಎಂದು ಬರೆಯಲಾಗಿದೆ.
ಇದೇ ರೀತಿ ಅನೇಕ ಮಾಧ್ಯಮಗಳು ಜನವರಿ 2024 ರಲ್ಲಿ ವೀಡಿಯೊವನ್ನು ಹಂಚಿಕೊಂಡಿರುವುದನ್ನು ನಾವು ಗಮನಿಸಿದ್ದೇವೆ. ಅವುಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
ಹೀಗಾಗಿ ಭಾರತ-ಚೀನಾ ಗಡಿಯಲ್ಲಿ ಇತ್ತೀಚೆಗೆ ನಡೆದ ಪಡೆಗಳ ಹಿಂತೆಗೆತದ ಸಂದರ್ಭದ ವೀಡಿಯೊ ಇದಲ್ಲ ಎಂಬುದನ್ನು ನ್ಯೂಸ್ ಮೀಟರ್ ಖಚಿತವಾಗಿ ಹೇಳುತ್ತದೆ. 2024 ರ ಜನವರಿಯಿಂದಲೂ ಸಾಮಾಜಿಕ ಮಾಧ್ಯಮದಲ್ಲಿ ಈ ವೀಡಿಯೊ ಕಂಡುಬಂದಿದೆ.