ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಒಂದು ವೈರಲ್ ಆಗುತ್ತಿದ್ದು, ಬೆಂಕಿಯಿಂದ ಮನೆ ಹೊತ್ತಿ ಉರಿಯುತ್ತಿರುವುದನ್ನು ಕಾಣಬಹುದು. ಅನೇಕರು ಇಲ್ಲಿ ಸಹಾಯಕ್ಕೆ ಬಂದಿದ್ದು, ನೀರು ಎರಚಿ ನೀರನ್ನು ನಂದಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೂ ಕೆಲವರು ವೀಡಿಯೊ ಮಾಡುತ್ತಿರುವುದನ್ನು ಕಾಣಬಹುದು. ಬಾಂಗ್ಲಾದೇಶದಲ್ಲಿ ಮುಸ್ಲಿಮರು ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೊವನ್ನು ಅನೇಕರು ಹಂಚಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಡಿಸೆಂಬರ್ 21, 2024 ರಂದು ಈ ವೀಡಿಯೊವನ್ನು ಅಪ್ಲೋಡ್ ಮಾಡಿ, ‘‘ಬಾಂಗ್ಲಾದೇಶ:- ಬೋಗ್ರಾ ಜಿಲ್ಲೆಯ ಉಪಗ್ರಾಮ ಯೂನಿಯನ್‌ನಲ್ಲಿ ಮುಸ್ಲಿಮರು ಖಿದ್ರಾಗಾಮದಲ್ಲಿ ಹಿಂದೂಗಳ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಇನ್ನು ಏನೇನ್ ಕಾದಿದಿಯೋ ಹಿಂದುಗಳಿಗೆ’’ ಎಂದು ಬರೆದುಕೊಂಡಿದ್ದಾರೆ.
ಇದೇ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ಹರಿದಾಡುತ್ತಿದೆ ಎಂಬುದು ಕಂಡುಬಂದಿದೆ. ವೈರಲ್ ಆಗುತ್ತಿರುವ ಹೇಳಿಕೆಯಂತೆ ಇಲ್ಲಿ ಹಿಂದೂಗಳ ಮನೆಗೆ ಯಾರೂ ಬೆಂಕಿ ಇಟ್ಟಿಲ್ಲ, ಬದಲಾಗಿ ಶಾರ್ಟ್ ಸರ್ಕ್ಯೂಟ್ ನಿಂದ ಈ ಘಟನೆ ಸಂಭವಿಸಿದೆ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದೆವು. ಆಗ ಬಾಂಗ್ಲಾದ ಸ್ಥಳೀಯ ಸುದ್ದಿ ಮಾಧ್ಯಮ BDPost News ಯೂಟ್ಯೂಬ್ ಚಾನಲ್‌ನಲ್ಲಿ ನಾವು ಇದೇ ವೈರಲ್ ವೀಡಿಯೊವನ್ನು ಕಂಡುಕೊಂಡಿದ್ದೇವೆ. ಇದನ್ನು 7 ಡಿಸೆಂಬರ್ 2024 ರಂದು ಅಪ್‌ಲೋಡ್ ಮಾಡಲಾಗಿದೆ. ಇದಕ್ಕೆ ‘‘ಬೋಗ್ರಾ ಸದರ್ ಉಪಗ್ರಾಮದ ಕ್ಷೀರಧಾಮ್ ಪ್ರದೇಶದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಎರಡು ಮನೆಗಳಿಗೆ ಬೆಂಕಿ ಹೊತ್ತಿಕೊಂಡಿದೆ’’ (ಬಾಂಗ್ಲಾ ಭಾಷೆಯಿಂದ ಅನ್ವಯಿಸಲಾಗಿದೆ) ಎಂಬ ಶೀರ್ಷಿಕೆ ನೀಡಲಾಗಿದೆ. ಇದೇ ವೀಡಿಯೊವನ್ನು BDPostಫೇಸ್ಬುಕ್ ಪುಟದಲ್ಲೂ ಇದೆ.
ಇದೇ ವೇಳೆ ಬಾಂಗ್ಲಾದೇಶದ ಬೋಗ್ರಾ ನಿವಾಸಿಯೊಬ್ಬರ ಫೇಸ್ಬುಕ್ ಖಾತೆಯಲ್ಲಿ (ಬಯೋದಲ್ಲಿರುವ ಮಾಹಿತಿಯ ಪ್ರಕಾರ) ಕೂಡ ಇದೇ ವೀಡಿಯೊವನ್ನು 7 ಡಿಸೆಂಬರ್ 2024 ರಂದು ಹಂಚಿಕೊಂಡಿರುವುದು ನಾವು ಕಂಡುಕೊಂಡಿದ್ದೇವೆ. ಅವರು ‘‘ಬೋಗ್ರಾ ಸದರ್‌ನ ಉಪಗ್ರಾಮ ಒಕ್ಕೂಟದ ಕ್ಷಿದ್ರಧಾಮ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ’’ ಎಂದು ಬರೆದುಕೊಂಡಿದ್ದಾರೆ.
