ರಾಕೆಟ್ ಲಾಂಚರ್‌ನಿಂದ ವ್ಯಕ್ತಿಯೊಬ್ಬ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಾಲಿಬಾನ್ ಸೈನಿಕರು ಪಾಕಿಸ್ತಾನದ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸುತ್ತಿರುವುದು ಎಂದು ವೀಡಿಯೊವನ್ನು ಅನೇಕ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ಅಫ್ಗಾನಿಸ್ತಾನ್ ಗಡಿಯಲ್ಲಿ ಪಾಕಿಸ್ತಾನದ ಸೇನಾ ಹೆಲಿಕಾಪ್ಟರ್ ಹೊಡೆದುರುಳಿಸಿದ ತಾಲಿಬಾನಿಗಳು. ಇದರಲ್ಲಿ ಸುಮಾರು 20ಕ್ಕೂ ಹೆಚ್ಚು ಜನ ಸೈನಿಕರು ಸಾವು’’ ಎಂದು ಬರೆದುಕೊಂಡಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೊವನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.
Fact Check:
ಈ ಸುದ್ದಿಯ ಸತ್ಯಾಸತ್ಯತೆಯನ್ನು ನ್ಯೂಸ್ ಮೀಟರ್ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ವೀಡಿಯೊ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಇದು ಟರ್ಕಿಯ ಹಳೆಯ ವೀಡಿಯೊ ಆಗಿದೆ.
ನಿಜಾಂಶವನ್ನು ತಿಳಿಯಲು ನಾವು ವೈರಲ್ ವೀಡಿಯೊದ ಸ್ಕ್ರೀನ್ ಶಾಟ್ ತೆಗೆದುಕೊಂಡು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಆಗ ನಾವು ಅದೇ ವೀಡಿಯೊವನ್ನು ಮೇ 24, 2016 ರಂದು ಮಿರರ್ ಯುಕೆ ಪ್ರಕಟಿಸಿರುವ ಸುದ್ದಿಯಲ್ಲಿ ಕಂಡುಕೊಂಡಿದ್ದೇವೆ. ಕುರ್ದಿಶ್ ಉಗ್ರಗಾಮಿಗಳು ರಾಕೆಟ್ ಲಾಂಚರ್ ಬಳಸಿ ಟರ್ಕಿಯ ಸಶಸ್ತ್ರ ಪಡೆಗಳಿಗೆ ಸೇರಿದ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದ್ದಾರೆ ಎಂದು ಹೇಳುವ ವೀಡಿಯೊವನ್ನು ವರದಿಯೊಂದಿಗೆ ಹಂಚಿಕೊಳ್ಳಲಾಗಿದೆ.
ಜೀ ನ್ಯೂಸ್ ಕೂಡ ಮೇ 14, 2016 ರಂದು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ, "ಕುರ್ದ್ ಫೈಟರ್ ಟರ್ಕಿಶ್ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿತು" ಎಂದು ಶೀರ್ಷಿಕೆಯೊಂದಿಗೆ ವೀಡಿಯೋ ಶೇರ್ ಮಾಡಿದೆ.
ಟರ್ಕಿಯ ಹಕ್ಕರಿ ಪ್ರಾಂತ್ಯದ ಆಗ್ನೇಯ ಪರ್ವತಗಳಲ್ಲಿ ವೀಡಿಯೊವನ್ನು ತೆಗೆದುಕೊಳ್ಳಲಾಗಿದೆ ಎಂದು Express.UK ವರದಿ ಮಾಡಿದೆ.
ಆದ್ದರಿಂದ, ವೈರಲ್ ಹಕ್ಕು ಸುಳ್ಳು ಎಂದು ನಾವು ತೀರ್ಮಾನಿಸುತ್ತೇವೆ. ಇದು 2016 ರಲ್ಲಿ ಕುರ್ದಿಶ್ ಉಗ್ರಗಾಮಿಗಳು ರಾಕೆಟ್ ಲಾಂಚರ್ ಬಳಸಿ ಟರ್ಕಿಯ ಸಶಸ್ತ್ರ ಪಡೆಗಳಿಗೆ ಸೇರಿದ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದ ವೀಡಿಯೊ ಆಗಿದೆ.