ಆಗಸ್ಟ್ 31 ರಿಂದ ಸೆಪ್ಟೆಂಬರ್ 01 ರವರೆಗೆ ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (SCO) ರಾಷ್ಟ್ರಗಳ ಮುಖ್ಯಸ್ಥರ 25 ನೇ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಈ ಶೃಂಗಸಭೆಯ ಹೊರತಾಗಿ, ಪ್ರಧಾನಿ ಮೋದಿ ಅವರು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾದರು. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೊ ವೈರಲ್ ಆಗುತ್ತಿದೆ. ಇದರಲ್ಲಿ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಚೀನಾದ ನಿಯೋಗವನ್ನು ಭೇಟಿಯಾಗುತ್ತಿರುವುದಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಈ ಘಟನೆ ಸಂಭವಿಸಿದೆ ಮತ್ತು ಸೋನಿಯಾ ಗಾಂಧಿ ಅತಿಥಿಗಳನ್ನು ಸ್ವಾಗತಿಸುವಲ್ಲಿ ಮುಂದಾಳತ್ವ ವಹಿಸಿದ್ದರು ಮತ್ತು ಆ ಮೂಲಕ ಮನಮೋಹನ್ ಸಿಂಗ್ ಅವರನ್ನು ಕಡೆಗಣಿಸಿದರು ಎಂದು ವೀಡಿಯೊ ಜೊತೆಗಿನ ಹೇಳಿಕೆ ಸೂಚಿಸುತ್ತದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಕಾಂಗ್ರೆಸ್ ಪಕ್ಷ ಅಧಿಕಾರದ ಒಂದು ಕಾಲದಲ್ಲಿ ಭಾರತದ ಪ್ರಧಾನ ಮಂತ್ರಿಯ ಪರಿಸ್ಥಿತಿ ಹೀಗಿತ್ತು. 2014ರ ನಂತರ ಈಗಿನ ಕಾಲದಲ್ಲಿ ಹೀಗೆ ಇಲ್ಲ ಯಾಕ್ ಅಂದ್ರೆ ಮೋದಿ ಯುಗದ ನವ ಭಾರತದ ಭಾರತ ಸರ್ಕಾರ’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಈ ಹೇಳಿಕೆ ದಾರಿತಪ್ಪಿಸುವಂತಿದೆ ಎಂದು ಕಂಡುಬಂದಿದೆ. ವಾಸ್ತವವಾಗಿ ಈ ವೀಡಿಯೊ 2015 ರದ್ದಾಗಿದೆ, ಆಗ ಮನಮೋಹನ್ ಸಿಂಗ್ ಪ್ರಧಾನಿಯಾಗಿರಲಿಲ್ಲ. 2015 ರಲ್ಲಿ ಚೀನಾದ ನಿಯೋಗದೊಂದಿಗಿನ ಈ ಸಭೆಯ ಸಮಯದಲ್ಲಿ, ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು ಮತ್ತು ಮನಮೋಹನ್ ಸಿಂಗ್ ರಾಜ್ಯಸಭಾ ಸದಸ್ಯರಾಗಿದ್ದರು.
ನಿಜಾಂಶವನ್ನು ತಿಳಿಯಲು ನಾವು ಮೊದಲು ವೀಡಿಯೊದ ಪ್ರಮುಖ ಚೌಕಟ್ಟುಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಾಟವನ್ನು ಮಾಡಿದೆವು. ಈ ಸಂದರ್ಭ, ಜೂನ್ 16, 2015 ರಂದು ಕಾಂಗ್ರೆಸ್‌ನX ಖಾತೆಯಲ್ಲಿ ವೀಡಿಯೊದಲ್ಲಿ ಕಂಡುಬರುವ ದೃಶ್ಯಗಳ ಲಗತ್ತಿಸಲಾದ ಚಿತ್ರಗಳೊಂದಿಗೆ ಪೋಸ್ಟ್ ಅನ್ನು ನಾವು ಕಂಡುಕೊಂಡೆವು. ಪೋಸ್ಟ್‌ನ ಶೀರ್ಷಿಕೆ ಹೀಗಿದೆ, "ಚೀನೀ ಸಂಸದೀಯ ನಿಯೋಗವು ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದೆ."
ಈ ಮಾಹಿತಿಯ ಆಧಾರದ ಮೇಲೆ ಕೀವರ್ಡ್‌ಗಳೊಂದಿಗೆ ಸುದ್ದಿಗಳನ್ನು ಹುಡುಕಿದಾಗ, ಹಲವಾರು ವರದಿಗಳು ನಮಗೆ ಕಂಡುಬಂದವು. ಜೂನ್ 16, 2015 ರಂದು ಝೀ ನ್ಯೂಸ್ ವರದಿಯು ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್‌ಗಳನ್ನು ಬಳಸಿದೆ. ವರದಿಯ ಪ್ರಕಾರ, "ಚೀನಾದ ಸಂಸದೀಯ ನಿಯೋಗವು ಮಂಗಳವಾರ ದೆಹಲಿಯಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಹಾಜರಿದ್ದರು. ರಾಷ್ಟ್ರೀಯ ಪೀಪಲ್ಸ್ ಕಾಂಗ್ರೆಸ್ ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಂಗ್ ಡೆಜಿಯಾಂಗ್ ನೇತೃತ್ವದ ನಿಯೋಗವು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಹಲವಾರು ಪ್ರಮುಖ ಭಾರತೀಯ ಸಂಸದರನ್ನು ಭೇಟಿ ಮಾಡಿತ್ತು."
ಸಭೆಯ ಪೂರ್ಣ ದೃಶ್ಯಗಳನ್ನು ಕಾಂಗ್ರೆಸ್ ಪಕ್ಷದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಜೂನ್ 16, 2025 ರಂದು ಪೋಸ್ಟ್ ಮಾಡಲಾಗಿದೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ, ವೈರಲ್ ಹೇಳಿಕೆ ದಾರಿತಪ್ಪಿಸುವಂತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ. ಈ ವೀಡಿಯೊ 2015 ರದ್ದಾಗಿದೆ, ಆಗ ಮನಮೋಹನ್ ಸಿಂಗ್ ಪ್ರಧಾನಿಯಾಗಿರಲಿಲ್ಲ. 2015 ರಲ್ಲಿ ಚೀನಾದ ನಿಯೋಗದೊಂದಿಗಿನ ಈ ಸಭೆಯ ಸಮಯದಲ್ಲಿ, ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು ಮತ್ತು ಮನಮೋಹನ್ ಸಿಂಗ್ ರಾಜ್ಯಸಭಾ ಸದಸ್ಯರಾಗಿದ್ದರು. ಮನಮೋಹನ್ ಸಿಂಗ್ 22 ಮೇ 2004 ರಿಂದ 26 ಮೇ 2014 ರವರೆಗೆ ದೇಶದ ಪ್ರಧಾನ ಮಂತ್ರಿಯಾಗಿದ್ದರು.