ಇನ್ನಷ್ಟು ಖಚಿತ ಮಾಹಿತಿಗಾಗಿ ನಾವು BDPost News ಹಂಚಿಕೊಂಡ ವೀಡಿಯೊದಲ್ಲಿ ನೀಡಿದ್ದ ಶೀರ್ಷಿಕೆಯನ್ನು ಕಾಪಿ ಮಾಡಿ ಗೂಗಲ್ನಲ್ಲಿ ಹುಡುಕಿದ್ದೇವೆ. ಆಗ Daily Karatoa ಡಿಸೆಂಬರ್ 27, 2024 ರಂದು ಪ್ರಕಟವಾದ ವರದಿ ನಮಗೆ ಸಿಕ್ಕಿದೆ. "ಬೋಗ್ರಾ ಸದರ್‌ನ ಕ್ಷೀರಧಾಮ್ ಮಧ್ಯಪಾರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು 7 ಕುಟುಂಬಗಳು ನಿರ್ಗತಿಕವಾಗಿವೆ " ಎಂಬ ಶೀರ್ಷಿಕೆ ನೀಡಲಾಗಿದೆ.
ಇದರಲ್ಲಿರುವ ವರದಿಯ ಪ್ರಕಾರ, ‘‘ಬೋಗ್ರಾ ಸದರ್‌ನ ಕ್ಷೀರಧಾಮ್ ಮಧ್ಯಪಾರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿಯಲ್ಲಿ 7 ಕುಟುಂಬದ ಎಲ್ಲರೂ ಸುಟ್ಟುಹೋಗಿದ್ದಾರೆ. ಬೋಗ್ರಾ ಅಗ್ನಿಶಾಮಕ ಸೇವಾ ಕಚೇರಿ ಮೂಲಗಳ ಪ್ರಕಾರ, ಇಂದು ಶನಿವಾರ (ಡಿಸೆಂಬರ್ 7) ಮಧ್ಯಾಹ್ನ 5 ಗಂಟೆ ಸುಮಾರಿಗೆ ಆ ಪ್ರದೇಶದ ಅಬು ಬಕ್ಕರ್ ಮತ್ತು ಫಜಲುರ್ ರೆಹಮಾನ್ ಅವರ ಮನೆಯ ಮೇಲೆ ಹಾದು ಹೋಗಿರುವ ಗ್ರಾಮೀಣ ವಿದ್ಯುತ್ ಕಂಬದಲ್ಲಿ ವಿದ್ಯುತ್ ಕಿಡಿ ಕಾಣಿಸಿಕೊಂಡಿದೆ.’’
ಸ್ಥಳೀಯರೊಬ್ಬರು ಮಾತನಾಡಿರುವುದನ್ನು Daily Karatoa ಬರೆದುಕೊಂಡಿದ್ದು, ‘ಡಿ. 7 ರಂದು ಬೆಂಕಿ ತಗುಲಿದೆ. ಸೊಹೈಲ್ ಮನೆಗೆ ಮೊದಲು ಬೆಂಕಿ ಹೊತ್ತಿಕೊಂಡಿದ್ದು ನಂತರ ಬೆಂಕಿ ವ್ಯಾಪಿಸಿದೆ. ಇಸ್ಲಾಂ ಸೊಹೆಲ್ ಮನೆಯಲ್ಲಿ ವಿದ್ಯುತ್ ಕಂಬವಿತ್ತು. ಅಲ್ಲಿಂದ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ’.
ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಬಾಂಗ್ಲಾದೇಶದ ಬೋಗ್ರಾ ಸದರ್ ಪ್ರದೇಶದ ವೀಡಿಯೊವೊಂದು ಸುಳ್ಳು ಹೇಳಿಕೆಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎಂಬುದು ಸ್ಪಷ್ಟವಾಗಿದೆ. ಇಲ್ಲಿ ಮುಸ್ಲಿಮರು ಹಿಂದೂಗಳ ಮನೆಗೆ ಬೆಂಕಿ ಹಚ್ಚಿಲ್ಲ, ಇದು ಶಾರ್ಟ್ ಸರ್ಕ್ಯೂಟ್‌ನಿಂದ ಕಾಣಿಸಿಕೊಂಡ ಬೆಂಕಿ ಎಂದು ನಾವು ಖಚಿತವಾಗಿ ಹೇಳುತ್ತೇವೆ.