ತಿರುಪತಿ ತಿಮ್ಮಪ್ಪನ ದೇಗುಲದ ಅರ್ಚಕರೊಬ್ಬರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ 128 ಕೆಜಿ ಚಿನ್ನ, 150 ಕೋಟಿ ಕ್ಯಾಶ್, 70 ಕೋಟಿ ಬೆಲೆಯ ವಜ್ರ ಸಿಕ್ಕಿದೆ ಎಂಬ ಹೇಳಿಕೆಯೊಂದಿಗೆ ವೀಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ಕರೆನ್ಸಿ ನೋಟುಗಳು ಮತ್ತು ಚಿನ್ನದ ತುಂಡುಗಳು ಮತ್ತು ಆಭರಣಗಳ ರಾಶಿಯನ್ನು ಕಾಣಬಹುದು.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಡಿಸೆಂಬರ್ 27, 2024 ರಂದು ಅಪ್ಲೋಡ್ ಮಾಡಿಕೊಂಡು, ‘‘ತಿರುಪತಿ ತಿಮ್ಮಪ್ಪನ ಸೇವೆ ಮಾಡುವ 16 ಪುರೋಹಿತರಲ್ಲಿ ಒಬ್ಬ ಪುರೋಹಿತರ ಮನೆಗೆ ಇನ್ಕಮ್ ಟ್ಯಾಕ್ಸ್ ವಿಭಾಗದ ಅಧಿಕಾರಿಗಳು ರೈಡ್ ಮಾಡಿದಾಗ ಸಿಕ್ಕಿರುವ ಹಣ, ಚಿನ್ನದ ಒಡವೆ, ಹಾಗೂ ವಜ್ರ ಎಷ್ಟು ಗೊತ್ತಾ ???. 128 ಕೆಜಿ ಚಿನ್ನ, 150 ಕೋಟಿ ಕ್ಯಾಶ್, 70 ಕೋಟಿ ಬೆಲೆಯ ವಜ್ರ. ದಾನ ಮಾಡುವಾಗ ಈಗಲಾದರೂ ಸ್ವಲ್ಪ ಯೋಚಿಸಿ. ಹಣ, ಚಿನ್ನ, ವಜ್ರ ದೇವರಿಗೆ ಬೇಕೇ??. ಒಬ್ಬರ ಹತ್ತಿರ ಇಷ್ಟು ಸಿಕ್ಕಿದೆ ಅಂದಮೇಲೆ, ಇನ್ನು ಉಳಿದ 15 ಪುರೋಹಿತರ ಮನೆಯಲ್ಲಿ ಎಷ್ಟು ಇರಬಹುದು??’’ ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ, ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಡಿಸೆಂಬರ್ 2021 ರಲ್ಲಿ ವೆಲ್ಲೂರಿನ ಚಿನ್ನಾಭರಣ ಮಳಿಗೆಯೊಂದರಲ್ಲಿ ದರೋಡೆ ಮಾಡಿದ ನಂತರ ಪತ್ತೆಯಾದ ಚಿನ್ನಗಳು ಇದಾಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದಿಂದ ಕೆಲವೊಂದು ಕೀ ಫ್ರೇಮ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ಇಂಡಿಯನ್ ಎಕ್ಸ್ಪ್ರೆಸ್ ಡಿಸೆಂಬರ್ 22, 2021 ರಂದು ವೈರಲ್ ವೀಡಿಯೊಕ್ಕೆ ಹೋಲುವ ಫೋಟೋದೊಂದಿಗೆ ಸುದ್ದಿಯನ್ನು ಪ್ರಕಟಿಸಿರುವುದು ಸಿಕ್ಕಿದೆ. ಇದಕ್ಕೆ ‘‘ತಮಿಳುನಾಡಿನ ವೆಲ್ಲೂರಿನ ಜೋಸ್ ಅಲುಕ್ಕಾಸ್ ಶೋರೂಂನಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, 8 ಕೋಟಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ ಎಂಬ ಶೀರ್ಷಿಕೆ ನೀಡಲಾಗಿದೆ. ವರದಿಯ ಪ್ರಕಾರ, ಪೊಲೀಸರು ತಮ್ಮ ತನಿಖೆಯಲ್ಲಿ ಜೋಸ್ ಅಲುಕ್ಕಾಸ್ ಶೋರೂಮ್ ಸುತ್ತಮುತ್ತಲಿನ ಸುಮಾರು 200 ಸಿಸಿಟಿವಿ ದೃಶ್ಯಗಳನ್ನು ವಿಶ್ಲೇಷಿಸಿದ್ದಾರೆ ಮತ್ತು ಆರೋಪಿಯು ಹಲವಾರು ಸಂದರ್ಭಗಳಲ್ಲಿ ಆ ಪ್ರದೇಶದಲ್ಲಿ ತಿರುಗಾಡುತ್ತಿರುವುದು ಕಂಡುಬಂದಿದೆ. ಈ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ನೀಡಲಾಗಿದೆ.
