Fact Check: ದೇವಸ್ಥಾನಕ್ಕೆ ಗೋಮಾಂಸ ತಂದ ‘ಜಿಹಾದಿ’ಗಳಿಗೆ ಭಕ್ತರು ಧರ್ಮದೇಟು ಕೊಟ್ಟಿದ್ದು ನಿಜವೇ? ಸುಳ್ಳು, ಸತ್ಯ ಇಲ್ಲಿದೆ
ದೇವಸ್ಥಾನದ ಒಳಗೆ ಗೋಮಾಂಸ ತಂದ ಮುಸ್ಲಿಮರಿಗೆ ಭಕ್ತರು ಧರ್ಮದೇಟು ನೀಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಈ ಪೋಸ್ಟ್ ಹರಿದಾಡುತ್ತಿದೆ.
By - Vinay Bhat |
Claim:ಮುಸ್ಲಿಮರು ದೇವಸ್ಥಾನಕ್ಕೆ ಗೋಮಾಂಸ ತಂದಿದ್ದಕ್ಕೆ ಭಕ್ತರು ಥಳಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
Fact:ಹಕ್ಕು ಸುಳ್ಳು. ಇದು ದೇವಸ್ಥಾನದಲ್ಲಿ ಪೂಜಾರಿಗಳು ಮತ್ತು ಭಕ್ತರ ಮಧ್ಯದಲ್ಲಿ ನಡೆದ ಗಲಾಟೆ ಆಗಿದೆ, ಇದರಲ್ಲಿ ಯಾವುದೇ ಕೋಮುಕೋನವಿಲ್ಲ.
ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ದೇವಸ್ಥಾನದಲ್ಲಿ ಪೂಜೆ ಮಾಡುವ ಪೂಜಾರಿಗಳಂತೆ ಬಟ್ಟೆ ಧರಿಸಿರುವವರು ಕೆಲ ಯುವಕರನ್ನು ಥಳಿಸುತ್ತಿರುವುದು ಕಾಣಬಹುದು. ದೇವಸ್ಥಾನದ ಒಳಗೆ ಗೋಮಾಂಸ ತಂದ ಮುಸ್ಲಿಮರಿಗೆ ಭಕ್ತರು ಧರ್ಮದೇಟು ನೀಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಈ ಪೋಸ್ಟ್ ಹರಿದಾಡುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಮಹಾರಾಷ್ಟ್ರದ ದೇವಸ್ಥಾನದ ಒಳಗೆ ಗೋಮಾಂಸವನ್ನು ಹೊತ್ತು ತಂದ ಜಿಹಾದಿಗಳಿಗೆ ಗೂಸಾ ಕೊಟ್ಟ ಭಕ್ತ ಗಣ. ಗೋ ಭಕ್ಷಣೆ ಮಾಡುತ್ತೇನೆ ತಪ್ಪೇನು ಎಂದು ಕೇಳಿದ ವ್ಯಕ್ತಿಯನ್ನ ರಾಜ್ಯದಲ್ಲಿ ಮುಖ್ಯಮಂತ್ರಿ ಮಾಡಿದ ಗುಲಾಮ ಗಣ.’’ ಎಂದು ಬರೆದುಕೊಂಡಿದ್ದಾರೆ. (Archive)
Fact Check
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಇದು ದೇವಸ್ಥಾನದಲ್ಲಿ ಪೂಜಾರಿಗಳು ಮತ್ತು ಭಕ್ತರ ಮಧ್ಯದಲ್ಲಿ ನಡೆದ ಗಲಾಟೆ ಆಗಿದೆ, ಇದರಲ್ಲಿ ಯಾವುದೇ ಕೋಮುಕೋನವಿಲ್ಲ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಪ್ರಮುಖ ಕೀ ಫ್ರೆಮುಗಳನ್ನು ಗೂಗಲ್ ಲೆನ್ಸ್ ಸಹಾಯದಿಂದ ಹುಡುಕಿದ್ದೇವೆ. ಈ ಸಂದರ್ಭ ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ನೊಂದಿಗೆ ಆಜ್ತಕ್ ಮಾರ್ಚ್ 22 ರಂದು ಸುದ್ದಿ ಪ್ರಕಟಿಸಿರುವುದು ಸಿಕ್ಕಿತು. ಇದರಲ್ಲಿರುವ ಮಾಹಿತಿಯ ಪ್ರಕಾರ, ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ವಾದಿರತ್ನಗಿರಿಯಲ್ಲಿರುವ ಜ್ಯೋತಿಬಾ ದೇವಸ್ಥಾನದಲ್ಲಿ, 15 ರಿಂದ 20 ಪುರೋಹಿತರು ಯುವ ಭಕ್ತರನ್ನು ಕೋಲು, ಒದೆ ಮತ್ತು ಗುದ್ದಿನಿಂದ ಹೊಡೆದರು. ಟ್ರಸ್ಟ್ ಪ್ರಕಾರ, ಪರಿತೆ ಗ್ರಾಮದ 50 ಕ್ಕೂ ಹೆಚ್ಚು ಭಕ್ತರು ಶ್ರೀ ಕ್ಷೇತ್ರ ಜ್ಯೋತಿಬಾ ದೇವಾಲಯ ಸಂಕೀರ್ಣದಲ್ಲಿ ಸುಮಾರು ಎರಡು ಗಂಟೆಗಳ ಕಾಲ ತಂಗಿದ್ದರು. ಈ ಯುವಕರಲ್ಲಿ ಕೆಲವರು ದೇವಾಲಯದ ಪ್ರದೇಶದಲ್ಲಿ ಗುಲಾಲ್ (ಬಣ್ಣದ ಪುಡಿ) ಮತ್ತು ತೆಂಗಿನಕಾಯಿಗಳನ್ನು ಎಸೆಯುವ ಮೂಲಕ ಇತರ ಭಕ್ತರಿಗೆ ಕಿರುಕುಳ ನೀಡಲು ಪ್ರಾರಂಭಿಸಿದರು. ಇದು ಅರ್ಚಕರನ್ನು ತೊಂದರೆಗೊಳಿಸಿತು, ಅರ್ಚಕರು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದಾಗ, ಗಲಾಟೆ ನಡೆಯಿತು. ಕೆಲವು ಯುವಕರು ಓಡಿಹೋದರು, ಆದರೆ ಮೂರು ಅಥವಾ ನಾಲ್ವರನ್ನು ಹಿಡಿದು ಅರ್ಚಕರು ಮತ್ತು ಭದ್ರತಾ ಸಿಬ್ಬಂದಿ ತೀವ್ರವಾಗಿ ಥಳಿಸಿದರು. ಈ ಘಟನೆಯಲ್ಲಿ ಪೊಲೀಸರು ಪೂಜಾರುಗಳು, ಭಕ್ತರ ಮೇಲೆ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂಬ ಮಾಹಿತಿ ಇದರಲ್ಲಿದೆ.
ಎನ್ಡಿಟಿವಿ ಕೂಡ ಮಾರ್ಚ್ 23 ರಂದು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ಜೊತೆಗೆ ಸುದ್ದಿ ಪ್ರಕಟಿಸಿದ್ದು, ‘‘ಮಹಾರಾಷ್ಟ್ರದ ಕೊಲ್ಹಾಪುರದ ಜ್ಯೋತಿಬಾ ದೇವಾಲಯದಲ್ಲಿ ಬೆಳಗಿನ ಪೂಜಾ ವಿಧಿವಿಧಾನಗಳ ಸಮಯದಲ್ಲಿ ಪುರೋಹಿತರು ಭಕ್ತರ ನಡುವೆ ಗಲಾಟೆ ನಡೆದಿದೆ. ಭಕ್ತರ ಒಂದು ಸಣ್ಣ ಗುಂಪು ಅಶಿಸ್ತಿನ ರೀತಿಯಲ್ಲಿ ವರ್ತಿಸಿದ ನಂತರ ಈ ಜಗಳ ಪ್ರಾರಂಭವಾಯಿತು. ಈ ವ್ಯಕ್ತಿಗಳು ಆರತಿಗೆ ಅಡ್ಡಿಪಡಿಸಿದರು, ಪದೇ ಪದೇ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದರು ಮತ್ತು ಗುಲಾಲ್ ಅನ್ನು ಅರ್ಚಕರ ಮೇಲೆ ಎಸೆದರು’’ ಎಂದು ಬರೆದುಕೊಂಡಿದೆ.
ಟೈಮ್ಸ್ ಆಫ್ ಇಂಡಿಯಾ ಮಾರ್ಚ್ 24 ರಂದು ಪ್ರಕಟಿಸಿದ ವರದಿಯಲ್ಲಿ, ‘‘ಕೊಡೋಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ಭಕ್ತರು ಗುಲಾಲ್ ಬೆರೆಸಿದ ತೆಂಗಿನಕಾಯಿಯನ್ನು ಅರ್ಚಕರ ಕಡೆಗೆ ಎಸೆದ ನಂತರ ಜಗಳ ಭುಗಿಲೆದ್ದಿತು. ಇದು ಮೊದಲು ವಾಗ್ವಾದಕ್ಕೆ ಕಾರಣವಾಯಿತು ಮತ್ತು ನಂತರ ಜಗಳವಾಯಿತು.’’ ಎಂದು ಬರೆಯಲಾಗಿದೆ.
ಯಾವುದೇ ವರದಿಯಲ್ಲಿ ಮುಸ್ಲಿಮರು ದೇವಸ್ಥಾನಕ್ಕೆ ಗೋಮಾಂಸ ತಂದ ವಿಚಾರಕ್ಕೆ ಗಲಾಟೆ ನಡೆದಿದೆ ಎಂಬ ಮಾಹಿತಿ ಇಲ್ಲ. ಹೀಗಾಗಿ ಕೊಲ್ಹಾಪುರದ ಜ್ಯೋತಿಬಾ ದೇವಸ್ಥಾನದಲ್ಲಿ ಪೂಜಾರಿಗಳು, ಭಕ್ತರ ಮಧ್ಯದಲ್ಲಿ ನಡೆದ ಘರ್ಷಣೆಯನ್ನು ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.