Fact Check: ಡಿಕೆ ಶಿವಕುಮಾರ್ ಮೋದಿಗೆ ಉಡುಗೊರೆಯಾಗಿ ನೀಡಿದ ಬೆಳ್ಳಿ ಗಣೇಶ ಪ್ರತಿಮೆ ಬಿಜೆಪಿ ಶಾಸಕ ತಂದಿದ್ದು? ಇಲ್ಲ, ಸತ್ಯ ಇಲ್ಲಿದೆ
ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗುತ್ತಿದ್ದು, ಆ ಪೋಸ್ಟ್ ನಲ್ಲಿ ಬಿಜೆಪಿ ಶಾಸಕರು ತಂದಿದ್ದ ವಿಗ್ರಹವನ್ನು ಪ್ರಧಾನಿಗೆ ಡಿಕೆ ಶಿವಕುಮಾರ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
By Vinay Bhat
Claim:ಡಿಕೆ ಶಿವಕುಮಾರ್ ಮೋದಿಗೆ ಉಡುಗೊರೆಯಾಗಿ ನೀಡಿದ ಬೆಳ್ಳಿ ಗಣೇಶ ಪ್ರತಿಮೆ ಬಿಜೆಪಿ ಶಾಸಕ ಎಂ. ಕೃಷ್ಣಪ್ಪ ತಂದಿರುವುದು.
Fact:ಹಕ್ಕು ಸುಳ್ಳು. ಮೋದಿ ಅವರಿಗೆ ಸ್ವತಃ ಡಿಕೆ ಶಿವಕುಮಾರ್ ಅವರೇ ತಮ್ಮ ಮನೆಯಿಂದ ಗಣೇಶನ ಪ್ರತಿಮೆ ತಂದಿದ್ದರು. ಈ ಕುರಿತು ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ನಮ್ಮ ಮೆಟ್ರೋ ಫೇಸ್ 3ರ ಶಂಕುಸ್ಥಾಪನೆಗೆ ಆಗಮಿಸಿದ್ದರು. ಈ ವೇಳೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದರು. ಇದರಲ್ಲಿ ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರಧಾನಿಗೆ ಬೆಳ್ಳಿಯ ಗಣೇಶ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗುತ್ತಿದ್ದು, ಆ ಪೋಸ್ಟ್ ನಲ್ಲಿ ಬಿಜೆಪಿ ಶಾಸಕರು ತಂದಿದ್ದ ವಿಗ್ರಹವನ್ನು ಪ್ರಧಾನಿಗೆ ಡಿಕೆ ಶಿವಕುಮಾರ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಫೇಸ್ಬುಕ್ ಬಳಕೆದಾರರೊಬ್ಬರು, ಪ್ರಧಾನಿಗೆ ಶಿವಕುಮಾರ್ ಅವರು ಗಣೇಶನ ಪ್ರತಿ ಕೊಡುತ್ತಿರುವ ಫೋಟೋ ಹಂಚಿಕೊಂಡು, ‘‘ಗಣೇಶ ವಿಗ್ರಹ ತಂದಿದ್ದು ಬಿಜೆಪಿ ಶಾಸಕ!. ಮೆಟ್ರೋ ಲೋಕಾರ್ಪಣೆ ಮಾಡಲು ಬೆಂಗಳೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಿಫ್ಟ್ ನೀಡಲು ನಿರ್ಧರಿಸಿದ್ದ ಬಿಜೆಪಿ ಶಾಸಕ ಎಂ. ಕೃಷ್ಣಪ್ಪ, ಬೆಳ್ಳಿ ಗಣಪತಿ ವಿಗ್ರಹ ತಂದಿದ್ದರು. ಎಸ್‌ಪಿಜಿ ಸಿಬ್ಬಂದಿ ಈ ಗಿಫ್ಟ್ ತಪಾಸಣೆ ಮಾಡಿ ಟೇಬಲ್ ಮೇಲೆ ಇಟ್ಟಿದ್ದರು. ಅಲ್ಲಿಗೆ ಬಂದ ಡಿಸಿಎಂ ಶಿವಕುಮಾರ್, ಆ ಬೆಳ್ಳಿ ಗಣಪತಿ ವಿಗ್ರಹವನ್ನು ಪ್ರಧಾನಿಗೆ ನೀಡಿದರು. ನನ್ನ ಗಿಫ್ಟ್ ಎಲ್ಲಿ ಎಂದು ಹುಡುಕಾಡಿದ ಕೃಷ್ಣಪ್ಪ, ನಿರಾಸೆ ಅನುಭವಿಸಬೇಕಾಯಿತು.’’ ಎಂದು ಬರೆದುಕೊಂಡಿದ್ದಾರೆ. (Archive)
Fact Check:
ಸುಳ್ಳು ಹೇಳಿಕೆಯೊಂದಿಗೆ ಈ ಸುದ್ದಿ ವೈರಲ್ ಆಗುತ್ತಿದೆ ಎಂದು ನ್ಯೂಸ್ ಮೀಟರ್ ಕಂಡುಕೊಂಡಿದೆ. ಮೋದಿ ಅವರಿಗೆ ಸ್ವತಃ ಡಿಕೆ ಶಿವಕುಮಾರ್ ಅವರೇ ತಮ್ಮ ಮನೆಯಿಂದ ಗಣೇಶನ ಪ್ರತಿಮೆ ತಂದಿದ್ದರು. ಈ ಕುರಿತು ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಈ ಸುದ್ದಿಯ ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಡಿಕೆ ಶಿವಕುಮಾರ್ ಅವರ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ ಅನ್ನು ಪರಿಶೀಲಿಸಿದ್ದೇವೆ. ಈ ಸಂದರ್ಭ ಈ ವೈರಲ್ ಸುದ್ದಿಯ ಕುರಿತು ಸ್ವತಃ ಅವರೇ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವುದು ಕಂಡುಬಂತು. ‘‘ಬೇರೆಯವರ ಉಡುಗೊರೆಯನ್ನು ಮತ್ತೊಬ್ಬರಿಗೆ ನೀಡುವ ದುಸ್ಥಿತಿ ಬಂದಿಲ್ಲ! ಬೆಂಗಳೂರಿನ ಆರ್ ವಿ ರಸ್ತೆ ಮತ್ತು ಬೊಮ್ಮಸಂದ್ರ ನಡುವಣ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಪೂರ್ವಕವಾಗಿ ನೀಡಿದ ಬೆಳ್ಳಿ ಗಣೇಶ ಪ್ರತಿಮೆ ಸ್ವಂತದ್ದು’’ ಎಂದು ಡಿಕೆಶಿ ಹೇಳಿದ್ದಾರೆ.
‘‘ಅಂದಿನ ಸಮಾರಂಭದಲ್ಲಿ ನಾನು ಪ್ರಧಾನಿ ಅವರಿಗೆ ನೀಡಿದ ಪ್ರತಿಮೆ ಬಿಜೆಪಿ ಶಾಸಕ ಎಂ ಕೃಷ್ಣಪ್ಪ ಅವರು ತಂದದ್ದು ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು ಹಾಗೂ ಸಂಪೂರ್ಣ ಸುಳ್ಳು. ಆ ಪ್ರತಿಮೆಯನ್ನು ನನ್ನ ಸ್ವಂತ ಹಣದಿಂದ ಖರೀದಿಸಿದ್ದಾಗಿದೆ. ಇದಕ್ಕೆ ಇಲಾಖೆಯ ಹಣವನ್ನೂ ಬಳಸಿಲ್ಲ. ಮನೆಯಿಂದ ತೆಗೆದುಕೊಂಡು ಹೋಗಿ, ಕಚೇರಿ ಸಿಬ್ಬಂದಿ ಮೂಲಕ ಎಸ್‌ಪಿಜಿ ತಪಾಸಣೆಗೆ ಒಳಪಡಿಸಿ ಪ್ರಧಾನಿಯವರಿಗೆ ನೀಡಲಾಯಿತು’’ ಎಂದು ಬರೆದಿದ್ದಾರೆ.