ಈ ಮಾಹಿತಿಯ ಆಧಾರದ ಮೇಲೆ ನಾವು ವೆಲ್ಲೂರ್ ಮತ್ತು ಆಭರಣಗಳಂತಹ ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ನಲ್ಲಿ ಹುಡುಕಿದಾಗ, ಡಿಸೆಂಬರ್ 21, 2021 ರಂದು ದಿ ಹಿಂದೂ ವೆಬ್ಸೈಟ್ನಲ್ಲಿ ಪ್ರಕಟವಾದ ಸುದ್ದಿ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಇದರಲ್ಲಿರುವ ಮಾಹಿತಿಯ ಪ್ರಕಾರ, ‘‘ವೆಲ್ಲೂರು ನಗರದ ಹೃದಯಭಾಗದಲ್ಲಿರುವ ಜನಪ್ರಿಯ ಆಭರಣ ಮಳಿಗೆಯೊಂದರಲ್ಲಿ ಚಿನ್ನಾಭರಣ ದರೋಡೆಯಾದ ವಾರದ ನಂತರ, ಜಿಲ್ಲಾ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸುವ ಮೂಲಕ ಪ್ರಕರಣವನ್ನು ಭೇದಿಸಿದ್ದಾರೆ ಮತ್ತು ಸ್ಮಶಾನದಿಂದ ಅಂದಾಜು 8 ಕೋಟಿ ರೂಪಾಯಿ ಹಾಗೂ ಅಂದಾಜು 16 ಕೆಜಿ ಚಿನ್ನ ಮತ್ತು ವಜ್ರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಡಿಐಜಿ (ವೆಲ್ಲೂರು ರೇಂಜ್) ಎಜಿ ಬಾಬು, ಪಳ್ಳಿಕೊಂಡ ಸಮೀಪದ ಕೂಚಿಪಾಳ್ಯಂ ಗ್ರಾಮದ ನಿವಾಸಿ ಟಿಕೆ ರಾಮನ್ (23) ಈ ಅಪರಾಧದಲ್ಲಿ ಭಾಗಿಯಾಗಿದ್ದಾನೆ. ಡಿಸೆಂಬರ್ 15 ರಂದು ಶೋರೂಮ್‌ಗೆ ರಂಧ್ರ ಕೊರೆದು ಅಂಗಡಿಯೊಳಗಿದ್ದ 12 ಸಿಸಿಟಿವಿ ಕ್ಯಾಮೆರಾಗಳಿಗೆ ಬಣ್ಣ ಎರಚಿ ಕೋಟಿಗಟ್ಟಲೆ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ’’ ಎಂದು ವರದಿ ತಿಳಿಸಿದೆ.
ಹಾಗೆಯೆ ನಾವು 22 ಡಿಸೆಂಬರ್ 2021 ರಂದು BBC ನ್ಯೂಸ್ ತಮಿಳಿನ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊವನ್ನು ಕೂಡ ಕಂಡುಕೊಂಡಿದ್ದೇವೆ. ಬಿಬಿಸಿಯ ವೀಡಿಯೋ ವರದಿ ಪ್ರಕಾರ, ತಮಿಳುನಾಡಿನ ವೆಲ್ಲೂರಿನಲ್ಲಿರುವ ಜೋಸ್ ಅಲುಕ್ಕಾಸ್ ಶೋರೂಮ್‌ನಲ್ಲಿ ಕಳ್ಳರು ದರೋಡೆ ನಡೆಸಿ ಸುಮಾರು 16 ಕೆಜಿ ಚಿನ್ನಾಭರಣಗಳನ್ನು ದೋಚಿದ್ದಾರೆ. ವೈರಲ್ ವೀಡಿಯೊದಲ್ಲಿ ಕಂಡುಬರುವ ದೃಶ್ಯಗಳು ಪೊಲೀಸರು ವಶಪಡಿಸಿಕೊಂಡ ಆಭರಣಗಳಿಗೆ ಹೊಂದಿಕೆಯಾಗುತ್ತವೆ.
ಈ ಎಲ್ಲ ಮಾಹಿತಿಯ ಆಧಾರದ ಮೇಲೆ 2021 ಡಿಸೆಂಬರ್ನಲ್ಲಿ ವೆಲ್ಲೂರಿನ ಚಿನ್ನಾಭರಣ ಮಳಿಗೆಯೊಂದರಲ್ಲಿ ದರೋಡೆ ಮಾಡಿದ ನಂತರ ಪತ್ತೆಯಾದ ಚಿನ್ನಗಳು ಇದಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.