ಬೇರೆಯವರ ಉಡುಗೊರೆಯನ್ನು ಮತ್ತೊಬ್ಬರಿಗೆ ನೀಡುವ ದುಸ್ಥಿತಿ ಬಂದಿಲ್ಲ! ಬೆಂಗಳೂರಿನ ಆರ್ ವಿ ರಸ್ತೆ ಮತ್ತು ಬೊಮ್ಮಸಂದ್ರ ನಡುವಣ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಪೂರ್ವಕವಾಗಿ ನೀಡಿದ ಬೆಳ್ಳಿ ಗಣೇಶ ಪ್ರತಿಮೆ ಸ್ವಂತದ್ದು.ಅಂದಿನ ಸಮಾರಂಭದಲ್ಲಿ ನಾನು ಪ್ರಧಾನಿ ಅವರಿಗೆ ನೀಡಿದ ಪ್ರತಿಮೆ… pic.twitter.com/uPTYQNcSI7
— DK Shivakumar (@DKShivakumar) August 12, 2025
ಹಿಂದೂಸ್ಥಾನ್ ಟೈಮ್ಸ್ ಕೂಡ ಆಗಸ್ಟ್ 12 ರಂದು ಈ ಕುರಿತು ಸುದ್ದಿ ಪ್ರಕಟಿಸಿದ್ದು, ‘‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡಿದ ಬೆಳ್ಳಿ ಗಣೇಶನ ವಿಗ್ರಹವನ್ನು ಮೂಲತಃ ಬಿಜೆಪಿ ಶಾಸಕ ಎಂ. ಕೃಷ್ಣಪ್ಪ ಖರೀದಿಸಿದ್ದರು ಎಂಬ ವೈರಲ್ ಸುದ್ದಿಯ ವಿರುದ್ಧ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೋಮವಾರ ಕಿಡಿಕಾರಿದ್ದಾರೆ. ಶಿವಕುಮಾರ್ ಅವರು ವಿಗ್ರಹವನ್ನು ವೈಯಕ್ತಿಕವಾಗಿ ಖರೀದಿಸಿದ್ದಾರೆ ಮತ್ತು ಯಾವುದೇ ಸರ್ಕಾರಿ ಅಥವಾ ಇಲಾಖೆಯ ಹಣವನ್ನು ಬಳಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೇರೊಬ್ಬರ ಉಡುಗೊರೆಯನ್ನು ಇನ್ನೊಬ್ಬ ವ್ಯಕ್ತಿಗೆ ನೀಡುವ ವಿಷಾದಕರ ಸ್ಥಿತಿಗೆ ನಾನು ಬಂದಿಲ್ಲ ಎಂದು ಅವರು ಹೇಳಿದ್ದಾರೆ’’ ಎಂಬ ಮಾಹಿತಿ ಇದರಲ್ಲಿದೆ..
ಈ ಕುರಿತ ಇನ್ನಷ್ಟು ಸ್ಪಷ್ಟೀಕರಣಕ್ಕೆ ನ್ಯೂಸ್ ಮೀಟರ್ ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಅವರನ್ನು ಸಂಪರ್ಕಿಸಿದೆ. ‘‘ವೈರಲ್ ಆಗುತ್ತಿರುವ ಪೋಸ್ಟ್ ಸಂಪೂರ್ಣ ಸುಳ್ಳು. ಕೃಷ್ಣಪ್ಪ ಅವರಿಗೆ ವೇದಿಕೆ ಬಳಿ ಹೋಗಲು ಅವಕಾಶವೇ ಇರಲಿಲ್ಲ. ಕೆಲವೇ ಜನರಿಗೆ ವೇದಿಕೆಗೆ ಹೋಗಲು ಪಾಸ್ ಸಿಕ್ಕಿತ್ತಷ್ಟೆ. ಅವರಿಗೆ ಹೋಗೋಕೇ ಅವಕಾಶ ಇರಲಿಲ್ಲ’’ ಎಂದು ಕೃಷ್ಣಪ್ಪ ಅವರ ಆಪ್ತ ಸಹಾಯಕ ನ್ಯೂಸ್ ಮೀಟರ್ಗೆ ಸ್ಪಷ್ಟೀಕರಿಸಿದ್ದಾರೆ.
ಹೀಗಾಗಿ ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಡಿಕೆ ಶಿವಕುಮಾರ್ ಮೋದಿಗೆ ಉಡುಗೊರೆಯಾಗಿ ನೀಡಿದ ಬೆಳ್ಳಿ ಗಣೇಶ ಪ್ರತಿಮೆ ಬಿಜೆಪಿ ಶಾಸಕ ತಂದಿದ್ದು ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ಪೋಸ್ಟ್ ಸುಳ್ಳು ಎಂದು ನಾವು ಖಚಿತವಾಗಿ ಹೇಳುತ್ತೇವೆ.